ರಾಜ್ಯದಲ್ಲಿ ಕೊರೋನಾ ಸ್ಫೋಟವಾಗ್ತಿರೋದಕ್ಕೆ ಸರ್ಕಾರಕ್ಕೂ ಶಾಕ್ ಆಗಿದೆ. ಸಿಎಂ ನೇತೃತ್ವದಲ್ಲಿ ಕೊರೋನಾ ತಡೆಗೆ ಮಹತ್ವದ ಸಭೆಯನ್ನು ನಡೆಸಲಾಗಿದೆ. ಈ ಸಭೆಯಲ್ಲಿ ಈಗಿರುವ ಮಾರ್ಗಸೂಚಿಗಳ ಜೊತೆಗೆ ಮತ್ತಷ್ಟು ಕಠಿಣ ರೂಲ್ಸ್ ಜಾರಿ ಮಾಡಲು ಮುಂದಾಗಿದೆ. ಅಷ್ಟೆ ಅಲ್ಲ ವೀಕೆಂಡ್ ಕರ್ಫ್ಯೂ ಈ ತಿಂಗಳ ಕೊನೆಯವರೆಗೆ ಮುಂದುವರೆಸಲಾಗಿದೆ.
ರಾಜ್ಯದ ಕೋವಿಡ್ ಸ್ಥಿತಿ ಗತಿ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ರು. ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಗೃಹ ಸಚಿವ ಆರಗ, ಶಿಕ್ಷಣ ಸಚಿವ ನಾಗೇಶ್ ಸೇರಿದಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಪ್ರಮುಖವಾದ ವಿಚಾರಗಳು ಚರ್ಚೆಯ ಜೊತೆ ಒಂದಿಷ್ಟು ರೂಲ್ಸ್ ಗಳನ್ನು ತರಲಾಗಿದೆ.
ಸಭೆಯಲ್ಲಿ ಪ್ರಮುಖವಾಗಿ ಶಾಲಾ ಮಕ್ಕಳಲ್ಲಿ ಕೊರೋನಾ ಹೆಚ್ಚಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಕರಣಗಳನ್ನು ಆಧರಿಸಿ ಬಿಇಓ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ವರದಿ ಆಧರಿಸಿ, ಶಾಲೆಗಳನ್ನು ಮುಚ್ಚುವ ಕುರಿತು ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ತೀರ್ಮಾನ ಮಾಡಲಾಗಿದೆ. ಇದರ ಜೊತೆಗೆ ಮಾರುಕಟ್ಟೆಗಳನ್ನು ವಿಭಜನೆ ಮಾಡಲು ತೀರ್ಮಾನ ಮಾಡಲಾಗಿದೆ.
ಮುಂಬರುವ ಸಂಕ್ರಾಂತಿ, ವೈಕುಂಠ ಏಕಾದಶಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲು ಕಂದಾಯ ಮತ್ತು ಮುಜರಾಯಿ ಇಲಾಖೆಗೆ ಸೂಚಿಸಲಾಗಿದೆ. ಇದರ ಜೊತೆಗೆ ಈಗಿರುವ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಗಳನ್ನು ಈ ತಿಂಗಳ ಕೊನೆಯವರೆಗೆ ಮುಂದುವರೆಸಲು ಸೂಚನೆ ನೀಡಲಾಗಿದೆ. ಅಷ್ಟೆ ಅಲ್ಲ 14 ರಂದು ನರೇಂದ್ರ ಮೋದಿ ಎಲ್ಲಾ ಸಿಎಂಗಳ ಜೊತೆ ಮೀಟಿಂಗ್ ನಡೆಸಲಿದ್ದು, ಅಂದು ಲಾಕ್ ಡೌನ್ ಕುರಿತ ತೀರ್ಮಾನ ಆಗಲಿದೆ.
ಇನ್ನು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕೊವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ವಾರ್ಡ್, ಐಸಿಯುಗಳನ್ನು ಮೀಸಲಿರಿಸಲು ಸೂಚಿಸಲಾಗಿದೆ. ಇದೆಲ್ಲದರ ನಡುವೆ ಕಾಂಗ್ರೆಸ್ ಪಾದಯಾತ್ರೆ ಕುರಿತು ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಸರ್ಕಾರ ಬಂದಿಲ್ಲ. ಅವರ ಪಾದಯಾತ್ರೆ ಮುಂದುವರೆದಿದ್ದರೂ ಇನ್ನೂ ಸರ್ಕಾರ ಈ ಬಗ್ಗೆ ಚರ್ಚೆ ಮಾಡೋದ್ರಲ್ಲೇ ಇದೆ.