Wednesday, December 18, 2024

ನಾಯಿಗೆ ಭರ್ಜರಿ ಬರ್ತಡೇ ಸಂಭ್ರಮ

ಶಿವಮೊಗ್ಗ : ಶ್ವಾನ ಪ್ರಿಯರೊಬ್ಬರು, ತಾವು ಸಾಕಿರುವ ಶ್ವಾನದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಪೆಂಡಾಲ್ ಹಾಕಿಸಿ, ಕೇಕ್ ಕಟ್ ಮಾಡಿಸಿ, ಸ್ನೇಹಿತರಿಗೆಲ್ಲ ಬಿರಿಯಾನಿ ಊಟ ಹಾಕಿಸಿ, ನಮ್ಮ ಶ್ವಾನ ಸುಮ್ನೆ ಅಲ್ಲ, ನಮಗೆ ಬಹಳ ಅಚ್ಚು ಮೆಚ್ಚು ಅಂತಾ ತೋರಿಸಿಕೊಟ್ಟಿದ್ದಾರೆ. ಅಷ್ಟೆ ಅಲ್ಲ, ತಮ್ಮ ಅಚ್ಚುಮೆಚ್ಚಿನ ಶ್ವಾನಕ್ಕೆ ಅತ್ಯಂತ ದುಬಾರಿ ಗಿಫ್ಟ್ ಕೂಡ ನೀಡಿದ್ದಾರೆ.
ರಾಗಿಗುಡ್ಡದ ಮೊಹಮ್ಮದ್ ಅಯಾಜ್ ಅವರು ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದನ್ನು ಸಾಕಿದ್ದಾರೆ. ಅದಕ್ಕೆ ಟೈಸನ್ ಎಂದು ಹೆಸರಿಟ್ಟಿದ್ದಾರೆ. ನಿನ್ನೆ ಜ. 13 ರಂದು ಟೈಸನ್ ಗೆ ಮೊದಲ ವರ್ಷದ ಹುಟ್ಟುಹಬ್ಬವಾಗಿದ್ದು, ಅದನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಪೆಂಡಾಲ್, ಕೇಕ್, ಚಿಕನ್ ಬಿರಿಯಾನಿ :-

ಟೈಸನ್ ಮೊದಲ ವರ್ಷದ ಹುಟ್ಟುಹಬ್ಬಕ್ಕಾಗಿ ಮೊಹಮ್ಮದ್ ಅಯಾಜ್ ಅವರು ರಾಗಿಗುಡ್ಡದ ತಮ್ಮ ಮನೆ ಬಳಿ ಪೆಂಡಾಲ್ ಹಾಕಿಸಿದ್ದರು. ನಿನ್ನೆ ಸಂಜೆ ತಮ್ಮ ಪ್ರೀತಿಯ ಟೈಸನ್ ಕೈಯಿಂದಲೇ ಕೇಕ್ ಕಟ್ ಮಾಡಿಸಿ, ತಮ್ಮ ಸ್ನೇಹಿತರಿಗೆಲ್ಲ ಚಿಕನ್ ಬಿರಿಯಾನಿ ಊಟ ಬಡಿಸಿದ್ದಾರೆ. ಸುಮಾರು 150 ಮಂದಿ ಶ್ವಾನದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದು, ಎಲ್ರೂ ಟೈಸನ್ ಗೆ ವಿಷ್ ಕೂಡ ಮಾಡಿದರು.

ಟೈಸನ್ ಗೆ ದುಬಾರಿ ಗಿಫ್ಟ್ ಏನದು….!? :-

ಇದಿಷ್ಟೆ ಅಲ್ಲ, ಮೊಹಮದ್ ಅಯಾಜ್ ಅವರು ತಮ್ಮ ಅಚ್ಚುಮೆಚ್ಚಿನ ಶ್ವಾನಕ್ಕೆ ದುಬಾರಿ ಗಿಫ್ಟ್ ಕೂಡ ನೀಡಿದ್ದಾರೆ. ಅತ್ಯಂತ ಮೆತ್ತನೆಯ ಹಾಸಿಗೆಯೊಂದನ್ನು ತರಿಸಿಕೊಂಡಿದ್ದಾರೆ. ಅದರ ಬೆಲೆ ಸುಮಾರು 13 ಸಾವಿರ ರೂ. ಅಂತೆ. ಟೈಸನ್ ಆರಾಮಾಗಿ ಕೂರಬೇಕು, ಮಲಗಬೇಕು. ಹೀಗಾಗಿ ತುಂಬಾ ಮೆತ್ತನೆಯ ಹಾಸಿಗೆ ತರಿಸಿ, ಗಿಫ್ಟ್ ಮಾಡಿದ್ದಾರೆ.

ಶ್ವಾನಕ್ಕಾಗಿ ಪ್ರತ್ಯೇಕ ಮನೆಯಲ್ಲಿ ವಾಸ :-

ಅಂದಹಾಗೆ, ಮೊಹಮ್ಮದ್ ಅಯಾಜ್, ಟೈಸನ್ ಗಾಗಿ ಅವರು ಮನೆಯವರಿಂದ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಅಮೀರ್ ಅಹಮದ್ ಕಾಲೋನಿಯಲ್ಲಿ ಮೊಹಮದ್ ಅಯಾಜ್ ಅವರ ಮನೆ ಇದ್ದು, ಕುಟುಂಬದವರೆಲ್ಲಾ ಅಲ್ಲಿಯೇ ವಾಸವಾಗಿದ್ದಾರೆ. ಅಲ್ಲಿ ಅಪ್ಪ, ಅಮ್ಮ, ಅಣ್ಣ, ಅಕ್ಕಂದಿರಿದ್ದಾರೆ. ಇವರ ಮನೆಯಲ್ಲಿ ನಾಯಿ ಸಾಕಲು ವಿರೋಧವಿದ್ದು, ಹೀಗಾಗಿ ರಾಗಿಗುಡ್ಡದಲ್ಲಿ ಮನೆ ಮಾಡಿದ್ದಾರಂತೆ. ಅಲ್ಲಿಯೇ ಟೈಸನ್ ಜೊತೆಗೆ ಇದ್ದು, ನಿತ್ಯ ಮನೆಗೆ ಹೋಗಿ ಎಲ್ಲರನ್ನ ಮಾತನಾಡಿಸಿಕೊಂಡು ಬರುತ್ತಾರೆ. ಅದರೆ ಇಲ್ಲಿ ಬಂದು ಉಳಿದುಕೊಳ್ಳುತ್ತಾರೆ ಮೊಹಮ್ಮದ್ ಅಯಾಜ್.
ಮೊಹಮ್ಮದ್ ಅಯಾಜ್ ಅವರು, ಚನ್ನಗಿರಿಯ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಭಾರಿ ಮಳೆಯಲ್ಲಿ ನೆಂದು ಬಂದ ನಾಯಿಯೊಂದಕ್ಕೆ ಹೊಟೇಲ್ ಬಳಿ ಆಶ್ರಯ ನೀಡಿದ್ದರಂತೆ. ಅಲ್ಲಿ ಇವರಿಗೆ ಪ್ರತಿದಿನ 25 ರೂ. ಕೂಲಿ ಕೊಡುತ್ತಿದ್ದರು. ಆ ಹಣವೆಲ್ಲ ನಾಯಿಯ ಹಾಲು, ತಿಂಡಿಗೆ ಖರ್ಚಾಗುತ್ತಿತ್ತಂತೆ. ಆ ನಾಯಿ ಎರಡು ಮರಿಗಳನ್ನ ಹಾಕಿದ್ದು. ಹೊಟೇಲ್ ಗೆ ಬಂದವರು ಯಾರೋ ನಾಯಿ ಮರಿಗಳನ್ನು ಕೊಂಡೊಯ್ದಿದ್ದರಂತೆ. ಆಗ ಇವರು, ಚನ್ನಗಿರಿಯ ಬೀದಿ ಬೀದಿ ಹುಡುಕಿದ್ದಾರೆ. ಮರಿಗಳು ಸಿಗಲಿಲ್ಲ. ಆಗ ಬಹಳ ಬೇಸರವಾಗಿತ್ತು.

ಬಳಿಕ ಶಿವಮೊಗ್ಗಕ್ಕೆ ಹಿಂತಿರುಗಿದ ಮೊಹಮ್ಮದ್ ಅಯಾಜ್, ಈಗ ಟೈಲ್ಸ್ ಕೆಲಸದ ಮೇಸ್ತ್ರಿಯಾಗಿದ್ದಾರೆ. ಟೈಲ್ಸ್ ಕೆಲಸಕ್ಕೆ ಹೋಗುವಾಗ ಟೈಸನ್ ಅನ್ನು ಬೊಮ್ಮನಕಟ್ಟೆಯಲ್ಲಿರುವ ಶ್ವಾನಗಳ ಕೇರ್ ಸೆಂಟರ್ ನಲ್ಲಿ ಬಿಟ್ಟು ಹೋಗುತ್ತಾರೆ. ಸಂಜೆ ಬರುವಾಗ ಟೈಸನ್ ಅನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ನಿನ್ನೆ ಟೈಸನ್ ಹುಟ್ಟುಹಬ್ಬದ ಹಿನ್ನೆಲೆ ಕೆಲಸಗಾರರಿಗೆ ರಜೆ ಕೊಟ್ಟಿದ್ದು 150 ಜನ ಸ್ನೇಹಿತರಿಗೆ ಬಿರಿಯಾನಿ ಊಟ ಹಾಕಿಸಿದ್ದಾರೆ.
ಈ ಮೂಲಕ ನಾಯಿ ಸಾಕುವುದು ಬರಿ ಪ್ರತಿಷ್ಠೆಯಾಗಬಾರದು. ಅದಕ್ಕೆ ಒಳ್ಳೆಯ ಆಹಾರ, ಔಷಧೋಪಚಾರ ಮಾಡಬೇಕು. ಪ್ರಾಣಿಗಳ ಬಗ್ಗೆ ಪ್ರೀತಿ ಇರಬೇಕೆಂದು ಶ್ವಾನ ಪ್ರಿಯರಿಗೆ ಮೊಹಮ್ಮದ್ ಅಯಾಜ್ ಕಿವಿ ಮಾತು ಹೇಳುತ್ತಾರೆ.

ಇದೀಗ ಮೊಹಮ್ಮದ್ ಅಯಾಜ್ ಅವರು, ಶ್ವಾನದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿರುವುದು ಅವರ ಸ್ನೇಹಿತರ ವಲಯದಲ್ಲಿ, ಅಕ್ಕಪಕ್ಕದ ನಿವಾಸಿಗಳು, ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES