Sunday, September 8, 2024

ಮೇಕೆದಾಟು ಪಾದಯಾತ್ರೆ; ರಾಜಕೀಯ ಲಾಭನಷ್ಟ ಲೆಕ್ಕಾಚಾರ

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ.. ಮುಂದಿನ‌ ಚುನಾವಣೆ ದೃಷ್ಟಿಯಿಟ್ಟುಕೊಂಡೇ ಜನರ ವಿಶ್ವಾಸ ಗಳಿಸಲು ಕೈ ಪಡೆ ಹೊರಟಿದೆ.. ಕಾಂಗ್ರೆಸ್ ಪಾದಯಾತ್ರೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸದ್ದು ಮಾಡ್ತಿದೆ.. ಆದ್ರೆ, ಈ ಹಿಂದೆಯೂ ಹಲವು ಪಾದಯಾತ್ರೆಗಳು ನಡೆದಿದ್ವು. ಹಾಗಾದ್ರೆ ಅವು ಯಾವು ಅವುಗಳ ಲಾಭ ನಷ್ಟವೇನು..? ಇಲ್ಲಿದೆ ಒಂದು ಸಂಕ್ಷಿಪ್ತ ವರದಿ.

ರಾಜ್ಯದಲ್ಲಿ ನಡೆದ ಪಾದಯಾತ್ರೆಗಳಿಗೆ ರಾಜಕೀಯದ ಟಚ್..!; ಪಾದಯಾತ್ರೆಯ ಹಿಂದಿದೆ ಲಾಭ ನಷ್ಟಗಳ ಲೆಕ್ಕಾಚಾರ..!

ಹೌದು.. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ಭಾರೀ  ಚರ್ಚೆಗೆ ಗ್ರಾಸವಾಗಿದೆ.. ಭಾನುವಾರದಿಂದ ಇದೇ 19ರವರೆಗೆ 10 ದಿನಗಳ ಕಾಲ 169 ಕಿಲೋಮೀಟರ್ ಪಾದಯಾತ್ರೆ ಮೂಲಕ ಕಾಂಗ್ರೆಸ್ ಇತಿಹಾಸ ಬರೆಯಲು ಹೊರಟಿದೆ.. ಈ ಪಾದಯಾತ್ರೆ ಮುಂದಿನ ಚುನಾವಣೆಯಲ್ಲಿ ಡಿಕೆಶಿಗೆ ರಾಮನಗರದಲ್ಲಿ ಲಾಭ ತಂದುಕೊಡುವ ಸಾಧ್ಯತೆಯಿದೆ.. ಆದ್ರೆ, ಜೆಡಿಎಸ್ ಪಕ್ಷಕ್ಕೆ ಇದು ಹಿನ್ನಡೆಯಾಗಲಿದೆ ಎನ್ನಲಾಗ್ತಿದೆ..

ರಾಜ್ಯ ರಾಜಕೀಯದಲ್ಲಿ ಪಾದಯಾತ್ರೆ ಪಾಲಿಟಿಕ್ಸ್ ಇದೇ ಮೊದಲಲ್ಲ..!; ರಾಜಕೀಯ ಲಾಭಕ್ಕಾಗಿ ಇದಕ್ಕೂ ಮುನ್ನ ನಡೆದಿದ್ದವು ಹಲವು ಯಾತ್ರೆಗಳು..!

ರಾಜ್ಯ ರಾಜಕೀಯದ ಇತಿಹಾಸದಲ್ಲಿ ಪಾದಯಾತ್ರೆ ಪಾಲಿಟಿಕ್ಸ್ ಇದೇ ಮೊದಲಲ್ಲ. ಈ ಮುಂಚೆಯೂ ಹಲವು ಪಾದಯಾತ್ರೆಗಳು ನಡೆದಿದ್ದು ಪಕ್ಷಗಳಿಗೆ ರಾಜಕೀಯ ಲಾಭವನ್ನೂ ಪಾದಯಾತ್ರೆ ತಂದುಕೊಟ್ಟಿವೆ..

ದೊಡ್ಡಗೌಡ್ರು ಮಾಡಿದ್ರು ಪಾದಯಾತ್ರೆ..!

ಹೌದು .. 2001ರಲ್ಲಿ ಅಂದಿನ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡಗೌಡರು ತೊಡೆ ತಟ್ಟಿದ್ದರು. ತೆಂಗಿನ ಮರದಿಂದ ನೀರಾ ತೆಗೆಯುವ ವಿಚಾರಕ್ಕೆ ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಗೋಲಿಬಾರ್ ನಡೆದು, ಇಬ್ಬರು ರೈತರು ಮೃತಪಟ್ಟಿದ್ದರು.. ಆಗ ದೇವೇಗೌಡರು ಚನ್ನಪಟ್ಟಣದ ವಿಠಲೇನಹಳ್ಳಿಯಿಂದ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆವರೆಗೆ 80 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದರು.. ಹೀಗಾಗಿ 2004ರ ಚುನಾವಣೆಯಲ್ಲಿ ಜೆಡಿಎಸ್‌ 58 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುವಂತಾಯ್ತು..

ಕಾವೇರಿಗಾಗಿ ಎಸ್.ಎಂ.ಕೃಷ್ಣಾರಿಂದ  ಪಾದಯಾತ್ರೆ..!

2002 ರಲ್ಲಿ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ತಮಿಳುನಾಡು ನೀರು‌ ಹಂಚಿಕೆ ವಿಚಾರದಲ್ಲಿ ಪಾದಯಾತ್ರೆಯ ಮೊರೆ ಹೋಗಿದ್ದರು..ನೀರು ಹಂಚಿಕೆ ವಿವಾದ ಸುಪ್ರೀಂಕೋರ್ಟ್‌ ಮುಂದೆ ಇದ್ದಿದ್ದರಿಂದ ಈ ಪಾದಯಾತ್ರೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. 2002ರ ಅಕ್ಟೋಬರ್ 7 ರಿಂದ 11 ರವರೆಗೆ ಆರು ದಿನಗಳ ಪಾದಯಾತ್ರೆ ಕೈಗೊಂಡಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಮಂಡ್ಯದ ವರೆಗೆ 100 ಕಿ.ಮೀ. ಪಾದಯಾತ್ರೆ ನಡೆಸಿದ್ದರು. ಆ ಮೂಲಕ ರಾಜಕೀಯ ಲಾಭದ ಲೆಕ್ಕಾಚಾರ ಹಾಕಿದ್ದರು. ಆದ್ರೆ 2004ರ ಚುನಾವಣೆಯಲ್ಲಿ ರಾಜಕೀಯ ಲಾಭವಾಗದೆ ಆಡಳಿತ ವಿರೋಧಿ ಅಲೆಗೆ ಕೊಚ್ಚಿ ಹೋಗಿದ್ದರು..

ಗಣಿಧಣಿಗಳ ವಿರುದ್ಧ ತೊಡೆ ತಟ್ಟಿದ್ದ ಟಗರು..!; ಸಿದ್ದರಾಮಯ್ಯರಿಂದ ಬಳ್ಳಾರಿ ಪಾದಯಾತ್ರೆ..!

ಬಳ್ಳಾರಿಯಲ್ಲಿ ಬಿಜೆಪಿಯ ರೆಡ್ಡಿ ಹಾಗೂ ಶ್ರೀರಾಮುಲು ಪ್ರಾಬಲ್ಯದ ವಿರುದ್ದ ತೊಡೆತಟ್ಟಿ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ನಡೆಸಿದ್ದರು. 2010ರಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಮುಖ್ಯಮಂತ್ರಿಯಾಗಿದ್ದವರು ಬಿ.ಎಸ್. ಯಡಿಯೂರಪ್ಪ…ಆಗ ಅಧಿಕಾರದಲ್ಲಿ ಪ್ರಾಬಲ್ಯ ಹೊಂದಿದ್ದು ಗಣಿಧಣಿಗಳಾದ ಜನಾರ್ದನ್ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು. ರಾಜ್ಯ ವಿಧಾನಸಭೆಯಲ್ಲಿ ‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ರೆಡ್ಡಿ ಬ್ರದರ್ಸ್ ಸವಾಲು ಹಾಕಿದ್ದರು…ಈ ಸವಾಲು ಸ್ವೀಕರಿಸಿ 2010ರ ಜುಲೈ 25ರಂದು ಸಿದ್ದರಾಮಯ್ಯ ‘ಬಳ್ಳಾರಿ ಚಲೋ’ ಪಾದಯಾತ್ರೆ ಮಾಡಿದ್ರು..ಇದು 2013ರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯೋಕೆ ಅವಕಾಶವಾಯ್ತು..

ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ

2013ರಲ್ಲಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂಬ ಪಾದಯಾತ್ರೆ ನಡೆದಿತ್ತು..ಕೃಷ್ಣ ಯೋಜನೆಯಲ್ಲಿ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳದೆ ಇರುವುದರಿಂದ 259 ಟಿಎಂಸಿ ನೀರು ಆಂಧ್ರಕ್ಕೆ ಹೋಗುತ್ತಿದೆ. ಅಲ್ಲಿನ ನೀರಾವರಿ ಯೋಜನೆಗೆ 17 ಸಾವಿರ ಕೋಟಿ ರೂ. ಖರ್ಚು ಮಾಡುವ ಭರವಸೆ ನೀಡಿದ್ದ ಬಿಜೆಪಿ, ಕೇವಲ 500 ಕೋಟಿ ರೂ. ನೀಡಿದೆ ಎಂಬ ಪ್ರಮುಖ ಅಜೆಂಡಾದೊಂದಿಗೆ ಪಾದಯಾತ್ರೆ ನಡೆಸಲಾಗಿತ್ತು. ಹೊಸಪೇಟೆಯಿಂದ ಆರಂಭಗೊಂಡು ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳದ ಮಾರ್ಗವಾಗಿ ಕೂಡಲಸಂಗಮದಲ್ಲಿ ಸಮಾರೋಪಗೊಂಡು ಸುಮಾರು 140 ಕಿ.ಮೀ ಪಾದಯಾತ್ರೆ ನಡೆಸಲಾಯಿತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 122 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಹುಮತದ ಗೆಲುವು ಸಾಧಿಸಿತ್ತು…ಸಿದ್ದರಾಮಯ್ಯ ಸಿಎಂ ಆದ್ರು.

ಒಟ್ನಲ್ಲಿ ಮೇಕೆದಾಟು ಪಾದಯಾತ್ರೆಗೂ ಮೊದಲು ಹಲವು ಪಾದಯಾತ್ರೆಗಳು ನಡೆದಿದ್ವು..ಕೆಲವು ಪಾದಯಾತ್ತೆ ಯಶಸ್ವಿಯಾದ್ರೆ,ಕೆಲವು ಪಾದಯಾತ್ರೆಗಳು ರಾಜಕೀಯ ನಷ್ಟಕ್ಕೂ ಕಾರಣವಾದ್ವು..ಸದ್ಯ ಇದೀಗ ಮತ್ತೆ ಕೈ ಪಾದಯಾತ್ರೆಗೆ ಮುಂದಾಗಿದ್ದು, ಇದು ಡಿಕೆಶಿಗೆ ವರವಾಗುತ್ತಾ ಕಾದು ನೋಡಬೇಕು..

ರಾಘವೇಂದ್ರ ವಿ.ಎನ್. ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು..

RELATED ARTICLES

Related Articles

TRENDING ARTICLES