ಇಷ್ಟು ದಿನ ಸೈಲೆಂಟಾಗಿದ್ದ ಬಿಟಿವಿ ಸಿಬ್ಬಂದಿಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿದೆ. ಇಷ್ಟು ದಿನ ಇಲ್ಲದ ಅರೋಪಗಳು, ಬ್ಲ್ಯಾಕ್ ಮೇಲುಗಳು, ವಂಚನೆಗಳು, ಸುಳ್ಳು ಸುದ್ದಿಗಳು ಈಗ ಧುತ್ತೆಂದು ಪ್ರತ್ಯಕ್ಷವಾಗತೊಡಗಿವೆ. ಸುದ್ದಿ ಪ್ರಸಾರ ನಿಲ್ಲಿಸಲು ಅಕ್ರಮವಾಗಿ ಹಣ ಪಡೆದು, ಎಣಿಸುವಾಗ ಯಾವಾಗ ತಮ್ಮ ನ್ಯೂಸ್ ಚಾನೆಲ್ ಸಿಬ್ಬಂದಿ ಸಿಕ್ಕಿಬಿದ್ದನೋ ಆಗ ಎಲ್ಲರೂ ನಿದ್ರೆಯಿಂದ ಎಚ್ಚರಗೊಂಡಿದ್ದಾರೆ. ತಮ್ಮ ಬಿಟಿವಿ ಚಾನೆಲ್ನ ಬಣ್ಣ ಬಯಲಾಗುತ್ತಿದ್ದಂತೆ ಒಮ್ಮಿಂದೊಮ್ಮೆಲೆ ಪವರ್ ಟಿವಿ, ಮಾಲೀಕರು, ಸಿಬ್ಬಂದಿ ಮೇಲೆ ಕೇಸ್ ಹಾಕಲು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲು ಪೈಪೋಟಿಗೆ ಬಿದ್ದವರಂತೆ ನಾ ಮುಂದು ತಾ ಮುಂದು ಎಂಬಂತೆ ಕ್ಯೂ ನಿಂತಿದ್ದಾರೆ.
ಟ್ರೋಲ್ನಿಂದಲೇ ಫೇಮಸ್ ಆಗಿರುವ ಆ್ಯಂಕರ್ ದಿವ್ಯ ವಸಂತ, ಶೇಷಕೃಷ್ಣ, ಮಧು ನಾಗರಾಜ್, ರಿಪೋರ್ಟರ್ಗಳಾದ ಶ್ರೀರಕ್ಷಾ ಮಲ್ನಾಡ್, ಸೌಮ್ಯ ಸುಗ್ನಳ್ಳಿ ಸೇರಿದಂತೆ ಎಲ್ಲರೂ ಇನ್ನಿಲ್ಲದ ಉಮೇದಿನಿಂದ ಪವರ್ ಟಿವಿ ವಿರುದ್ಧ ಪೋಸ್ಟ್, ಸ್ಟೇಟಸ್ ಹಾಕಿಕೊಂಡು ಸೇಡು ತೀರಿಸಿಕೊಂಡಂತೆ ಖುಷಿಪಟ್ಟರು. ಸ್ವತಃ ಬಿಟಿವಿ ಸಿಇಒ ಶಿವಸ್ವಾಮಿಯೇ ಸಿಕ್ಕಿಬಿದ್ದ ಬಿಟಿವಿ ಸಿಬ್ಬಂದಿ ಜೊತೆ ಡೀಲ್ ಮಾತನಾಡಿರುವ ಬಗ್ಗೆ ಯಾವ ಸ್ಪಷ್ಟನೆಯನ್ನೂ ಕೊಡುವ ಗೋಜಿಗೆ ಹೋಗ್ತಿಲ್ಲ. ಯಾವಾಗ ಬಿಟಿವಿ ಕರ್ಮಕಾಂಡಗಳ ಸ್ಟೋರಿಗಳು ಪವರ್ ಟಿವಿಯಲ್ಲಿ ಸಾಕ್ಷ್ಯಗಳು, ದಾಖಲೆಗಳ ಸಮೇತ ಪ್ರಸಾರವಾದವೋ ಆಗ ಬಿಟಿವಿ ಧೈರ್ಯವೇ ಕುಗ್ಗಿಹೋಗಿತ್ತು. ಆಗ ತಮ್ಮ ಮೇಲಿನ ಗಂಭೀರ ಅಪವಾದದಿಂದ ಪಾರಾಗಲು ಇವರು ಆರಿಸಿಕೊಂಡಿದ್ದೇ ಸಚಿವ S.T. ಸೋಮಶೇಖರ್ ಪುತ್ರ ನಿಶಾಂತ್ಗೆ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ. ಪ್ರಕರಣದ ಬಗ್ಗೆ ಡಿಸೆಂಬರ್ 26ರಂದೇ ಅರಿವಿದ್ದ ಬಿಟಿವಿ ಚಾನೆಲ್, ಆಗಲೇ ಆ ಕುರಿತು ಪ್ರೋಮೋ ಹಾಕಿ ಇದ್ದಕ್ಕಿದ್ದಂತೆ ನಿಲ್ಲಿಸಿತ್ತು.
ಈ ಸಂಬಂಧ ಬಿಟಿವಿ ಎಂಡಿ ಜಿ.ಎಂ.ಕುಮಾರ್ ಅವರನ್ನ ಸಿಸಿಬಿಗೆ ಕರೆಸಿ ವಿಚಾರಣೆಯನ್ನೂ ನಡೆಸಲಾಗಿತ್ತು. ಆದ್ರೆ ಈ ಪ್ರಕರಣದ ದಿಕ್ಕು ತಪ್ಪಿಸಲು ಬಿಟಿವಿಯವರು ಸೃಷ್ಟಿಸಿದ್ದೇ ಪವರ್ ಟಿವಿ ಡೈರೆಕ್ಟರ್ ರಾಹುಲ್ ಎಂಬ ಕಥೆಯನ್ನ. ಪವರ್ ಟಿವಿಗೆ ಯಾವ ರೀತಿಯಲ್ಲೂ ಸಂಬಂಧವಿರದ ರಾಹುಲ್ ಭಟ್ ಆ ಚಾನೆಲ್ ಡೈರೆಕ್ಟರ್ ಎಂದು ಬಿಂಬಿಸಲು ಶತಪ್ರಯತ್ನ ಮಾಡಲಾಯ್ತು. ಪವರ್ ಟಿವಿ ಮಾಲೀಕರು ಆಫೀಸು, ಮನೆಯಲ್ಲೇ ಇದ್ದರೂ ನಾಪತ್ತೆಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಯ್ತು. ಸಮಾರಂಭವೊಂದರಲ್ಲಿ ರಾಹುಲ್ ಜೊತೆ ರಾಕೇಶ್ ಶೆಟ್ಟರು ಜೊತೆಗಿದ್ದ ಫೋಟೋವೊಂದನ್ನ ಬಳಸಿಕೊಂಡು ಅದಕ್ಕೆ ತಳಕು ಹಾಕಲಾಯ್ತು. ವಿಷಯ ಏನಂದ್ರೆ, ಅದೇ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೂ ಭಾಗಿಯಾಗಿದರು.
ಅಷ್ಟೇ ಏಕೆ ಬಿಟಿವಿ ಎಂಡಿ ಜಿ.ಎಂ.ಕುಮಾರ್ ಕೂಡ ಆ ಸಮಾರಂಭದಲ್ಲಿ ಭಾಗಿಯಾಗಿದ್ರು. ಆದ್ರೂ ಪವರ್ ಟಿವಿಗೆ ಕೆಟ್ಟ ಹೆಸರು ತರಲು ಸೋಶಿಯಲ್ ಮೀಡಿಯಾವನ್ನ ದುರುಪಯೋಗ ಮಾಡಿಕೊಳ್ಳಲಾಯ್ತು. ಬಿಟಿವಿಯ ಸೋಶಿಯಲ್ ಮೀಡಿಯಾ ವೀರರು ಸುಳ್ಳು ಸುದ್ದಿಗಳನ್ನ ಬ್ರೇಕಿಂಗ್ ನ್ಯೂಸ್ಗಿಂತ ಫಾಸ್ಟಾಗಿ ಶೇರ್ ಮಾಡಿ ಸಂಭ್ರಮಿಸಿದರು. ಈ ವದಂತಿಗಳು, ಸುಳ್ಳು ಸುದ್ದಿಗಳು ಹಾಗೂ ಅತಿರಂಜಿತ ಸುದ್ದಿಗಳನ್ನ ನಂಬಿದ ಕೆಲವರು ಪವರ್ ಟಿವಿ ಕೂಡ ಬಿಟಿವಿಯಂತೆಯೇ ಅಂತಾ ತೀರ್ಮಾನಕ್ಕೆ ಬಂದರು.
ಬಿಟಿವಿ ಸುಳ್ಳು ಸುದ್ದಿ ಗ್ಯಾಂಗ್ ಸಂಭ್ರಮದಿಂದ ಕುಣಿದಾಡಿತ್ತು. ಆದರೆ, ನಿಜ ಸಂಗತಿ ಏನೆಂದರೆ, ಪವರ್ ಟಿವಿಗೂ ರಾಹುಲ್ಗೂ ಯಾವ ಸಂಬಂಧವೂ ಇಲ್ಲ, ಆತ ಪವರ್ ಟಿವಿ ಸಂಸ್ಥೆಯ ಡೈರೆಕ್ಟರೂ ಅಲ್ಲವೇ ಅಲ್ಲ. ಅವರ ತಂದೆ, ಖ್ಯಾತ ಗುರೂಜಿ ಚಂದ್ರಶೇಖರ ಸ್ವಾಮೀಜಿಯವರು ಪವರ್ ಟಿವಿಯ ಹಿತಚಿಂತಕರು. ಇದರಿಂದ ಸ್ವಾಮೀಜಿಯವರ ಬಗ್ಗೆ ಪವರ್ ಟಿವಿಗೆ ಅಪಾರ ಗೌರವವಿದೆ. ಅಂದ ಹಾಗೆ ರಾಹುಲ್ ಕೂಡ ಅಪರಾಧಿಯಲ್ಲ, ಆರೋಪಿಯಷ್ಟೇ. ಇನ್ನೂ ಈ ಪ್ರಕರಣ ವಿಚಾರಣಾ ಹಂತದಲ್ಲಿರುವುದರಿಂದ ಈ ಬಗ್ಗೆ ಷರಾ ಬರೆಯುವಂತೆಯೂ ಇಲ್ಲ. ರಾಹುಲ್ ಸ್ನೇಹಿತ ರಾಕೇಶ್ ಅಣ್ಣಪ್ಪನವರ್ ಹೆಸರನ್ನೇ ತಿರುಚಿ ರಾಕೇಶ್ ಶೆಟ್ಟರ ಹೆಸರನ್ನೂ ಮನಸೋಇಚ್ಛೆ ಬಳಸಿತು ಈ ಗ್ಯಾಂಗ್. ಆದರೆ ಸತ್ಯ ಗೊತ್ತಿದ್ದ ಪವರ್ ಟಿವಿ ಸಿಬ್ಬಂದಿ, ಮಾಲೀಕರು, ನಿಜವಾದ ಡೈರೆಕ್ಟರ್ ಮುಸಿಮುಸಿ ನಕ್ಕು ಬಿಟಿವಿ ಯುದ್ಧೋನ್ಮಾದಕ್ಕೆ ಮರುಕಪಟ್ಟಿದ್ದಷ್ಟೇ ಬಂತು. ಬಿಟಿವಿ ಸಂಸ್ಥೆ, ಸಿಬ್ಬಂದಿ ಇನ್ನಾದ್ರೂ ಇಂಥಾ ಸುಳ್ಳು ಸುದ್ದಿಗಳನ್ನ ಹರಡೋದನ್ನ ನಿಲ್ಲಿಸಲಿ. ಅಂದ ಹಾಗೆ ಹೀಗೆ ಸೋಶಿಯಲ್ ಮೀಡಿಯಾವನ್ನ ದುರ್ಬಳಕೆ ಮಾಡಿಕೊಂಡು ಸುಳ್ಳು ಸುದ್ದಿ, ವದಂತಿಗಳನ್ನ ಹಬ್ಬಿಸಿರುವ ಬಿಟಿವಿ ಸಿಬ್ಬಂದಿ ವಿರುದ್ಧ ಪವರ್ ಟಿವಿ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿ ಚುರುಕು ಮುಟ್ಟಿಸಿದೆ.
ಸಂಗಮೇಶ್ ಮೂಲಿಮನಿ