Thursday, December 19, 2024

ಅಟೆನ್ಷನ್ ಪ್ಲೀಸ್.. ಈ ಬಾರಿ ಇಲ್ಲ ಯಶ್ ಬರ್ತ್ ಡೇ

ಕನ್ನಡ ಚಿತ್ರರಂಗದ ತಾಕತ್ತನ್ನ ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಪ್ರದರ್ಶಿಸಿದ ಹೆಮ್ಮೆ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಕೆಲವೇ ಗಂಟೆಗಳು ಬಾಕಿಯಿದೆ. ಇದೇ ಶನಿವಾರ 36ನೇ ವಸಂತಕ್ಕೆ ಕಾಲಿಡ್ತಿರೋ ರಾಕಿಭಾಯ್, ಈ ವರ್ಷವೂ ಡೈಹಾರ್ಡ್​ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದ್ದಾರೆ. ಕಾರಣ ಕೊರೋನಾ.

ಸಕ್ಸಸ್​ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಸ್ವಾಭಿಮಾನಿ ಕನ್ನಡಿಗ. ಗಾಡ್​ಫಾದರ್ ಇಲ್ಲದಿದ್ರೂ ಸ್ಯಾಂಡಲ್​ವುಡ್ ಪಾಲಿನ ಗಾಡ್ ಆದ ಸಿನಿಸಂತ. ಸ್ವಂತ ಪ್ರಯತ್ನಗಳಿಂದಲೇ ನ್ಯಾಷನಲ್ ಸ್ಟಾರ್ ಆದ ಸೆಲ್ಫ್ ಮೇಡ್ ಶಹಜಾದ ಅಂದ್ರೆ ಅದು ಒನ್ ಅಂಡ್ ಓನ್ಲಿ ಯಶ್.

ಯೆಸ್.. ಕೆಜಿಎಫ್ ನಂತ್ರ ಅದ್ರ ಸೀಕ್ವೆಲ್ ಸಿನಿಮಾಗಾಗಿ ಇಡೀ ಸಿನಿದುನಿಯಾ ಎದುರು ನೋಡ್ತಿದೆ. ಯೂಟ್ಯೂಬ್​ನಲ್ಲಿ ಟೀಸರ್ ಕೊಟ್ಟ ಟಕ್ಕರ್​ಗೆ ಹಾಲಿವುಡ್ ಚಿತ್ರಗಳೇ ಬೆಚ್ಚಿಬಿದ್ದವು. ಇನ್ನೂ ಸಿನಿಮಾದಲ್ಲಿನ ಗಮ್ಮತ್ತು ಯಾವ ರೇಂಜ್​ಗೆ ಇರಲಿದೆ ಅನ್ನೋದ್ರ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಮನೆಮಾಡಿದೆ.

ಕೆಜಿಎಫ್ ಮೊದಲ ಭಾಗ ತೆರೆಕಂಡು ಮೂರು ವರ್ಷಗಳಾಯ್ತು. ಆದ್ರೆ ಎರಡನೇ ಚಾಪ್ಟರ್​ಗೆ ಇನ್ನೂ ಶುಭಗಳಿಗೆ ಕೂಡಿ ಬರಲೇ ಇಲ್ಲ. ಹೌದು.. ಕೊರೋನಾದಿಂದ ತಡವಾಗ್ತಿದೆ. ಆದ್ರೆ ಲೇಟ್ ಆದಷ್ಟೂ ಲೇಟೆಸ್ಟ್ ಆಗಿ ಬರ್ತೀವಿ ಅನ್ನೋದು ಅವ್ರ ಕಾನ್ಫಡೆನ್ಸ್ ಆಗಿದೆ.

ಇತ್ತ ಯಶ್ ಕೂಡ ಆ ಸಿನಿಮಾ ರಿಲೀಸ್​ವರೆಗೂ ಬೇರಾವ ಸಿನಿಮಾ ಅನೌನ್ಸ್ ಮಾಡದೇ ಇರೋ ಪರಿಸ್ಥಿತಿ. ಕೆಜಿಎಫ್​ನಿಂದ ಪ್ಯಾನ್ ಇಂಡಿಯಾ ಫ್ಯಾನ್ ಫಾಲೋವರ್ಸ್​ ಹೆಚ್ಚಿದ್ದಾರೆ. ಆದ್ರೆ ಅವ್ರೊಂದಿಗೆ ಬರ್ತ್ ಡೇ ಕೂಡ ಸೆಲೆಬ್ರೇಟ್ ಮಾಡಲಾಗದ ಸಂದಿಗ್ಧ ಸ್ಥಿತಿ. ಕಾರಣ ಕೊರೋನಾ. ಕಳೆದ ವರ್ಷದಂತೆ ಈ ವರ್ಷವೂ ಭಾಯ್ ಬರ್ತ್ ಡೇಗೆ ಬ್ರೇಕ್ ಹಾಕಿದೆ ಕಣ್ಣಿಗೆ ಕಾಣದ ವೈರಸ್.

ಕಳೆದ ವರ್ಷ ಕೆಜಿಎಫ್ ಟೀಸರ್​ನ ಫ್ಯಾನ್ಸ್​ಗೆ ಗಿಫ್ಟ್ ಆಗಿ ನೀಡಿತ್ತು ಟೀಂ. ಆದ್ರೆ ಈ ವರ್ಷ ಸ್ಪೆಷಲ್ ಟೀಸರ್ ಇಲ್ಲ, ಸಂಭ್ರಮಾಚರಣೆ ಕೂಡ ಇಲ್ಲ. ಇತ್ತೀಚೆಗೆ ಗೆಳೆಯ ಪಾನಿಪುರಿ ಕಿಟ್ಟಿಯ ಹೋಟೆಲ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಕಿಂಗ್ ಸ್ಟಾರ್, ಅಂದು ಫ್ಯಾನ್ಸ್​ಗೆ ಈ ಬಾರಿಯ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿಲ್ಲ. ದಯವಿಟ್ಟು ಇದ್ದಲ್ಲಿಂದಲೇ ಶುಭ ಹಾರೈಸಿ ಎಂದರು.

ಇನ್ನೂ ಎರಡು ವರ್ಷದ ಹಿಂದೆ ನಾಯಂಡಹಳ್ಳಿ ಜಂಕ್ಷನ್ ಬಳಿ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಲಕ್ಷಾಂತರ ಮಂದಿ ಫ್ಯಾನ್ಸ್ ಜೊತೆ ಜನುಮ ದಿನದ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ರು ರಾಕಿಭಾಯ್. ಅದಕ್ಕೆ ಪತ್ನಿ ರಾಧಿಕಾ ಪಂಡಿತ್ ಕೂಡ ಸಾಥ್ ನೀಡಿದ್ರು.

ಅದೇನೇ ಇರಲಿ ಇದೇ ಶನಿವಾರ 36ನೇ ವಸಂತಕ್ಕೆ ಕಾಲಿಡ್ತಿರೋ ನಮ್ಮ ಹೆಮ್ಮೆಯ ಕನ್ನಡಿಗನಿಗೆ ಎಲ್ರೂ ಸ್ಪೆಷಲ್ ವಿಶಸ್ ಹೇಳೋಣ. ಆದಷ್ಟು ಬೇಗ ಕೆಜಿಎಫ್ 2 ರಿಲೀಸ್ ಆಗಿ, ನರ್ತನ್ ಜೊತೆಗಿನ ಸಿನಿಮಾ ಅನೌನ್ಸ್ ಆಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES