Sunday, December 22, 2024

ಯಾತ್ರೆ ಮಾಡೋದ್ರಿಂದ ಬೆಂಗಳೂರಿಗೆ ಬರ್ತಾಳಾ `ಕಾವೇರಿ’..?

ಅಂತೂ ಸರ್ಕಾರದ ವಿರೋಧದ ನಡುವೆಯೂ ಕಾಂಗ್ರೆಸ್ ಪಕ್ಷ ಪಾದಯಾತ್ರೆಗೆ ಚಾಲನೆ ನೀಡಿದೆ. ಸಂಗಮದಿಂದ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ಪಾದಯಾತ್ರೆಯಲ್ಲಿ ಕೊವಿಡ್ ನಿಯಮಾವಳಿಗಳನ್ನ ಗಾಳಿಗೆ ತೂರಲಾಗಿತ್ತು. ಇತ್ತ ಮಾಜಿ ಸಿಎಂ ಸಿದ್ದು ಅಸ್ವಸ್ಥರಾಗಿ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ 9 ದಿನಗಳ ಪಾದಯಾತ್ರೆ ಹಮ್ಮಿಕೊಂಡಿದ್ದು, ಮೊದಲ ದಿನವೇ ಭರ್ಜರಿಯಾಗಿ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಸಿಎಲ್ಪಿ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ಮಠದ ಸ್ವಾಮಿಜಿಗಳು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಲ್ಲಿ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್‌ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಪಾದಯಾತ್ರೆಗೆ ಯಾವುದೇ ವಿಘ್ನ ಬಾರದಂತೆ ಪೂಜೆ ಸಲ್ಲಿಕೆ ಮಾಡಿದರು. ಅಲ್ಲದೇ ಮಹಿಳೆಯರಿಂದ ಕಾವೇರಿ ನೀರು ತುಂಬಿರುವ ಬಿಂದಿಗೆಗಳಿಗೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದ ಚಾಲನೆ ವೇಳೆ ಸಾಧು ಕೋಕಿಲ ಅವರ ತಂಡದಿಂದ ಮೇಕೆದಾಟಿಗೆ ಸಂಬಂಧಿಸಿದ ಗೀತೆಗಳನ್ನ ಹಾಡಿಸಲಾಯಿತು.

100 ಕ್ಕೂ ಹೆಚ್ಚು ಕಲಾತಂಡಗಳು ಪಾದಯಾತ್ರೆಗೆ ಸಾಕ್ಷಿಯಾಗಿದ್ದವು. ಉರಿ ಬಿಸಿಲಿನಲ್ಲೂ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದರು. ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿ ಯುವಕರು ನಾಚುವಂತೆ ಪಾದಯಾತ್ರೆಯಲ್ಲಿ ಸಾಗಿದರು. ಯಾತ್ರೆ ಉದ್ದಕ್ಕೂ ದಣಿದ ಕಾರ್ಯಕರ್ತರಿಗೆ ಕಬ್ಬಿನ ಹಾಲು, ಮಜ್ಜಿಗೆ, ಕೋಸಂಬರಿ ನೀಡಲಾಯಿತು. ಮಧ್ಯಾಹ್ನ ಹೆಗ್ಗನೂರಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಪಾದಯಾತ್ರೆಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು. ಈ ಪಾದಯಾತ್ರೆಯಲ್ಲಿ ಯಾವುದೇ ಸಾಮಾಜಿಕ ಅಂತರ ಇರಲಿಲ್ಲ. ಹಲವು ಶಾಸಕರು ಮಾಸ್ಕ್‌ಗಳನ್ನೇ ಮರೆತಿದ್ದರು. ಸ್ಪಷ್ಟವಾಗಿ ಸರ್ಕಾರದ ಕೊರೋನಾ ನಿಯಮಗಳನ್ನ ಗಾಳಿಗೆ ತೂರಲಾಗಿತ್ತು. ಸಂಗಮದಿಂದ ಹೊರಟ ಪಾದಯಾತ್ರಿಗಳಿಗೆ ಹೆಗ್ಗನೂರಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 20,000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನು, ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಲ್ಲಿ ಆಯಾಸ ಕಾಣಿಸಿಕೊಂಡಿತ್ತು. ತಕ್ಷಣ ಅಲ್ಲೆ ಇದ್ದ ವೈದ್ಯರು ಪರೀಕ್ಷೆ ನಡೆಸಿ ಜ್ವರದ ಲಕ್ಷಣಗಳು ಇದ್ದು ವಿಶ್ರಾಂತಿಗೆ ಸಲಹೆ ನೀಡಿದರು. ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ ಪಾದಯಾತ್ರೆ ಮೊಟಕುಗೊಳಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಸಂಗಮದಲ್ಲಿ ಪಾದಯಾತ್ರೆಗೆ ಚಾಲನೆಗೆ ಎಂದು ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ರು. ಪಾದಯಾತ್ರೆ ನಡೆಯಬಾರದು ಎಂದು ಬಿಜೆಪಿ ಸರ್ಕಾರ ಎಲ್ಲಾ ರೀತಿಯ ತಂತ್ರಗಳನ್ನ ಮಾಡಿದೆ. ನಾವು ಯಾವ ತಂತ್ರಕ್ಕೂ ಬಗ್ಗಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ರು. ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕೆಂದು ನಾವು ಪಾದಯಾತ್ರೆ ಮಾಡುತ್ತಿಲ್ಲ. ಜನರಿಗೆ ಕುಡಿಯುವ ನೀರಿಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಸಿಎಂ ಅಧಿಕಾರಿಗಳನ್ನ ಮುಂದೆ ಇಟ್ಟುಕೊಂಡು ನಮ್ಮ ಪಾದಯಾತ್ರೆ ಮೊಟಕುಗೊಳಿಸಲು ಯತ್ನ ಮಾಡಿದ್ದೀರಿ, ನಿಮಗೆ ತಾಕತ್ ಇದ್ರೆ ನಮ್ಮ ಮೇಲೆ ಕೇಸ್ ಹಾಕಿ ಎಂದು ಸವಾಲು ಹಾಕಿದ್ರು.

ಒಟ್ಟಾರೆ ನೀರಿಗಾಗಿ ನಡಿಗೆ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ಆರಂಭಿಸಿದ್ದಾರೆ. ಕೊವಿಡ್ ನಿಯಮಗಳು ಸ್ಪಷ್ಟವಾಗಿ ಉಲ್ಲಂಘಿಸಿದ್ರೂ, ಪೋಲಿಸರು ಮಾತ್ರ ಏನೂ ಗೊತ್ತಿಲ್ಲದ ಹಾಗೆ ಮೂಕ ವಿಸ್ಮಿತರಾಗಿದ್ರು. ಅದು ಏನೇ ಇರಲಿ ಸಾಮಾನ್ಯ ಜನರಿಗೊಂದು ಕಾನೂನು ರಾಜಕಾರಣಿಗಳಿಗೊಂದು ಕಾನೂನು ಎನ್ನೋ ರೀತಿ ಇತ್ತು ಈ ಪಾದಯಾತ್ರೆ.. ಸದ್ಯ ಕಾಂಗ್ರೆಸ್ ನಾಯಕರ ಮೇಲೆ ಸರ್ಕಾರ ಯಾವ ರೀತಿ ಕಾನೂನು ಅಸ್ತ್ರ ಪ್ರಯೋಗ ಮಾಡ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES