Monday, December 23, 2024

ಮಕರ ಸಂಕ್ರಾಂತಿ ಹಬ್ಬದ ಇತಿಹಾಸ

ಪಥ ಬದಲಿಸುವ ಸೂರ್ಯ ಪ್ರಕೃತಿಗೆ ಹೊಸ ಬೆಳಗನ್ನು ನೀಡುವ ಕಾಲ ಮೈ ಮುರಿದು ದುಡಿಯುವ ರೈತ ರಾಶಿ ಮಾಡುವ ಕಾಲ.. ಮನೆ ಮಗಳನ್ನು ತವರಿಗೆ ಕರೆಯುವ ಕಾಲ.. ಜಿಕ್ಕೂತ್ತ ಜೋಕಾಲಿಯಾಡಿ ತವರಿಗೆ ಜಯವಾಗಲೇಂದು ಹರಸುವ ಕಾಲ.. ಉತ್ತರಾಯಣ ಆರಂಭದ ಪರ್ವಕಾಲ.. ಅದೇ ಮಕರ ಸಂಕ್ರಮಣ.

ಸೂರ್ಯ ತನ್ನ ಪಥವನ್ನು ಬದಲಾಯಿಸಿ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಹಿಂದೂ ಪಂಚಾಗದ ಅನ್ಯವಯ ಈ ದಿನಕ್ಕೆ ಮಕರ ಸಂಕ್ರಾಂತಿ, ಉತ್ತರಾಯಣ ಆರಂಭ ದಿನ ಎನ್ನುವ ಜೊತೆಗೆ ಆಯಾ ಪ್ರಾಂತ್ಯಕ್ಕೆ ತಕ್ಕಂತೆ ಈ ದಿನವನ್ನು ಕರೆಯುವ ವಾಡಿಕೆಯೂ ಇದೆ. ಇನ್ನೂ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ ಮೊದಲ ದಿನದಿಂದ ಹೊಸ ವರ್ಷಾರಂಭವಾಗುತ್ತದೆ. ಪ್ರತಿ ವರ್ಷದ ಜನವರಿ 14 ರಂದು ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಆದರೆ ನಾಲ್ಕು ವರ್ಷಗಳಿಗೊಮ್ಮೆ ಜನವರಿ 15 ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಅದ್ಯಾಕೆ ನಾಲ್ಕು ವರ್ಷಕ್ಕೊಮ್ಮೆ ಸಂಕ್ರಾಂತಿ ದಿನವನ್ನು ತುಸು ಬದಲಾವಣೆ ಮಾಡ್ತಾರೆ ಎನ್ನುವ ಕುತೂಹಲ ಬಹುತೇಕರಿಗೆ ಇದೆ. ಕಾರಣ ಹಿಂದು ಪಂಚಾಂಗದ ಪ್ರಕಾರ ಅಧಿಕ ಮಾಸ ಇರುವ ವರ್ಷದಲ್ಲಿ ಮಕರ ಸಂಕ್ರಾಂತಿಯ ದಿನ ಬದಲಾವಣೆ ಆಗುತ್ತದೆ.

ಒಂದು ವರ್ಷದಲ್ಲಿ 365 ದಿನಗಳು ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ, ವಾಸ್ತವದಲ್ಲಿ 365.24 ದಿನಗಳು ಇರುತ್ತದೆ. 365 ಸಂಪೂರ್ಣ ದಿನಗಳು ಎಂದು ಲೆಕ್ಕದಲ್ಲಿ ಬಳಸುತ್ತೇವೆ. ನಾಲ್ಕು ವರ್ಷಗಳಲ್ಲಿ ಹೆಚ್ಚುವರಿ ಕಾಲಮಾನವನ್ನು ಸೇರಿದ ಒಂದು ದಿನ ಲೆಕ್ಕಾಚಾರ ಮಾಡಲಾಗುತ್ತದೆ. ಅದನ್ನು ಫೆಬ್ರವರಿ ತಿಂಗಳಿಗೆ ಸೇರಿಸಲಾಗುತ್ತದೆ. ಅದಕ್ಕೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಫೆಬ್ರವರಿ ತಿಂಗಳಲ್ಲಿ 29 ದಿನಗಳು ಬರುವುದು. ಆ ವರ್ಷಕ್ಕೆ ಲೀಪ್ ಇಯರ್ ಎಂದು ಕರೆಯುತ್ತಾರೆ. ಯಾವ ವರ್ಷ ಲೀಪ್ ಇಯರ್ ಇರುತ್ತದೆಯೋ ಆ ವರ್ಷ ಜನವರಿ 15 ರಂದು ಮಕರ ಸಂಕ್ರಮಣವನ್ನು ಆಚರಿಸುತ್ತಾರೆ.

ನಮ್ಮಲ್ಲಿ ನಾಲ್ಕು ವೇದಗಳು ಹಾಗೂ ಆರು ವೇದಾಂಗಳು ಇವೆ. ಅವುಗಳ ಪೈಕಿ ಜ್ಯೋತಿಷ್ಯವು ಒಂದು. ಜ್ಯೋತಿಷ್ಯಕ್ಕೆ ವೇದಗಳ ಕಣ್ಣು ಎಂದು ಕರೆಯಲಾಗಿದೆ. ಅನಾದಿ ಕಾಲದಿಂದಲೂ ಮೂಹುರ್ತಾದಿ ಕಾಲ ನಿರ್ಣಯ, ಗ್ರಹಗಳ ಚಲನ ವಲನ, ರಾಶಿ, ನಕ್ಷತ್ರ, ಋತುಮಾನಗಳು ಸೇರಿದಂತೆ ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ ಶುಭಾಶುಭ ಫಲಗಳ ಗುರುತಿಸುತ್ತಾ ಹಬ್ಬ ಹರಿದಿನಗಳ ಲೆಕ್ಕಾಚಾರ ಹಾಕುವ ಶಾಸ್ತ್ರಕ್ಕೆ ಜ್ಯೋತಿಷ್ಯ ಎಂದು ಕರೆದರು. ಈ ಶಾಸ್ತ್ರದ ಪ್ರಕಾರ ಸೂರ್ಯನ ಚಲನಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಅದರಂತೆ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡಿದ ದಿನವನ್ನು ಮಕರ ಸಂಕ್ರಾಂತಿ ಎಂದು ಮತ್ತು ಉತ್ತರಾಯಣ ಆರಂಭದ ದಿನ.

ಈ ಕಾಲದಲ್ಲಿ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ ಹಾಗೂ ಬೆಚ್ಚನೆಯ ವಾತಾವರಣ ಇರುವುದರಿಂದ ಹೆಚ್ಚಿನ ಕಡೆಗಳಲ್ಲಿ ಬೆಳೆ ಕಟಾವು ಮಾಡುವ ಕಾಲವೂ ಆಗಿರುತ್ತದೆ. ಉತ್ತರಾಯಣ ಒಂದೆರಡು ದಿನಗಳ ಕಾಲ ಹಿಂದೆ ಮುಂದಾದರೂ ಸಂಕ್ರಮಣದಿಂದಲೇ ಲೆಕ್ಕಾಚಾರ ಮಾಡುವ ಪದ್ಧತಿ ಜಾರಿಯಲ್ಲಿ ಇದೆ.

ಉತ್ತರಾಯಣ ಪುಣ್ಯ ಕಾಲವು ಬಹುತೇಕ ಪುಷ್ಯ ಮಾಸದಲ್ಲಿ ಬರುತ್ತದೆ. ಈ ಕಾಲ ಬದುಕುವುದಕ್ಕೆ ಮಾತ್ರವಲ್ಲದೇ ಸಾಯುವುದಕ್ಕೂ ಈ ಕಾಲವೇ ಸೂಕ್ತ ಕಾಲವೆಂದು ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ. ದ್ವಾಪರ ಯುಗದಲ್ಲಿ ಭೀಷ್ಮಾಚಾರ್ಯರು ದೇಹ ತ್ಯಾಗಕ್ಕೆ ಉತ್ತರಾಯಣ ಕಾಲದವರೆಗೂ ಶರಶಯ್ಯದ ಮೇಲೆ ಕಾದಿದ್ದರಂತೆ. ಉತ್ತರಾಯಣವನ್ನು ದೇವತೆಗಳ ಕಾಲ ಅಂತಲೂ ಹಾಗು ದಕ್ಷಿಣಾಯಣವನ್ನು ಪಿತೃಗಳ ಕಾಲ ಅಂತಲೂ ಕರೆಯಲಾಗುತ್ತದೆ. ಅದೇ ಕಾರಣಕ್ಕೆ ಯಜ್ಙಯಾಗಾದಿಗಳು ಹೆಚ್ಚಾಗಿ ಉತ್ತಾರಾಯಣ ಕಾಲದಲ್ಲಿ ಮಾಡಲಾಗುತ್ತದೆ.

ಸಂಕ್ರಾಂತಿ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲ ಎಂದು ಗಣನೆಗೆ ತೆಗೆದು ಕೊಳ್ಳಲಾಗುತ್ತದೆ. ಈ ಪುಣ್ಯ ಪವರದಲ್ಲಿ ಕಪ್ಪು ಎಳ್ಳುಗಳನ್ನು ಬಳಸಿ ಸ್ನಾನ ಮಾಡಿ ಎಳ್ಳನ್ನು ದಾನ ಮಾಡಲಾಗುತ್ತದೆ. ಅಂದು ದೇವಾಲಯಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ, ದೇವರಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಈ ಕಾಲದಲ್ಲಿ ಮಾಡಿದ ದಾನ ಫಲ ಜನ್ಮಜನ್ಮಾಂತರಕ್ಕೂ ಸಿಗುವಂತೆ ಸೂರ್ಯ ದೇವ ಅನುಗ್ರಹಿಸುತ್ತಾನೆಂದು ಎನ್ನಲಾಗುತ್ತದೆ. ಇದಕ್ಕಾಗಿಯೇ ಅಂದು ಹಿರಿಯರು ಎಳ್ಳು- ಬೆಲ್ಲವನ್ನು ಹಂಚಿ ಬೆಲ್ಲದಂತೆ ಇದ್ದು ನಲ್ಲೆಯಿಂದ ಬಾಳೋಣ ಎಂದು ಹರಸಿ ಹಾರೈಸುತ್ತಾರೆ.

ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೂ ಸಹ ಸಂಕ್ರಾಂತಿ ಎಂದೇ ಕರೆಯುತ್ತಾರೆ. ಆ ಎಲ್ಲಾ ಸಂಕ್ರಾಂತಿಯ ಕಾಲವನ್ನು ಸಹ ಪುಣ್ಯ ಕಾಲ ಎನ್ನಲಾಗಿದೆ. ಮೇಷ ಸಂಕ್ರಾಂತಿಯನ್ನು ವಿಷುವತ್ ಪುಣ್ಯಕಾಲವೆಂದೂ, ವೃಷಭ ಸಂಕ್ರಾಂತಿಯನ್ನು ವಿಷ್ಣುಪದ ಪುಣ್ಯಕಾಲವೆಂದೂ, ಮಿಥುನ ಸಂಕ್ರಾಂತಿಯನ್ನು ಷಡಶೀತಿ ಪುಣ್ಯಕಾಲವೆಂದೂ, ಕಟಕ ಸಂಕ್ರಾಂತಿಯನ್ನು ದಕ್ಷಿಣಾಯನ ಪುಣ್ಯಕಾಲವೆಂದು, ಸಿಂಹ ಸಂಕ್ರಾಂತಿ ವಿಷ್ಣುಪದ ಪುಣ್ಯಕಾಲವೆಂದು, ಕನ್ಯಾ ಸಂಕ್ರಾಂತಿಯನ್ನು ಷಡಶೀತಿ ಪುಣ್ಯಕಾಲ ಎಂದು,ತುಲಾ ಸಂಕ್ರಾಂತಿಯನ್ನು ವಿಷುವತ್ ಪುಣ್ಯಕಾಲ ಎಂದು, ವೃಶ್ಚಿಕ ಸಂಕ್ರಾಂತಿಯನ್ನು ವಿಷ್ಣುಪದ ಪುಣ್ಯಕಾಲ ಎಂದು, ಧನಸ್ಸು ಸಂಕ್ರಾಂತಿಯನ್ನು ಷಡಶೀತಿ ಪುಣ್ಯಕಾಲ ಎಂದು , ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲ ಎಂದು, ಕುಂಭ ಸಂಕ್ರಾಂತಿಯನ್ನು ವಿಷ್ಣುಪದ ಪುಣ್ಯಕಾಲ ಎಂದು, ಮೀನ ಸಂಕ್ರಾಂತಿಯನ್ನು ಷಡಶೀತಿ ಪುಣ್ಯಕಾಲವೆಂದು ಪ್ರಸಿದ್ದಿಯಾಗಿದೆ. ಈ ಪುಣ್ಯ ಕಾಲಗಳ ಪೈಕಿ ವಿಷ್ಣುಪದ ಪುಣ್ಯಕಾಲಕ್ಕಿಂತಲೂ, ಷಡಶೀತಿ ಪುಣ್ಯಕಾಲ ಶ್ರೇಷ್ಠ ಎನ್ನಲಾಗುತ್ತದೆ. ಷಡಶೀತಿ ಪುಣ್ಯ ಕಾಲಕ್ಕಿಂತಲೂ, ವಿಷ್ಣುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷ್ಣುವತ್ ಪುಣ್ಯಕಾಲಕ್ಕಿಂತಲೂ ಆಯನಪುಣ್ಯ ಕಾಲ ಅತ್ಯಂತ ಶ್ರೇಷ್ಠವಾಗಿದೆ. ದಕ್ಷಿಣಾಯನ ಕಾಲಕ್ಕಿಂತಲೂ ಉತ್ತರಾಯಣ ಕಾಲ ಶ್ರೇಷ್ಠವಾಗಿದ್ದು ಎನ್ನಲಾಗುತ್ತದೆ.

ಈ ಪುಣ್ಯ ಕಾಲದಲ್ಲಿ ನದಿ ಸ್ನಾನ, ದೇವಾತಾರ್ಚನೆ,ಹೋಮ, ಜಪ, ಪಿತೃ ತರ್ಪಣ, ದಾನ ಇತ್ಯಾದಿ ಕಾರ್ಯಗಳನ್ನು ಮಾಡುವುದು ಸೂಕ್ತ ಎನ್ನಲಾಗಿದೆ. ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆಗೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ಈ ಸಮಯದಲ್ಲಿ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ಕರೆತಂದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ-ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದು ಹೇಳಲಾಗುತ್ತದೆ.

ಈ ಹಬ್ಬವನ್ನು ಭಾರತೀಯ ಉಪಖಂಡದಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತದೆ. ಜೊತೆಗೆ ನಮ್ಮ ದೇಶದ ವಿವಿಧ ರಾಜ್ಯದಲ್ಲಿ ಮತ್ತು ದಕ್ಷಿಣ ಏಷ್ಯಾದಲ್ಲಿ ವಿಭಿನ್ನ ಹೆಸರಿನಲ್ಲಿ ವಿಭಿನ್ನ ರೀತಿಯಲ್ಲಿ ಸಂಕ್ರಾಂತಿಯನ್ನು ಆಚರಿಸುತ್ತಾರೆ.

ಕರ್ನಾಟಕದಲ್ಲಿ ಸುಗ್ಗಿ, ಮಕರ ಸಂಕ್ರಮಣ, ಮಕರ ಸಂಕ್ರಾಂತಿ ಎಂದು, ಆಂಧ್ರ,ತೆಲಂಗಾಣ ಹಾಗೂ ಮಧ್ಯಪ್ರದೇಶದಲ್ಲಿ ಸಂಕ್ರಾಂತಿ,ಮಕರ ಸಂಕ್ರಾಂತಿ, ಮಕರ ಸಂಕ್ರಮಣ, ಉತ್ತರಾಯಣ ಅಥವಾ ಸಂಕ್ರಾಂತಿ ಎಂದು ಕರೆಯುತ್ತಾರೆ. ಉತ್ತರಾಖಂಡ್​​ದಲ್ಲಿ ಮಂಕರ ಸಂಕ್ರಾಂತಿ, ಉತ್ತರಾಯಣ, ಅಥವಾ ಘುಘುಟಿ ಎಂದು ಕರೆಯುತ್ತಾರೆ. ಒಡಿಶಾದಲ್ಲಿ ಮಕರ ಸಂಕ್ರಾಂತಿ, ಮಕರ ಮೇಳ, ಅಥವಾ ಮಕರ ಚೌಲ ಎಂದು ಕರೆಯುತ್ತಾರೆ. ಕೇರಳದಲ್ಲಿ ಮಕರ ಸಂಕ್ರಾಂತಿ, ಮಕರವಿಳಕ್ಕು, ಅಥವಾ ಮಕರ ಜ್ಯೋತಿ ಎಂದು ಕರೆಯುತ್ತಾರೆ.

