ಮಂಡ್ಯ: ಮೇಕೆದಾಟು ಪಾದಯಾತ್ರೆಗೆ ಅಭೂತಪೂರ್ವ ಯಶಸ್ಸು ಲಭ್ಯವಾಗಿದ್ದು, ನಾಲ್ಕನೇ ದಿನವೂ ಯಶಸ್ವಿಯಾಗಿ ನಡೆಯುತ್ತಿದೆ. ಈಗ ಈ ಪಾದಯಾತ್ರೆಗೆ ಮಂಡ್ಯ ಜಿಲ್ಲೆಯಿಂದ ಹತ್ತು ಸಾವಿರ ಮಂದಿ ಪಾಲ್ಗೊಳ್ಳಲಿದ್ದು, ಜೆಡಿಎಸ್ ಭದ್ರಕೋಟೆ ರಾಮನಗರಕ್ಕೆ ಗುರುವಾರ ಲಗ್ಗೆ ಇಡಲಿದ್ದಾರೆ.
ಇದು ಮಂಡ್ಯ ಜಿಲ್ಲೆಯ ಜನತೆಗೆ ಪರೋಕ್ಷವಾಗಿ ಉಪಕಾರವಾಗುವ ಯೋಜನೆಯಾಗಿದೆ. ಮೇಕೆದಾಟು ಯೋಜನೆ ಒಮ್ಮೆ ಜಾರಿಯಾಯಿತೆಂದರೆ ಸಾಕು. ಇದರಿಂದ ಮಂಡ್ಯ ಜಿಲ್ಲೆಗೆ ಸಾಕಷ್ಟು ಪ್ರಯೋಜನವಾಗಲಿದೆ. 49.50 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಇರುವ ಕೆಆರ್‌ಎಸ್ ಜಲಾಶಯದಿಂದ ವ್ಯವಸಾಯಕ್ಕೆ, ಬೆಂಗಳೂರಿನ ಕುಡಿಯುವ ನೀರಿಗೆ ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ ತಮಿಳುನಾಡಿಗೆ ಕಾಲ ಕಾಲಕ್ಕೆ ನೀರು ಬಿಡುವ ಅನಿವಾರ್ಯತೆ ಇದೆ. ಇಷ್ಟೂ ಪ್ರಕ್ರಿಯೆಗೆ ಕೆಆರ್‌ಎಸ್ ಜಲಾಶಯದ ನೀರನ್ನೇ ಆಶ್ರಯಿಸಬೇಕಿದೆ.
66 ಟಿಎಂಸಿ ನೀರು ಸಂಗ್ರಹ : ಮೇಕೆದಾಟು ಯೋಜನೆಯ ಸುಮಾರು 66 ಟಿಎಂಸಿ ನೀರು ಸಂಗ್ರಹವಾಗಲಿದೆ. ಅಂದರೆ, ಮಳೆಗಾಲದಲ್ಲಿ ಹೆಚ್ಚುವರಿಯಾಗಿ, ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅದನ್ನು 440 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೂ ಬಳಸಿಕೊಳ್ಳಬಹುದಾಗಿದೆ.
