ರಾಜ್ಯ : ಕೊವಿಡ್ ಮೂರನೇ ಅಲೆ ಮೊದಲೆರಡು ಅಲೆಯ ದಾಖಲೆಗಳನ್ನೆಲ್ಲಾ ಪುಡಿಗಟ್ಟುತ್ತಾ ಸಾಗ್ತಿದೆ.ಆದ್ರೆ,ರೋಗ ಲಕ್ಷಣದ ತೀವ್ರತೆ ಮಾತ್ರ ಎರಡೂ ಅಲೆಗಿಂತ ತೀರಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಐಸೋಲೇಷನ್ ನಿಯಮವನ್ನೂ ಬದಲಾಯಿಸಿದೆ. ಜೊತೆಗೆ ಹೈ ಡೋಸ್ ಆ್ಯಂಟಿ ಬಯೋಟಿಕ್ ಔಷಧಿಗೂ ಗುಡ್‌ಬೈ ಹೇಳಿದೆ.
ಕೊರೋನಾ ಮೂರನೇ ಅಲೆ ಲಂಗು ಲಗಾಮಿಲ್ಲದೇ ಅಂಟುತ್ತಲೇ ಸಾಗ್ತಿದೆ. ಸೋಂಕಿತರ ಸಂಖ್ಯೆ ಭಯ ಹುಟ್ಟಿಸುವಂತಿದೆ. ಆದ್ರೂ,ರೋಗದ ತೀವ್ರತೆ ಮಾತ್ರ ಮೊದಲ ಎರಡೂ ಅಲೆಗಳಿಗಿಂತ ತೀರಾ ಸೌಮ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೋವಿಡ್ ಟ್ರೀಟ್‌ಮೆಂಟ್‌ನಿಂದ ಹಿಡಿದು, ಐಸೋಲೇಷನ್ ನಿಯಮವನ್ನೂ ಬದಲಾವಣೆ ಮಾಡಿದೆ. ಈ ಹಿಂದೆ ಕೊವಿಡ್ ಸೋಂಕಿತನಾದರೆ ಆತ,10 ದಿನಗಳ ಕಾಲ ಕಂಪಲ್ಸರಿ ಐಸೋಲೇಷನ್‌ನಲ್ಲಿ ಇರಲೇಬೇಕಿತ್ತು. ಆದ್ರೆ,ಈಗ ಈ ಅವಧಿಯನ್ನು 7 ದಿನಕ್ಕೆ ಬಿಬಿಎಂಪಿ ಇಳಿಕೆ ಮಾಡಿದೆ. ಇನ್ನು 7ದಿನಗಳ ಬಳಿಕ ಮತ್ತೊಮ್ಮೆ ಟೆಸ್ಟ್ ಮಾಡಿಸೋ ಅಗತ್ಯತೆ ಇಲ್ಲ ಎಂದು ಬಬಿಎಂಪಿ ಆದೇಶ ಹೊರಡಿಸಿದೆ.
ಕೊರೋನಾ ರೋಗ ಲಕ್ಷಣಗಳು ಕಡಿಮೆ ಪ್ರಮಾಣದಲ್ಲಿರೋದ್ರಿಂದ ಎರಡನೇ ಅಲೆಯಲ್ಲಿ ನೀಡಲಾಗ್ತಿದ್ದ ಕೆಲ ಔಷಧಿಗಳಿಗೆ ಪಾಲಿಕೆ ಕೊಕ್ ನೀಡಿದೆ. ಮುಖ್ಯವಾಗಿ ಡಾಕ್ಸಿ ಸೈಕ್ಲಿನ್ ಹಾಗೂ ಐವರ್ ಮೆಕ್ಟಿನ್ ಆ್ಯಂಟಿ ಬಯಾಟಿಕ್ ಔಷಧಿಗಳನ್ನು ಈ ಬಾರಿ ಬಳಸದಂತೆ ಆದೇಶಿಸಲಾಗಿದೆ. ಜೊತೆಗೆ ರೆಮ್‌ಡಿಸಿವಿರ್ ಔಷಧಿಯನ್ನೂ ಈಬಾರಿ ಕೊರೋನಾ ಔಷಧಿ ಲೀಸ್ಟ್‌ನಿಂದ ಕೈಬಿಡಲಾಗಿದೆ. ಹೊಸದಾಗಿ ಕೆಲ ಔಷಧಿಗಳನ್ನು ಮಾತ್ರ ಕೊರೋನಾ ಕಿಟ್ ನಲ್ಲಿ ಸೇರಿಸಲಾಗಿದೆ. ತಜ್ಞರ ಸಲಹೆ ಮೇರೆಗೆ ಬಿಬಿಎಂಪಿ ಈ ಹೊಸ ಕಿಟ್ ಪರಿಚಯಿಸಿದ್ದು, ಪ್ಯಾರಾಸಿಟಮಾಲ್ 500mg ಮಾತ್ರೆಗಳು, ವಿಟಮಿನ್ ಸಿ 500mg ಮಾತ್ರೆಗಳು, ಝಿಂಕ್ ಸಲ್ಫೈಟ್ 50mgಮಾತ್ರೆಗಳು, ಲೆವೋಟ್ರೈಸೈನ್ 10mg ಮಾತ್ರೆಗಳು, ಪಾಂಟಪ್ರೋಝೋಲ್ 40mg ಮಾತ್ರೆಗಳು. ಆ್ಯಂಟಿ ಟುಸಿವ್ ಕಾಫ್ ಸಿರಪ್ ಅನ್ನ ನಿಗದಿ ಪಡಿಸಿದೆ.
ಸದ್ಯ ಆ್ಯಕ್ಟಿವ್ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಈವರೆಗೆ ಒಟ್ಟು 1600 ಮಂದಿ ಮಾತ್ರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐಸೋಲೇಷನ್ ಹಾಗೂ ಕೊರೋನಾ ಔಷಧಿಗಳ ನಿಯಮದಲ್ಲಿ ಪಾಲಿಕೆ ಬದಲಾವಣೆ ತಂದಿದ್ದು, ಆದಷ್ಟು ಬೇಗ ಕೊರೋನಾ ಮುಕ್ತವಾಗಲಿ ಅನ್ನೋದು ಎಲ್ಲರ ಆಶಯವಾಗಿದೆ.