Thursday, December 19, 2024

ಜಿಲ್ಲಾಡಳಿತ, ಆರೋಗ್ಯ ಇಲಾಖೆಯನ್ನ ನಿದ್ದೆಗೆಡಿಸಿದ ಕೊರೋನಾ

ಮಹಾಮಾರಿ ಕೊರೋನಾದಿಂದಾಗಿ ಕಳೆದೆರಡು ವರ್ಷದಿಂದ ಮಕ್ಕಳು ಕೂಡ ದೊಡ್ಡವರಷ್ಟೇ ಆತಂಕದಲ್ಲಿದ್ದಾರೆ. ವಯಸ್ಕರು ನಿರುದ್ಯೋಗದಿಂದ ಬೀದಿಗೆ ಬಿದ್ರೆ, ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಒಮ್ಮೆ ಶಾಲೆ ಆರಂಭ, ಒಮ್ಮೆ ಶಾಲೆಗೆ ಬೀಗ.. ಹೀಗೆ ಗೊಂದಲದಲ್ಲೇ 2 ವರ್ಷ ಕಳೆದರು. ಆದ್ರೆ ಕೊರೋನಾ ಹೋಯ್ತು ಮತ್ತೆ ಶಾಲೆ ಆರಂಭವಾಯ್ತು ಅನ್ನುವಷ್ಟ್ರಲ್ಲೇ ಮತ್ತೆ ಶಾಲೆಗೆ ಬೀಗ ಬೀಳುವ ಸಾಧ್ಯತೆಗಳು ದಟ್ಟವಾಗಿವೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕ್ರಮೇಣ ಕೊರೋನಾ ಸ್ಫೋಟಗೊಳ್ಳುತ್ತಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು ಇದರ ಪರಿಣಾಮ ಗಡಿನಾಡಿನಲ್ಲಿ ಆತಂಕ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಮಕ್ಕಳಿಗೆ ಕೊರೋನಾ ಮಹಾಮಾರಿ ವಕ್ಕರಿಸುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೋನಾ ಸ್ಫೋಟಗೊಂಡಿದ್ದು ಮೂರು ದಿನಗಳ ಹಿಂದೆ 12 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿತ್ತು.ಮತ್ತೆ ನಿನ್ನೆ ಕೂಡ 68 ಮಕ್ಕಳು ಸೇರಿ 10 ಜನ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿದ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ್​ ಇಂದಿನಿಂದ ಬೆಳಗಾವಿ ಜಿಲ್ಲೆಯಲ್ಲಿ ವಸತಿ ಶಾಲೆಗಳು ಸೇರಿದಂತೆ1 ರಿಂದ 9 ನೇ ತರಗತಿಯ ವರೆಗಿನ ಶಾಲೆಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಬೆಳಗಾವಿ. ಮಹಾರಾಷ್ಟ್ರ, ಗೋವಾ ಗಡಿಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

ಇತ್ತ ಆಂಧ್ರ, ತಮಿಳುನಾಡು ಗಡಿ ಜಿಲ್ಲೆ ಕೋಲಾರದಲ್ಲಿ ಕೊರೊನಾ ಮೂರನೇ ಅಲೆ ಜೋರಾಗಿಯೇ ರಣಕೇಕೆ ಹಾಕುತ್ತಿದೆ. ಒಂದು ಮತ್ತು ಎರಡನೇ ಕೊರೋನಾ ಅಲೆಯಲ್ಲಿ ಪಾಠ ಕಲಿತಿರುವ ಜಿಲ್ಲಾಡಳಿತ, ಮೂರನೇ ಅಲೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಂಡಿದೆ. ಅದರಲ್ಲಿಯೂ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನಲೆಯಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಕೋಲಾರ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾದ ವೆಂಟಿಲೇಟರ್ ಹಾಗೂ ಆಕ್ಸಿಜನ್ ಬೆಡ್ ಇರುವ ವಾರ್ಡ್ಗಳನ್ನ ವ್ಯವಸ್ಥೆ ಮಾಡಲಾಗಿದೆ.

ಒಟ್ಟಿನಲ್ಲಿ ಮಹಾಮಾರಿ ಕೋವಿಡ್ ಜೊತೆಗೆ ಓಮೈಕ್ರಾನ್​ ಹಾವಳಿ ತಡೆಯಲು ಬೆಳಗಾವಿ ಜಿಲ್ಲಾಡಳಿತ ಹಾಗೂ ಕೋಲಾರ ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ, ಕಳೆದರೆಡು ವರ್ಷಗಳ ಕೊರೋನಾ ಕಾಟದಿಂದ ತತ್ತರಿಸಿದ ಜನತೆಗೆ ಮೂರನೇ ಅಲೆ ಇನ್ನಷ್ಟು ಕಾಟ ನೀಡದಿರಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ ಅನ್ನೋದು ನಮ್ಮ ಆಶಯ.

RELATED ARTICLES

Related Articles

TRENDING ARTICLES