ಬಿಹಾರದಲ್ಲಿ ಮಕರ ಸಂಕ್ರಾಂತಿ ಅಥವಾ ತಿಲ ಸಂಕ್ರಾಂತಿ ಎಂದು ಕರೆಯುತ್ತಾರೆ. ಮಹಾರಾಷ್ಟ್ರ, ಗೋವಾ ಮತ್ತು ನೇಪಾಳದಲ್ಲಿ ಮಕರ ಸಂಕ್ರಾಂತಿ, ಮಾಘಿ, ಸಕ್ರಾಂತ್ ಹಲ್ದಿ ಕುಂಕುಮ್ ಎಂದು ಕರೆಯುತ್ತಾರೆ. ತ್ರಿಪುರದಲ್ಲಿ ಹಂಗ್ರೈ ಎಂದು ಕರೆಯುತ್ತಾರೆ. ತಮಿಳುನಾಡು, ಶ್ರೀಲಂಕಾ,. ಸಿಂಗಾಪುರ್, ಮಲೇಷ್ಯಾದಲ್ಲಿ ತೈಪೊಂಗಲ್ ಅಥವಾ ಉಳವರ್ ತಿರುನಾಳ್ ಎಂದು ಕರೆಯುತ್ತಾರೆ. ಗುಜರಾತ್​​ನಲ್ಲಿ ಉತ್ತರಾಯಣ ಎಂದರೆ ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಪಂಜಾಬ್​​ನಲ್ಲಿ ಮಾಘಿ ಎಂದು ಕರೆಯುತ್ತಾರೆ. ಆಸ್ಸಾಂನಲ್ಲಿ ಸಂಕ್ರಾಂತಿಗೆ ಮಾಘ್ ಬಿಹು, ಅಥವಾ ಭೋಗಾಲಿ ಬಿಹು ಎಂದು ಕರೆಯುತ್ತಾರೆ. ಕಾಶ್ಮೀರ ಕಣಿವೆ ಶಿಶುರ್ ಸಂಕ್ರಾತ್ ಎಂದು ಉತ್ತರ ಪ್ರದೇಶ ಮತ್ತು ಪಶ್ಚಿಮ ಬಿಹಾರದಲ್ಲಿ ಸಕ್ರತ್ ಅಥವಾ ಖಿಚಡಿ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳಲ್ಲಿ ಪೌಶ್ ಸಂಕ್ರಾಂತಿ ಎಂದು ಕರೆದರೆ ವಿಥಿಲಾದಲ್ಲಿ ತಿಲ ಸಕ್ರೈಟ್ ಮತ್ತು ಪಾಕಿಸ್ತಾನದಲ್ಲಿ ತಿರ್ಮೂರಿ ಎಂದು ಕರೆಯುತ್ತಾರೆ.

ಭಾರತದಲ್ಲಿ ಬಹುತೇಕ ಕಡೆಗಳಲ್ಲಿ ಈ ಹಬ್ಬವನ್ನು ನಾಲ್ಕು ದಿನಗಳವರೆಗೆ ಆಚರಿಸುತ್ತಾರೆ. ಕೆಲವು ಭಾಗದಲ್ಲಿ ಎರಡು ದಿನಗಳವರೆಗೆ ಆಚರಿಸಿದರೆ ಇನ್ನೂ ಕೆಲವು ಕಡೆಗಳಲ್ಲಿ ದೇವರ ಹಬ್ಬ ಎಂದು ನಡೆಸುತ್ತಾರೆ. ಇನ್ನು, ಕೆಲ ಕಡೆಗಳಲ್ಲಿ ಒಂದೇ ದಿನಕ್ಕೆ ಸೀಮಿತವಾಗಿರುತ್ತದೆ. ಮೊದಲ ದಿನದ ಆಚರಣೆಗೆ ಮಾಘಿ ಅಥವಾ ಬೋಗಿ ಪಾಂಡುಗ ಎಂದರೆ ಎರಡನೇಯ ದಿನಕ್ಕೆ ಮಕರ ಸಂಕ್ರಾಂತಿ , ಪೊಂಗಲ್ ಪೆದ್ದು ಪಾಂಡುಗ, ಉತ್ತರಾಯಣ, ಮಾಘ ಬಿಹು ಎಂದೆಲ್ಲಾ ಹೇಳುತ್ತಾರೆ. ಇನ್ನೂ ಮೂರನೇ ದಿನಕ್ಕೆ ಮಟ್ಟು ಪೊಂಗಲ್, ಕಣುಮ ಪಾಂಡುಗ ಎಂದು ಕರೆಯುತ್ತಾರೆ. ನಾಲ್ಕನೇ ದಿನ ಕಾಣುಂ ಪೋಂಗಲ್ ಅಥವಾ ಮುಕ್ಕನುಮ ಎಂದು ಕರೆಯವ ವಾಡಿಕೆ ಇದೆ. ಈ ಹಬ್ಬದ ಕಾಲದಲ್ಲಿ ಗಾಳಿಪಟ ಹಾರಿಸುವುದು, ಹೋರಿಗಳನ್ನು ಓಡಿಸುವುದು, ಕಿಚ್ಚು ಹಾಯುವುದು, ಗಂಗಾ ಸ್ನಾನ ( ನದಿ ಸ್ನಾನ), ದೀಪಾರಾಧನೆ ಇತ್ಯಾದಿ ಆಚರಣೆಗಳನ್ನು ಮಾಡುವ ಪದ್ಧತಿ ರೂಢಿಯಲ್ಲಿದೆ. ಹರಿದ್ವಾರ, ಪ್ರಯಾಗ, ಉಜ್ಜಯಿನಿ ಮತ್ತು ನಾಸಿಕ್ ಈ ನಾಲ್ಕು ಸ್ಥಳಗಳಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯುತ್ತದೆ. ಇದನ್ನು ಹೊರತುಪಡಿಸಿ ಮಾಘ ಮೇಳ, ಗಂಗಾಮೇಳ, ಬಂಗಾಳ ಕೊಲ್ಲಿಯಲ್ಲಿ ತುಸುಮೇಳ, ತುಸುಪೋರಬ್,ಪಂಜಾಬ್​​ನ ಮುಕ್ತರ್ಸಾಹಿಬ್​​ನಲ್ಲಿ ಚಾಲಿಸ್ ಮುಕ್ತ ಮೇಳ ಮಾಘಿ ಸೇರಿದಂತೆ ಹಲವಾರು ಹೆಸರುಗಳಲ್ಲಿ ಈ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ.

ನಮ್ಮ ರಾಜ್ಯದ ಮಟ್ಟಿಗೆ ರೈತರಿಗೆ ಸುಗ್ಗಿಯಾದರೆ, ಹೆಣ್ಣುಮಕ್ಕಳನ್ನು ತವರು ಮನೆಗೆ ಕರೆಯುವ ಹಬ್ಬ ಎಂದು ಗುರುತಿಸಿಕೊಂಡಿದೆ. ಎಳ್ಳು ಬೆಲ್ಲ ಕೊಟ್ಟು ಬೆಲ್ಲದಂತೆ ಇರೋಣ ಎಂದು ಹೇಳುತ್ತಾ ಆಚರಿಸುವ ಹಬ್ಬ. ಈ ಸಂದರ್ಭದಲ್ಲಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡುವ ಚಂದವೇ ನೋಡಲು ಆನಂದ.

ಶ್ರೀನಾಥ್ ಜೋಶಿ, ಪವರ್ ಟಿವಿ

RELATED ARTICLES

Related Articles

TRENDING ARTICLES