Wednesday, January 22, 2025

ನೀವು ಕೂಲ್ ಡ್ರಿಂಕ್ಸ್​ ಪ್ರಿಯರೇ ?

ಕೂಲ್​ ಡ್ರಿಂಕ್ಸ್​ ಇವತ್ತು ಜಗತ್ತಿನಲ್ಲಿ ಕೂಲ್​ ಡ್ರಿಂಕ್ಸ್​ ಕುಡಿಯದವರೇ ಇಲ್ಲ ಜಗತ್ತಿನಲ್ಲಿ ಬಹುತೇಕ ಮಂದಿ ಕೂಲ್​ ಡ್ರಿಂಕ್ಸ್​ ಪ್ರಿಯರಾಗಿದ್ದು, ಇದೇ ಕಾರಣಕ್ಕೆ ಔತಣ ಕೂಟ, ಪಾರ್ಟಿ, ಸಭೆ, ಸಮಾರಂಭದಂತಹ ಶುಭ ಸಮಾರಂಭದಲ್ಲಿ ಸಾಫ್ಟ್​​ ಡ್ರಿಂಕ್ಸ್​ಗಳನ್ನ ಇಡಲಾಗುತ್ತದೆ. ಒಂದು ಅಂಕಿ ಅಂಶದ ಪ್ರಕಾರ ಜಗತ್ತಿನಲ್ಲಿ ಶೇ. 59ರಷ್ಟು ಮಂದಿ ಸಾಫ್ಟ್​​ ಡ್ರಿಂಕ್ಸ್​ ಪ್ರಿಯರಿದ್ದು, ಇನ್ನುಳಿದವರು ಅಪರೂಪಕ್ಕೆ ಕುಡಿಯುವವರು ಹಾಗು ಆರೋಗ್ಯ ಕಾರಣದಿಂದ ಕೂಲ್​ ಡ್ರಿಂಕ್ಸ್​ ಸೇವನೆ ಮಾಡದವರು ಇದ್ದಾರೆ. ಹೀಗಾಗಿನೇ ಇವತ್ತು ಜಗತ್ತಿನ ಮಾರುಕಟ್ಟೆಯಲ್ಲಿ ವಿವಿಧ ರೀತಿಯಾದ ಕೂಲ್​ ಡ್ರಿಂಕ್ಸ್​ಗಳು ಲಭ್ಯವಾಗ್ತಾ ಇದೆ. ಹೀಗೆ ಲಭ್ಯವಾಗುವ ಬಹುತೇಕ ಕೂಲ್ ಡ್ರಿಂಕ್ಸ್​ಗಳಲ್ಲಿ ಕೆಲವೊಂದು ರಾಸಾಯನಿಕಗಳನ್ನ ಬೆರೆಸಲಾಗ್ತಾ ಇದ್ದು, ಇವುಗಳು ಆರೋಗ್ಯಕ್ಕೆ ಮಾರಕ ಅಂತ ಹಲವು ವರದಿಗಳು ನಿಖರವಾಗಿ ಹೇಳುತ್ತಿವೆ.

ಈ ವರದಿ ಕೂಲ್ ಡ್ರಿಂಕ್ಸ್​ ಪ್ರಿಯರಿಗೆ ಆಘಾತ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಹುತೇಕವಾಗಿ ಕೃತಕ ಸಕ್ಕರೆ ಅಂಶಗಳನ್ನ ಬಳಸಿ ತಯಾರಿಸುವ ಸೋಡಾಗಳು ಆರೋಗ್ಯಕ್ಕೆ ಹಾನಿಕಾರಿಯಾಗಿದೆ. ಒಂದು ಗ್ಲಾಸ್ ಸೋಡಾ ಅಥವಾ ಸೋಡಾ ಮಿಶ್ರಿತ ಕೂಲ್ ಡ್ರಿಂಕ್ಸ್‌ನ್ನು ಕುಡಿಯುವುದರಿಂದ, ಹಲವು ಮಾರಕ ಕಾಯಿಲೆಗಳು ಬರಬಹುದುದೆಂದು ಸಿಡ್ನಿ ವಿಶ್ವ ವಿದ್ಯಾಲಯ ಹೇಳಿಕೆಯನ್ನ ನೀಡಿದೆ. ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ  ಜರ್ನಲ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ  ವರದಿ ಕೂಡ ಇದನ್ನೇ ಹೇಳ್ತಾ ಇದೆ,ಇದಕ್ಕೆ ಸಂಬಂಧ ಪಟ್ಟಂತೆ ಸಂಶೋಧಕರು ಸುಮಾರು 5,000 ದಂಪತಿಗಳನ್ನ ಸಮೀಕ್ಷೆ ನಡೆಸಿದ್ದು. ಇದರಲ್ಲಿ ಸಾಕಷ್ಟು ಜನ ಮಹಿಳೆಯರು ಸಾಫ್ಟ್​ ಡ್ರಿಂಕ್ಸ್​ ಕುಡಿಯುವುದರಿಂದ ಬಂಜೆತನದ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ ಅನ್ನೋ ಭಯಾನಕ ಮಾಹಿತಿ ಹೊರ ಬಿದ್ದಿದೆ.

ಇನ್ನು ಇದೇ ಜರ್ನಲ್​ ಸಂಸ್ಥೆ ಸ್ಟ್ರೋಕ್​ ಕುರಿತು ಅಧ್ಯಯನ ನಡೆಸಿದ್ದು ಅದರಲ್ಲಿ, ಸೋಡಾ ಮಿಶ್ರಿತ ಕೂಲ್ ಡ್ರಿಂಕ್ಸ್ ಕುಡಿಯುವವರಲ್ಲಿ ಸ್ಟ್ರೋಕ್ ಅಪಾಯ ಹೆಚ್ಚಾಗಿದೆ ಅನ್ನೊ ಭಯಾನಕ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಕಳೆದ 10 ವರ್ಷಗಳ ಅವಧಿಯಲ್ಲಿ 2,888 ಜನರನ್ನು ಸಂಸ್ಥೆ ಸಮಿಕ್ಷೆಗೆ ಒಳಪಡಿಸಿದ್ದು. ಈ ಅಧ್ಯಯನದಿಂದ ದಿನಕ್ಕೆ ಕನಿಷ್ಠ ಒಂದು ಸೋಡಾವನ್ನು ಕುಡಿಯುವವರಿಗೆ ಕಾಯಿಲೆಯ ಸಾಧ್ಯತೆ ಮೂರು ಪಟ್ಟು ಹೆಚ್ಚಿಸಿದೆ ಅನ್ನೋದನ್ನ ದೃಡೀಕರಿಸಿದೆ. ಇದಕ್ಕೆ ಪ್ರಮುಖ ಕಾರಣವನ್ನ ನೀಡಿರುವ ಸಂಶೋಧಕರು, Carbonated Water, Sugar, Citric Acid, Acidity Regulator ಸೇರಿದಂತೆ ಹಲವು ರಾಸಾಯನಿಕಗಳು ಬೆರಕೆಯಾಗುವುದರಿಂದ, ಇದು ನಮ್ಮ ಜೀವಕೋಶಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ, ಅದು ಮುಂದಿನ ದಿನಗಳಲ್ಲಿ ಸ್ಟ್ರೋಕ್​ಗೆ ಕಾರಣವಾಗುತ್ತದೆ ಅನ್ನೋದು ಅವರ ಅಭಿಪ್ರಾಯವಾಗಿದೆ.

ಈ ಬಗ್ಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ವಿಶ್ವವಿದ್ಯಾಲಯದ ಹಲವು ಪ್ರಮುಖ ಅಧ್ಯಯನದಲ್ಲೂ ಇದೇ ರೀತಿಯಾದ ವರದಿಗಳು ಬಂದಿದ್ದು, ಅಲ್ಲಿನ ಸಂಶೋಧಕರ ಪ್ರಕಾರ ಸೋಡಾ ಮಿಶ್ರಿತ ಕೂಲ್​ ಡ್ರಿಂಕ್​ ಸೇವನೆಯಿಂದ ಜನರು ಬೇಗ ವಯಸ್ಸಾಗುವಂತೆ ಕಾಣುತ್ತಾರಂತೆ. ಹೆಚ್ಚು ರಾಸಾಯನಿಕ ಮಿಶ್ರಿತ ಸಾಫ್ಟ್ ಡ್ರಿಂಕ್ಸ್​ ಸೇವಿಸುವುದರಿಂದ, ಚರ್ಮದ ಕೋಶಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಪ್ರತಿನಿತ್ಯ  20 ಔನ್ಸ್ ಸೋಡಾದ ದೈನಂದಿನ ಸೇವನೆಯು ಜೀವಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದು ಚರ್ಮದ ಮೇಲೆ ಪರಿಣಾಮ ಬೀರಿ ಚರ್ಮ ಸುಕ್ಕು ಗಟ್ಟುವಂತೆ ಮಾಡುತ್ತೆ. ಇದರಿಂದ ಹಲವು ಚರ್ಮರೋಗಗಳು ಕೂಡ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೇ ರೀತಿ ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಅಸ್ತಮಾ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಕೂಡ ಬರುವ ಸಾಧ್ಯತೆ ಇದೆ ಅಂತ ಹೇಳಲಾಗಿತ್ತು.ಈ ಕುರಿತು ಅತಿ ಹೆಚ್ಚು ಕೂಲ್​ ಡ್ರಿಂಕ್ಸ್​ ಸೇವನೆ ಮಾಡುವ  ಸುಮಾರು 15,000ಕ್ಕಿಂತ ಹೆಚ್ಚು ಜನರೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ, ದಿನಕ್ಕೆ ಕನಿಷ್ಠ ಅರ್ಧ ಲೀಟರ್ ತಂಪು ಪಾನೀಯಗಳನ್ನು ಸೇವಿಸಿದವರು, ಹಾಗು ತಂಪು ಪಾನಿಯಗಳ ಚಟಕ್ಕೆ ಬಿದ್ದರವರ ಬಗ್ಗೆ ಅಧ್ಯಯನ ನಡೆಲಾಗಿತ್ತು ಈ ಅಧ್ಯಯನದಲ್ಲಿ ಹೀಗೆ ತಂಪು ಪಾನಿಯ ಅಧಿಕವಾಗಿ ಸೇವಿಸಿದವರಲ್ಲಿ ಶ್ವಾಸಕೋಶದ ಸಮಸ್ಯೆ ಕಂಡು ಬಂದಿದೆ ಅನ್ನೋ ವರದಿಯನ್ನ ವಿಶ್ವವಿದ್ಯಲಯ ನೀಡಿತ್ತು.

ಒಟ್ಟಾರೆಯಾಗಿ ಅತಿಯಾದ್ರೆ ಅಮೃತ ಕೂಡ ವಿಷವಾಗುತ್ತದೆ ಅನ್ನೋದಕ್ಕೆ ಕೂಲ್​ ಡ್ರಿಂಕ್ಸ್​ ಸಾಕ್ಷಿಯಾಗಿದೆ.ಸದ್ಯಕ್ಕೆ ಹಲವು ಸಂಶೋಧಕರು ಹೆಚ್ಚು ಕೂಲ್​ ಡ್ರಿಂಕ್ಸ್​ ಸೇವನೆ ಆರೋಗ್ಯಕ್ಕೆ ಮಾರಕ ಅಂತ ಹೇಳ್ತಾ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸದೆ ಇದ್ದರೆ ಮುಂದಿನ ಪೀಳಿಗೆಗೆ ಸಾಕಷ್ಟು ಸಂಕಷ್ಟ ಬಂದೊದಗಲಿದೆ ಅಂತ ಅಭಿಪ್ರಾಯ ಪಡ್ತಾ ಇದ್ದಾರೆ. ಹಾಗಾಗಿ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಯಾವ ರೀತಿಯಾದ ನಿಲುವನ್ನ ಹೊಂದಲಿದೆ ಅನ್ನೋದು ಹಲವು ಕುತೂಹಲಕ್ಕೆ ಕಾರಣವಾಗಿದೆ.

ಲಿಖಿತ್​​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES