ಶಿವಮೊಗ್ಗ: ಮಾಲ್ಗುಡಿ ಡೇಸ್ ಮ್ಯೂಸಿಯಂ ಪ್ರವಾಸತಾಣಕ್ಕೆ ಪ್ರತಿನಿತ್ಯ ಸಾವಿರಾರು ಜನರು ಹೊರ ಜಿಲ್ಲೆಗಳಿಂದ ಬರುತ್ತಾರೆ ಆದರೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆಯಲ್ಲಿ ರೈಲು ನಿಲ್ಲಿಸುತ್ತಿಲ್ಲ ಎಂದು ಅಲ್ಲಿನ ಸ್ಥಳೀಯ ಪ್ರಯಾಣಿಕರು ಮೈಸೂರು-ತಾಳಗುಪ್ಪ ಹಾಗೂ ಶಿವಮೊಗ್ಗ-ತಾಳಗುಪ್ಪ ಮಾರ್ಗದ ಪ್ಯಾಸೆಂಜರ್ ರೈಲಿನ ಮೇಲೆ ಆರೋಪಿಸಿದ್ದಾರೆ.
ಕೆಲಸಕ್ಕಾಗಿ ಹೋಗುವ ಯುವಜನಾಂಗಕ್ಕೆ ಕಡಿಮೆ ಖರ್ಚಿನಲ್ಲಿ ಓಡಾಡಲು ಇರುವ ಸೂಕ್ತ ಮಾರ್ಗ ರೈಲು ಆದರೆ ಈ ಭಾಗದಲ್ಲಿ ಜನಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದೆ. ಕಾರಣ ಇಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಹೊಸದಾಗಿ ರೈಲ್ವೆ ನಿಲ್ದಾಣ ಹಾಗೂ ಫ್ಲ್ಯಾಟ್(ಪ್ಲಾಟ್) ಫಾರಂಗಳು ನಿರ್ಮಾಣ ಆಗಿದ್ದರೂ, ಇಲ್ಲಿ ರೈಲು ನಿಲುಗಡೆ ಆಗುತ್ತಿಲ್ಲ ಆದ್ದರಿಂದ ಗ್ರಾಮಸ್ಥರು ಕೋಟಿ ಖರ್ಚು ಮಾಡಿ ರೈಲ್ವೆ ನಿಲ್ದಾಣ ಮಾಡಿದರೂ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ರೈಲು ನಿಲುಗಡೆಯಿಂದ ರಿಪ್ಪನ್‌ಪೇಟೆ, ಅರಸಾಳು, ಹುಂಚ, ಹೆದ್ದಾರಿಪುರ, ಹಾರೋಹಿತ್ತಲು, ಹೆದ್ದಾರಿಪುರ, ಹೊಸನಗರ, ರಾಮಚಂದ್ರಪುರಮಠ, ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ಕುಂದಾಪುರ, ಬೈಂದೂರು, ಭಟ್ಕಳ, ಉಡುಪಿ, ಕೋಣಂದೂರು, ಆರಗ, ತೀರ್ಥಹಳ್ಳಿ, ಆಗುಂಬೆ. ಕೊಡಚಾದ್ರಿ, ಸಿಗಂದೂರು ಕವಲೆದುರ್ಗ ಕೋಟೆ, ಜೋಗ ಜಲಪಾತ ಇನ್ನಿತರ ಪ್ರಮುಖ ಪ್ರೇಕ್ಷಣಿಯ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಹಾಗೂ ಶಿವಮೊಗ್ಗ, ಮೈಸೂರು, ಬೆಂಗಳೂರು ಮುಂತಾದ ದೂರದ ಊರುಗಳಿಗೆ ಪ್ರಯಾಣಿಸಲು ಅನುಕೂಲ ಆಗುತ್ತದೆ.
ಅಲ್ಲದೇ, ಮಾಲ್ಗುಡಿ ಡೇಸ್ಗೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹೊರ ಜಿಲ್ಲೆಗಳಿಂದ ಹೆಚ್ಚಿನ ಪ್ರವಾಸಿಗರು ಬರುತ್ತಲೇ ಇರುತ್ತಾರೆ ಮತ್ತು ಮಾಲ್ಗುಡಿ ಮ್ಯೂಸಿಯಂನಂತಹ ಇತಿಹಾಸ ಪ್ರಸಿದ್ಧ ಜಾಗವಿರುವ ಈ ಸ್ಥಳದಲ್ಲಿ ರೈಲು ನಿಲುಗಡೆಗೆ ಮಾಡದೇ ಇರುವುದರಿಂದ ಈ ಭಾಗದ ನೂರಾರು ಹಳ್ಳಿಯ ಸಾವಿರಾರು ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ದಯವಿಟ್ಟು ಈ ಭಾಗದಲ್ಲಿ ರೈಲು ನಿಲುಗಡೆಗೆ ಅವಕಾಶ ಮಾಡಿಕೊಡಿ ಎಂದು ಸ್ಥಳೀಯ ಗ್ರಾಮಸ್ಥರು ರೈಲ್ವೇ ಸ್ಟೇಷನ್ ಮುಖ್ಯಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.