ಪವರ್ ಟಿವಿಗೆ ಬಂದ ಮಾಹಿತಿಯ ಬೆನ್ನಟ್ಟಿದ ಪವರ್ ಎಸ್ಐಟಿ ತಂಡಕ್ಕೆ ಹೆಜ್ಜೆ ಹೆಜ್ಜೆಗೂ ರೋಚಕ ಮಾಹಿತಿಗಳು ಸಿಗುತ್ತಲೇ ಹೋದವು. ಪ್ಲಾನ್ ಪ್ರಕಾರ ಪವರ್ ತಂಡ ಮೊದಲು ಹೊರಟಿದ್ದು ಗೌರಿಬಿದನೂರು ಆರ್ಟಿಓ ಚೆಕ್ ಪೋಸ್ಟ್ಗೆ.
ಗೌರಿಬಿದನೂರು ಚೆಕ್ ಪೋಸ್ಟ್; ಸಮಯ ರಾತ್ರಿ 12.30 ; ಸರದಿ ಸಾಲಲ್ಲಿ ನಿಂತಿದ್ದವು ಲಾರಿಗಳು; ಬಹಿರಂಗ ವಸೂಲಿಗೆ ನಿಂತಿದ್ದರು ಆರ್ಟಿಓ ಅಧಿಕಾರಿಗಳು; ಹೋಮ್ ಗಾರ್ಡ್ಸ್ ಹಾಗೂ ಖಾಸಗಿ ವ್ಯಕ್ತಿಗಳನ್ನು ಬಳಸಿ ವಸೂಲಿ.
ಎಸ್, ನಮ್ಮ ಪವರ್ ತಂಡಕ್ಕೆ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಮೈಲಿಗಟ್ಟಲೆ ದೂರದ ಲಾರಿಗಳು ಕಂಡು ಬಂದಿದ್ದವು. ದೂರದಲ್ಲಿ ಕಂಡಿದ್ದು ಆರ್ಟಿಓ ಚೆಕ್ ಪೊಸ್ಟ್. ಅಲ್ಲೇ ನಡೆಯುತ್ತಿತ್ತು ನೋಡಿ ಬೃಹ್ಮಾಂಡ ಭ್ರಷ್ಟಾಚಾರ. ಆರಂಭದಲ್ಲಿ ಇವ್ರಿಗೆ ನಾವು ಯಾರೆಂಬುದು ಗೊತ್ತಾಗ್ಲಿಲ್ಲ. ನೋಡಿ ಹೇಗೆ ನಮ್ಮ ಎದುರಿಗೆ ವಸೂಲಿಗೆ ತೊಡಗಿದ್ರು ಅಂತ.. ಇದೆಲ್ಲಾ ಕಂಡ ನಾವು ದೂರದಲ್ಲಿದ್ದ ಕಚೇರಿಯಲ್ಲಿ ಏನ್ ನಡೀತಿದೆ ಎಂದು ನೋಡೋದಕ್ಕೆ ಹೆಜ್ಜೆ ಹಾಕಿದೆವು.
ನಮ್ಮ ತಂಡ ಒಂದು ಪ್ಲಾನ್ ಮಾಡಿ ಕಾರ್ಯಾಚರಣೆಗೆ ಇಳಿದೆವು. ನಮ್ಮ ತಂಡದಲ್ಲೊಬ್ಬ ಲಾರಿ ಚಾಲಕರ ವೇಷದಲ್ಲಿ ಆರ್ಟಿಓ ಔಟ್ ಪೋಸ್ಟ್ ಕಚೇರಿಯ ಬಳಿಯ ಸರದಿ ಸಾಲಿನಲ್ಲಿ ನಿಂತಿದ್ದ ಚಾಲಕರ ಸರದಿಯಲ್ಲಿ ನಮ್ಮ ಸಿಬ್ಬಂದಿಯೂ ನಿಂತಿದ್ದರು. ಚಾಲಕನ ವೇಷದಲ್ಲಿ ಇದ್ದ ನಮ್ಮ ಸಿಬ್ಬಂದಿಯಿಂದಲೂ ಸಹ ಲಾರಿಯ ಮತ್ತು ಲಾರಿಯಲ್ಲಿದ್ದ ಸರಕಿನ ಮಾಹಿತಿಯನ್ನು ಕೇಳದೆ ಕೇವಲ ಲಾರಿಯ ವೀಲ್ ಎಷ್ಟು ಅಂತ ಕೇಳಿದ್ರು.
