ಉತ್ತರ ಪ್ರದೇಶ ಚುನಾವಣೆಗೆ ದಿನಗಣನೆ ಶುರುವಾಗಿದೆ. ಆದ್ರೆ, ಬಿಜೆಪಿಗೆ ಶಾಕ್ ಮೇಲೆ ಶಾಕ್ ಕೊಡ್ತಿದೆ ಸಮಾಜವಾದಿ ಪಾರ್ಟಿ. ಕಳೆದ 2 ದಿನಗಳಲ್ಲಿ ಇಬ್ಬರು ಬಿಜೆಪಿ ಮಂತ್ರಿಗಳನ್ನು ಸೆಳೆಯುವಲ್ಲಿ ಅಖಿಲೇಶ್ ಯಾದವ್ ಯಶಸ್ವಿಯಾಗಿದ್ದಾರೆ. ಈ ಮಧ್ಯೆ, ಶಿವಸೇನೆ, ಎನ್‌ಸಿಪಿ ಕೂಡ ಯುಪಿ ಲೆಕ್ಕಾಚಾರದಲ್ಲಿ ತೊಡಗಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಪ್ರತಿಷ್ಠೆಯ ಅಖಾಡವಾಗಿದೆ ಮುಂಬರುವ ವಿಧಾನಸಭೆ ಚುನಾವಣೆ. ಶತಾಯಗತಾಯ ಮತ್ತೆ ಉತ್ತರ ಪ್ರದೇಶವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಸರತ್ತು ನಡೆದಿದೆ. ಇಂತಹ ಸಂದರ್ಭದಲ್ಲಿ ಅದ್ರಲ್ಲೂ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಯೋಗಿ ಆದಿತ್ಯನಾಥ್ ಸಂಪುಟದ ಪ್ರಮುಖ ಸಚಿವರೇ ಕೈ ಕೊಟ್ಟಿದ್ದಾರೆ.
ಮೌರ್ಯ ಅವರೊಂದಿಗೆ ಶಾಸಕರಾದ ರೋಶನ್ ಲಾಲ್ ವರ್ಮಾ, ಭಗವತಿ ಸಾಗರ್ ಮತ್ತು ಬ್ರಿಜೇಶ್ ಪ್ರಜಾಪತಿ ಅವರೂ ಬಿಜೆಪಿ ಬಿಟ್ಟು ಎಸ್‌ಪಿಗೆ ಸೇರ್ಪಡೆಗೊಂಡಿದ್ದರು. ಬಿಜೆಪಿಗೆ ಈಗ ಮತ್ತೆ ಆಘಾತ ಎದುರಾಗಿದೆ. ಯೋಗಿ ಸರ್ಕಾರದಲ್ಲಿ ಸಚಿವರಾಗಿದ್ದ, ರಜಪೂತ್ ಸಮುದಾಯದ ಪ್ರಬಲ ನಾಯಕ ದಾರಾ ಸಿಂಗ್ ಚೌಹಾಣ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೋದಿ ಹಾಗು ಯೋಗಿ ವಿರುದ್ಧ ತೊಡೆ ತಟ್ಟಿರುವ ಮಾಜಿ ಸಿಎಂ ಅಖಿಲೇಶ್ ಯಾದವ್ರ ತಂತ್ರಗಾರಿಕೆಯಿಂದ ಉತ್ತರ ಪ್ರದೇಶದಲ್ಲಿ ಹೈಡ್ರಾಮವೇ ಶುರುವಾಗಿದೆ. ಸಮಾಜವಾದಿ ಪಕ್ಷ ಸೇರಿದ್ದ ಸ್ವಾಮಿ ಪ್ರಸಾದ್ ಮೌರ್ಯಾಗೆ ಯೋಗಿ ಸರ್ಕಾರ ಬಿಗ್ ಶಾಕ್ ಕೊಟ್ಟಿದ್ದು, ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ. 2014ರ ಕೇಸ್‌ವೊಂದನ್ನು ರೀ ಓಪನ್ ಮಾಡಿಸಿದ್ದಾರೆ ಯೋಗಿ ಆದಿತ್ಯನಾಥ್.
ಇತ್ತ, ಎಸ್‌ಪಿ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವ ಬಿಜೆಪಿ, ಕಾಂಗ್ರೆಸ್ ನಾಯಕರು ಮತ್ತು ಎಸ್‌ಪಿ ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗ ಅವರೆಲ್ಲರೂ ಕಮಲ ಹಿಡಿದಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಎಸ್‌ಪಿ ಮತ್ತು ಎನ್‌ಸಿಪಿ ಮುಂದಾಗಿವೆ. ಈ ವಿಚಾರವನ್ನು ಸ್ವತಃ ಶರದ್ ಪವಾರ್ ಅವರೇ ಸ್ಪಷ್ಟಪಡಿಸಿದ್ದಾರೆ. 13ಕ್ಕೂ ಹೆಚ್ಚು ಶಾಸಕರು ಎಸ್‌ಪಿ ಸೇರಲಿದ್ದಾರೆ ಅಂತ ಭವಿಷ್ಯ ನುಡಿದಿರುವ ಪವಾರ್, ಬಿಜೆಪಿಯೇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮೋದಿ ಕಟ್ಟಿಹಾಕಲು ಪ್ರಯತ್ನ ಮಾಡ್ತಿದ್ದಾರೆ.
ಇನ್ನು, ಯುಪಿ ಚುನಾವಣೆಯಲ್ಲಿ ಬಿಜೆಪಿಗೆ ಠಕ್ಕರ್ ಕೊಡಲು ಶಿವಸೇನೆ ಪ್ಲ್ಯಾನ್ ಮಾಡಿದ್ದು, 50 ರಿಂದ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ಮಾಡಿದೆ. ಹಿಂದೂ ವೋಟ್ ಬ್ಯಾಂಕ್‌ಗೆ ಶಿವಸೇನೆ ಲಗ್ಗೆ ಹಾಕಿದ್ರೆ ಬಿಜೆಪಿಗೆ ಕಷ್ಟ ಕಷ್ಟ ಎಂದು ಬಣ್ಣಿಸಲಾಗುತ್ತಿದೆ. ಕಳೆದ ಬಾರಿ 312 ಕ್ಷೇತ್ರದಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಬಿಜೆಪಿಗೆ ಈ ಬಾರಿ ಪ್ರಾದೇಶಿಕ ಪಕ್ಷಗಳನ್ನು ಎದುರಿಸಬೇಕಿದ್ದು, ಚುನಾವಣಾ ಕಣ ರಂಗೇರಿದೆ.