Sunday, June 23, 2024

ಪತ್ತೆಯಾಯಿತು ಬ್ಲ್ಯಾಂಕೆಟ್ ಆಕ್ಟೋಪಸ್ ಫಿಶ್!

ಈ ಭೂಮಿ ಅದೆಷ್ಟೋ ಕೋಟಿ ರಾಶಿ ಜೀವಿಗಳಿಗೆ ಅವಾಸ ಸ್ಥಾನವಾಗಿದೆ. ನಮ್ಮ ಭೂಮಿ ಸಾಕಷ್ಟು ವರ್ಷಗಳಿಂದ ವಿಕಾಸ ಹೊಂದಿಕೊಂಡು ಸಾಕಷ್ಟು ಅಚ್ಚರಿಯ ಬದಲಾವಣೆಗಳನ್ನ ಪಡೆದುಕೊಂಡು ಬಂದಿದೆ. ಈ ಪೃಥ್ವಿಯ ಜೊತೆಗೆ ಮಾನವನ ವಿಕಾಸವು ಕೂಡ ಬಹು ವೇಗವಾಗಿ ನಡೆದುಕೊಂಡು ಬಂದಿದೆ. ಇಂದು ಜಗತ್ತಿನಲ್ಲಿರುವ ಜೀವ ರಾಶಿಗಳಲ್ಲಿ ಮಾನವ ಬುದ್ಧಿ ಜೀವಿಯಾಗಿ ಬೆಳೆದು ನಿಲ್ಲೋದ್ರ ಜೊತೆಗೆ ಜಗತ್ತನ್ನ ಆಳ್ತಾ ಇದ್ದಾನೆ. ಇನ್ನು ಈ ಪ್ರಕೃತಿ ಕೂಡ ಅಷ್ಟೆ, ಮಾನವನ ಬೆಳವಣಿಗೆಗೆ ಎಲ್ಲಾ ರೀತಿಯಾದ ಸಹಕಾರವನ್ನ ನೀಡ್ಕೊಂಡು ಬಂದಿದೆ. ಅದೇ ರೀತಿ ಈ ಭೂಮಿ ಮಾನವನಿಂದ ಅದೆಷ್ಟೋ ವಿಚಾರಗಳನ್ನ ಹಾಗು ಅದೆಷ್ಟೋ ಜೀವರಾಶಿಗಳನ್ನ ನಿಗೂಢವಾಗಿ ಇಟ್ಟಿದೆ.

ಇಂದು ಮಾನವನಿಂದ ಈ ಪ್ರಕೃತಿ ರಹಸ್ಯವಾಗಿಟ್ಟಿರುವ ಅಂಶಗಳಲ್ಲಿ ಸಾಗರ ಹಾಗು ಸಾಗರದಲ್ಲಿನ ಜೀವಿಗಳು ಕೂಡ ಒಂದು. ಇಂದು ಈ ಜಗತ್ತು ಶೆ.25ರಷ್ಟು ಭೂ ಪ್ರದೇಶದಿಂದ ಆವರಿಸಿದ್ರೆ, ಶೇ.75 ರಷ್ಟು ಸಾಗರದಿಂದ ಆವೃತ್ತವಾಗಿದೆ. ಅದರಲ್ಲಿ ಮಾನವ ಸ್ವಲ್ಪವೇ ಅಧ್ಯಯನ ಮಾಡಿ ಸಾಗರದಲ್ಲಿನ ಕೆಲವೇ ಕೆಲವು ಜೀವಿಗಳನ್ನ ಪತ್ತೆ ಹಚ್ಚಿದ್ದಾನೆ. ಇನ್ನು ವಿಜ್ಞಾನಿಗಳ ಪ್ರಕಾರ ಇಂದಿಗೆ ಮಾನವ ನಿಖರವಾಗಿ ಪತ್ತೆ ಹಚ್ಚಿರೋದು ಕೇವಲ 2,28,450 ಜೀವಿಗಳು ಅಂತ ಹೇಳಲಾಗಿದೆ. ಸರಿಯಾದ ರೀತಿಯ ಸಂಶೋಧನೆ ನಡೆಸೋದಕ್ಕೆ ಸಾಧ್ಯವಾದ್ರೆ ಸುಮಾರು 20 ಲಕ್ಷ ಸಾಗರದ ಜೀವಗಳನ್ನ ಮಾನವ ಪತ್ತೆ ಹಚ್ಚೋದಕ್ಕೆ ಸಾಧ್ಯವಾಗುತ್ತದೆ ಅಂತ ಹೇಳ್ತಾ ಇದ್ದಾರೆ. ಆದ್ರೆ ಸಂಪೂರ್ಣವಾದ ಸಾಗರವನ್ನ ಅಧ್ಯಯನ ನಡೆಸೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಯಾಕಂದ್ರೆ ಸಂಪೂರ್ಣವಾದ ಸಾಗರವನ್ನ ಅಧ್ಯಯನ ಮಾಡೋದಕ್ಕೆ ಮಾನವನ ಬಳಿ ಬಲಿಷ್ಠವಾದ ಟೆಕ್ನಾಲಜಿ ಇಲ್ಲ ಅನ್ನೋದು ಜಗಜ್ಜಾಹೀರಾದ ಸತ್ಯವಾಗಿದೆ.

ಸದ್ಯಕ್ಕೆ ಮಾನವ ತನ್ನ ಬಳಿ ಇರುವ ಟೆಕ್ನಾಲಜಿಯನ್ನ ಬಳಸಿ ಹಲವು ಅಪರೂಪದ ಹಾಗು ವಿಶೇಷವೆನಿಸುವ ಕೆಲವು ಸಾಗರ ಜೀವಿಗಳನ್ನ ಪತ್ತೆ ಹಚ್ಚಿದಾನೆ. ಆದ್ರೂ ಅವುಗಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸೋದಕ್ಕೆ ಸಾಧ್ಯವಾಗಿಲ್ಲ. ಯಾಕಂದ್ರೆ, ಸಮುದ್ರದ ಮೇಲ್ಮೈನಿಂದ ತಳದವರೆಗೆ ಬೇರೆ ಬೇರೆ ವಾತಾವರಣ ಇರೋದ್ರಿಂದ ಮಾನವನಿಗೆ ಇದರ ಅಧ್ಯಯನ ಸಾಕಷ್ಟು ಕಷ್ಟವಾಗಿದೆ. ಇನ್ನು ಇಂತಹದ್ದೆ ಒಂದು ಸಮಸ್ಯೆ ವಿಜ್ಞಾನಿಗಳಿಗೆ ಕಾಡಿದ್ದು ಬ್ಲ್ಯಾಂಕೆಟ್ ಫಿಶ್​ ಅಧ್ಯಯನದಲ್ಲಿ. ಈ ಮೀನುಗಳು ಅಷ್ಟು ಸುಲಭವಾಗಿ ಮಾನವನ ಕಣ್ಣಿಗೆ ಕಾಣೋದಿಲ್ಲ. ಇದಕ್ಕೆ ಕಾರಣ ಇವುಗಳು ವಾಸಿಸುವ ರೀತಿ. ಆಳ ಸಮುದ್ರದಲ್ಲಿ ಹೆಚ್ಚಾಗಿ ವಾಸಿಸುವ ಈ ಬ್ಲಾಂಕೆಟ್​ ಆಕ್ಟೋಪಸ್​ ಫಿಶ್​ಗಳು. ಅತ್ಯಪರೂಪದ ಜೀವಿಗಳಾಗಿದೆ. ಸಮುದ್ರ ತಳದಲ್ಲಿನ ಆಕ್ಟೋಪಸ್​ ವರ್ಗದ ಜೀವಿಗಳಲ್ಲಿ ಇವು ಹೆಚ್ಚು ವಿಭಿನ್ನವಾಗಿದ್ದು, ಇವುಗಳ ಅಗಲ ಚರ್ಮವೇ ಇವುಗಳಿಗೆ ರಕ್ಷಾ ಕವಚವಾಗಿ ಕಾರ್ಯ ನಿರ್ವಹಿಸುತ್ತವೆ.

ಸಾಧಾರಣವಾಗಿ ಈ ಬ್ಲ್ಯಾಂಕೆಟ್​ ಆಕ್ಟೋಪಸ್​ ಫಿಶ್​ಗಳು ಅಷ್ಟು ಸುಲಭವಾಗಿ ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದಿಲ್ಲ. ಆದರೆ, ಗ್ರೇಟ್‌ ಬ್ಯಾರಿಯರ್‌ ರೀಫ್​​ನ ಲೇಡಿ ಎಲಿಯಟ್‌ ದ್ವೀಪದಲ್ಲಿ ಈ ಮೀನು ಸಾಗರ ತಜ್ಞರ ಕಣ್ಣಿಗೆ ಬಿದ್ದಿದೆ. ಸಾಗರ ಜೀವವಿಜ್ಞಾನಿ ಜೆಸಿಂಟಾ ಶಾಕ್ಲಿಟನ್‌ ಅವರು ಸಾಗರ ಜೀವಿಗಳ ಕುರಿತಾಗಿ ಅಧ್ಯಯನ ನಡೆಸುವ ವೇಳೆ ಈ ಮೀನನನ್ನ ಪತ್ತೆ ಹಚ್ಚಿದ್ದಾರೆ. ಮೊದ ಮೊದಲು ಈ ಮೀನನ್ನ ನೋಡಿದ ಅವರು. ಉದ್ದ ಈಜು ರೆಕ್ಕೆ ಇರುವ ಸಣ್ಣ ಮೀನು ಅನ್ನೋ ನಿರ್ಧಾರಕ್ಕೆ ಬಂದಿದ್ರಂತೆ. ಆದರೆ, ಈ ಮೀನನ್ನ ಹತ್ತಿರದಿಂದ ನೋಡಿದ ಅವರು ಸಾಧಾರಣ ಮೀನು ಅನ್ನೋ ನಿರ್ಧಾರಕ್ಕೆ ಬಂದಿದ್ರು, ಆದ್ರೆ ಇದರ ಕಂಬಳಿಯಂತಹ ಚರ್ಮ  ಹಾಗು ಇದರ ಚಲನೆ ವಲನೆಗಳಿಂದ ಇದು ಹೆಣ್ಣು ಬ್ಲಾಂಕೇಟ್​ ಅಕ್ಟೋಪಸ್​ ಅನ್ನೋದು ದೃಢವಾಗುತ್ತದೆ.

ಇನ್ನು ಈ  ಬ್ಲ್ಯಾಂಕೆಟ್‌ ಆಕ್ಟೋಪಸ್‌ ಮೀನು ಸುಮಾರು 21 ವರ್ಷಗಳ ನಂತರ ಪತ್ತೆಯಾಗಿದ್ದು,  ಗ್ರೇಟ್‌ ಬ್ಯಾರಿಯರ್‌ ರೀಫ್​​ನ ಉತ್ತರ ಭಾಗದಲ್ಲಿರುವ ರಿಬ್ಬನ್‌ ರೀಫ್​​ನಲ್ಲಿ ಅದನ್ನು ಡಾ. ಜುಲಿಯನ್‌ ಫಿನ್‌ ನೋಡಿದ್ದರು. ಆಗ ಪತ್ತೆಯಾಗಿದ್ದ ಹೆಣ್ಣು ಬ್ಲ್ಯಾಂಕೆಟ್‌ ಆಕ್ಟೋಪಸ್‌ ಗರಿಷ್ಠ 2 ಮೀಟರ್‌ ಉದ್ದ ಬೆಳೆದಿದ್ರೆ, ಗಂಡು ಬ್ಲ್ಯಾಂಕೆಟ್​ ಆಕ್ಟೋಪಸ್​ ಫಿಶ್​ 2.4 ಸೆಂಟಿ ಮೀಟರ್‌ ಉದ್ದವಿತ್ತು. ಇನ್ನು ಈ ಮೀನುಗಳು ಶತ್ರುಗಳ ದಾಳಿಯಾದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಲು ನೈಸರ್ಗಿಕ ಕವಚ ಹೊಂದಿದ್ದು, ಆವುಗಳು ಹೊದಿಕೆಯ ಆಕರದಲ್ಲಿದೆ. ಒಂದು ವೇಳೆ ದಾಳಿಪಯಾದ್ರೆ ಈ ಹೊದಿಕೆಗಳನ್ನ ಅಗಲವಾಗಿ ಹರಡಿಕೊಂಡು ತಮ್ಮನ್ನ ತಾವು ರಕ್ಷಿಸಿಕೊಳ್ಳುತ್ತದೆ. ಇದೇ ಕಾರಣದಿಂದಾಗಿ ಇವುಗಳನ್ನ ಬ್ಲ್ಯಾಂಕೆಟ್​ ಆಕ್ಟೋಪಸ್​ ಎಂದು ಕರೆಯಲಾಗುತ್ತಿದೆ.

ಸದ್ಯದ ಮಟ್ಟಿಗೆ ಅಪರೂಪಕ್ಕೆ ಪತ್ತೆಯಾಗುವ ಈ ಮೀನಿನ ಬಗ್ಗೆ ಸಾಗರ ತಜ್ಞರು ಅಧ್ಯಯನ ನಡೆಸುತ್ತಿದ್ದು, ಅವುಗಳ ವಾಸಸ್ತಾನ ಹಾಗು ಜೀವನ ಶೈಲಿಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ತಜ್ಞರು ಈ ಬಗ್ಗೆ ಇನ್ನಷ್ಟೇ ಮಾಹಿತಿಯನ್ನ ನೀಡಬೇಕಿದೆ. ಒಟ್ಟಾರೆಯಾಗಿ ಇದೀಗ ಈ ಬ್ಲ್ಯಾಂಕೇಟ್​ ಆಕ್ಟೋಪಸ್​ ಪತ್ತೆಯಾಗಿರುವುದರಿಂದ ಸಾಗರ ತಜ್ಞರಲ್ಲಿ ಸಾಕಷ್ಟು ಮೂಡಿರೋದಂತು ಸುಳ್ಳಲ್ಲ.

ಲಿಖಿತ್​​ ರೈ , ಪವರ್​ ಟಿವಿ

RELATED ARTICLES

Related Articles

TRENDING ARTICLES