ನಮ್ಮದು 6 ವೀಲ್ ಲಾರಿ ಎಂದಾಗ ನಮ್ಮಿಂದ 500 ರೂ ಪಡೆದು ನಮಗೆ ಯಾವುದೇ ರಸೀದಿ ನೀಡದೆ ಮುಂದೆ ಹೋಗಿ ಅಂದ್ರು. ನಂತರ ನಮ್ಮ ಪವರ್ ತಂಡ ಕ್ಯಾಮರಾ ತೆಗೆಯುತ್ತಿದ್ದಂತೆ ಅಲ್ಲಿದ್ದ ಆರ್ಟಿಓ ಇನ್ಸ್ಪೆಕ್ಟರ್ ದಿಲೀಪ್ ನೇತೃತ್ವದ ಸಿಬ್ಬಂದಿಗಳ ತಂಡ ದಿಕ್ಕಾಪಾಲಾಗಿ ಓಡಿ ಹೋದ್ರು. ಆದರೆ ಇನ್ಸ್ಪೆಕ್ಟರ್ ದಿಲೀಪ್ ಮಾತ್ರ ಔಟ್ ಪೋಸ್ಟ್ನ ಕಚೇರಿ ಸೇರಿಕೊಂಡ್ರು. ಸರಿ ಸುಮಾರು 2 ಗಂಟೆಗಳ ಕಾಲ ಹೊರಗಡೆ ಬಾರದೆ ಅವಿತುಕೊಂಡೆ ಕುಳಿತಿದ್ದರು..
ಅಸಲಿಗೆ ಇಲ್ಲಿ ಏನು ನಡೆಯುತ್ತದೆ ಎಂದು ಕಂಡು ಹಿಡಿಯಲೇಬೇಕು ಎನ್ನವ ಹಠಕ್ಕೆ ಬಿದ್ದ ನಮ್ಮ ತಂಡ ಕಾಯುತ್ತಾ ಇದ್ದೆವು. ಅದೇ ಸಮಯಕ್ಕೆ ಲಂಚ ನೀಡಲು ನಿಂತಿದ್ದವರು ಸಹ ಒಂದು ಹೆಜ್ಜೆ ಹಿಂದೆ ಇಟ್ಟಿದ್ದರು. ಕೆಲವರು ನಿಲ್ಲಿಸಿದ್ದ ತಮ್ಮ ಲಾರಿಗಳನ್ನು ತೆಗೆದುಕೊಂಡು ಜಾಗ ಖಾಲಿಮಾಡೋಕೆ ಶುರು ಮಾಡಿದ್ರು. ಯಾವುದೇ ಕಾರಣಕ್ಕೂ ಲಂಚ ನೀಡದೆ ಗೇಟ್ ಪಾಸ್ ಮಾಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಚಾಲಕರ ಮೊಗದಲ್ಲಿ ಮಂದಹಾಸವಿತ್ತು.
ನಾವು ಕೆಲವು ಲಾರಿ ಚಾಲಕರನ್ನ ಮಾತನಾಡಿಸುವ ಪ್ರಯತ್ನ ಮಾಡಿದೆವು.. ಅವರು ಹೇಳುವ ಮಾತುಗಳನ್ನ ಕೇಳಿದ್ರೆ ಎಂತವರಿಗೂ ಅಸಹ್ಯ ಹುಟ್ಟುತ್ತೆ. ಇಂತಹ ಲಂಚಬಾಕ ಅಧಿಕಾರಿಗಳು ನಮ್ಮ ನಡುವೆ ಇರ್ತಾರೆ ಅನ್ನೋದನ್ನ ನೀವು ನಂಬೋಕು ಸಾಧ್ಯವಿಲ್ಲ. ಅಲ್ಲಿಂದ ನಮ್ಮ ತಂಡ ಬಾಗೇಪಲ್ಲಿ ಕಡೆಗೆ ಪ್ರಯಾಣ ಬೆಳೆಸಿತ್ತು.