Saturday, November 2, 2024

ಮತ್ತೆ 64 ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲು

ರಾಮನಗರ : ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಬೇಕು ಎಂದು ಹಮ್ಮಿಕೊಂಡಿರುವ ಪಾದಯಾತ್ರೆ 5ನೇ ದಿನಕ್ಕೆ ಕಾಲಿಟ್ಟಿದೆ. ಕೋವಿಡ್ ನಿಯಮಗಳನ್ನ ಸಂಪೂರ್ಣ ಗಾಳಿಗೆ ತೂರಿ ಪಾದಯಾತ್ರೆ ಮುಂದುವರಿಸಿರುವ ಕಾಂಗ್ರೆಸ್ ಮೇಲೆ ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ಮೂರನೇ ಬಾರಿಗೆ ಕೇಸ್ ಬಿದ್ದಿದೆ. ಇದ್ಯಾವುದಕ್ಕೂ ಜಗ್ಗೋದಿಲ್ಲ ಎಂಬ ಭಂಡ ಧೈರ್ಯದಿಂದ ಪಾದಯಾತ್ರೆ ಮುಂದುವರೆಸಿದ್ದು, ಮಾಜಿ ಸಿಎಂ ಹೆಚ್ಡಿಕೆ ಕ್ಷೇತ್ರಕ್ಕೆ ಪಾದಯಾತ್ರೆ ಸಾಗಿ ಬಂದಿದೆ.

ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ 11 ದಿನಗಳ ಪಾದಯಾತ್ರೆ ಹಮ್ಮಿಕೊಂಡಿದೆ. ಸಂಗಮದಿಂದ ಆರಂಭವಾಗಿದ್ದ ಪಾದಯಾತ್ರೆ ನಾಲ್ಕನೇ ದಿನವನ್ನು ಪೂರ್ಣಗೊಳಿಸಿದೆ. ಸಿಎಲ್ಪಿ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಮನಗರ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಜೆಡಿಎಸ್ ಭದ್ರಕೋಟೆ ರಾಮನಗರ ಕ್ಷೇತ್ರದವರೆಗೂ ಮುಂದುವರಿಯಿತು. ಪಾದಯಾತ್ರೆ ಜೊತೆಗೆ ಪಕ್ಷಕ್ಕೆ ಮತ್ತಷ್ಟು ಬಲ ತುಂಬುವ ದೃಷ್ಟಿಯಿಂದ ರಾಮನನಗರಲ್ಲಿ ಕೈ ಶಕ್ತಿ ಪ್ರದರ್ಶನ ಮಾಡಿತು. ಇದೇ ವೇಳೆ ಪಾದಯಾತ್ರೆ ಜೊತೆ ಜೊತೆಗೆ ಹಲವು ಕಲಾತಂಡಗಳು ಸಾಕ್ಷಿಯಾಗಿದ್ದವು. ದಾರಿಯುದ್ದಕ್ಕೂ ಹೂವಿನ ಮಳೆ ಸುರಿದು ಕಾಂಗ್ರೆಸ್ ನಾಯಕರನ್ನು ಅದ್ದೂರಿಯಾಗಿ ಸ್ವಾಗತಿಸಿದ್ರು. ಪಾದಯಾತ್ರೆ ವೇಳೆ ಕಾಂಗ್ರೆಸ್ ನಾಯಕರಿಗೆ ಭರ್ಜರಿ ಭೋಜನ ಏರ್ಪಡಿಸಲಾಗಿತ್ತು. ಇದೇ ವೇಳೆ ಮಾಜಿ ಸಿಎಂ ಸಿದ್ದು ರಾಗಿ ಮುದ್ದೆ ಕಾಳು ಸಾರು ತಿಂದು ಕೆಲಕಾಲ ವಿಶ್ರಾಂತಿ ಪಡೆದು ಪಾದಯಾತ್ರೆ ಮೊಟಕುಗೊಳಿಸಿ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದರು.

ಅಂದಹಾಗೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ನಾಯಕರು ತಮ್ಮ ಪಾದಯಾತ್ರೆ ಆರಂಭಿಸಿದ್ರು. ಈ ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ರು. ಈ ಪಾದಯಾತ್ರೆಯಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡಲಿಲ್ಲ. ಈ ಹಿನ್ನೆಲೆ ಪೊಲೀಸರು ಮೂರನೇ ದಿನವೂ ಸುಮಾರು 64 ಕೈ ನಾಯಕರ ವಿರುದ್ಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ವಿಪತ್ತು ನಿರ್ವಾಹಣೆ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ ಸುರೇಶ್ ಒಳಗೊಂಡಂತೆ ನಿಯಮ ಮೀರಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕೈ ನಾಯಕರ ವಿರುದ್ದ ಕೇಸು ದಾಖಲಿಸಲಾಯಿತು. ಮತ್ತೊಂದು ಕಡೆ ಪಾದಯಾತ್ರೆ ವಿಚಾರವಾಗಿ ಹೈಕೋರ್ಟ್‌ನಲ್ಲಿ ಪಿಐಎಲ್ ಕೂಡ ಸಲ್ಲಿಕೆಯಾಗಿತ್ತು. ಈ ವೇಳೆ ಸರ್ಕಾರಕ್ಕೆ ಹೈಕೋರ್ಟ್ ನಲ್ಲಿ ಛೀಮಾರಿ ಹಾಕಿತ್ತು. ಸರ್ಕಾರ ಕೇವಲ ಕೇಸ್ ದಾಖಲು ಮಾಡಿದ್ದು ಬಿಟ್ರೆ ಪಾದಯಾತ್ರೆಯನ್ನು ಯಾಕೆ ನಿಲ್ಲಿಸಲಿಲ್ಲ ಅಷ್ಟು ಶಕ್ತಿ ನಿಮ್ಮಲಿಲ್ಲವೇ,  ಎಂದು ಕೋರ್ಟ್ ಗೆ ಉತ್ತರ ನೀಡಬೇಕು ಎಂದು ಆದೇಶಿಸಿತು. ಇನ್ನೂ ಇದೇ ವೇಳೆ ಕೆಪಿಸಿಸಿಗೆ ಕೂಡ ನೋಟಿಸ್ ಜಾರಿ ಮಾಡಿದ್ದು, ಉತ್ತರ ನೀಡುವಂತೆ ಸೂಚಿಸಿತು.

ಇನ್ನೂ ಪಾದಯಾತ್ರೆ ಸಂಬಂಧ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಪಾದಯಾತ್ರೆ ತಡೆಯಲು ಸರ್ಕಾರ ಪ್ಲ್ಯಾನ್‌ ಮಾಡಿದೆ. ಅವ್ರು ಈಗಾಗಲೇ ನಮ್ಮ ಮೇಲೆ ಎಫ್‌ಐಆರ್ ದಾಖಲು ಮಾಡಿದ್ಧಾರೆ. ಸರ್ಕಾರ ಅವರದೇ ಇದೆ ಏನಾದರೂ ಕ್ರಮ ಕೈಗೊಳ್ಳಲಿ. ಏನೆಲ್ಲಾ ಮಾಡ್ತಾರೆ ನೋಡೋಣ ಎಂದ್ರು. ನಾವು ಕಾನೂನು ಮೂಲಕ ಲೀಗಲ್ ಆಗಿ ಎದುರಿಸುತ್ತೇವೆ ಎಂದರು.

ಅದು ಏನೇ ಇರಲಿ ನಾವು ಪಾದಯಾತ್ರೆ ಮಾಡೇ ತೀರ್ತಿವಿ ಎಂದು ಕಾಂಗ್ರೆಸ್ ಮುಂದೆ ಸಾಗ್ತಿದ್ರೆ, ಮತ್ತೊಂದು ಕಡೆ ಕೋರ್ಟ್ ನಲ್ಲಿ ಸರ್ಕಾರ ಯಾವ ಉತ್ತರ ನೀಡಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಹಾಗಾದ್ರೆ, ಪಾದಯಾತ್ರೆಗೆ ಪುಲ್ ಸ್ಟಾಪ್ ಬೀಳುತ್ತಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ.

RELATED ARTICLES

Related Articles

TRENDING ARTICLES