ಜನವರಿ ಬಂದ್ರೆ ಸಾಕು ಸಸ್ಯಕಾಶಿ ಲಾಲ್ಬಾಗ್ನಲ್ಲಿ ಹೂವಿನ ಲೋಕವೇ ಮೈ ಸೆಳೆಯುತ್ತಾ ಇತ್ತು. ಆದರೆ ಇದೀಗಾ ಫ್ಲವರ್ ಶೋ ಮೇಲೆ ಕೊರೋನಾ ಕರಿನೆರಳು ಬಿದ್ದಿದೆ. ಈ ನಡುವೆ ಗಣರಾಜ್ಯೋತ್ಸವಕ್ಕೆ ಫಲಪುಷ್ಪ ಪ್ರದರ್ಶನ ಆಯೋಜಿಸಲು ಭರದಿಂದ ಸಿದ್ದತೆ ನಡೆಯುತ್ತಿದೆ. ಆದರೆ 3ನೇ ಅಲೆ ಭೀತಿಯಿಂದಾಗಿ ಫ್ಲವರ್ ಶೋ ಪ್ರಿಯರಿಗೆ ನಿರಾಸೆ ಮೂಡಿಸಿದೆ.
ಬೆಂಗಳೂರಿಗರ ಮೋಸ್ಟ್ ಫೇವರೆಟ್ ಸ್ಪಾಟ್. ವರ್ಣರಂಜಿತ ಫಲ-ಪುಷ್ಪಗಳಿಗೆ ಪ್ರಸಿದ್ದ. ಹಾಗಾಗಿ ಪ್ರವಾಸಿಗರಿಗೆ ಇದು ಪ್ರಾಥಮಿಕ ಆಕರ್ಷಣೆ. ಲಾಲ್ಬಾಗ್ನ ಕೆಂಪುತೋಟ ಎಂದೇ ಪ್ರಸಿದ್ದಿ ಪಡೆದಿರುವ ಫ್ಲವರ್ ಶೋವನ್ನ ಕಣ್ಣುತುಂಬಿಸಿಕೊಳ್ಳಲು ಅದೆಷ್ಟೋ ಜನ ಅದೆಲ್ಲೆಲ್ಲಿಂದಲೋ ಆಗಮಿಸುತ್ತಿರುತ್ತಾರೆ. ನಾಡಪ್ರಭು ಕೆಂಪೇಗೌಡರ ಕನಸಿನ ಉದ್ಯಾನವನವಾದ ಲಾಲ್ಬಾಗ್ನಲ್ಲಿ ಇಂಡೋ-ಅಮೆರಿಕನ್ ಸೇರಿದಂತೆ ವಿವಿಧ ತಳಿಗಳಿಂದ ನೂರಾರು ಜಾತಿಯ ಹೂಗಳು ಹಾಗೂ ಸಸ್ಯಗಳನ್ನ ಇಲ್ಲಿ ಬೆಳೆಯಲಾಗುತ್ತದೆ. ಇವುಗಳಿಗಿರುವ ಬೇಡಿಕೆ ಬಹುಶಃ ರಾಜ್ಯದಲ್ಲೆಲ್ಲೂ ಸಿಗಲು ಸಾಧ್ಯವಿಲ್ಲ. ಹಾಗಾಗಿ ವರ್ಷದುದ್ದಕ್ಕೂ ಇಲ್ಲಿ ಒಂದೊಂದು ಸೀಸನ್ ಪ್ರಕಾರ ಹೂ, ಹಣ್ಣು, ತರಕಾರಿಗಳಂತೆ ಜನರಿಗೆ ಸ್ಪೆಷಲ್ ಕಾದಿರುತ್ತದೆ.
ವರ್ಷದಲ್ಲಿ 2 ಬಾರಿ ನಡೆಯುವ ಈ ಫಲಪುಷ್ಪ ಪ್ರದರ್ಶನದಲ್ಲಿ ವಿಭಿನ್ನ ರೀತಿಯ ಕಲಾಕೃತಿಗಳನ್ನ ನಿರ್ಮಿಸಿ ವೀಕ್ಷಕರನ್ನ ಆಕರ್ಷಿಸುವುದು ಇಲ್ಲಿನ ನಿತ್ಯದ ವಾಡಿಕೆಯಾಗಿದೆ. ಈ ಬಾರಿಯೂ ತೋಟಗಾರಿಕಾ ಇಲಾಖೆಯು ಆಜಾದ್ ಕಾ ಅಮೃತ್ ಮಹೋತ್ಸವ್ ಥೀಮ್ ಅಡಿಯಲ್ಲಿ 73ನೇ ಗಣರಾಜ್ಯೋತ್ಸವವನ್ನ ಆಚರಿಸಲು ಸಕಲ ಸಿದ್ದತೆಗಳನ್ನ ಮಾಡಿದ್ದು, ಇದಕ್ಕಾಗಿ ಸಾಕಷ್ಟು ಖರ್ಚು ಮಾಡಲಾಗಿದೆ. ಜೊತೆಗೆ ಕನ್ನಡದ ಕಣ್ಮಣಿ ವರನಟ ಡಾ. ರಾಜ್ ಕುಮಾರ್ ಹಾಗೂ ಕಳೆದ ವರ್ಷ ವಿಧಿವಶರಾದ ನಟ ಪುನೀತ್ ರಾಜ್ಕುಮಾರ್ ಅವರ ಪುಷ್ಪ ಪ್ರತಿಮೆಗಳನ್ನ ನಿರ್ಮಿಸಿ ಹೂನಮನ ಅರ್ಪಿಸಲು ಸಿದ್ದತೆಗಳನ್ನ ಮಾಡಲಾಗಿದೆ.
ಇನ್ನು ಪುಷ್ಪಪ್ರಿಯರನ್ನು ಕೈ ಬೀಸಿ ಕರೆಯುವ ಈ ಫ್ಲವರ್ ಶೋಗೆ ಲಕ್ಷಾಂತರ ಜನ ಬಂದು ಬಗೆಬಗೆಯ ಹೂಗಳ ಅಂದವನ್ನು ಸವಿಯುತ್ತಿದ್ದರು. ಅಲ್ಲದೇ, ವಿವಿಧ ಪುಷ್ಪಗಳಿಂದ ತಯಾರಿಸುವ ವಿಶಿಷ್ಟ ಕಲಾಕೃತಿಗಳನ್ನು ಕಣ್ಣುತುಂಬಿಸಿಕೊಳ್ಳುತ್ತಿದ್ದರು. ಇದೀಗ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಫ್ಲವರ್ ಶೋ ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ.