Saturday, November 23, 2024

ಕ್ಷಣಾರ್ಧದಲ್ಲಿ ನಾಲ್ವರ ಜೀವ ತೆಗೆದ ಮೀನು

ಮೀನು ಅಂದ್ರೆ ಜಗತ್ತಿನ ಎಲ್ಲಾ ಜನರು ಇಷ್ಟ ಪಡುವ ಜಲಚರ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರವರೆಗೆ ಭಿನ್ನ-ವಿಭಿನ್ನವಾದ ಮೀನುಗಳು ಅಂದ್ರೆ ಅದೇನೋ ಒಂಥರ ಕುತೂಹಲ. ಹಾಗಾಗಿ ಹಲವು ದೇಶಗಳಲ್ಲಿ ಮೀನಿನ ಬೃಹತ್​ ಅಕ್ವೇರಿಯಂಗಳನ್ನ ಸ್ಥಾಪಿಸಲಾಗಿದೆ. ಸಾಕಷ್ಟು ಜನ ಈ ಬೃಹತ್​ ಅಕ್ವೇರಿಯಂಗಳಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಹಲವು ತಳಿಯ ಮೀನುಗಳ ಪರಿಚಯವನ್ನ ಮಾಡಿಕೊಡುತ್ತಾರೆ. ಆದ್ರೆ ಸಾಕಷ್ಟು ಜನ ಮೀನುಗಳು ಸಾಧು ಜೀವಿಗಳು, ಅವುಗಳಿಂದ ಯಾವುದೇ ಅಪಾಯವಿಲ್ಲ ಅಂತ ಅಂದುಕೊಂಡಿದ್ದಾರೆ. ಆದ್ರೆ ತಾವು ಅಂದುಕೊಳ್ಳೋದಕ್ಕಿಂತಲು ಕೆಲ ಮೀನುಗಳು ಅಪಾಯಕಾರಿ ಅನ್ನೋದು ಎಷ್ಟೋ ಜನಕ್ಕೆ ತಿಳಿದಿರೋದಿಲ್ಲ. ಇದೀಗ ಹೀಗೆ ಮೀನಿನ ಆಪಾಯದ ಬಗ್ಗೆ ಅರಿಯದೇ ದಕ್ಷಿಣ ಅಮೆರಿಕಾದಲ್ಲಿ ನಾಲ್ವರು ದಾರುಣವಾಗಿ ಸಾವನಪ್ಪಿದ್ದಾರೆ.

ದಕ್ಷಿಣ ಅಮೆರಿಕದ ಸಾಂಟಾ ಫೆಯ ಪರಾನಾ ನದಿಯ ತೀರದಲ್ಲಿ ಈ ರೀತಿಯಾದ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಇದೀಗ ನದಿಯ ತೀರಕ್ಕೆ ಬರೋದಕ್ಕೆ ಕೂಡ ಜನ ಹೆದರುತ್ತಿದ್ದಾರೆ. ಅಸಲಿಗೆ ಈ ಪರಾನಾ ನದಿಯ ತೀರ ಯಾವಾಗಲು ಪ್ರವಾಸಿಗರಿಂದ ತುಂಬಿರುವ ಪ್ರದೇಶ. ಪ್ರತಿನಿತ್ಯ ಸೂರ್ಯೋದಯದ ಬಳಿಕ ಜನ ಈ ನದಿ ತೀರದಲ್ಲಿ ತೆಳು ಬಿಸಿಲಿನ ತಾಪದ ಅನುಭವವನ್ನ ಪಡೆದುಕೊಳ್ಳೋದಕ್ಕೆ ಬರುತ್ತಾರೆ, ಹೀಗೆ ಮೊನ್ನೆ ಮೊನ್ನೆಯಷ್ಟೆ ಇಲ್ಲಿಗೆ ಬಂದ ಪ್ರವಾಸಿಗರು ಈ ನದಿಯಲ್ಲಿ ಸ್ನಾನ ಮಾಡೋದಕ್ಕೆ ಇಳಿದಿದ್ದಾರೆ. ಈ ವೇಳೆ ದಾಳಿ ಮಾಡಿದ ಪಿರಾನ್ಹಾ ಮೀನು ಕ್ಷಣಾರ್ಧದಲ್ಲಿ ಹಲವರ ಜೀವ ತೆಗೆದಿದೆ. ಈಗ ಇದೇ ಕಾರಣದಿಂದಾಗಿ ಈ ನದಿಯ ಬಳಿ ಬರೋದಕ್ಕೆ ಸ್ಥಳೀಯರು ಹೆದರುತ್ತಿದ್ದಾರೆ.

ವಿಶ್ವದ ದೊಡ್ಡ ನದಿಗಳಲ್ಲಿ ಒಂದಾಗಿರುವ ದಕ್ಷಿಣ ಅಮೆರಿಕದ ಅಮೆಜಾನ್ ನದಿ, ಹಲವು ವೈಶಿಷ್ಟ್ಯಗಳನ್ನ ತನ್ನೊಳಗೆ ಇಟ್ಟುಕೊಂಡಿರೋದು ಎಲ್ಲರಿಗೂ ತಿಳಿದಿದೆ, ಈ ನದಿಯಲ್ಲಿ ವಿಶಿಷ್ಟ ಪ್ರಭೇದದ ಜೀವಿಗಳು ವಾಸವಾಗಿದ್ದು ಅವುಗಳ ಬಗ್ಗೆ ಇಂದಿಗೂ ಜೀವ ಶಾಸ್ತ್ರಜ್ಞರು ಅಧ್ಯಯನವನ್ನ ನಡೆಸುತ್ತಿದ್ದಾರೆ. ಈ ನದಿಯಲ್ಲಿ ದೈತ್ಯ ಮೊಸಳೆಗಳು, ಅನಕೊಂಡಾದಂತಹ ದೈತ್ಯ ಹಾವುಗಳು ಪತ್ತೆಯಾಗಿದ್ದು ಇವುಗಳನ್ನ ಅಪಾಯಕಾರಿ ಪ್ರಾಣಿಗಳ ವರ್ಗಕ್ಕೆ ಈಗಾಗಲೇ ಸೇರಿಸಲಾಗಿದೆ. ಆದ್ರೆ ಇದೇ ನದಿಯಲ್ಲಿ ಕಂಡು ಬರುವ ಈ ಪಿರಾನ್ಹಾ ಮೀನುಗಳು ಇದುವರೆಗೂ ಇಷ್ಟೋಂದು ಅಪಾಯಕಾರಿಯಾಗಿ ಪತ್ತೆಯಾಗಿರಲಿಲ್ಲ. 2008ರಿಂದ ಇಲ್ಲಿಯವರೆಗೆ ಈ ಮೀನುಗಳು ನಡೆಸಿದ ದಾಳಿಯಲ್ಲಿ 40 ಮಂದಿ ಗಾಯಗೊಂಡಿದ್ದರು, ಆದ್ರೆ ಯಾವತ್ತು ಕೂಡ ಒಂದೇ ವರ್ಷದಲ್ಲಿ ಈ ಮೀನಿನಿಂದ 4 ಸಾವಿನ ಪ್ರಕರಣಗಳು ದಾಖಲಾಗಿರಲಿಲ್ಲ. ಹಾಗಾಗಿ ಈ ಬಗ್ಗೆ ಇದೀಗ ತಜ್ಙರು ಅಧ್ಯಯನವನ್ನ ನಡೆಸುತ್ತಿದ್ದಾರೆ.

ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ಮೀನುಗಳು ಒಂದು ರೀತಿಯ ಕ್ರೂರ ಜಲಚರವಾಗಿದ್ದು, ಮುಖ್ಯವಾಗಿ ಈ ಪಿರಾನ್ಹಾ ಮೀನುಗಳು ಪರಾಗ್ವೆ ನದಿಗಳಲ್ಲಿವೆ ಅಂತ ಜೀವಶಾಸ್ತ್ರಜ್ಞರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಅಮೆಜಾನ್​ ನದಿ ಹಾಗು ಪರಾಗ್ವೆ ನದಿಗಳನ್ನ ಹೊರತು ಪಡಿಸಿ ಈ ಮೀನುಗಳು ಹೆಚ್ಚಾಗಿ ಎಲ್ಲೂ ಪತ್ತೆಯಾಗಿಲ್ಲ ಅಂತ ಹೇಳಲಾಗ್ತಾ ಇದೆ. ಜೀವಶಾಸ್ತ್ರಜ್ಞರು ಹೇಳುವ ಹಾಗೆ ಈ ಮೀನುಗಳು ಮನುಷ್ಯರ ಮೇಲೆ ಹಠಾತ್ ಆಗಿ ದಾಳಿ ನಡೆಸುತ್ತದೆ. ದಾಳಿಗೂ ಮುನ್ನ ಈ ಮೀನುಗಳು ನೀರಿನಲ್ಲಿ ಇರುವ ಸಸ್ಯಗಳ ನಡುವೆ ಅಡಗಿಕೊಂಡು ಹೊಂಚು ಹಾಕುತ್ತಿರುತ್ತದೆ. ನಂತರ ತನ್ನ ಹಿಂಡಿನ ಜೊತೆಗೆ ಒಟ್ಟಿಗೆ ದಾಳಿ ನಡೆಸುವ ಈ ಮೀನು, ತನ್ನ ದಾಳಿಗೆ ಸಿಕ್ಕ ಯಾವ ಜೀವಿಗೂ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ನೀಡೋದಿಲ್ಲ. ಇನ್ನು, ವಿಜ್ಞಾನಿಗಳ ಪ್ರಕಾರ ಈ ಪಿರಾನ್ಹಾ ಮೀನುಗಳು ಸಂತಾನೋತ್ಪತ್ತಿ ಅವಧಿಯಲ್ಲಿ ಹೆಚ್ಚಾಗಿ ದಾಳಿ ಮಾಡುತ್ತದೆ. ಗಂಡು ಪಿರಾನ್ಹಾ ಮೀನುಗಳು ತುಂಬಾ ಆಕ್ರಮಣಕಾರಿಯಾಗಿದ್ದು. ಮನುಷ್ಯರ ಮೇಲೆ ದಾಳಿ ಮಾಡಿದಾಗ ಮಾನವನ ಅರ್ಧ ದೇಹವನ್ನ ಕಚ್ಚಿ ತಿನ್ನುತ್ತವೆ ಅನ್ನೋ ಭಯಾನಕ ಮಾಹಿತಿಯನ್ನ ನೀಡಿದ್ದಾರೆ.

ವಿಜ್ಞಾನಿಗಳ ಈ ವರದಿಯಿಂದ ಎಚ್ಚೆತ್ತಿರುವ ಅಲ್ಲಿನ ಸ್ಥಳೀಯ ಆಡಳಿತ, ಈ ಮೀನುಗಳ ಸಂತಾನೋತ್ಪತ್ತಿ ಅವಧಿಯಲ್ಲಿ ನದಿಗಳಿಗೆ ಇಳಿಯದಂತೆ ಜನರಿಗೆ ಎಚ್ಚರಿಕೆಯನ್ನ ನೀಡಿದೆ.ಈ ನದಿಯ ಸಮೀಪದಲ್ಲಿ ಹೊಳೆಗಳಲ್ಲಿ ದೀರ್ಘಕಾಲದವರೆಗೆ ನದಿಯಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದ್ದು, ಪಿರಾನ್ಹ ಮೀನುಗಳು ಇರುವ ಪ್ರದೇಶಗಳಿಗೆ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಕೆಲ ತಜ್ಞರು ಹೇಳುವ ಪ್ರಕಾರ ಈ ಮೀನುಗಳು ತಮ್ಮ ಮೊಟ್ಟೆಗಳನ್ನು ಸಸ್ಯಗಳ ಹಿಂದೆ ಮರೆಮಾಚುತ್ತದೆ. ಒಂದು ವೇಳೆ ಆ ಕಡೆ ಸ್ನಾನ ಮಾಡೋದಕ್ಕೆ ಯಾರಾದ್ರು ತೆರಳಿದ್ರೆ ಅವರ ಮೇಲೆ ದಾಳಿ ಮಾಡುತ್ತದೆ. ಹಾಗಾಗಿ ಇವುಗಳ ಸಂತಾನೋತ್ಪತಿಯ ಅವಧಿಯಲ್ಲಿ ಈ ನದಿ ಪಾತ್ರದಲ್ಲಿ ಜನರ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಬೇಕು ಅಂತ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಒಟ್ಟಾರೆಯಾಗಿ ಈ ನದಿಯ ಬಳಿ ಪ್ರಕೃತಿ ಸೌಂದರ್ಯ ಸವಿಯೋದಕ್ಕೆ ಬರುತ್ತಿದ್ದ ಜನರಿಗೆ ಕಂಟಕ ಶುರುವಾಗಿದ್ದು, ಇಲ್ಲಿನ ಪ್ರವಾಸೋದ್ಯಮಕ್ಕೆ ಈ ಪಿರಾನ್ಹಾ ಮೀನುಗಳು ಬಹುದೊಡ್ಡ ಹೊಡೆತವನ್ನ ಕೊಟ್ಟಿದೆ. ಇದೀಗ ಈ ಮೀನು ಶಾರ್ಕ್​ ಮೀನುಗಳಿಗಿಂತ ಹೆಚ್ಚು ಅಪಾಯಕಾರಿ ಅನ್ನೋದನ್ನ ಬಹುತೇಕ ತಜ್ಞರು ಒಪ್ಪಿಕೊಂಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಮೀನಿನ ಸಮಸ್ಯೆಗೆ ಅಲ್ಲಿನ ಸ್ಥಳೀಯ ಆಡಳಿತ ಯಾವ ರೀತಿಯಾಗಿ ಕ್ರಮ ಕೈಗೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಲಿಖಿತ್​​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES