ಮಂಡ್ಯ : ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಕಾವೇರಿ ಜಲ ವಿವಾದಕ್ಕೆ ಅಂತಿಮ ಪರಿಹಾರ ಸಿಗಲಿದೆ ಎನ್ನುವುದು ಸತ್ಯವಾದರೂ ಯೋಜನೆ ಜಾರಿಯಿಂದ ಮಂಡ್ಯ ಜಿಲ್ಲೆ ವ್ಯಾಪ್ತಿಗೊಳಪಡುವ ಅಪರೂಪದ ಪ್ರದೇಶಗಳೇ ಕಣ್ಮರೆಯಾಗಲಿದೆ ಎನ್ನುವುದು ಸದ್ಯ ಜನಮಾನಸದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇವಲ ಆನೆಗಳ ಕಾರಿಡಾರ್‌ಗಳಲ್ಲ, ಆನೆಗಳ ವಾಸಸ್ಥಾನವೇ ನಿರ್ನಾಮವಾಗಲಿದೆ. ನಿಸರ್ಗ ರಮಣೀಯತೆಯನ್ನು ಹೊಂದಿರುವ ಪ್ರವಾಸಿ ತಾಣಗಳು ಕಣ್ಮರೆಯಾಗಲಿವೆ. ಸಾವಿರಾರು ಪ್ರಬೇಧಗಳನ್ನು ಒಳಗೊಂಡಿರುವ ಜೀವವೈವಿಧ್ಯ ಸರ್ವನಾಶವಾಗಲಿದೆ ಎಂಬ ಆತಂಕ ಪರಿಸರವಾದಿಗಳನ್ನು ಬಹುವಾಗಿ ಕಾಡಲಾರಂಭಿಸಿದೆ.
ವನ್ಯಜೀವಿ ಅಭಯಾರಣ್ಯವೇ ಮುಳುಗಡೆ :
ಕಾವೇರಿ ವನ್ಯಜೀವಿ ಅಭಯಾರಣ್ಯ ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಆದರೆ, ಮಂಡ್ಯಕ್ಕೆ ಹೊಂದಿಕೊಂಡಿರುವ ವನ್ಯಜೀವಿ ಅಭಯಾರಣ್ಯವೇ ಯೋಜನೆಗೆ ಮುಳುಗಡೆಯಾಗುತ್ತಿರುವುದು ಕಳವಳ ಸೃಷ್ಟಿಸಿದೆ. ವಾರಾಂತ್ಯ ಬಂತೆಂದರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಮುತ್ತತ್ತಿ, ಕಾವೇರಿ ಫಿಶಿಂಗ್ ಕ್ಯಾಂಪ್, ಭೀಮೇಶ್ವರಿ, ದೊಡ್ಡ ಮಾಕಳಿಯಂತಹ ನಿಸರ್ಗ ಸೌಂದರ್ಯದ ರಮ್ಯ ತಾಣಗಳು ಮರೆಯಾಗಲಿವೆ. ನೈಸರ್ಗಿಕವಾಗಿ ಸೃಷ್ಟಿಯಾಗಿರುವ ಈ ಭವ್ಯತೆಯ ಮರುಸೃಷ್ಟಿ ಸಾಧ್ಯವೇ ಎನ್ನುವುದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.
ಆನೆಗಳ ವಾಸಸ್ಥಾನ ಕಣ್ಮರೆ:
ಮೇಕೆದಾಟು ಯೋಜನೆಗೆ ಕೇವಲ ಆನೆಗಳ ಕಾರಿಡಾರ್ ಮಾತ್ರ ನಾಮಾವಶೇಷಗೊಳ್ಳುವುದಿಲ್ಲ. ಬದಲಾಗಿ ಆನೆಗಳ ವಾಸಸ್ಥಾನವೇ ನಿರ್ನಾಮಗೊಳ್ಳಲಿದೆ. ಕರ್ನಾಟಕದಲ್ಲಿ ಆನೆಗಳು ಕಂಡುಬರುವ ಮೂರು ವಲಯಗಳಲ್ಲಿ ಮಂಡ್ಯ ಜಿಲ್ಲೆಯೂ ಸೇರಿದೆ. ಹಾಸನ-ಕೊಡಗು, ಮೈಸೂರು-ಮಂಡ್ಯ, ಬೆಂಗಳೂರು ಪ್ರದೇಶದಲ್ಲಿ ಶೇ.90ರಷ್ಟು ಆನೆಗಳು ವಾಸ ಮಾಡುತ್ತಿವೆ ಎನ್ನುವುದು ಆನೆಗಳ ಲೈನ್ ಸ್ಕೇಲ್ಡ್ ಮ್ಯಾಪಿಂಗ್‌ನಲ್ಲಿ ಗುರುತಿಸಲಾಗಿದೆ.
ಹಲಗೂರು ಹೋಬಳಿಯ ಮುತ್ತತ್ತಿ, ಬಸವನ ಬೆಟ್ಟ ಇನ್ನಿತರ ಆಸುಪಾಸಿನ ತಾಣಗಳು ಆನೆಗಳ ನೆಚ್ಚಿನ ತಾಣಗಳಾಗಿವೆ. ಬೇಸಿಗೆ ಸಮಯದಲ್ಲಿ ಆಹಾರವನ್ನು ಅರಸಿಕೊಂಡು ಈ ಭಾಗದಿಂದಲೇ ಅತಿ ಹೆಚ್ಚು ಆನೆಗಳು ನಾಡಿಗೆ ಲಗ್ಗೆ ಇಡುತ್ತಿವೆ. ಯೋಜನೆ
ಜಾರಿಯಾದಲ್ಲಿ ಈ ಆನೆಗಳಿಗೆ ನೆಲೆಯೇ ಇಲ್ಲದಂತಾಗುತ್ತದೆ. ಅಲ್ಲದೆ, ಸಂಗಮ ಅರಣ್ಯ ಪ್ರದೇಶದಲ್ಲಿನ ಆನೆ ಕಾರಿಡಾರ್ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಂಪರ್ಕ ಕಲ್ಪಿಸುತ್ತದೆ. ಈ ಅರಣ್ಯ ಪ್ರದೇಶದಲ್ಲಿ ಆನೆಗಳು ಹೆಚ್ಚಾಗಿದ್ದು, ಆನೆ ಕಾರಿಡಾರ್‌ಗೂ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ.
ಇದೇ ಕಾರಣಕ್ಕೆ ಪರಿಸರ ಮತ್ತು ಪ್ರಾಣಿ ಪ್ರಿಯರು ಯೋಜನೆ ವಿರುದ್ಧ ಕೆಂಗಣ್ಣು ಬೀರಲು ಕಾರಣವಾಗಿದೆ. ಜೀವ ವೈವಿಧ್ಯ, ವನ್ಯಜೀವಿಗಳಿಗೆ ಮಾರಕವಾಗಿರುವ ಮೇಕೆದಾಟು ಯೋಜನೆ ಕೈಬಿಟ್ಟು ಪರ್ಯಾಯ ಆಲೋಚನೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಸರ್ವೇ ಕಾರ್ಯ ನಡೆದಿಲ್ಲ:
ಮೇಕೆದಾಟು ಅಣೆಕಟ್ಟೆಯ ಯೋಜನೆಗೆ ರಾಜ್ಯಸರ್ಕಾರ ಸಮಗ್ರ ಯೋಜನಾ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದೆ. ಅದೀಗ ಹಸಿರು ನ್ಯಾಯಾಲಯದ ಮುಂದಿದೆ. ಜೀವವೈವಿಧ್ಯ ಹಾಗೂ ವನ್ಯಜೀವಿಗಳನ್ನು ಒಳಗೊಂಡಿರುವ ಪ್ರದೇಶ ಯೋಜನೆಗೆ ಒಳಪಡುತ್ತಿರುವುದರಿಂದ ಸುಲಭಕ್ಕೆ ಅನುಮತಿ ಸಿಗುತ್ತಿಲ್ಲ. ಜೊತೆಗೆ ಯೋಜನೆ ಜಾರಿಗೆ ಹಲವು ಹಂತಗಳಲ್ಲಿ ಕಾನೂನಾತ್ಮಕವಾದ ಎಡರು-ತೊಡರುಗಳಿದ್ದರೂ ಯೋಜನೆಯ ನೀಲಿ ನಕಾಶೆಯೊಳಗೆ 3181.9 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯ, 1869.5 ಹೆಕ್ಟೇರ್ ಅರಣ್ಯ ಭೂಮಿ ಒಳಪಡಿಸಿರುವುದು ಆತಂಕವನ್ನು ಹೆಚ್ಚಿಸಿದೆ. ಈ ಯೋಜನೆಗೆ ಪೂರ್ಣ ಪ್ರಮಾಣದಲ್ಲಿ ಅನುಮತಿ ದೊರೆಯದಿರುವುದರಿಂದ ಇದರ ಸರ್ವೇ ಕಾರ್ಯ ಇನ್ನೂ ಆರಂಭಗೊಂಡಿಲ್ಲ.
ಪಾಂಡವಪುರದಲ್ಲಿ ವಿರೋಧ:
ಯೋಜನೆ ಜಾರಿಯಾದರೆ ಇದಕ್ಕೆ ಪರ್ಯಾಯವಾಗಿ ಎರಡು ಪಟ್ಟು ಹೆಚ್ಚು ಭೂಮಿಯನ್ನು ರಾಜ್ಯಸರ್ಕಾರ ಅರಣ್ಯ ಇಲಾಖೆಗೆ ನೀಡಬೇಕಾಗುತ್ತದೆ. ಮುಳುಗಡೆಯಾಗಲಿರುವ ಪ್ರದೇಶದಲ್ಲಿರುವ ಬೆಲೆಬಾಳುವ ಮರಗಳಿಗೆ ಪರಿಹಾರವನ್ನು ರಾಜ್ಯಸರ್ಕಾರ ಭರಿಸಬೇಕಿದೆ. ಈಗಾಗಲೇ ಯೋಜನೆಗೆ ಸ್ವಾಧೀನವಾಗುವ ಅರಣ್ಯ ಭೂಮಿಗೆ ಪರ್ಯಾಯವಾಗಿ ವನ್ಯಸಂಪತ್ತನ್ನು ಬೆಳೆಸಲು ಪಾಂಡವಪುರ ತಾಲೂಕಿನಲ್ಲಿ ಭೂಮಿಯನ್ನು ಕೇಳಿದ್ದರೂ ಆರಂಭದಲ್ಲೇ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಅರಣ್ಯವನ್ನು ಬೆಳೆಸುವುದಕ್ಕೆ ಅಗತ್ಯವಿರುವಷ್ಟು ಭೂಮಿ ನಮ್ಮಲ್ಲಿ ಇಲ್ಲ. ನೀರಾವರಿಯಿಂದ ಆವೃತವಾಗಿರುವ ಕೃಷಿ ಜಮೀನನ್ನು ಅರಣ್ಯಾಭಿವೃದ್ಧಿಗೆ ಬಿಟ್ಟುಕೊಟ್ಟರೆ ನಾವೆಲ್ಲಿ ಹೋಗುವುದು. ನಾವು ಭೂಮಿಯನ್ನು ಕೊಡುವುದಿಲ್ಲ. ಸರ್ಕಾರಿ ಭೂಮಿ ಇದ್ದರೆ ಬಳಸಿಕೊಳ್ಳಲಿ ಎನ್ನುತ್ತಿದ್ದಾರೆ ಅಲ್ಲಿನ ಸ್ಥಳೀಯ ಜನರು.
ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರದು:
ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ಇದೀಗ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ಹುಲಿಗಳ ಸಂರಕ್ಷತೆಗೆ ಅತ್ಯಂತ ಸೂಕ್ತ ಜಾಗವೆಂದು ಗುರುತಿಸಲಾಗಿದೆ. ಹುಲಿಗಳು ಈ ಪ್ರದೇಶದಲ್ಲಿ ವಾಸ ಮಾಡುವ ದಿನಗಳು ಸಮೀಪದಲ್ಲಿರುವಾಗಲೇ ಮೇಕೆದಾಟು ಯೋಜನೆ ಹುಲಿಗಳು ಬರದಂತೆ ತಡೆಯುತ್ತಿದೆ. ಒಮ್ಮೆ ಮೇಕೆದಾಟುಗೆ ಗ್ರೀನ್‌ಸಿಗ್ನಲ್ ದೊರಕಿದರೆ ಹುಲಿ ಸಂರಕ್ಷಣೆಗೆ ಬೇರೆ ಜಾಗವನ್ನು ಗುರುತಿಸಬೇಕಾಗುತ್ತದೆ. ಇದೂ ಕೂಡ ಪ್ರಧಾನ ಅಂಶವಾಗಿದೆ.
ಹೀಗೆ ಮೇಕೆದಾಟು ಅಣೆಕಟ್ಟು ಯೋಜನೆಯಿಂದ ಬೆಂಗಳೂರಿನ ಜನರಿಗೆ ಕುಡಿಯುವ ನೀರು ದೊರಕಿ, 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಗೆ ಅನುಕೂಲವಾಗುತ್ತದೆ. ಆದರೆ, ಜೊತೆಗೆ ಸಂಕಷ್ಟ ಕಾಲದಲ್ಲಿ ನೀರನ್ನು ತಮಿಳುನಾಡಿಗೆ ಬಿಡುವುದಕ್ಕೆ ನೆರವಾಗುವುದು ಸತ್ಯವೆನಿಸಿದರೂ ಅದರಿಂದ ಮುಳುಗಡೆಯಾಗುವ ಅರಣ್ಯದ ಮರುಸೃಷ್ಟಿ, ನಾಶವಾಗುವ ಜೀವವೈವಿಧ್ಯಕ್ಕೆ ಪುನರ್ಜನ್ಮ, ನೆಲೆ ಕಳೆದುಕೊಳ್ಳುವ ಪ್ರಾಣಿಗಳಿಗೆ ಪರ್ಯಾಯ ನೆಲೆ ದೊರಕಿಸಲು ಸಾಧ್ಯವೇ? ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.
ಇನ್ನು, ಮೇಕೆದಾಟು ಯೋಜನೆಗೆ ಮಂಡ್ಯ ಜಿಲ್ಲೆಗೆ ಸೇರಿದ ಹೆಚ್ಚು ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶ ಮತ್ತು ಪ್ರವಾಸಿ ತಾಣಗಳು ಕಣ್ಮರೆಯಾಗಲಿದೆ. ಆನೆ ಕಾರಿಡಾರ್ ಜೊತೆಗೆ ಆನೆಗಳ ವಾಸಸ್ಥಾನವೇ ನಾಮಾವಶೇಷವಾಗಲಿದೆ. ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೇರೆಡೆ ಜಾಗ ಗುರುತಿಸಬೇಕಾಗುತ್ತದೆ. ಯೋಜನೆಗೆ ಗ್ರೀನ್ ಸಿಗ್ನಲ್ ಇನ್ನೂ ಸಿಗದಿರುವುದರಿಂದ ನಾವಿನ್ನೂ ಸರ್ವೇ ಕಾರ್ಯ ಕೈಗೆತ್ತಿಕೊಂಡಿಲ್ಲ ಅಂತಾರೆ ಹೆಸರೇಳಲಿಚ್ಚಿಸದ ಕಾವೇರಿ ವನ್ಯಜೀವಿ ಅಧಿಕಾರಿಯೊಬ್ಬರು.
ಮೇಕೆದಾಟು ಯೋಜನೆ ದೂರದೃಷ್ಟಿ ಯೋಜನೆಯಾಗಿದ್ದರೂ ಪ್ರಾಣಿ ಸಂಕುಲಕ್ಕೆ ಮಾರಕವಾಗಿದೆ. ಅರಣ್ಯ ಸಂಪತ್ತನ್ನು ನಾಶ ಮಾಡಿ ಪ್ರಾಣಿಗಳ ಜೀವನೆಲೆಯನ್ನೇ ಕಿತ್ತುಕೊಂಡಂತಾಗುತ್ತದೆ. ಮನುಷ್ಯನಿಗೆ ಪರ್ಯಾಯ ನೆಲೆ ಕಲ್ಪಿಸಿದಂತೆ ಪ್ರಾಣಿಗಳಿಗೆ ಅರಣ್ಯ ಬಿಟ್ಟು ಬೇರೆಡೆ ನೆಲೆ ಒದಗಿಸಲು ಸಾಧ್ಯವೇ? ಮೇಕೆದಾಟು ಯೋಜನೆಗೆ ಪರ್ಯಾಯವಾದ ಯೋಜನೆ ರೂಪಿಸುವುದು ಒಳ್ಳೆಯದು ಅಂತಾರೆ ಪರಿಸರ ಪ್ರೇಮಿ ಕೆ.ಆರ್.ರವೀಂದ್ರ
ಶಶಿಕುಮಾರ್ ಮಂಡ್ಯ, ಪವರ್ ಟಿವಿ