Sunday, January 5, 2025

ಛೀ.. ಥೂ.. ಎನಿಸಿಕೊಂಡ ಮಾಧ್ಯಮ: B TV

ಅಕ್ರಮ ಮಾಡಿ ಸಿಕ್ಕಿಹಾಕಿಕೊಂಡ ಮಾಧ್ಯಮದ ಅವಾಂತರ ಇದು; ರಾಜ್ಯದ ಮಹಾಜನತೆ ಛೀ..ತೂ.. ಅಂದ್ಮೇಲೆ ಅವರು ಮಾಡಿದ್ದೇನು?; ಅಪಪ್ರಚಾರ ಮಾಡಿದವರಿಗೆ ಪವರ್ ಸ್ಕ್ರೋಕ್​​​!

ಹೌದು, ಇದೇ ಇಂದಿನ ಸ್ಪೋಟಕ ಸುದ್ದಿ. ಸುದ್ದಿ ಪ್ರಸಾರ ತಡೆಯಲು 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಹಣದೊಂದಿಗೆ ಸಿಕ್ಕಿಬಿದ್ದ ಖಾಸಗಿ ಸುದ್ದಿ ಮಾಧ್ಯಮ ಈಗ ಸಾಕಷ್ಟು ಅವಾಂತರ ಎಬ್ಬಿಸುತ್ತಿದೆ. ರಾಜ್ಯದಾದ್ಯಂತ ಮಾನ ಮೂರುಕಾಸಿಗೆ ಹರಾಜಾದ ನಂತರ ತೇಪೆ ಹಾಕಲು ಶುರುಮಾಡಿದೆ. ದೊಡ್ಡ ಪೆಟ್ಟು ಬಿದ್ದ ನಂತರ ಮುಖ ಉಳಿಸಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡುತ್ತಿದೆ. ಈಗ ಅದು ವಿಫಲವಾದ ಮೇಲೆ ದ್ವೇಷ ಸಾಧನೆಗೆ ಕೀಳು ಮಟ್ಟಕ್ಕೆ ಇಳಿದಿದೆ. ರಾಜ್ಯದ ಮಹಾಜನತೆ ಛೀ…ಥೂ..ಅಂದ ಮೇಲೆ ಆ ಮಾಧ್ಯಮ ಈಗ ಮಾಡ್ತಿರೋದು ಏನು ಅನ್ನೋದನ್ನ ಹೇಳ್ತೀವಿ ಈ ಸ್ಟೋರಿಯಲ್ಲಿ.

ಈ ಕಥೆ ಆರಂಭದಿಂದ ಕೇಳೋಕೆ ಚೆನ್ನಾಗಿರುತ್ತೆ, ಅಂದ್ರೆ ತುಂಬಾನೇ ರೋಚಕವಾಗಿರುತ್ತೆ. ಅದಕ್ಕೆ ಇದನ್ನ ಮೊದಲಿನಿಂದಲೇ ಹೇಳೋ ಪ್ರಯತ್ನ ಮಾಡ್ತೀವಿ ನೋಡಿ. ಜನವರಿ 7, ಅಂದ್ರೆ ಶುಕ್ರವಾರ. ಕರ್ನಾಟಕದಲ್ಲಿ ಬೇರೆಯದೇ ಕಾರಣಗಳಿಂದ ಕುಖ್ಯಾತಿ ಪಡೆದಿರುವ ಆ ಟಿವಿ ನ್ಯೂಸ್ ಚಾನೆಲ್ ಆಹಾ ಶುಕ್ರದೆಸೆ ಬಂತು ಅನ್ಕೊಂಡು ಡೀಲ್​ಗೆ ಇಳಿದಿತ್ತು. ಆದರೆ ಆ ದಿನ ಅವರಿಗೆ ಶನಿಕಾಟ ಶುರುವಾಗಿತ್ತು ಅಂತಾ ಗೊತ್ತಾಗಿದ್ದು ಮಾತ್ರ ಆಮೇಲೆ. ಒಂದು ದೊಡ್ಡ ಡೀಲ್ ಮಾಡಬೇಕು ಅಂತಾ ಹಲವು ದಿನಗಳಿಂದ ಸ್ಕೆಚ್ ಮಾಡಿ ಸಾಕಷ್ಟು ಮಾಹಿತಿ ಪಡೆದು ಇದು ಆಗೇ ಆಗುತ್ತೆ ಅಂತಾ ಭರವಸೆಯಲ್ಲಿ ಫೀಲ್ಡ್​​ಗೆ ಇಳಿದಿದ್ದ ಆ ಚಾಲೆನ್​​ ಒಂದು ಪ್ರೋಮೋ ಮಾಡಿ ತನ್ನ ಚಾನೆಲ್​​ನಲ್ಲಿ ಓಡಿಸಿತ್ತು. ಅಲ್ಲದೇ ಅದನ್ನ ಸಂಬಂಧಪಟ್ಟವರಿಗೆ ಕಳಿಸಿ ಸುದ್ದಿ ಪ್ರಸಾರ ನಿಲ್ಲಿಸಬೇಕಾದರೆ ಇಂತಿಷ್ಟು ಹಣ ಕೊಡಬೇಕು ಅಂತಾ ಡೀಲ್ ಕುದುರಿಸಿತ್ತು.

ಇಷ್ಟಕ್ಕೂ ಡೀಲ್ ಕುದುರಿಸಿದ್ದು ಯಾರ ಬಳಿ ಗೊತ್ತಾ..? ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಿಲ್ ಮತ್ತು ಸುನಿಲ್ ಎಂಬುವವರದ್ದು ಕೆಲವು ಜಮೀನು ವಾಜ್ಯಗಳಿದ್ವು. ಅದಕ್ಕಾಗಿ ಅವರು ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ರು. ಇವರ ಬಳಿ ಸುಲಭವಾಗಿ ದುಡ್ಡು ಪೀಕಬಹುದು ಎಂದು ತಿಳಿದುಕೊಂಡು ಸ್ಕೆಚ್ ರೂಪಿಸಿದ ಆ ಮಾಧ್ಯಮ ಭೂ ವ್ಯಾಜ್ಯದ ಸಂಬಂಧ ಸುದ್ದಿ ಪ್ರಸಾರ ಮಾಡುವ ವಿಚಾರದಲ್ಲಿ ಡೀಲ್​ಗೆ ಮುಂದಾಗಿತ್ತು. ಹೆಣ್ಣೂರಿನ ಅನಿಲ್ ಮತ್ತು ಸುನಿಲ್ ಅವರನ್ನು ಹಣಕ್ಕಾಗಿ ಚಾನೆಲ್ ಸಿಬ್ಬಂದಿ ಪೀಡಿಸಿದ್ದರು. ಚಾನೆಲ್ ಮಾಲೀಕರ ಕುಮ್ಮಕ್ಕಿನಿಂದಲೇ ಇವೆಲ್ಲಾ ನಡೆದಿತ್ತು ಅನ್ನೋದು ಆನಂತರ ಗೊತ್ತಾಗಿದೆ. ಚಾನೆಲ್ ಸಿಬ್ಬಂದಿಯ ಕಾಟ ಹೆಚ್ಚಾದ ಹಿನ್ನಲೆಯಲ್ಲಿ ತೀರ್ಥಪ್ರಸಾದ್ ಅನ್ನುವವರನ್ನು ಹೆಣ್ಣೂರಿಗೆ ಕರೆಸಿಕೊಂಡ ಅನಿಲ್ ಮತ್ತು ಸುನಿಲ್ ಲಕ್ಷ ಲಕ್ಷ ಹಣ ಕೊಟ್ಟಿದ್ರು. ಜೊತೆಗೆ ಹಣ ಪಡೆಯುವ, ಎಣಿಸುವ ದೃಶ್ಯಗಳನ್ನು ಸೆರೆ ಹಿಡಿದಿದ್ರು. ಇದಾದ ಬಳಿಕ ಆರೋಪಿ ತೀರ್ಥಪ್ರಸಾದ್​​ನನ್ನ ಹೆಣ್ಣೂರು ಪೊಲೀಸರಿಗೆ ಒಪ್ಪಿಸಿದ್ರು. ಆನಂತರ ಅದೇ ಖಾಸಗಿ ಸುದ್ದಿ ವಾಹಿನಿ, ಸಿಕ್ಕಿಬಿದ್ದವನು ತನ್ನ ಉದ್ಯೋಗಿಯೇ ಅಲ್ಲ ಎಂದು ಬಿಂಬಿಸಲು ಸಿಕ್ಕಾಪಟ್ಟೆ ಹೆಣಗಾಡಿತ್ತು. ಅಂದ ಹಾಗೆ ಆ ಖಾಸಗಿ ಚಾನೆಲ್ ಈ ಸುದ್ದಿ ಪ್ರಸಾರ ಮಾಡಲು ಎಂಎಲ್​​​ಸಿ ರಮೇಶ್ ಗೌಡನೇ ಕಾರಣ ಅನ್ನೋ ಸುದ್ದಿಗಳೂ ಹರಿದಾಡುವಂತೆ ಮಾಡಿತ್ತು.

ಆದರೆ ಹಣ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ತೀರ್ಥಪ್ರಸಾದ್ ಸಿಕ್ಕಿಬಿದ್ದಿದ್ದ ಜೊತೆಗೆ ಆಡಿಯೋ, ವಿಡಿಯೋ ದಾಖಲೆಗಳು ಸಾಕಷ್ಟಿತ್ತು. ಹೀಗಿದ್ದಾಗ ಆತನನ್ನ ಬಿಡೋದಾದ್ರೂ ಹೇಗೆ? ಒಂದು ವೇಳೆ ಸರಿಯಾದ ದಾಖಲೆಗಳು ಇಲ್ಲದೇ ಇದ್ದಿದ್ರೆ ಆ ಖಾಸಗಿ ಸುದ್ದಿವಾಹಿನಿ ರುದ್ರ ತಾಂಡವ ಆಡ್ತಿತ್ತೇನೋ. ಆದರೆ ಎಲ್ಲಾ ದಾಖಲೆಗಳು ಪಕ್ಕಾ ಇದ್ದಿದ್ದರಿಂದ ಅವರ ರಾಜಕೀಯ ಒತ್ತಡ ಕೆಲಸ ಮಾಡಲಿಲ್ಲ. ಅಲ್ಲದೆ ಈ ವೇಳೆ ಹೆಣ್ಣೂರು ಪೊಲೀಸರು ಆರೋಪಿ ವಿರುದ್ಧ FIR ದಾಖಲಿಸಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ದೂರುದಾರರು ಠಾಣೆ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ರು. ಹಾಗಾಗಿ ಬೇರೆ ದಾರಿಯಿಲ್ಲದೆ ಪೊಲೀಸರು ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ರು. ಯಾವಾಗ ಎಲ್ಲಾ ನೀಟಾಗಿ ಸಾಬೀತಾಗೋಯ್ತೋ ಆಗ ಆ ಸುದ್ದಿವಾಹಿನಿ ಹೊಸ ಕತೆಯನ್ನ ಶುರುವಿಟ್ಟುಕೊಂಡಿತ್ತು. ಆ ಕತೆ ಏನು ಅಂತಾ ಆಮೇಲೆ ನೋಡೋಣ. ಅದಕ್ಕೂ ಮೊದಲು ಈ ಪ್ರಕರಣದಲ್ಲಿ ಇನ್ನೂ ಹೇಳೋ ವಿಷಯ ಸಾಕಷ್ಟಿದೆ. ಅದನ್ನ ನೋಡೋಣ ಬನ್ನಿ.

ಬಗೆದಷ್ಟು ಹೊರಬಂದಿತ್ತು ಬಿಟಿವಿ ರಹಸ್ಯ; ಪ್ರಕರಣದಲ್ಲಿ ಹಲವು ಸಿಬ್ಬಂದಿ ಶಾಮೀಲು
ಬಿಟಿವಿ ಸಿಬ್ಬಂದಿ ಸಿಕ್ಕಿಹಾಕಿಕೊಂಡ ನಂತರ ಆ ಡೀಲ್ ಪ್ರಕರಣ ಹಲವು ರೂಪಗಳನ್ನ ಪಡೆದುಕೊಳ್ತು. ಆ ಡೀಲಲ್ಲಿ ಒಬ್ಬ ಉದ್ಯೋಗಿ ತೀರ್ಥಪ್ರಸಾದ್​ನನ್ನ ಮಾತ್ರ ಬಲಿಪಶು ಮಾಡಿದ್ರು. ಆದರೆ ಡೀಲ್ ಹಿಂದೆ ಸಾಕಷ್ಟು ಹೆಸರಗಳು ಇದ್ವು. ಅವರೆಲ್ಲಾ ಯಾರು? ಏನೇನು ಮಾಡಿದ್ರು ಅನ್ನೋದು ಕನ್ನಡದ ಎಲ್ಲಾ ಮಾಧ್ಯಮಗಳಿಗೂ ಗೊತ್ತಿದ್ರೂ ಸಹ ಒಂದೆರಡು ಚಾನೆಲ್ಸ್​ ಬಿಟ್ರೆ ಉಳಿದ ಯಾರೂ ಅದನ್ನ ಪ್ರಸಾರ ಮಾಡುವ ಧೈರ್ಯ ಮಾಡಲಿಲ್ಲ. ಆದರೆ ಧೈರ್ಯದಿಂದ ಎಲ್ಲಾ ದಾಖಲೆಗಳ ಸಮೇತ ಹೆಜ್ಜೆ ಇಟ್ಟಿದ್ದು ನಮ್ಮ ಪವರ್ ಟವಿ ಮಾತ್ರ. ಯಾಕಂದ್ರೆ ಪವರ್ ಟಿವಿ ಸುಖಾಸುಮ್ಮನೆ ಸುದ್ದಿ ಮಾಡಲ್ಲ, ಮಾಡಿದ್ರೆ ಅದರ ಸಂಪೂರ್ಣ ಚಿತ್ರಣ ಜನರಿಗೆ ತೋರಿಸದೇ ಬಿಡಲ್ಲ. ಎಲ್ಲರೂ ಹೇಳಿದಂತೆ ಯಾರೋ ಖಾಸಗಿ ವಾಹಿನಿ ಸಿಬ್ಬಂದಿ ಡೀಲ್ ಮಾಡಿ ಸಿಕ್ಕಿಬಿದ್ದ ಎಂದು ಹೇಳಿ ಸುಮ್ಮನಾದ್ರೆ ನಾವು ಜನರಿಗೆ ಏನು ಸುದ್ದಿ ಕೊಟ್ಟಂತೆ. ಅದರ ಕತೆಯೇನು? ಯಾರು ಏನ್ ಮಾಡಿದ್ರು? ಪ್ರಕರಣದ ಹಿನ್ನೆಲೆ ಏನು? ಮುಖವಾಡ ಹಾಕಿಕೊಂಡು ಬದುಕುತ್ತಿರುವ ಪತ್ರಕರ್ತರ ನಿಜಸ್ವರೂಪ ಏನು ಅನ್ನೋದನ್ನ ಹೇಳಬೇಕಲ್ಲವೇ? ಆ ಕೆಲಸವನ್ನ ನಿರ್ಭೀತಿಯಿಂದ ಮಾಡಿದ್ದೇ ಪವರ್ ಟಿವಿ.

ನಿಮ್ಮ ನೆಚ್ಚಿನ ಪವರ್ ಟಿವಿ ನ್ಯೂಸ್ ಚಾನೆಲ್​​​ ಪ್ರೈಮ್​​​​ ಟೈಮಲ್ಲಿ ಬಿಟಿವಿಯ ಬಂಡವಾಳವನ್ನ ಬಯಲು ಮಾಡಿತ್ತು. ಆಗಿನವರೆಗೂ ರಾಜ್ಯದ ಜನತೆಗೆ ಗೊತ್ತಿದ್ದ ಹೌದೋ ಅಲ್ವೋ ಅನ್ನುವಂಥ ಸುದ್ದಿಯನ್ನ ಸಂಪೂರ್ಣ ದಾಖಲೆಗಳ ಸಮೇತ ಪವರ್ ಟಿವಿಯ ಮ್ಯಾನೇಜಿಂಗ್ ಡೈರೆಕ್ಟರ್​​ ರಾಕೇಶ್ ಶೆಟ್ಟಿ ಬಯಲು ಮಾಡಿದ್ರು. ಪ್ರೈಮ್​​​ ಟೈಮ್​​​ನಲ್ಲಿ ಕುಳಿತು ಚರ್ಚೆ ಮಾಡುವ ಮೂಲಕ ಆ ಡೀಲ್​​ನ ಪಾತ್ರಧಾರಿಗಳು ಯಾರು? ಸೂತ್ರಧಾರಿಗಳು ಯಾರು? ಯಾವಾಗ ಏನೇನ್ ಆಯ್ತು ಅನ್ನೋದನ್ನ ಆಡಿಯೋ, ವಿಡಿಯೋ ದಾಖಲೆಗಳ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ರು. ಆಗಷ್ಟೇ ಈ ಒಂದು ಪ್ರಕರಣ ಎಷ್ಟು ದೊಡ್ಡದು? ಅದರಲ್ಲಿ ಯಾರೆಲ್ಲಾ ಇದ್ದಾರೆ? ಒಂದು ಚಾನೆಲ್ ಹೀಗೆಲ್ಲಾ ಮಾಡುತ್ತಾ ಅಂತಾ ಜನರಿಗೆ ಗೊತ್ತಾಗಿದ್ದು.

ಸದ್ಯ ಸುದ್ದಿ ಪ್ರಸಾರ ನಿಲ್ಲಿಸಲು ಹಣಕ್ಕೆ ಬೇಡಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಟಿವಿ ನ್ಯೂಸ್ ಚಾನೆಲ್​​​​ನ ನಾಲ್ವರು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಮೊದಲನೇ ಆರೋಪಿ ತೀರ್ಥಪ್ರಸಾದ್ ಎಂಬಾತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದರು. ಆನಂತರ ಸುದ್ದಿ ವಾಹಿನಿಯ MD ವಿರುದ್ಧವೂ ದೂರುದಾರರು ಆರೋಪ ಮಾಡಿದ್ರು. ಹಾಗಾಗಿ ಅದೇ ಸುದ್ದಿವಾಹಿನಿಯ ಎಂಡಿ ಎರಡನೇ ಆರೋಪಿ. ಮತ್ತೊಬ್ಬ ಸಿಬ್ಬಂದಿ, ಅಲ್ಲಿನ CEO ಶಿವಸ್ವಾಮಿಯನ್ನು ಮೂರನೇ ಆರೋಪಿಯಾಗಿ ಎಫ್ಐಆರ್ ದಾಖಲಿಸಲಾಗಿತ್ತು. ಅಲ್ಲದೆ ನಾಲ್ಕನೇ ಹಾಗೂ ಐದನೇ ಆರೋಪಿಗಳಾಗಿ MLC ರಮೇಶ್ ಗೌಡ, ಶ್ರೀಧರ್ ಹೆಸರುಗಳನ್ನ ದಾಖಲಿಸಲಾಗಿದೆ. ಇವೆರಲ್ಲರಿಗೂ ಈಗ ಬಂಧನದ ಸಂಕಷ್ಟ ಎದುರಾಗಿದೆ. ಪವರ್ ಟಿವಿ ದಾಖಲೆ ಸಮೇತ ಹಲವು ಪತ್ರಕರ್ತರ ಮುಖವಾಡವನ್ನ ಕಳಚಿತ್ತು. ಹಾಗಾಗಿ ಆ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುವ ಪ್ರಮುಖ ಪತ್ರಕರ್ತರಿಗೆ ಸಂಕಷ್ಟ ಎದುರಾಗಿದೆ. ದಾಖಲೆಗಳು ಪಕ್ಕಾ ಇರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳವ ಸಾಧ್ಯತೆ ದಟ್ಟವಾಗಿದೆ.

ಬಿಟಿವಿ ಸಿಬ್ಬಂದಿ ಬಳಿ ಸಿಕ್ಕಿತ್ತು ಕಂತೆ ಕಂತೆ ಹಣ; ನೇರವಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆರೋಪಿ
ಅಂದು ಹಣ ಕೊಡ್ತೀವಿ ಎಂದು ಅನಿಲ್ ಮತ್ತು ಸುನೀಲ್ ಹೇಳಿದ ತಕ್ಷಣ ಬಿಟಿವಿ ಖುಷಿಯಿಂದಲೇ ಒಬ್ಬ ಉದ್ಯೋಗಿಯನ್ನ ವಸೂಲಿಗೆ ಕಳುಹಿಸಿತ್ತು. ಗೊತ್ತಿರುವ ಮುಖಗಳು ವಸೂಲಿಗೆ ಹೋದರೆ ಸರಿಯಾಗಲ್ಲ ಅಂತಾ ವಿಡಿಯೋ ಎಡಿಟಿಂಗ್ ವಿಭಾಗದಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನ ಡೀಲ್​​​ಗೆ ಕಳುಹಿಸಿತ್ತು. ಆದರೆ ಈ ವ್ಯಕ್ತಿಯ ಹಿಂದೆ ಡೀಲ್ ಕುದುರಿಸಿದ್ದ ಕಾಣದ ಕೈಗಳು ಬೇರೆಯವೇ ಇದ್ವು. ಆದರೆ ಹಣ ಪಡೆಯಲು ಆಸೆಯಿಂದ ಹೋದ ತೀರ್ಥಪ್ರಸಾದ್ ಸಿಕ್ಕಿಬಿದ್ದಿದ್ದ. ಸುದ್ದಿ ಪ್ರಸಾರ ತಡೆಗೆ 25 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು, 8 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ತೀರ್ಥಪ್ರಸಾದ್ ಹೆಣ್ಣೂರು ಠಾಣೆ ಪೊಲೀಸರಿಗೆ ನೇರವಾಗಿ ಸಿಕ್ಕಿಬಿದ್ದಿದ್ದ. ಅಲ್ಲದೆ ಈ ಪ್ರಕರಣದಲ್ಲಿ ಕೆಲಸ ಮಾಡಿದ ಕಾಣದ ಕೈಗಳ ವಿರುದ್ಧವೂ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384, 504, 506 ಮತ್ತು 34 ಅಡಿ ಪ್ರಕರಣ ದಾಖಲಾಗಿದೆ.

ಖಾಸಗಿ ಸುದ್ದಿ ವಾಹಿನಿ ಬಿಟಿವಿಯವರು ಸೊಣ್ಣಪ್ಪ ಅಂಡ್ ಸನ್ಸ್ ವಿರುದ್ಧ ಸುದ್ದಿ ಮಾಡಿ ಹಣ ಹೊಡೆಯಲೇ ಬೇಕು ಅಂತಾ ಪ್ಲ್ಯಾನ್ ಮಾಡಿದ್ರು. ಅದಕ್ಕಾಗಿಯೇ 420 ಸೊಣ್ಣಪ್ಪ ಅಂಡ್ ಸನ್ಸ್ ಮರಳು ಮಾಫಿಯಾ ಡಾನ್​ಗಳು ಎಂಬ ಶೀರ್ಷಿಕೆಯಡಿ ಪ್ರೋಮೋ ಸಿದ್ಧಮಾಡಿದ್ರು. ಅದೇ ಪ್ರೋಮೋವನ್ನ ಅನಿಲ್ ಮತ್ತು ಸುನಿಲ್ ಸಹೋದರರಿಗೆ ಕಳಿಸಿ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿದ್ರು. ಸುದ್ದಿ ನಿಲ್ಲಿಸಬೇಕಾದ್ರೆ ಮಾತನಾಡಿ ಸೆಟಲ್ ಮಾಡಿಕೊಳ್ಳಿ ಅಂತಾ ಹೇಳಿದ್ರು. ಆಗ ಮುಖಾಮುಖಿ ಭೇಟಿಯಾಗಿ ಮಾತನಾಡಿದ ವೇಳೆ ಮರಳು ಮಾಫಿಯಾ ಮಾಡುವುದರ ಬಗ್ಗೆ ಸುದ್ದಿ ಮಾಡಲಾಗುತ್ತಿದ್ದು, 25 ಲಕ್ಷ ರೂಪಾಯಿ ಕೊಟ್ಟರೆ ಸುದ್ದಿ ಪ್ರಸಾರ ನಿಲ್ಲಿಸಲಾಗುವುದು. ಇಲ್ಲದಿದ್ದರೆ ನಿಮ್ಮ ಮಾನಹಾನಿ ಮಾಡಲಾಗುವುದು ಎಂದು ಅನಿಲ್ ಅವರಿಗೆ ಬಿಟಿವಿ ಬೆದರಿಕೆ ಹಾಕಿತ್ತು. ಜನವರಿ 5ರಂದು ರಾತ್ರಿ ಹೋಟೆಲ್ ಉಡುಪಿ ಗಾರ್ಡನ್​​​ನಲ್ಲಿ ಭೇಟಿಯಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ರು. ಇದಕ್ಕೆ ಅನಿಲ್ ನಿರಾಕರಿಸಿದಾಗ ಪದೇ ಪದೇ ಸುದ್ದಿ ಪ್ರಸಾರ ಮಾಡಿ ಮಾನಹಾನಿ ಮಾಡುವುದಾಗಿ ಭೀತಿ ಹುಟ್ಟಿಸಿದ್ದಾರೆ. ಅಲ್ಲದೇ, ತೀರ್ಥ ಪ್ರಸಾದ್, ಕುಮಾರ್ ಎಂಬುವರಿಗೆ ಇನ್ನಿತರ ಆರೋಪಿಗಳೊಂದಿಗೆ ಕಾನ್ಫರೆನ್ಸ್​ ಕರೆ ಮಾಡಿ ಮಾತನಾಡಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಮಾತನಾಡಿ, ಮರಳು ಮಾರಾಟ ಮಾಡುತ್ತಿರುವುದಕ್ಕೆ ಇದುವರೆಗೆ 2 ಕೋಟಿ ರು. ದಂಡ ಹಾಕಿಸಲಾಗಿದ್ದು, ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದರು.

25 ಲಕ್ಷದಲ್ಲಿ ಒಂದಷ್ಟು ಹಣ ಹೊಂದಿಸಿಕೊಂಡಿದ್ದ ಅನಿಲ್ ಮತ್ತು ಸಹೋದರರು ಅದನ್ನ ಬಿಟಿವಿ ಸಿಬ್ಬಂದಿ ತೀರ್ಥಪ್ರಸಾದ್​ಗೆ ಕೊಡುವ ವೇಳೆ ವಿಡಿಯೋ ಮಾಡಿಕೊಂಡಿದ್ರು. ಅಲ್ಲದೆ ಅಲ್ಲಿಗೆ ಹೆಣ್ಣೂರು ಪೊಲೀಸರನ್ನೂ ಕರೆಸಿ ರೆಡ್ ಹ್ಯಾಂಡ್ ಆಗಿ ಹಣದ ಕಂತೆಗಳ ಜೊತೆ ಹಿಡಿದುಕೊಟ್ಟಿದ್ರು. ಆ ಮೂಲಕ ಭರವಸೆಯ ಬೆಳಕಾಗಬೇಕಾಗಿದ್ದ ಮಾಧ್ಯಮ ಉದ್ಯೋಗಿಯೊಬ್ಬ ಬೆಳಕಿಲ್ಲದ ಕಡೆ ಹೋಗಿದ್ದ. ಅದರ ಜೊತೆಗೆ ಆ ಸುದ್ದಿವಾಹಿನಿಯೂ ಸಹ ಕತ್ತಲೆಯೆಡೆಗೆ ಕರೆದೊಯ್ದು ಆ ಉದ್ಯೋಗಿಗೆ ಬೆಳಕೇ ಇಲ್ಲದಂತೆ ಮಾಡಿಬಿಟ್ಟಿದೆ.

ರಾಜ್ಯದಾದ್ಯಂತ ಮಾನ ಮರ್ಯಾದೆ ಹರಾಜಾದ ಮೇಲೆ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಬಿಟಿವಿ ತಮ್ಮ ಮೇಲೆ ಸುದ್ದಿ ಮಾಡಿದವರ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದೆ. ಆದರೆ ಅದರಿಂದ ಮತ್ತೆ ಬಿಟಿವಿ ಉದ್ಯೋಗಿಗಳೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದು ಹೇಗೆ ಅನ್ನೋದನ್ನು ಹೇಳ್ತೀವಿ.

ಇಂದು ನಾವಲ್ಲ, ನಮ್ಮದಲ್ಲ, ನಮಗೇನೂ ಗೊತ್ತಿಲ್ಲ ಎನ್ನುತ್ತಿರುವವರ ಡೀಲ್ ಕರ್ಮಕಾಂಡವನ್ನ ಇಡೀ ರಾಜ್ಯವೇ ನೋಡಿತ್ತು.. ರಾಜ್ಯದ ಸುದ್ದಿ ಮಾಧ್ಯಮಗಳೂ ಇವರ ಡೀಲ್ ವೃತ್ತಾಂತವನ್ನ ರಾಜ್ಯದ ಜನತೆ ಮುಂದೆ ತೆರೆದಿಟ್ಟಿದ್ವು. ಆದರೆ ರಾಜ್ಯದಾದ್ಯಂತ ಇವರ ಸುದ್ದಿ ಪ್ರಸಾರ ಆಗಿ ಮಾನ ಮರ್ಯಾದೆ ಹರಾಜಾದ ನಂತರ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಬಿಟಿವಿ ತನ್ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯನ್ನೇ ಸಂಪೂರ್ಣ ದೋಷಿಯಾಗಿ ಮಾಡಿಬಿಡ್ತು. ದುಡ್ಡು ವಸೂಲಿ ಮಾಡಿದ ತೀರ್ಥಪ್ರಸಾದ್​ಗೂ ನಮಗೂ ಯಾವುದೇ ಸಂಬಂಧ ಇಲ್ಲ ಅಂತಾ ಹೇಳಿದ್ರು. ಪೊಲೀಸರು ಬಂಧಿಸಿರುವ ತೀರ್ಥಪ್ರಸಾದ್ ಬಿಟಿವಿಯಲ್ಲಿ ಕೆಲಸ ಬಿಟ್ಟು 20 ದಿನಗಳಾಗಿವೆ ಎಂದು ಹೇಳಿ ಕೈ ತೊಳೆದುಕೊಳ್ಳುವ ಪ್ರಹಸನವೂ ನಡೆದುಹೋಯ್ತು.

ಈ ಪ್ರಕರಣದಲ್ಲಿ ಬಿಟಿವಿಯನ್ನು ತಳಕು ಹಾಕುವುದು ಸರಿಯಲ್ಲ. ಆತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನಾವೇ ದೂರು ನೀಡಿದ್ದೇವೆ ಎಂದು ಬಿಟಿವಿ ಸ್ಪಷ್ಟಪಡಿಸಿತ್ತು. ಆದರೆ ದೂರುದಾರರ ಪ್ರಕಾರ, ತೀರ್ಥಪ್ರಸಾದ್ ಜೊತೆಗೆ ಬಿಟಿವಿ ಸಿಇಒ ಶಿವಸ್ವಾಮಿ ಜೊತೆಗೇ ಡೀಲ್ ಕುರಿತು ಮಾತನಾಡಿದ ದಾಖಲೆಗಳು ಸಹ ಬಹಿರಂಗಗೊಂಡಿವೆ. ಉದ್ಯೋಗಿ ಅಲ್ಲದವನ ಜೊತೆ ಸಿಇಒ ಶಿವಸ್ವಾಮಿ FPC ಬಗ್ಗೆ ಚರ್ಚೆ ಮಾಡೋದು, ಎಷ್ಟೊತ್ತಿಗೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂಬುದನ್ನ ಅದ್ಹೇಗೆ ಚರ್ಚೆ ನಡೆಸಲು ಸಾಧ್ಯ ಎಂಬ ಪ್ರಶ್ನೆಗಳು ಎದುರಾದವು. ಹಾಗಾಗಿ ಬಿಟಿವಿ ಹೇಳಿದ್ದು ಕಾಗಕ್ಕ-ಗುಬ್ಬಕ್ಕನ ಕತೆ ಅನ್ನೋದು ಸ್ಪಷ್ಟವಾಗಿ ಹೋಗಿದೆ.

ಸೋ.. ತೀರ್ಥಪ್ರಸಾದ್ ನಮ್ಮ ಉದ್ಯೋಗಿ ಅಲ್ಲ ಅಂದಿದ್ದು ಯಾಕೆ ಈ ತರ ಸುಳ್ಳು ಹೇಳಿದ್ದು ಯಾಕೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಡ್ಯಾಮೇಜ್ ಕಂಟ್ರೋಲ್​​ಗೆ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಲಿಲ್ಲ. ಹಾಗಾದ್ರೆ ಮುಂದೆ ಮಾಡೋದೇನು.? ಮಾಡೋಕೆ ಏನೂ ಇಲ್ಲ. ಎಲ್ಲಾ ಖುಲ್ಲಂಖುಲ್ಲ ದಾಖಲೆ ಸಮೇತ ಸಿಕ್ಕಿಬಿದ್ದಾಗಿದೆ. ಧೈರ್ಯ ಇದ್ದೋರು ನಿರ್ಭೀತಿಯಿಂದ ಸುದ್ದಿ ಮಾಡಿದ್ದೂ ಆಗಿದೆ. ಹೇಗೂ ಮಾನ ಮರ್ಯಾದೆ ಹರಾಜು ಆದದ್ದಾಯ್ತು. ತಮ್ಮ ವಿರುದ್ಧ ಸುದ್ದಿ ಮಾಡಿದವರ ವಿರುದ್ಧವಾದ್ರೂ ಸೇಡು ತೀರಿಸಿಕೊಳ್ಳಬೇಕಲ್ಲ. ಅದಕ್ಕಾಗಿ ಸುಳ್ಳುಗಳನ್ನ ತಯಾರು ಮಾಡಲೆಂದು, ಅದನ್ನ ಹರಿಬಿಡಲು ಹಾಗೂ ಪ್ರಚಾರ ಮಾಡಲು ಬಿಟಿವಿಯಲ್ಲಿ ಒಂದು ಟೀಮ್​​ ಸಿದ್ಧವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಬಂದ್ರೆ ಜನ ನಂಬ್ತಾರೆ ಅನ್ನೋ ಅಪನಂಬಿಕೆಯಲ್ಲಿ ಬಿಟಿವಿ ಒಂದು ದೊಡ್ಡ ಸುಳ್ಳನ್ನ ಸತ್ಯ ಮಾಡಲು ಹೊರಟಿತ್ತು. ಆದರೆ ಅದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ದಾಖಲೆ ಇಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿರುವವರನ್ನ ಜನರೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಸಂಸ್ಥೆ ಹೇಳಿದಂತೆ ಸುಳ್ಳು ಸುದ್ದಿ ಹಬ್ಬಿಸಿ ಪೇಚಿಗೆ ಸಿಲುಕಿದ ಸಿಬ್ಬಂದಿ; ದಾಖಲೆ ಇಲ್ಲದೆ ಬಾಯಿಗೆ ಬಂದಂತೆ ಮಾತಾಡಿ ಟ್ರೋಲ್ ಆದ ಬಿಟಿವಿ

ಕಾಲ ಬದಲಾಗಿದೆ. ಜನರು ಬದಲಾಗಿದ್ದಾರೆ. ಈಗ ದಾಖಲೆ ಇಲ್ಲದೆ ಬಾಯಿ ಮಾತಲ್ಲಿ ಹೇಳುವ ಸುಳ್ಳುಗಳಿಗೆ ಬೆಲೆ ಇಲ್ಲ ಅನ್ನೋದನ್ನ ಒಂದು ಜವಾಬ್ದಾರಿಯುತ ಮಾಧ್ಯಮ ಅರ್ಥಮಾಡಿಕೊಳ್ಳಬೇಕು. ಇಲ್ಲವಾದರೆ ಇಡೀ ರಾಜ್ಯ ಕ್ಯಾಕರಿಸಿ ಉಗಿಯೋ ಸುದ್ದಿ ನಿಮ್ಮದೇ ಆಗಿ ಬಿಡುತ್ತೆ. ಈಗಾಗಲೇ ಅನಗತ್ಯ ಸುದ್ದಿಗಳನ್ನ ದೊಡ್ಡದಾಗಿ ಮಾಡಿ ರಾಜ್ಯದ ಜನತೆ ಕೈಲಿ ಹಲವು ಬಿರುದುಗಳನ್ನ ಪಡೆದುಕೊಂಡಿರುವ ಬಿಟಿವಿ, ಈಗ ನಿರ್ಭೀತಿಯಿಂದ ತನ್ನ ಬಂಡವಾಳ ಬಯಲು ಮಾಡಿದ ಸುದ್ದಿ ಮಾಧ್ಯಮಗಳ ವಿರುದ್ಧವೂ ಕಂಪ್ಲೈಂಟ್ ಕೊಟ್ಟು ಮತ್ತಷ್ಟು ಉಗಿಸಿಕೊಂಡಿದೆ. ಅಲ್ಲದೆ ದಾಖಲೆ ಸಮೇತ ಸುದ್ದಿ ಮಾಡಿದ ಪವರ್ ಟಿವಿ ವಿರುದ್ಧ ಅಪಪ್ರಚಾರ ಮಾಡಲು ಹೋಗಿ ಟ್ರೋಲ್ ಆಗುತ್ತಿದೆ. ತನ್ನ ಸಂಸ್ಥೆ ಹೇಳಿದಂತೆ ಅಲ್ಲಿನ ಕೆಲವು ಉದ್ಯೋಗಿಗಳು ಆಧಾರರಹಿತವಾಗಿ ಪವರ್ ಟಿವಿ ಬಗ್ಗೆ ಕಟ್ಟುಕತೆಯನ್ನ ಬರೆದು ತಮ್ಮ ಸೋಷಿಲ್ ಮೀಡಿಯಾ ವಾಲ್​​ಗಳಲ್ಲಿ ಪ್ರಕಟಿಸಿದ್ರು. ಆದಕ್ಕೆ ಬಂದಿರುವ ಕಮೆಂಟ್​ಗಳನ್ನ ನೋಡಿ ಕೆಲವರು ಆ ಪೋಸ್ಟ್​ಗಳನ್ನೇ ಡಿಲೀಟ್ ಮಾಡಿದ್ದಾರೆ. ಆ ಮಟ್ಟಿಗೆ ನಿರ್ಭೀತ ಮಾಧ್ಯಮ ಪವರ್ ಟಿವಿಗೆ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ಈ ರೀತಿ ಕಟ್ಟುಕತೆಗಳನ್ನ ಹಬ್ಬಿಸೋದೆ ನಿಮ್ಮ ಕೆಲಸ ಅಂತಾ ಜನರು ಬಿಟಿವಿಯನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿರ್ಭೀತ, ತನಿಖಾ ಸುದ್ದಿ ಮಾಡುವ ವಿಚಾರದಲ್ಲಿ ಪವರ್ ಟಿವಿಯ ಪವರ್ ಎಂತದ್ದು ಅಂತಾ ರಾಜ್ಯದ ಜನತೆ ಜೊತೆಗೆ ಬಿಟಿವಿ ಸಿಬ್ಬಂದಿಗೂ ಗೊತ್ತಿದೆ. ಆದರೆ ಯಾರದ್ದೋ ಮರ್ಜಿಗೆ ಬಿದ್ದು ಪವರ್ ಟಿವಿ ವಿರುದ್ಧ ಪೋಸ್ಟ್​ಗಳನ್ನ ಹಾಕಿದ ಕೆಲವು ಉದ್ಯೋಗಿಗಳು ಪೇಚಿಗೆ ಸಿಲುಕಿದ್ದಾರೆ. ಇತ್ತೀಚೆಗಷ್ಟೇ ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ ಮಾಡಿ ಉಗಿಸಿಕೊಂಡೇ ಫೇಮಸ್ ಆಗಿರುವ ದಿವ್ಯಾ ವಸಂತ ಸಹ ಪವರ್ ಟಿವಿ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಹಾಕಿದ್ರು. ಅದರಲ್ಲಿರುವ ಕಮೆಂಟ್ ಎಲ್ಲವನ್ನೂ ನೋಡಿದ್ರೆ ಸಾಕು, ಯಾರ ಬಂಡವಾಳ ಏನು? ಪವರ್ ಟಿವಿ ಏನು ಅಂತಾ ಎಲ್ಲರಿಗೂ ಗೊತ್ತಾಗಿ ಬಿಡುತ್ತೆ. ಹೀಗೆ ಆಧಾರ ರಹಿತ ಸುದ್ದಿ ಹಬ್ಬಿಸುತ್ತಿರುವ ಬಿಟಿವಿ ಉದ್ಯೋಗಿಗಳನ್ನ ಜನರೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೆಂತಾ ನಾಲಾಯಕ್ ಕೆಲಸ ಅಂತಾ ಮಂಗಳಾರತಿ ಮಾಡಿದ್ದಾರೆ. ಇನ್ನು ಸದಾ ದಾಖಲೆ ಸಮೇತ ಸುದ್ದಿ ಪ್ರಸಾರ ಮಾಡಿ ರಾಜ್ಯದ ಜನರ ಮನಗೆದ್ದಿರುವ ಪವರ್ ಟಿವಿ ಸಹ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಬಿಗ್ ಶಾಕ್ ಕೊಟ್ಟಿದೆ. ಯಾರದ್ದೋ ಮಾತು ಕೇಳಿ ಯಾಕಪ್ಪ ಹೀಗೆ ಮಾಡಿದ್ವಿ ಅಂದುಕೊಳ್ಳುವಂತೆ ಮಾಡಿದೆ.

ಸುಳ್ಳು ಸುದ್ಧಿ ಹಬ್ಬಿಸಿದರೆ ಅದು ಸತ್ಯ ಆಗುತ್ತಾ ಮಾನಗೆಟ್ಟವರೇ..?; ಸುಳ್ಳು ಸುದ್ದಿ ವೀರರ ವಿರುದ್ಧ ಪವರ್ ಟಿವಿಯಿಂದ ಕಂಪ್ಲೆಂಟ್; ಸಚಿವ S.T.ಸೋಮಶೇಖರ್ ಪುತ್ರನ ಬ್ಲ್ಯಾಕ್ ಮೇಲ್ ಕೇಸ್; ಪ್ರಕರಣ ಸಂಬಂಧ ಸಿಸಿಬಿಯಿಂದ BTV MD ಕುಮಾರ್ ವಿಚಾರಣೆ

ತಮ್ಮ ಭ್ರಷ್ಟಾಚಾರವನ್ನ ಎಳೆಎಳೆಯಾಗಿ ಬಯಲು ಮಾಡಿದ ಪವರ್ ಟಿವಿ ವಿರುದ್ಧ ಸೇಡು ತೀರಿಸಿಕೊಳ್ಳಲು ಬಿಟಿವಿ ಅಸಹ್ಯದ ದಾರಿಯನ್ನ ಹಿಡಿದಿದೆ. ಯಾವುದೇ ದಾಖಲೆ ಇಲ್ಲದೆ ಸಂಬಂಧವಿಲ್ಲದ ಪ್ರಕರಣದಲ್ಲಿ ಪವರ್ ಟಿವಿ ಮತ್ತು MD ರಾಕೇಶ್ ಶೆಟ್ಟಿಯವರ ಹೆಸರು ಸೇರಿಸಲು ಪ್ರಯತ್ನಿಸುತ್ತಿದೆ. ನಮಗೆ ಸಂಬಂಧವೇ ಇಲ್ಲದ ಸಚಿವ S.T. ಸೋಮಶೇಖರ್ ಪುತ್ರನ ಬ್ಲಾಕ್ ಮೇಲ್ ಪ್ರಕರಣದಲ್ಲಿ ಪವರ್ ಟಿವಿಯನ್ನ ಅನಗತ್ಯವಾಗಿ ಎಳೆದು ತರುವ ಪ್ರಯತ್ನ ನಡೆಸಿದ್ದಾರೆ. ಸುಳ್ಳು ಸುದ್ದಿಯಿಂದ ಕಾನೂನಾತ್ಮಕವಾಗಿ ಏನೂ ಮಾಡಲು ಸಾಧ್ಯವಿಲ್ಲ ಅನ್ನೋದು ಗೊತ್ತಾಗಿ ಅದೇ ಸುಳ್ಳು ಸುದ್ದಿಯನ್ನ ತನ್ನ ಸಿಬ್ಬಂದಿ ಮೂಲಕ ಹರಡುವ ಪ್ರಯತ್ನ ಮಾಡುತ್ತಿದೆ. ಯಾವುದೋ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನ ಎಡಿಟ್ ಮಾಡಿ ಇಮೇಜ್ ಡ್ಯಾಮೇಜ್ ಮಾಡುವ ಚೀಪ್ ಕೆಲಸಗಳನ್ನ ಮಾಡುತ್ತಿದೆ. ಆದರೆ ಸೋಮಶೇಖರ್​ ಪುತ್ರನ ಬ್ಲ್ಯಾಕ್ ​ಮೇಲ್​ ಪ್ರಕರಣದಲ್ಲಿ ನಿಜಕ್ಕೂ ಇರೋದು ಯಾರು ಅನ್ನೋದು ಕೆಲವೇ ದಿನಗಳಲ್ಲಿ ಹೊರಬರುವ ಸಾಧ್ಯತೆ ಇದೆ. ಯಾಕಂದ್ರೆ ಯಾರಿಗೂ ಮಾಹಿತಿಯೇ ಇಲ್ಲದಿದ್ದಾಗ ಸಚಿವ ಸೋಮಶೇಖರ್​ ಪುತ್ರನ ವಿರುದ್ಧ ಡಿಸೆಂಬರ್ ಕೊನೇ ವಾರದಲ್ಲಿ ಪ್ರೋಮೋ ಮಾಡಿ ಓಡಿಸಿದ್ದು ಇದೇ ಬಿಟಿವಿ. ಹಾಗಾಗಿ ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು ಎಂಬಂತೆ ಈ ಪ್ರಕರಣದಲ್ಲಿ ಆಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ BTV ಎಂಡಿ ಜಿ.ಎಂ.ಕುಮಾರ್​ ಅವರನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದರ ಹಿಂದಿರುವ ಮರ್ಮ ಇನ್ನಷ್ಟೇ ಹೊರಬರಬೇಕಿದೆ. ಈ ಪ್ರಕರಣದಲ್ಲಿ BTV MD ಜಿ.ಎಂ.ಕುಮಾರ್ ಪಾತ್ರವೇನಾದರೂ ಇದೆಯಾ ಎಂಬ ಅನುಮಾನವೂ ಕಾಡುತ್ತಿದೆ.

