ಹಾಸನ : ರಸ್ತೆಗಾಗಿ ಭೂಮಿ ಕಳೆದುಕೊಂಡ ಅನ್ನದಾತರು ಪರಿಹಾರ ಕೇಳಿದಾಗ ಶಾಸಕನ ಚೇಲಾಗಳು ಗೂಂಡಾವರ್ತನೆ ತೋರಿದ್ದಾರೆ. ಹಲ್ಲೆ ಬಗ್ಗೆ ದೂರು ನೀಡಿದ್ರೂ ಪೊಲೀಸರು ಪ್ರಕರಣ ದಾಖಲಿಸದೆ ಜಾಣಮೌನ ವಹಿಸಿದ್ದಾರೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ನೊಂದ ರೈತರು ಜಿಲ್ಲಾಧಿಕಾರಿ ಕಚೇರಿಯ ಕದ ತಟ್ಟಿದ್ದಾರೆ.
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಾಸನ ಹೊರವಲಯದ ಬೇಲೂರು ಮತ್ತು ಡೈರಿ ವೃತ್ತ ಸಂಪರ್ಕಿಸೋ ರಿಂಗ್ ರಸ್ತೆ ಕಾಮಗಾರಿ. ಇದಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಪೂರ್ಣ ಪರಿಹಾರ ಸಿಗದೆ ಕಂಗಾಲಾಗಿದ್ದಾರೆ. ಇದನ್ನ ಕೇಳ್ಳೋದ್ದಕ್ಕೆ ಮುಂದಾದ ರೈತರ ಮೇಲೆ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಹೋದ್ರೂ ಪೊಲೀಸ್ರು ದೂರು ಸ್ವೀಕರಿಸಲಿಲ್ಲ, ಬದಲಾಗಿ ಹಲ್ಲೆಗೊಳಗಾದ ರೈತರ ವಿರುದ್ಧವೇ ದೂರು ದಾಖಲು ಮಾಡಲು ಪೊಲೀಸರು ಮುಂದಾಗಿದ್ದಾರೆಂದು ನೊಂದ ರೈತರು ಆರೋಪಿಸಿದ್ದಾರೆ.
ಈ ಸಂಬಂಧ ಕಳೆದ ಆಗಸ್ಟ್ನಲ್ಲಿ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿ ಕಾಮಗಾರಿಗೆ ತಡೆಯಾಜ್ಞೆ ತರಲಾಗಿದೆ. ಆದರೂ ಇಲ್ಲಿಯವರೆಗೆ ಕಾಮಗಾರಿ ನಿಂತಿಲ್ಲ. ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದ್ದಾರೆ. ಮಾಧ್ಯಮದ ಮುಂದೆ ಹೋದೆವು ಎಂಬ ಒಂದೇ ಕಾರಣಕ್ಕೆ ರಾತ್ರೋ ರಾತ್ರಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ರೀತಿ ಗುಂಡಾವರ್ತನೆಯಿಂದ ಎಲ್ಲರೂ ಭಯಭೀತರಾಗಿದ್ದಾರೆ. ಹಲ್ಲೆ ಮಾಡಿದವರನ್ನು ಬಿಟ್ಟು ಹಲ್ಲೆಗೊಳಗಾದವರನ್ನು ಪೊಲೀಸರು ತಮ್ಮ ಜೀಪಿನಲ್ಲಿ ಕರೆದುಕೊಂಡು ಬಂದಿದ್ದಾರೆ. ನ್ಯಾಯ ನೀಡಬೇಕಾದವರೇ ಮೌನಕ್ಕೆ ಶರಣಾಗಿ ಒಂದು ಪಕ್ಷದ ಏಜೆಂಟ್ರಂತೆ ವರ್ತಿಸೋದು ಯಾವ ರೀತಿ ನ್ಯಾಯ ಎಂದು ಆಕ್ರೋಶ ಹೊರಹಾಕುತ್ತಿದ್ದು. ಮತ್ತೆ ನ್ಯಾಯಾಲಯದ ಮೆಟ್ಟಿಲೇರಲು ರೈತರು ತೀರ್ಮಾನಿಸಿದ್ದಾರೆ.
ಒಟ್ಟಾರೆ ಭೂಮಿ ಕಳೆದುಕೊಂಡು ಪರಿಹಾರಸಿಗದೆ ಕಂಗಾಲಾಗಿರೋ ರೈತರು ಅವರ ಮೇಲೆ ಈ ರೀತಿಯ ದಬ್ಬಾಳಿಕೆ ಸರಿಯಲ್ಲ. ಜೀವನಕ್ಕೆ ಆಧಾರವಾಗಿರೋ ಭೂಮಿಯನ್ನು ಕಳೆದುಕೊಂಡಿರೋ ರೈತರು ಪ್ರತಿನಿತ್ಯ ಈ ರೀತಿ ನೋವು ಅನುಭವಿಸುತ್ತಿರೋದು ವಿಪರ್ಯಾಸವೇ ಸರಿ.