ಮೂರನೇ ದಿನದ ಕಾರ್ಯಾಚರಣೆ; ಬಾಗೇಪಲ್ಲಿ ಚೆಕ್ ಪೋಸ್ಟ್ನಲ್ಲಿ ನಮ್ಮ ಪಹರೆ; ಸಮಯ ಮಧ್ಯ ರಾತ್ರಿ 12.15
ನಾವು ಈಗಾಗಲೇ ಬಾಗೇಪಲ್ಲಿ ಚೆಕ್ಪೋಸ್ಟ್ ಕರ್ಮಕಾಂಡವನ್ನು ಚಿತ್ರೀಕರಿಸಿಕೊಂಡಿದ್ದರೂ, ಪುನಃ ಅಲ್ಲಿ ಈಗ ಯಾವ ರೀತಿಯ ಚೆಕಿಂಗ್ ಕಾಣಬಹುದು ಎಂದು ಅಲ್ಲಿಗೆ ಭೇಟಿ ನೀಡಿದೆವು. ಆದರೆ ನಮಗೆ ಅಲ್ಲಿ ಕಂಡಿದ್ದು ಮತ್ತೆ ಅದೇ ಸಿನ್! ಇಲ್ಲಿ ಡ್ಯೂಟಿಯಲ್ಲಿ ಇದ್ದ ಇನ್ಸ್ಪೆಕ್ಟರ್ ಮಾತ್ರ ಬದಲಾಗಿದ್ರು. ಆದರೆ ವಸೂಲಿಗೆ ನಿಲ್ಲುವ ಸಿಬ್ಬಂದಿಗಳು ಮಾತ್ರ ಅವರೇ ಆಗಿದ್ದರು. ಇವರೊಂದಿಗೆ ಒಂದಿಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಚೆಕ್ ಪೋಸ್ಟ್ ಬಳಿಯೇ ಒಡಾಡಿಕೊಂಡಿದ್ದರು..
ಇವರಿಬ್ಬರ ಚಲನವಲನ ಕಂಡು ಅನುಮಾನ ಬಂದಿತ್ತು. ಹಾಗಾಗಿ ಒಮ್ಮೆ ಮಾತನಾಡಿಸುವ ಪ್ರಯತ್ನ ಮಾಡಿದೆವು. ಸ್ಥಳದಲ್ಲಿ ಇದ್ದ ಕೆಲವು ಲಾರಿ ಚಾಲಕರು, ಕ್ಲೀನರ್ಗಳನ್ನು ಮಾತನಾಡಿಸಿದೆವು. ಅವರ ಮಾತು ಕೇಳಿ ನಾವು ದಂಗಾಗಿದ್ದೆವು. ಅಯ್ಯಯ್ಯೋ.. ಇವರು ಹೇಳುವ ಮಾತು ಕೇಳಿದ್ರೆ ಭ್ರಷ್ಟಾಚಾರ ಎನ್ನುವುದು ಇಷ್ಟೊಂದು ಪ್ರಮಾಣದಲ್ಲಿ ಇಷ್ಟೊಂದು ರಾಜಾರೋಷವಾಗಿ ನಡೀತಿದ್ಯಾ ಎಂದು ಅಚ್ಚರಿಯಾಗುತ್ತದೆ ಜೊತೆಗೆ ನಾಚಿಕೆಯೂ ಆಗುತ್ತದೆ.
ಇಲ್ಲಿಂದ ನಾವು ಅತ್ತಿಬೆಲೆ ಚೆಕ್ಪೋಸ್ಟ್ ಕಡೆ ಸಾಗಿದೆವು. ಬೆಳಗಿನ ಜಾವ 3.30ರ ಸುಮಾರಿಗೆ ಅತೀಗುಪ್ಪೆ ಚೆಕ್ ಪೋಸ್ಟ್ ತಲುಪಿದ ನಮ್ಮ ತಂಡಕ್ಕೆ ಕಂಡಿದ್ದು ಅದೇ ಹಳೆಯ ದೃಶ್ಯ. ಎಂದಿನಂತೆ ಇಂದಿಗೂ ಕೂಡ ಅಧಿಕಾರಿಗಳು ಲಂಚ ಪೀಕುವಲ್ಲಿ ತಲ್ಲೀನವಾಗಿದ್ರು. ನಿರಂತರ ರೋಡ್ ರಾಬರಿಗೆ ನಿಂತ ಆರ್ ಟಿ ಓ ಇಲಾಖೆಯ ಸಿಬ್ಬಂದಿಗಳ ಧನದಾಹಕ್ಕೆ ಯಾವತ್ತೂ ಕಡಿವಾಣ ಬಿಳೋದೇ ಇಲ್ಲ ಎನ್ನುವ ಸತ್ಯ ನಮಗೆ ಅರ್ಥವಾಗಿತ್ತು. ಆದರೆ ಛಲಬಿಡದ ತ್ರಿವಿಕ್ರಮನಂತೆ ಇಷ್ಟಕ್ಕೆ ಬಿಡದೆ ನಮ್ಮ ತಂಡ ಮತ್ತಷ್ಟು ಭ್ರಷ್ಟರ ಬೇಟೆಗೆ ಮುಂದಾಗಿತ್ತು.
ಅತ್ತಿಬೆಲೆ ಚಕ್ ಪೋಸ್ಟ್ನಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿಯೇ ಬಿಡೋಣ ಅಂತ ನಮ್ಮ ತಂಡದ ಮತ್ತೊಬ್ಬ ಸರದಿ ಸಾಲಿನಲ್ಲಿ ನಿಂತುಕೊಂಡಿದ್ದ. ಮತ್ತೇ ಅದೇ ಸೀನ್ ರಿಪೀಟ್ ಆಗಿತ್ತು. ಇಲ್ಲಿಯವರಗೆ ನಮ್ಮದು ಕುಟುಕು ಕಾರ್ಯಾಚರಣೆ ನಡೆಯುತ್ತಿತ್ತು. ಆದರೆ ಈಗ ನೇರವಾಗಿ ಶೂಟ್ಗೆ ಮುಂದಾದೆವು..
ನಮ್ಮ ತಂಡಕ್ಕೆ ಕಂಡ ವಿಚಿತ್ರ ಏನೆಂದರೆ ಆರ್ ಟಿ ಓ ಕಚೇರಿಯಿಂದ ಓಡಿ ಬಂದ ವ್ಯಕ್ತಿ ಬೈಕ್ನಲ್ಲಿ ಹೊರಟೇ ಬಿಟ್ಟ. ನಮ್ಮ ಸಿಬ್ಬಂದಿಗಳು ಅವನನ್ನ ತಡೆದು ಮಾತನಾಡಿಸಲು ಪ್ರಯತ್ನಿಸಿದಾಗ ತಾನು ಕಚೇರಿಗೆ ಕಾಫಿ ಟೀ ಸಪ್ಲೈ ಮಾಡುವವನು. ಬಡವ ಎಂದು ಗೋಳಿಟ್ಟ.
ಇಷ್ಟಕ್ಕೂ ಈ ಆ ಆಸಾಮಿ ಕುಳಿತ ಬೈಕ್ನಲ್ಲಿ ಏನೆಲ್ಲಾ ಇತ್ತು ಅನ್ನೋದು ಗೊತ್ತಾದ್ರೆ ನೀವು ಬೆಚ್ಚಿ ಬೀಳ್ತೀರ.. ಆದರೆ ಹಾಗೆ ನೋಡಲು ನಮಗೆ ಅವನು ಮೊದಲು ಅನುಮತಿಸಲೇ ಇಲ್ಲ. ಬೈಕ್ನ ಡಿಕ್ಕಿಯಲ್ಲಿ ಏನಿದೆ ನೋಡಿಯೇ ಬಿಡೋಣ ಎಂದಾಗ ಅದಕ್ಕೆ ಆತ ನಿರಾಕರಿಸಿದ.. ಕೊನೆಗೆ ನಮ್ಮ ಒತ್ತಾಯಕ್ಕೆ ಡಿಕ್ಕಿ ಓಪನ್ ಮಾಡಿದ. ಅಲ್ಲಿತ್ತು ನೋಡಿ ಹಣದ ಬಂಡಲ್ಗಳು.
ಈ ಬಂಡಲ್ನಲ್ಲಿ ಏನಿದೆ ಎನ್ನುವ ಕುತೂಹಲ ನಮಗೆ ಇದ್ದೇ ಇತ್ತು. ಆದರೆ ಇದನ್ನು ನಾವು ಬಹಿರಂಗವಾಗಿ ವೀಕ್ಷಕರ ಮುಂದೆಯೇ ತೆರೆಯಬೇಕು ಅಂತ ತೀರ್ಮಾನಿಸಿ ಆ ಕಟ್ಟನ್ನ ಹಾಗೇ ಇಟ್ಟಿದ್ದೇವೆ. ನಾವು ಇನ್ನೇನು ನಡೀತಿದೆ ಎಂದು ತಿಳಿಯೋಕೆ ಹೊರಟ ನಮ್ಮ ತಂಡದ ಮೇಲೆ ಆರ್ ಟಿ ಓ ಇನ್ಕ್ಟರ್ ನಾಸಿರ್ ಅಹಮ್ಮದ್ ಖಾನ್ ಬುಸುಗುಡುತ್ತಲೇ ಹೊರಬಂದ್ರು.
ಅಬ್ಬಬ್ಬಾ ಅದ್ಯಾವ ಆವೇಶದಲ್ಲಿ ಬಂದ ಅಂದರೆ, ಬಂದವನೇ ನಮ್ಮ ಕ್ಯಾಮರಾಕ್ಕೆ ಕೈ ಹಾಕಿಬಿಟ್ಟ.. ಇಲ್ಲಿ ಏನೇ ಶೂಟ್ ಮಾಡಬೇಕಿದ್ರೂ ಇವನ ಪರ್ಮಿಷನ್ ಬೇಕಂತೆ, ಸಾಲದ್ದಕ್ಕೆ ಅನುಮತಿ ಪತ್ರ ಬೇರೆ ತೆಗೆದುಕೊಳ್ಳಬೇಕಂತೆ.. ಇವರು ಮಾಡುವ ಘನ ಕಾರ್ಯ ಚಿತ್ರೀಕರಿಸಲು ಅನುಮತಿ ಬೇಕಂತೆ. ಅದೇನೋ ಅಂತಾರಲ್ಲ ಹರಿಯೋ ನದಿಗೆ ದೋಣ್ಣೆ ನಾಯಕನ ಅಪ್ಪಣೆ ಬೇಕಾ ಅನ್ನೋ ಹಾಗೆ ..? ಈ ಸಂದರ್ಭದಲ್ಲಿ ನಮ್ಮ ತಂಡದ ನಾಯಕರ ಜೊತೆ ತೋಳೇರಿಸಿಕೊಂಡು ಜಗಳಕ್ಕೆ ನಿಂತ.. ಆದರೆ ಯಾವುದಕ್ಕೂ ಬೆದರದೆ ನಾವು ಚಿತ್ರೀಕರಿಸಿದ ಎಲ್ಲವನ್ನೂ ತೆಗೆದುಕೊಂಡು ಅಲ್ಲಿಂದ ಹೊರಟೆವು.
ಆದರೆ ಇಲ್ಲಿಗೆ ನಮ್ಮ ಕೆಲಸ ಮುಗಿದಿರಲಿಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ ಏನು ನಡಿತಿದೆ ಎನ್ನುವ ಕುತೂಹಲ ಮೂಡಿತ್ತು. ಅದಕ್ಕೆ ನಮ್ಮ ಪ್ರಯಾಣ ದೂರದ ವಿಜಯಪುರ ಜಿಲ್ಲೆಯ ಝಳಕಿಯತ್ತ ಸಾಗಿತ್ತು. ಅಲ್ಲಿಯ ಕರ್ಮಕಾಂಡ ಕಥೆ ಓದಲು ನೀವು ಭಾಗ 6ಕ್ಕೆ ಕಾಯಬೇಕು ಅಷ್ಟೆ!