Monday, December 23, 2024

ಬೆಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಗಂಡನಿಂದ ಡಿವೋರ್ಸ್

ನೈಲ್ ನದಿಯಲ್ಲಿ ವಿಹಾರ ಮಾಡುವಾಗ ಈಜಿಪ್ಟ್​ನ ಶಿಕ್ಷಕಿಯೊಬ್ಬರು ಬೆಲ್ಲಿ ಡ್ಯಾನ್ಸ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದೀಗ ದೇಶದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಮನ್ಸೌರಾ ನಗರದ ಸ್ಥಳೀಯರಾದ ಅಯಾ ಯೂಸೆಫ್ ಅವರು ಕೈರೋದಲ್ಲಿ ನೈಲ್ ಕ್ರೂಸ್‌ನಲ್ಲಿ ಕೆಲವು ಶಿಕ್ಷಕರೊಂದಿಗೆ ಪ್ರವಾಸಕ್ಕೆ ಹೋದಾಗ ಸಹೋದ್ಯೋಗಿಯೊಬ್ಬರು ಆಕೆಯ ಅನುಮತಿಯಿಲ್ಲದೆ ಆಕೆ ಬೆಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಶಿಕ್ಷಕಿಯಾಗಿರುವ ಅಯಾ ಯೂಸೆಫ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಆಕೆಯ ಪತಿ ಆಕೆಗೆ ವಿಚ್ಛೇದನವನ್ನೂ ನೀಡಿದ್ದಾರೆ.

ಈಜಿಪ್ಟ್ ಇಂಡಿಪೆಂಡೆಂಟ್‌ನ ವರದಿ ಪ್ರಕಾರ, ಈ ವಿಡಿಯೋದಿಂದಾಗಿ ನನ್ನ ಜೀವನವೇ ನಾಶವಾಯಿತು ಎಂದು ಯೂಸೆಫ್ ಹೇಳಿದ್ದಾರೆ. ನಿರ್ಲಜ್ಜ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. “ನಾನು ನನ್ನ ಕೆಲಸವನ್ನು ಕಳೆದುಕೊಂಡೆ, ನನ್ನ ಪತಿಯೂ ಡೈವೋರ್ಸ್​ ನೀಡಿದರು. ನನ್ನ ಮನೆಯಲ್ಲಿ ನನ್ನ ತಾಯಿ ಅನಾರೋಗ್ಯಕ್ಕೆ ಒಳಗಾದರು” ಎಂದು ಯೂಸೆಫ್ ಅವರು ಹೇಳಿದ್ದಾರೆ. ನಮ್ಮ ಕುಟುಂಬವು ವಿಡಿಯೋದಿಂದ ಹೆಚ್ಚು ಪ್ರಭಾವಿತವಾಗಿ, ನನ್ನ ಜೀವನ ಹಾಳಾಗಿದೆ ಎಂದು ಆಕೆ ಹೇಳಿದ್ದಾರೆ.

ಬಿಬಿಸಿ ವರದಿಯ ಪ್ರಕಾರ, ಮಿಸ್ ಯೂಸೆಫ್ ಅವರ ವೀಡಿಯೊವನ್ನು ಈಜಿಪ್ಟ್ ಸಂಪ್ರದಾಯವಾದಿಗಳು ಟೀಕಿಸಿದ್ದಾರೆ ಮತ್ತು ಅವರು ನಾಚಿಕೆಗೇಡಿನ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ. ಒಬ್ಬ ಟ್ವಿಟ್ಟರ್ ಬಳಕೆದಾರರು ಆಕೆ ಮದುವೆಯಾಗಿರುವುದರಿಂದ ಇತರ ಪುರುಷರೊಂದಿಗೆ ನೃತ್ಯ ಮಾಡಬಾರದು ಎಂದು ಬರೆದರೆ, ಇನ್ನೊಬ್ಬರು ನೆಟ್ಟಿಗರು ಈಜಿಪ್ಟ್​ನಲ್ಲಿ ಶಿಕ್ಷಣವು ಕೆಳಮಟ್ಟಕ್ಕೆ ತಲುಪಿದೆ ಎಂದು ಟೀಕಿಸಿದ್ದಾರೆ.

RELATED ARTICLES

Related Articles

TRENDING ARTICLES