ಬೆಂಗಳೂರು : ಕೊರೋನಾ 3ನೇ ಅಲೆಯ ಆರ್ಭಟದ ನಡುವೆಯೂ ಜನರ ನಿರ್ಲಕ್ಷ್ಯ ಮಾತ್ರ ಕಡಿಮೆಯಾಗಿಲ್ಲ. ಮಾರುಕಟ್ಟೆಗಳಲ್ಲಿ ಜನ ಸಾಮಾಜಿಕ ಅಂತರ ಮರೆತು ತರಕಾರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ತರಕಾರಿ ಹಾಗೂ ಹೂವಿನ ಮಾರುಕಟ್ಟೆಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ.
ರಾಜಧಾನಿಯ ಬೃಹತ್ ಮಾರುಕಟ್ಟೆಗಳು ಅಂದಾಕ್ಷಣ ಲಕ್ಷಾಂತರ ಜನ, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುವ ಕೇಂದ್ರ ಬಿಂದು. ಆದ್ರೆ ಕೊವಿಡ್ ದಿನೇ ದಿನೇ ಕೈ ಮೀರುತ್ತಿದ್ದು, ಎಷ್ಟೇ ಟಫ್ ರೂಲ್ಸ್ ಜಾರಿ ಮಾಡಿದ್ರು ಜನ ಹಾಗೂ ವ್ಯಾಪಾರಿಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಮಾರ್ಕೆಟ್‌ನಲ್ಲಿ ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಮಾರ್ಕೆಟ್‌ಗಳ ವಿಕೇಂದ್ರೀಕರಣಕ್ಕೆ BBMP ಮುಂದಾಗಿದೆ.
ಸದ್ಯದ ಮಾಹಿತಿ ಪ್ರಕಾರ ಕಲಾಸಿಪಾಳ್ಯ ಮಾರ್ಕೆಟ್ ಅನ್ನು ಸಿಂಗೇನ ಅಗ್ರಹಾರ ಅಥವಾ ಬ್ಯಾಟರಾಯನಪುರಕ್ಕೆ ಸ್ಥಳಾಂತರ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ. ಕೆ.ಆರ್.ಮಾರ್ಕೆಟ್ ಹೂವು ಹಾಗೂ ತರಕಾರಿ ಮಾರ್ಕೆಟ್ನ್ನು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಶಿಫ್ಟ್ ಮಾಡುವ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದೆ. ಸದ್ಯಕ್ಕೆ ಅಕ್ಕಪಕ್ಕದ ರಸ್ತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿದ್ದು. ಮಾರುಕಟ್ಟೆ ಸುತ್ತಮುತ್ತ 1 ರಿಂದ ಅರ್ಧ ಕಿಲೋ ಮೀಟರ್ ಒಳಗೆ ಮಾರುಕಟ್ಟೆ ವಿಕೇಂದ್ರಿಕರಣ ಆಗಲಿದೆ. ನ್ಯಾಷನಲ್ ಕಾಲೇಜು ಜೊತೆ ಬೇರೆ ಬೇರೆ ಪರ್ಯಾಯದ ಆಲೋಚನೆಗಳಿವೆ. ಈ ಬಗ್ಗೆ ಶೀಘ್ರ ಪೊಲೀಸರ ಜತೆ ಚರ್ಚಿಸಿ ತೀರ್ಮಾನ ಆಗಲಿದೆ ಅಂತ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ತಿಳಿಸಿದ್ದಾರೆ.
ಒಟ್ಟಿನಲ್ಲಿ 3ನೇ ಅಲೆಗೂ ಜನ ಡೋಂಟ್ ಕೇರ್ ಅಂದಿದ್ದು.KR ಮಾರ್ಕೆಟ್‌ನಲ್ಲಿ ಇಂದು ಸಹ ಜನ ಜಂಗುಳಿಯೇ ಕಂಡು ಬಂದಿದೆ. ಬಹುತೇಕರು ಮಾಸ್ಕ್, ಸಾಮಾಜಿಕ ಅಂತರ ಕಾಪಾಡದೆ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ಎಷ್ಟೇ ಮನವರಿಕೆ ಮಾಡಿದರೂ ಜನರಿಂದ ನಿಯಮ ಉಲ್ಲಂಘನೆಯಾಗುತ್ತಿದೆ. ಹೀಗಾಗಿ ಮಾರುಕಟ್ಟೆ ಸ್ಥಳಾಂತರ ಅನಿವಾರ್ಯವಾಗಿದ್ದು ಬೀದಿ ಬದಿ ವ್ಯಾಪರಿಗಳಿಗಂತೂ ದಿಕ್ಕು ತೋಚದಾಗಿದೆ.