ಬಿಟಿವಿ ಈಗ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಲ್ಲಿ ಒಂದು ಚೂರಾದ್ರೂ ನಿಜ ಇದ್ದಿದ್ದರೆ ಅವರು ಕಾನೂನು ಹೋರಾಟಕ್ಕೆ ಮುಂದಾಗ್ತಾ ಇದ್ರು. ಆದರೆ ಇದು ಸುಳ್ಳು ಸುದ್ದಿ ಆಗಿರೋದ್ರಿಂದಲೇ ಈ ರೀತಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳುಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ನಿಜವಾಗಿಯೂ ಅವರ ಬಳಿ ದಾಖಲೆ ಇದ್ರೆ ಅದನ್ನ ತೋರಿಸಲಿ. ಜನರ ಮುಂದೆ ದಾಖಲೆಗಳನ್ನ ಇಡಲಿ ಅಂತಾ ಪವರ್ ಟಿವಿ ಸವಾಲ್ ಮಾಡುತ್ತಿದೆ. ಅಲ್ಲದೆ ಸುಳ್ಳು ಸುದ್ದಿಗಳನ್ನ ಸತ್ಯ ಅಂತಾ ಹಬ್ಬಿಸಿದವರ ವಿರುದ್ಧ ಪವರ್ ಟಿವಿ ಕಾನೂನು ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸೈಬರ್ ಕ್ರೈಮ್​ ಠಾಣೆಯಲ್ಲಿ ಪವರ್ ಟಿವಿ ದೂರು ದಾಖಲಿಸಿದೆ. ಸುಖಾಸುಮ್ಮನೆ ಪವರ್ ಟಿವಿ ಬಗ್ಗೆ ವದಂತಿ ಹಬ್ಬಿಸಿದ್ದ ನ್ಯೂಸ್ ಚಾನೆಲ್ ಆ್ಯಂಕರ್ಸ್, ವರದಿಗಾರರ ವಿರುದ್ಧ ದೂರು ದಾಖಲಿಸಲಾಗಿದೆ. ಸಚಿವ S.T.ಸೋಮಶೇಖರ್ ಪುತ್ರನ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ಸಂಚು ಮಾಡಿ ಪವರ್ ಟಿವಿ ಹೆಸರನ್ನ ಎಳೆದು ತಂದವರು, ಅದನ್ನ ಅಪಪ್ರಚಾರ ಮಾಡಿದವರು ಈಗ ಸಂಕಷ್ಟ ಎದುರಿಸಲು ಸಿದ್ಧವಾಗಬೇಕಿದೆ.

ಬಿಟಿವಿ ಭ್ರಷ್ಟಚಾರವನ್ನ ದಾಖಲೆ ಸಮೇತ ಸುದ್ದಿ ಮಾಡಿದ್ದಕ್ಕೆ ಈ ರೀತಿಯಾಗಿ ಅಲ್ಲಿನ ಆ್ಯಂಕರ್ಸ್, ರಿಪೋರ್ಟರ್ಸ್ ಗಾಳಿಸುದ್ದಿ ಹಬ್ಬಿಸಿದ್ದಾರೆ. ಇಡೀ ಭಾನುವಾರ ಪೂರ್ತಿ ಸುಳ್ಳು ಸುದ್ದಿ ಹರಡಿದ್ದ BTV ನ್ಯೂಸ್ ಚಾನೆಲ್ ಸಿಬ್ಬಂದಿ ಆ್ಯಂಕರ್ಸ್ ದಿವ್ಯಾ ವಸಂತ್, ಶೇಷಕೃಷ್ಣ, ಮಧು ನಾಗರಾಜ್ ವಿರುದ್ಧ ದೂರು ದಾಖಲಿಸಲಾಗಿದೆ. ಅಲ್ಲದೆ ರಿಪೋರ್ಟರ್ಸ್ ಪ್ರಸನ್ನ ದೇವನೂರು, ಶ್ರೀರಕ್ಷಾ ಮಲ್ನಾಡ್​​, ಸೌಮ್ಯ ಸುಗ್ನಳ್ಳಿ ವಿರುದ್ಧವೂ ಕಂಪ್ಲೆಂಟ್ ಫೈಲ್ ಆಗಿದೆ. ಫೇಸ್ ಬುಕ್, ವಾಟ್ಸ್ಆ್ಯಪ್ ಸ್ಟೇಟಸಲ್ಲಿ ಸುಳ್ಳು ಸುದ್ದಿ ಹರಡಿದ್ದ BTV ಗ್ಯಾಂಗ್​ಗೆ ಈಗ ಪವರ್ ಟಿವಿ ಪಂಚ್ ಕೊಟ್ಟಿದೆ. ಪವರ್ ಟಿವಿಗೂ ಅರೆಸ್ಟ್ ಆದ ರಾಹುಲ್​ಗೂ ಯಾವ ಸಂಬಂಧವೂ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪವರ್ ಟಿವಿಯಲ್ಲಿ ಯಾರೂ ತಲೆಮರೆಸಿಕೊಂಡಿಲ್ಲ. ಅಲ್ಲದೆ ಅರೆಸ್ಟ್ ಆಗಿರುವ ರಾಹುಲ್ ಪವರ್ ಟಿವಿ ಡೈರೆಕ್ಟರ್ ಎಂಬ ಸುದ್ದಿ ಅಪ್ಪಟ ಸುಳ್ಳು. ಯಾವ ಆಧಾರವೂ ಇಲ್ಲದೆ BTV ಸಿಬ್ಬಂದಿ ಈ ರೀತಿ ಸುಳ್ಳು ಸುದ್ದಿಗಳನ್ನ ಹಬ್ಬಿಸಿದ್ದಾರೆ.

ಖಾಸಗಿ ಸಮಾರಂಭದ ಒಂದು ಫೋಟೊ ಇಟ್ಟುಕೊಂಡು ವದಂತಿ ಹಬ್ಬಿಸಿರುವ BTV ತಂಡದ ವಿರುದ್ಧ ಈಗ ಪವರ್ ಟಿವಿ ಸಿಬ್ಬಂದಿ ಕಾನೂನು ಹೋರಾಟಕ್ಕೆ ಮುಂದಾಗಿದೆ. ಸಾಮಾಜಿಕ ಜಾಲತಾಣವನ್ನ ದುರುಪಯೋಗಪಡಿಸಿಕೊಂಡು ಪವರ್ ಟಿವಿ ಮಾಲೀಕರು, ನಿರ್ದೇಶಕರು ಸೇರಿದಂತೆ ಸಿಬ್ಬಂದಿ ವಿರುದ್ಧ ಸುಳ್ಳು ಸುದ್ದಿಗಳನ್ನ ಹರಡುತ್ತಿರುವ ಬಿಟಿವಿ ಸಿಬ್ಬಂದಿ ಮತ್ತು ಅವರ ತಂಡದ ಇನ್ನಿತರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಸದ್ಯ ಹಿಂದು ಮುಂದು ಗೊತ್ತಿಲ್ಲದೆ ದೊರೆಯ ಆಜ್ಞೆಯನ್ನ ಪಾಲಿಸಿದ ಬಿಟಿವಿ ಸಿಬ್ಬಂದಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಜನರೇ ಮಂಗಳಾರತಿ ಮಾಡಿದ್ರೆ, ಮತ್ತೊಂದು ಕಡೆ ಪವರ್ ಟಿವಿ ದೂರು ದಾಖಲಿಸುವ ಮೂಲಕ ಸುಳ್ಳು ಸುದ್ದಿಯ ಹೆಡ್ ಆಫೀಸ್​ಗೆ ಹೊಡೆತ ಕೊಟ್ಟಿದೆ.

RELATED ARTICLES

Related Articles

TRENDING ARTICLES