Sunday, January 12, 2025

ಪೊಲೀಸ್​​ರನ್ನು​ ಬೆಚ್ಚಿ ಬೀಳಿಸಿದ ಕೊರೋನಾ

ಮಂಡ್ಯ: ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಕೊರೋನಾಘಾತಕ್ಕೆ ಬೆಚ್ಚಿಬಿದ್ದಿದ್ದಾರೆ. ಹಲವು ಅಧಿಕಾರಿಗಳಲ್ಲಿ ಕೋವಿಡ್​ 19 ಸೋಂಕು ದೃಢಪಟ್ಟಿದ್ದು, ಬಹುತೇಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ವತಃ ಹೋಂ ಐಸೋಲೇಷನ್​ನಲ್ಲಿದ್ದಾರೆ.

ಕಳೆದವಾರ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟ ನಡೆಸಲಾಗಿತ್ತು. ಕ್ರೀಡಾಕೂಟ ಮುಗಿಯುತ್ತಿದ್ದಂತೆ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯ ಯುವ ಜನೋತ್ಸವದ ಭದ್ರತೆಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು.

ಪೊಲೀಸ್ ವಾರ್ಷಿಕ ಕ್ರೀಡಾಕೂಟ ಹಾಗೂ ರಾಜ್ಯ ಯುವ ಜನೋತ್ಸವ ಎಫೆಕ್ಟ್ ಮಂಡ್ಯ ಪೊಲೀಸ್ ಇಲಾಖೆ ಮೇಲೆ ಬಿದ್ದಿದ್ದು, ಸೋಂಕಿತ ಅಧಿಕಾರಿಗಳ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರಲ್ಲೂ ಕೊರೋನಾ ಭೀತಿ ಶುರುವಾಗಿದೆ.

ಎಸ್ಪಿ, ಎಎಸ್​​ಪಿಯೂ ಹೋಂ ಐಸೋಲೇಷನ್:

ಮಂಡ್ಯ ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಹಿರಿಯ ಅಧಿಕಾರಿಗಳು ಸ್ವತಃ ಹೋಂ ಐಸೋಲೇಷನ್​ನಲ್ಲಿದ್ದಾರೆ.

ಮಂಡ್ಯ ಎಸ್​ಪಿ ಎನ್.ಯತೀಶ್, ಎಎಸ್​ಪಿ ಧನಂಜಯ್, ಮಂಡ್ಯ ಡಿವೈಎಎಸ್​ಪಿ ಮಂಜುನಾಥ್, ನಾಗಮಂಗಲ, ಮಳವಳ್ಳಿ ಡಿವೈಎಎಸ್​ಪಿ, ನಾಗಮಂಗಲ ಗ್ರಾಮಾಂತರ ಸಿಪಿಐ, ಬೆಳ್ಳೂರು ಪಿಎಸ್​ಐ ಸೇರಿದಂತೆ ಹಲವರು ಹೋಂ ಐಸೋಲೇಷನ್​ನಲ್ಲಿದ್ದಾರೆ.

ಸೋಂಕಿನ ಲಕ್ಷಣ ಇದ್ದರೂ ಪರೀಕ್ಷೆ ಮಾಡಿಸಲು ಹಲವರು ಹಿಂದೇಟು:

ಕೆಲವರು ಪರೀಕ್ಷೆ ಮಾಡಿಸಿ, ಪಾಸಿಟಿವ್ ಬಂದಿರೋರು ಹೋಂ ಐಸೋಲೇಷನ್ ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನು ಸೋಂಕಿನ ಲಕ್ಷಣ ಇದ್ದರೂ ಪರೀಕ್ಷೆ ಮಾಡಿಸಲು ಹಲವರು ಹಿಂದೇಟು ಹಾಕುತ್ತಿರುವ ಆರೋಪ ಕೇಳಿ ಬಂದಿದೆ. ವಿದ್ಯಾವಂತ ಅಧಿಕಾರಿಗಳೇ ಕೊವಿಡ್ ಟೆಸ್ಟ್ ಮಾಡಿಸಲು ಹಿಂದೇಟು ಹಾಕಿ, ನಿರ್ಲಕ್ಷ್ಯ ವಹಿಸ್ತಿರೋದು ಸಾಕಷ್ಟು ಚರ್ಚೆ ಮತ್ತು ಟೀಕೆಗೆ ಗುರಿಯಾಗಿದೆ.

ಮೈಸೂರು ಜಿಲ್ಲಾ ಎಎಸ್ಪಿಗೆ ಮಂಡ್ಯ ಆಡಳಿತದ ಹೊಣೆ:

ಮಂಡ್ಯ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೊರೋನಾ ಹಾಗೂ ಸ್ವತಃ ಹೋಂ ಐಸೋಲೇಷನ್​ನಲ್ಲಿರುವ  ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಎಸ್​​ಪಿಗೆ ಮಂಡ್ಯ ಪೊಲೀಸ್ ಇಲಾಖೆ ಆಡಳಿತದ ಹೊಣೆ ನೀಡಲಾಗಿದೆ.

ನಿನ್ನೆಯಿಂದಲೇ ಮೈಸೂರು ಜಿಲ್ಲಾ ಎಎಸ್​​ಪಿ ಅವರು ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಆಡಳಿತದ ಹೊಣೆ ನಿರ್ವಹಣೆ ಮಾಡುತ್ತಿರುವ ಬಗ್ಗೆ ಪವರ್ ಟಿವಿಗೆ ಪೊಲೀಸ್ ಇಲಾಖೆ ಉನ್ನತ ಮೂಲಗಳ ಮಾಹಿತಿ ದೊರಕಿದೆ.

ಆತಂಕದಲ್ಲೇ ಕರ್ತವ್ಯ ನಿರತ ಪೊಲೀಸರು:

ಇನ್ನು ವೀಕೆಂಡ್ ಕರ್ಫ್ಯೂ ಡ್ಯೂಟಿಯನ್ನ ಪೊಲೀಸರು ಆತಂಕದಲ್ಲೇ ನಿರ್ವಹಿಸುವಂತಾಗಿದೆ. ಸದ್ಯ ವೀಕೆಂಡ್ ಕರ್ಫ್ಯೂ ಕರ್ತವ್ಯದಲ್ಲಿರುವ ಬಹುತೇಕ ಪೊಲೀಸರು ವಾರ್ಷಿಕ ಕ್ರೀಡಾಕೂಟ ಹಾಗೂ ರಾಜ್ಯ ಯುವ ಜನೋತ್ಸವದ ಬಂದೋಬಸ್ತ್​ನಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಅಲ್ಲದೇ, ಇದೀಗ ಕೊರೋನಾ ಸೋಂಕು ದೃಢಪಟ್ಟಿರುವ ಹಾಗೂ ಸ್ವತಃ ಹೋಂ ಐಸೋಲೇಷನ್ ನಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕದಲ್ಲಿದ್ದರು. ಇವರನ್ನೇ ವೀಕೆಂಡ್ ಕರ್ಫ್ಯೂ ಕರ್ತವ್ಯಕ್ಕೆ ನಿಯೋಜಿಸಿರೋದು ಸಾಕಷ್ಟು ಚರ್ಚೆ ಮತ್ತು ಟೀಕೆಗೆ ಗ್ರಾಸವಾಗಿದೆ.

ಸೂಪರ್ ಸ್ಪ್ರೆಡರ್ ಆಗ್ತಾರ ಪೊಲೀಸರು?

ವೀಕೆಂಡ್ ಕರ್ಫ್ಯೂ ಕರ್ತವ್ಯದಲ್ಲಿರುವ ಬಹುತೇಕ ಪೊಲೀಸರ ಬಳಿ ಹೋಗೋಕೂ ಸಾರ್ವಜನಿಕರು ಭಯಪಡ್ತಿದ್ದಾರೆ. ಕೊರೋನಾ ಸೋಂಕಿತ ಪೊಲೀಸರನ್ನ ಕರ್ತವ್ಯಕ್ಕೆ ನಿಯೋಜಿಸಿದಲ್ಲಿ ಸೋಂಕು ಹೆಚ್ಚು ಹರಡುವ ಸಾಧ್ಯತೆ ಇದೆ. ಇಂತಹ ಆತಂಕದ ಸಂದರ್ಭದಲ್ಲಿ ಪೊಲೀಸರು ಸೂಪರ್ ಸ್ಪ್ರೆಡರ್ ಆಗೋದು ಬೇಡ.

ಜಿಲ್ಲೆಯ ಎಲ್ಲಾ ಪೊಲೀಸರಿಗೂ ಸಾಮೂಹಿಕ ಕೋವಿಡ್ ಟೆಸ್ಟ್ ಮಾಡಿಸಬೇಕು. ಕೋವಿಡ್ ಟೆಸ್ಟ್ ಮಾಡಿಸಿದ ಬಳಿಕ ನೆಗೆಟಿವ್ ಬಂದವರನ್ನ ಮಾತ್ರ ಕರ್ತವ್ಯಕ್ಕೆ ನಿಯೋಜಿಸಿ, ಕೊರೋನಾ ಸೋಂಕು ಎಲ್ಲೆಡೆ ಹರಡದಂತೆ ಮುಂಜಾಗ್ರತೆ ವಹಿಸುವಂತೆ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ವರದಿ: ಡಿ. ಶಶಿಕುಮಾರ್, ಮಂಡ್ಯ

RELATED ARTICLES

Related Articles

TRENDING ARTICLES