Friday, November 22, 2024

ರೈತರಿಗೆ ನೀಡಬೇಕಿದ್ದ ಹಣ ನುಂಗಿದ ಖದೀಮರು

ಚಿಕ್ಕಬಳ್ಳಾಪುರ : ದೇವರು ವರ ಕೊಟ್ರೂ ಪೂಜಾರಿ ಕೊಡ್ಲಿಲ್ಲ ಅನ್ನೋ ಗಾದೆ ಮಾತಿದೆ, ಅದು ನಿಜಕ್ಕೂ ಕೂಡ ಈ ಸ್ಟೋರಿಗೆ ಮ್ಯಾಚ್ ಆಗುತ್ತದೆ. ಸರ್ಕಾರಿ ಅಧಿಕಾರಿಗಳು ಅಂದ್ರೇನೆ ಎಲ್ಲರಿಗೂ ಮೊದಲಿಗೆ ತಲೆಗೆ ಬರೋ ಯೋಚನೆ ನಮ್ಮ ಕೆಲಸ ಲಂಚ ಕೊಡದೇ ಆಗುತ್ತಾ ಅಂತ. ಕೆಲವೊಂದಿಷ್ಟು ಭ್ರಷ್ಟ ಅಧಿಕಾರಿಗಳ ಮುಖವಾಡಗಳನ್ನ ಶಾಸಕರೊಬ್ಬರು ಬಯಲಿಗೆಳಿದಿದ್ದಾರೆ.

ರೈತರ ಏಳಿಗೆ ಆಗಲಿ ಅಂತ ಸರ್ಕಾರ ಹನಿ ನೀರಾವರಿ ಯೋಜನೆ ಅಡಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ರೈತರ ಅಮಾಯಕತ್ವವನ್ನೇ ಬಂಡವಾಳ ಮಾಡಿಕೊಂಡ‌ ಖದೀಮ ಅಧಿಕಾರಿಗಳು, ಏಜೆಂಟರು ಕೋಟ್ಯಂತರ ರೂಪಾಯಿ ರೈತರ ಅನುದಾನವನ್ನು ನುಂಗಿ ನೀರು ಕುಡಿದಿದ್ದಾರೆ. ರೈತರಿಗೆ ಆದ ವಂಚನೆಯನ್ನು ಬೆಳಕಿಗೆ ತಂದ ಶಾಸಕರು ಸಣ್ಣ ಅಧಿಕಾರಿಗಳ ಜೊತೆ‌ ಕುಮ್ಮಕ್ಕು ಕೊಟ್ಟ ದೊಡ್ಡವರಿಗೂ ಶಿಕ್ಷೆಯಾಗಲಿ ಅಂತ ಒತ್ತಡ ಹೇರುತ್ತಿದ್ದಾರೆ.

ಹೌದು, ಬಹುತೇಕ ಸರ್ಕಾರಿ ಅಧಿಕಾರಿಗಳು ಜನರ ಸೇವೆ ಮಾಡೋದಕ್ಕಿಂತ, ಆರ್ಥಿಕವಾಗಿ ಶಕ್ತಿವಂತರಾಗಬೇಕು, ನಾವು ಚೆನ್ನಾಗಿದ್ರೆ ಸಾಕು ಅನ್ನೋ ಸ್ವಾರ್ಥ ಮನೋಭಾವದಿಂದ ಯೋಚಿಸೋರೇ ಜಾಸ್ತಿ. ಈ ಕಾರಣಕ್ಕೋ ಏನೋ ಏಜೆಂಟರ ಜೊತೆ ಶಾಮೀಲಾಗಿರೋ ಅಧಿಕಾರಿಗಳು, ಕೋಟ್ಯಂತರ ರೂಪಾಯಿ ರೈತರ ಹೆಸರಿನ ದುಡ್ಡನ್ನ ನುಂಗಿ ನೀರು ಕುಡಿದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ಕೃಷಿ ಮತ್ತು ತೋಟಗಾರಿಕಾ ಇಲಾಖೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

2018-2021ರ ಮೂರು ವರ್ಷಗಳ ಅವಧಿಯಲ್ಲಿ ಬಾಗೇಪಲ್ಲಿಯ ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ ಕೋಟ್ಯಂತರ ಅನುದಾನ ಬಂದಿದೆ. ಇದರಲ್ಲಿ 2.5 ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ರೈತರಿಗೆ ನೀಡದೇ ಮಧ್ಯವರ್ತಿಗಳು, ಅಧಿಕಾರಿಗಳೇ ದುರ್ಬಳಕೆ ಮಾಡಿಕೊಂಡಿರೋದನ್ನು ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಯಲಿಗೆಳೆದಿದ್ದಾರೆ.

ಜಮೀನಿಲ್ಲದವರಿಗೆ, ಕೊಳವೆಬಾವಿ ಇಲ್ಲದ ರೈತರಿಗೆ,ಇನ್ನೂ ವಿಪರ್ಯಾಸವೇಂದ್ರೆ ರೈತರೇ ಅಲ್ಲದ ಊರಿನಲ್ಲಿ ಫಲಾನುಭವಿಗಳೇ ಇಲ್ಲದವರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಡ್ರಿಪ್ ಏಜೆಂಟರು ಮತ್ತು ಅಧಿಕಾರಿಗಳು ಎರಡೂವರೆ ಕೋಟಿಗೂ ಹೆಚ್ಚು ಹಣವನ್ನ ತಿಂದು ತೇಗಿದ್ದಾರೆ. ಈ ಬಗ್ಗೆ ಬೆಳಗಾವಿ ಸದನದಲ್ಲೂ ಪ್ರಶ್ನಿಸಿದ್ದ ಶಾಸಕ ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ದಿಶಾ ಸಭೆಯಲ್ಲೂ ಅಕ್ರಮದ ಬಗ್ಗೆ ಪ್ರಸ್ತಾಪಿಸಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ ಹಾಗೂ ತೋಟಗಾರಿಕಾ ಅಧಿಕಾರಿಗಳ ಬೆವರಿಳಿಸಿದ್ರು. ಶಾಸಕರು ರೈತರ ಹಣ ದುರ್ಬಳಕೆಯಾಗಿಲ್ಲಾಂದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋ ಸವಾಲ್ ಹಾಕಿ, ಮಹಾ ಮಂಗಳಾರತಿ ಮಾಡಿದರು. ಶಾಸಕರ ಆರ್ಭಟಕ್ಕೆ ಮಣಿದ ಅಧಿಕಾರಿಗಳು ಆಗಿರೋ ತಪ್ಪನ್ನ ಒಪ್ಪಿಕೊಂಡು ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿದರು.

ಒಟ್ಟಿನಲ್ಲಿ ಸರ್ಕಾರಿ ಯೋಜನೆಗಳು ಕೇವಲ ಪೇಪರ್‌ಗಷ್ಟೇ ಸಿಮೀತಗೊಳಿಸುವ ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆಯ ತಪ್ಪಿತಸ್ಥ ಅಧಿಕಾರಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕಿದೆ.ಇಲ್ಲದಿದ್ದರೆ ಮತ್ತಷ್ಟು ಬಲಿತ‌ ಅಧಿಕಾರಿಗಳು ಅಮಾಯಕ ರೈತರ ಹೆಸರಿನಲ್ಲಿ ಹಣವನ್ನು ತಿಂದು ತೇಗೋದರಲ್ಲಿ ಅನುಮಾನವೇ ಇಲ್ಲ.

RELATED ARTICLES

Related Articles

TRENDING ARTICLES