ಚಾಮರಾಜನಗರ : ಮೂರನೇ ಅಲೆ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಕಾರ್ಮಿಕ ಇಲಾಖೆಯು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಇನ್ನಿತರರಿಗೆ ಇಮ್ಯುನಿಟಿ ಕಿಟ್ ಹಾಗೂ ಸೇಫ್ಟಿ ಕಿಟ್ ವಿತರಿಸುತ್ತಿದೆ.
ಲಾಕ್ಡೌನ್ ಹಾಗೂ ಕರ್ಫ್ಯೂ ವೇಳೆಯಲ್ಲೂ ನಿತ್ಯ ಕಾಯಕ ಮಾಡುವ ಕಾರ್ಮಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ನೀಡಿರುವ 10 ಸಾವಿರ ಕಿಟ್ ಗಳನ್ನು ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲವನ್ನು ಕೇಂದ್ರ ಮಾಡಿಕೊಂಡು ವಿತರಿಸಲಾಗುತ್ತಿದ್ದು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಈವರೆಗೂ ಮೂರುವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಈ ಕಿಟ್ ಗಳನ್ನು ಕೊಡಲಾಗಿದೆ.
ಪ್ರತಿ ಕಾರ್ಮಿಕನಿಗೆ ಸೇಫ್ಟಿಕಿಟ್ ಹಾಗೂ ಇಮ್ಯುನಿಟಿ ಕಿಟ್ ಗಳನ್ನು ಪ್ರತ್ಯೇಕವಾಗಿ ಕೊಡಲಾಗುತ್ತಿದ್ದು ಸೇಫ್ಟಿಕಿಟ್ ನಲ್ಲಿ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಶ್, ಸೋಪುಗಳು, ಸ್ಯಾನಿಟರಿ ಪ್ಯಾಡ್ ಇದೆ. ಇಮ್ಯುನಿಟಿಕಿಟ್ ನಲ್ಲಿ ಆಯುಷ್ ಕ್ವಾತ್ ಚೂರ್ಣ, ಚ್ಯವನಪ್ರಾಶ್, ಹರಿದ್ರ ಖಂಡ ರಸಾಯನ, ಬ್ರಾಹ್ಮಿ ಪುಡಿ ಕೊಡಲಾಗುತ್ತಿದ್ದು ಕಾರ್ಮಿಕರ ಆರೋಗ್ಯ ವೃದ್ಧಿಗೆ ಸಹಾಯಕವಾಗಲಿದೆ.