Friday, January 24, 2025

ಮತ್ತೆ ನೆನಪಾದ ದಿ.ಲಾಲ್ ಬಹದ್ದೂರ್ ಶಾಸ್ತ್ರಿ

ಲಾಲ್​ ಬಹದ್ದೂರ್​ ಶಾಸ್ತ್ರಿ ಈ ಹೆಸರು ಕೇಳಿದ್ರೆ ಸಾಕು ಅದೆಷ್ಟೋ ಭಾರತೀಯರಲ್ಲಿ ಅವರ ಬಗ್ಗೆ ಅಭಿಮಾನದ ಪರಾಕಷ್ಟೆ ಮೂಡುತ್ತದೆ. ಇಂದಿಗೂ ಕೂಡ ಶಾಸ್ತ್ರಿಯವರು ಭಾರತಕ್ಕೆ ನೀಡದ ಕೊಡುಗೆಗಳು, ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅವರ ದೇಶಪ್ರೇಮದ ಮನಸ್ಸಿನ ಬಗ್ಗೆ ಇಂದಿಗೂ ಕೂಡ ನೆನಪಿಸಿಕೊಳ್ಳುವವರಿದ್ದಾರೆ. ಒಂದು ಕಾಲದಲ್ಲಿ ಯಾವ ಪಾಕಿಸ್ತಾನ ಭಾರತವನ್ನ ಸುಲಭವಾಗಿ ಸೋಲಿಸಿ ಬಿಡಬಹುದು ಎಂದು ಕೊಂಡಿತ್ತೋ, ಅದೇ ಪಾಕಿಸ್ತಾನಕ್ಕೆ ಭಾರತ ಸೋಲಿನ ರುಚಿಯನ್ನ ತೋರಿಸಿತ್ತು, ಯಾವ ಚೀನಾ ಭಾರತದ ಮತ್ತಷ್ಟು ಭೂಭಾಗವನ್ನ ಆಕ್ರಮಿಸಿ ಬಿಡಬಹುದು ಅಂತ ಅಂದು ಕೊಂಡಿತ್ತೋ ಅದೇ ಚೀನಾಗೆ ಭಾರತ ಬಹುದೊಡ್ಡ ಆಘಾತ ನೀಡಿತ್ತು. ಈ ಎರಡೂ ಶತ್ರು ರಾಷ್ಟ್ರಗಳಿಗೆ ಆಘಾತ ನೀಡೋದ್ರ ಹಿಂದಿದ್ದದ್ದೂ ಮಾತ್ರ ಲಾಲ್​ ಬಹದ್ದೂರ್​ ಶಾಸ್ತ್ರಿ ಅನ್ನೋ ಒಬ್ಬ ಅಪ್ಪಟ ದೇಶಪ್ರೇಮಿ ಪ್ರಧಾನಿ.

ಲಾಲ್​ ಬಹದ್ದೂರ್ ಶಾಸ್ತ್ರಿ ಅವರು1904ರ ಅಕ್ಟೋಬರ್​ 2ರಂದು ಉತ್ತರಪ್ರದೇಶದ ಮುಘಲ್ಸರಾಯ್​ನಲ್ಲಿ ಜನಿಸಿದ್ರು. ಶಾಸ್ತ್ರೀಯವರು ಒಂದುವರೆ ವರ್ಷವಿದ್ದಾಗಲೇ ಅವರ ತಂದೆ ಶಾರಾದ ಪ್ರಸಾದ್​ ಶ್ರೀವಸ್ತಾವ್​ ಅವರನ್ನ ಕಳೆದುಕೊಂಡಿದ್ದರು. ಹೀಗಾಗಿ ಕಡುಬಡತನದ ನಡುವೆ ತಮ್ಮ ತಾಯಿ ರಾಮ್​ದುಲಾರಿ ದೇವಿ ಅವರ ಮಮತೆ ಹಾಗು ಪ್ರೀತಿಯ ಮಡಿಲಿನಲ್ಲಿ ಬೆಳೆದಿದ್ದರು. ತಮ್ಮ ಬಾಲ್ಯದಲ್ಲೇ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದ ಅವರು, ತಾವು16 ವರ್ಷದಲ್ಲಿದ್ದಾಗ ಮಹಾತ್ಮ ಗಾಂಧಿ ಅವರ ಕರೆಗೆ ಓಗುಟ್ಟು ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಹೀಗೆ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ತಮ್ಮ ಶಿಕ್ಷಣದ ಬಗ್ಗೆ ಕೂಡ ಕಾಳಜಿ ವಹಿಸಿದ್ದ ಶಾಸ್ತ್ರಿಯವರು, ಕಾಶಿ ವಿದ್ಯಾಪೀಠವನ್ನು ಸೇರಿಕೊಂಡಿದ್ದರು. ಈ ವೇಳೆ ಹಲವು ರಾಷ್ಟ್ರೀಯವಾದಿಗಳು ಹಾಗು ಬುದ್ಧಿಜೀವಿಗಳ ಪರಿಚಯವಾಗಿ ಅವರ ಪ್ರಭಾವಕ್ಕೆ ಕೂಡ ಒಳಗಾಗಿದ್ದರು. ಈ ವೇಳೆ ಲಾಲ್​ ಬಹದ್ದೂರ್​ ಅವರು ಕಾಶಿ ವಿದ್ಯಾಪೀಠದಿಂದ ಶಾಸ್ತ್ರಿ ಅನ್ನೋ ಪದವಿಯನ್ನ ಪಡೆದುಕೊಳ್ಳುತ್ತಾರೆ ಮುಂದೆ ಅದು ಅವರ ಹೆಸರಿನ ಒಂದು ಭಾಗವಾಗಿ ಹೋಗುತ್ತದೆ ಇಂದಿಗೂ ಕೂಡ ಅನೇಕ ಭಾರತೀಯರು ಲಾಲ್​ ಬಹದ್ದೂರ್​ ಶಾಸ್ತ್ರಿ ಎಂದೇ ಅವರ ಹೆಸರನ್ನ ತಮ್ಮ ಸ್ಮೃತಿ ಪಲ್ಲಟದಲ್ಲಿ ಇರಿಸಿಕೊಂಡಿದ್ದಾರೆ.

ಹೀಗೆ ತಮ್ಮ ಪದವಿಯ ನಂತರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಶಾಸ್ತ್ರಿಯವರು, ಸಾಕಷ್ಟು ಜನ ಮನ್ನಣೆಯನ್ನ ಕೂಡ ಗಳಿಸೋದಕ್ಕೆ ಶುರು ಮಾಡಿದ್ರು. ಇದರ ಪರಿಣಾಮವಾಗಿ 1946ರಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಶಾಸ್ತ್ರಿಯವರನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ಆ ಮೂಲಕ ಅಧಿಕೃತವಾಗಿ ರಾಜಕೀಯ ಕ್ಷೇತ್ರದಲ್ಲಿ ಲಾಲ್​ ಬಹದ್ದೂರ್​ ಶಾಸ್ತ್ರಿಯವರು ಮೊದಲ ಬಾರಿಗೆ ಪ್ರಮುಖ ಹುದ್ದೆಯನ್ನ ನಿಭಾಯಿಸಿದ್ದರು.ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರದ ಕೆಲ ವರ್ಷಗಳ ಕಾಲ ಸ್ಥಳೀಯವಾಗಿ ಸೇವೆ ಸಲ್ಲಿಸಿದ್ದ ಶಾಸ್ತ್ರಿಯವರು, 1951ರಲ್ಲಿ ದೆಹಲಿಗೆ ತೆರಳಿದ್ದರು, ಆ ಮೂಲಕ ಕೇಂದ್ರ ಸರ್ಕಾರದ ಸಂಪುಟದಲ್ಲಿ ಹಲವು ಪ್ರಮುಖ ಇಲಾಖೆಗಳನ್ನು ನಿಭಾಯಿಸಿದ್ದರು. ಅದಲ್ಲಿ ರೈಲ್ವೆ, ಸಾರಿಗೆ ಮತ್ತು ಸಂವಹನ ಹಾಗೂ ವಾಣಿಜ್ಯ ಮತ್ತು ಉದ್ಯಮ ಇಲಾಖೆಗಳಂಥ ಮಹತ್ವದ ಸಚಿವಾಲಯಗಳ ಸಚಿವರಾಗಿ ತಮ್ಮ ಸೇವೆಯನ್ನ ಕೂಡ ಸಲ್ಲಿಸಿದ್ದರು.

ಹೀಗಿರುವಾಗಲೇ 1964ರಲ್ಲಿ ನೆಹರೂರವರು ಮರಣದ ನಂತರದಲ್ಲಿ ಕಾಂಗ್ರೆಸ್​ ಪಕ್ಷದಲ್ಲಿ ಹಲವು ಪ್ರಧಾನಿ ಹುದ್ದೆಗೆ ಹಲವು ಹೆಸರುಗಳು ಕೇಳಿ ಬಂದಿದ್ವು. ಆದ್ರೆ ಅಂತಿಮವಾಗಿ ಹಿರಿಯ ನಾಯಕರಿಗೆ ಪ್ರಧಾನಿ ಹುದ್ದೆಯನ್ನ ನೀಡ ಬೇಕು ಎಂದು ಬಯಸಿದ್ದ ಪಕ್ಷದ ಸದಸ್ಯರ ಚಿತ್ತ ಲಾಲ್​ ಬಹದ್ದೂರ್​ ಶಾಸ್ತ್ರಿಯವರ ಕಡೆಗೆ ಹರಿಯುತ್ತದೆ. ಹೀಗಾಗಿ 964ರ ಜೂನ್​​ನಿಂದ 1966ರ ಜನವರಿ ವರೆಗೆ ದೇಶದ ಪ್ರಧಾನಿಯಾಗಿ ಲಾಲ್​ ಬಹದ್ದೂರ್​ ಶಾಸ್ತ್ರಿಯವರು ಸೇವೆ ಸಲ್ಲಿಸುವಂತಾಯಿತು.. ಈ ವೇಳೆ ಹಲವು ಪ್ರಗತಿಪರ ಯೋಜನೆಗಳನ್ನ ಜಾರಿಗೆ ತಂದಿದ್ದ ಅವರು, ಜೈ ಜವಾನ್​, ಜೈ ಕಿಸಾನ್ ಎಂಬ ಘೋಷವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ನವಪಥವನ್ನ ತೋರಿಸಿದ್ದರು.. ಈ ವೇಳೆ ಗಡಿಯಲ್ಲಿ ತಗಾದೆ ತೆಗೆದಿದ್ದ ಚೀನಾಗೆ ತಿರುಗೇಟಿನ ಬಿಸಿ ನೀಡಿದ್ದ ಶಾಸ್ತ್ರಿಯವರು, 1965ರಲ್ಲಿ ಭಾರತ-ಪಾಕ್​ ಯುದ್ಧದಲ್ಲಿ ಪಾಕಿಸ್ತಾನದ ನಡು ಮುರಿದಿದ್ದರು.

ಈ ಯುದ್ಧದಲ್ಲಿ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ ತಾನು ಎಂತಹ ದುರ್ಬಲ ರಾಷ್ಟ್ರ ಅನ್ನೋದನ್ನ ಅವತ್ತು ಜಗತ್ತಿಗೆ ಸಾರಿತ್ತು. ಹೀಗಾಗಿ ಭಾರತದ ಶೌರ್ಯಕ್ಕೆ ಬೆಚ್ಚಿ ಬಿದ್ದಿದ್ದ ಪಾಕಿಸ್ತಾನದ ಅಂದಿನ ಪಾಕ್​ ಅಧ್ಯಕ್ಷ ಅಯೂಬ್​ ಖಾನ್​ ರಷ್ಯಾದ ಬಳಿ ಹೋಗಿ ಯುದ್ಧ ನಿಲ್ಲಿಸುವಂತೆ ಬೇಡಿಕೊಂಡಿದ್ದ ಇದರ ಪರಿಣಾಮವಾಗಿ ಲಾಲ್​ ಬಹದ್ದೂರ್​ ಶಾಸ್ತ್ರಿಯರು 1966ರ ಜನವರಿ 10ರಂದು ಅವರು ತಾಷ್ಕೆಂಟ್​​ಗೆ ತೆರಳಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ರು.ಆದರೆ ಇದಾದ ಮಾರನೆ ದಿನವೇ ಲಾಲ್​ ಬಹದ್ದೂರ್​ ಶಾಸ್ತ್ರಿವರು ಹೃದಯಘಾತದಿಂದ ತೀರಿ ಹೋಗಿದ್ದಾರೆ ಎಂಬ ಬರಸಿಡಿಲಿನ ಸುದ್ದಿಯೊಂದು ಭಾರತಕ್ಕೆ ಬಂದು ಅಪ್ಪಳಿಸುತ್ತದೆ.ಈ ಸಾವು ಇಂದಿಗೂ ನಿಗೂಢವಾಗಿ ಉಳಿದಿದ್ದು ಇಂದಿಗೂ ಕೂಡ ಶಾಸ್ತ್ರಿಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಅಂತ ಸರ್ಕಾರಿ ದಾಖಲೆಗಳು ಹೇಳ್ತಾ ಇದ್ದಾವೆ.

ಆದ್ರೆ ಅಂದು ಲಾಲ್​ ಬಹದ್ದೂರ್​ ಶಾಸ್ತ್ರಿಯವರ ಶವವನ್ನ ನೋಡಿದ್ದ ಅವರ ಮನೆಯವರು ಹಾಗು ಗಣ್ಯರು ಶಾಸ್ತ್ರಿ ಮೃತದೇಹದ ಮುಖ ಮತ್ತು ಇಡೀ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದನ್ನ ಗಮನಿಸಿದ್ದರು, ಹೊಟ್ಟೆ, ಬೆನ್ನು, ಕುತ್ತಿಗೆಯ ಮೇಲೆ ಕತ್ತರಿಸಿದ ಗುರುತು ಹಾಗೂ ಬಿಳಿ ಕಲೆಗಳು ಇದ್ದವು ಅಂತ ಅವರ ಕುಟುಂಬದವರು ಪ್ರತಿಪಾದಿಸಿದ್ದರು. ಬಳಿಕ ಈ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತನಿಖೆ ನಡೆಸುವುದಾಗಿ ಹೇಳಿತ್ತು.ಅವತ್ತು ರಷ್ಯಾ ಹಾಗು ಭಾರತೀಯ ತಜ್ಞ ವೈದ್ಯರು ಹಾಗು ಗುಪ್ತಚರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿಯನ್ನ ಕೂಡ ನೀಡಿತ್ತು. ಆದ್ರೆ ಈ ವರದಿಯ ನಂತರ ಕೂಡ ಅಂದಿನ ಕೇಂದ್ರ ಸರ್ಕಾರ ಲಾಲ್​ ಬಹದ್ದೂರ್​ ಶಾಸ್ತ್ರಿಯವರದ್ದೂ ಸಹಜ ಸಾವು ಎಂದೇ ಪ್ರತಿಪಾದಿಸಿತ್ತು.

ಅದೇನೆ ಇರಲಿ ಭಾರತ ಒಬ್ಬ ಅಪ್ಪಟ ದೇಶಪ್ರೇಮಿಯನ್ನ ಕಳೆದು ಕೊಂಡು 66 ವರ್ಷಗಳು ಕಳೆದಿವೆ. ಇಂದಿಗೂ ಕೂಡ ಶಾಸ್ತ್ರಿಯವರು ಭಾರತದ ಸಾರಿಗೆ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆ ವಿದೇಶಿ ಸಂಬಂಧ ಸುಧಾರಣೆಯಲ್ಲಿ ಅವರು ತಳೆದಿದ್ದ ನಿಲುವುಗಳು, ಕೃಷಿ ಕ್ಷೇತ್ರದಲ್ಲಿ ಅವರು ಮಾಡಿದ್ದ ಕ್ರಾಂತಿ ಇವೆಲ್ಲಕ್ಕಿಂತ ಮುಖ್ಯವಾಗಿ ದೇಶ ಹಾಗು ಸೇನೆಯ ವಿಚಾರದಲ್ಲಿ ರಾಜಿಯಾಗದ ಅವರ ನಿಲುವುಗಳು ಸದಾ ಜನಮಾನಸದಲ್ಲಿ ಹಾಗೆ ಉಳಿದಿದೆ. ಇನ್ನು ಮುಂದಿನ ದಿನಮಾನಗಳಲ್ಲು ಲಾಲ್​ ಬಹದ್ದೂರ್​ ಶಾಸ್ತ್ರಿಯವರ ದೇಶ ಸೇವೆಯ ಬಗ್ಗೆ ನಮ್ಮ ಯುವ ಸಮುದಾಯಕ್ಕೆ ತಿಳಿಸುವ ಒಳ್ಳೆ ಬುದ್ದಿ ನಮ್ಮ ಎಲ್ಲಾ ಸರ್ಕಾರಗಳಿಗೆ ಬರಲಿ ಅನ್ನೋದೆ ಎಲ್ಲರ ಆಶಯವಾಗಿದೆ.

ಲಿಖಿತ್​ ರೈ , ಪವರ್​​ ಟಿವಿ 

RELATED ARTICLES

Related Articles

TRENDING ARTICLES