ಮಳೆಯಾಗದಿದ್ದರೆ ಸಂಕಷ್ಟ : ದೇವರ ಕೃಪೆಯಿಂದ ಪ್ರತಿ ವರ್ಷ ಉತ್ತಮ ಮಳೆಯಾದರೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಪೂರೈಸಲು ಯಾವುದೇ ಅಡ್ಡಿಯಾಗಲೀ, ಸಮಸ್ಯೆಯಾಗಲೀ ಆಗದು. ಆದರೆ, ಒಂದು ವೇಳೆ ಮಳೆ ಕಡಿಮೆಯಾದರೆ ಅಂತಾರಾಜ್ಯ, ರಾಜ್ಯ ಹಾಗೂ ಮಂಡ್ಯ ಜಿಲ್ಲೆಗೂ ತೀವ್ರವಾಗಿ ಸಮಸ್ಯೆಯಾಗಲಿದೆ. ಇದರಿಂದ ಪ್ರತಿಭಟನೆಗಳು, ಬಂದ್‌ಗಳು, ಹೋರಾಟಗಳು ನಡೆದಲ್ಲಿ ಪುನಃ ಮಂಡ್ಯ ಜಿಲ್ಲೆ ಸೇರಿದಂತೆ ಹಲವೆಡೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಕ್ಕೂ ಕಾರಣವಾಗುತ್ತದೆ. ಹೀಗಾಗಿ ಮೇಕೆದಾಟು ಯೋಜನೆ ಜಾರಿಯಾದರೆ ಪರೋಕ್ಷವಾಗಿ ಮಂಡ್ಯ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ. ಅಲ್ಲದೆ, ಜಿಲ್ಲೆಯ ಜನತೆಗೆ ಒತ್ತಡ ತಗ್ಗಲಿದೆ. ಈ ಅಂಶವನ್ನು ಸರ್ಕಾರ ಮನದಟ್ಟು ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಹೋರಾಟ ನಡೆಯುತ್ತದೆ. ಯೋಜನೆ ಅನುಷ್ಠಾನವರೆಗೆ ಒಂದಲ್ಲಾ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ.
ನೇಗಿಲು, ಕಬ್ಬಿನ ಜೊಲ್ಲೆಯೊಂದಿಗೆ ಹೋರಾಟ : ಮಂಡ್ಯ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಜನರು ಸಾಂಪ್ರದಾಯಿಕ ಉಡುಗೆಯಾದ ಪಂಚೆ, ಶರ್ಟ್ ಧರಿಸಿ, ಕಬ್ಬಿನ ಜೊಲ್ಲೆ ಹಿಡಿದು ನೇಗಿಲಿನೊಂದಿಗೆ ರಾಮನಗರಕ್ಕೆ ಆಗಮಿಸಲಿದ್ದು, ಪಾದಯಾತ್ರೆಗೆ ಬೆಂಬಲ ಸೂಚಿಸಲಿದ್ದಾರೆ. ಈ ಮೂಲಕ ಜಿಲ್ಲೆಯ ಜನರ ನೋವನ್ನು ಸರ್ಕಾರಕ್ಕೆ ತೋರಿಸಲಿದ್ದಾರೆ.
ಪಾದಯಾತ್ರೆ ನೇತೃತ್ವ : ಮಾಜಿ ಸಚಿವರು ಹಾಗೂ ಕೆಪಿಸಿಸಿ ವಕ್ತಾರರಾದ ಚಲುವರಾಯಸ್ವಾಮಿ, ಮಾಜಿ ಸಚಿವ ನರೇಂದ್ರ ಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಕೆ.ಬಿ. ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ರವಿ ಗಣಿಗ, ಗುರು ಚರಣ್, ಮಧು ಮಾದೇಗೌಡ, ಡಾ. ರವೀಂದ್ರ ಹಾಗೂ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರ ನೇತೃತ್ವದಲ್ಲಿ ಬಸ್, ಲಾರಿಗಳಲ್ಲಿ ರಾಮನಗರಕ್ಕೆ ಆಗಮಿಸಿ, ಬಳಿಕ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಮುಂಜಾನೆ 6 ಗಂಟೆಗೆ ಮಂಡ್ಯದಿಂದ ಹೊರಡುವ ರೈತರ ತಂಡವು ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸೇರಲಿದೆ. ಅಲ್ಲಿ ಉಪಾಹಾರ ಸೇವಿಸಿ ಬೆಳಗ್ಗೆ 9 ಗಂಟೆಗೆ ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆಗೆ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ.
ಶಶಿಕುಮಾರ್ ಡಿ. ಮಂಡ್ಯ ಪವರ್ ಟಿವಿ