ರಾಜ್ಯ : ಒಮೈಕ್ರಾನ್ ಹಾಗೂ ಕೊರೋನಾ ವೈರಸ್ ಓಟಕ್ಕೆ ಬ್ರೇಕ್ ಹಾಕಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿರುವ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಗುರುವಾರ ರಾತ್ರಿಯಿಂದ ಸೋಮವಾರದ ಮುಂಜಾನೆವರೆಗೂ ನಿಷೇಧಾಜ್ಞೆ ಇರಲಿದೆ. ಈ ವೇಳೆ ಬೇಕಾ ಬಿಟ್ಟಿ, ಅನವಶ್ಯಕವಾಗಿ ರಸ್ತೆಗೆ ಬಂದರೆ ಲಾಠಿ ರುಚಿ ಸವಿಯುವುದಂತೂ ಗ್ಯಾರಂಟಿ. ಶನಿವಾರ-ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಎಲ್ಲವೂ ಸ್ತಬ್ದವಾಗಲಿದೆ. ಬಾರ್, ರೆಸ್ಟೋರೆಂಟ್ ಗೂ ಕೂಡ ಬೀಗ ಬೀಳಲಿದೆ. ಸರ್ಕಾರದ ಆದೇಶವನ್ನ ಪಾಲಿಸಿರುವ ಅಬಕಾರಿ ಇಲಾಖೆ, ಎಲ್ಲಾ ಬಾರ್ ಮಾಲೀಕರಿಗೂ ಎರಡು ದಿನ ಬಂದ್ ಮಾಡಲು ಸೂಚನೆ ನೀಡಿದೆ.
ಸರ್ಕಾರದ ನೈಟ್ ಕರ್ಫ್ಯೂ, ವೀಕೆಂಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಅಬಕಾರಿ ಇಲಾಖೆಯಿಂದ ರಿಲೀಸ್ ಮಾಡಿರುವ ಆದೇಶದಲ್ಲಿ ಸೂಚಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳು ಪಾಲನೆ ಮಾಡಬೇಕೆಂದು ತಿಳಿಸಿದೆ.
ಇತ್ತ, ಸರ್ಕಾರದ ವಿರುದ್ಧ ಬಾರ್ ಅಸೋಸಿಯೇಶನ್ ತಿರುಗಿ ಬಿದ್ದಿದ್ದಾರೆ. ನೈಟ್ ಕರ್ಫ್ಯೂ ಬಗ್ಗೆ ನಮಗೆ ಯಾವುದೇ ಆಕ್ಷೇಪಣೆ ಇರಲಿಲ್ಲ. ಆದರೆ ವೀಕೆಂಡ್ ಕರ್ಫ್ಯೂ ಸದ್ಯಕ್ಕೆ ಅಗತ್ಯತೆ ಇರಲಿಲ್ಲ. ಸರ್ಕಾರದ ನಿರ್ಧಾರದಿಂದ ಮದ್ಯ ವ್ಯಾಪಾರಿಗಳಿಗೆ ತೀವ್ರ ಹೊಡೆತ ನೀಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರಸ್ಥರು ಶನಿವಾರ-ಭಾನುವಾರದಂದು ಹೆಚ್ಚಿನ ನಿರೀಕ್ಷೆ ಇಟ್ಟು ಕೊಂಡಿರುತ್ತಾರೆ. ಸರ್ಕಾರ ಈ ರೀತಿಯಾದಂತಹ ನಿರ್ಧಾರವನ್ನ ತೆಗೆದುಕೊಳ್ಳಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರದ ಈ ಆದೇಶಕ್ಕೆ ಸಿಟಿಯ ಮದ್ಯ ಪ್ರಿಯರು ಶಾಕ್ ಆಗಿದ್ದಾರೆ. ಹೀಗಾಗಿ ಬಾರ್ಗಳ ಮುಂದೆ ನಾ ಮುಂದು ತಾ ಮುಂದೆ ಎಂದು ಮುಗಿಬಿದ್ದು ಮದ್ಯ ಖರೀದಿಗೆ ಮುಂದಾಗ್ತಿದ್ದಾರೆ.