Monday, November 25, 2024

ಪಂಜಾಬ್‌ `ಕೈ’ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು

ಸದ್ಯ ದೇಶಾದ್ಯಂತ ಚರ್ಚೆಯಾಗ್ತಿರೋದು ಮೋದಿ ಸೆಕ್ಯೂರಿಟಿ ವಿಚಾರ.. ಸಿಕ್ಕಾಪಟ್ಟೆ ಗಂಭೀರವಾಗಿರುವ ಈ ವಿಚಾರದಲ್ಲಿ ರಾಜಕೀಯ ಕೂಡ ಶುರುವಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಹಾಗಾದ್ರೆ, ಪಂಜಾಬ್‌ ಸಿಎಂ ಹೇಳ್ತಿರೋದೇನು..? ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ತಿರುಗಿ ಬಿದ್ದಿರುವ ಪರಿ ಹೇಗಿದೆ..?
ಪಂಜಾಬ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯ ವಿಚಾರ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗ್ತಿದೆ. ಜೊತೆಗೆ, ಪ್ರಧಾನಿ ಮೋದಿಗೆ ಸೂಕ್ತ ಭದ್ರತೆ ನೀಡದ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಮಲ ಕಲಿಗಳು ತಿರುಗಿ ಬಿದ್ದಿದ್ದಾರೆ.. ಈ ಮಧ್ಯೆ, ಭದ್ರತಾ ವೈಫಲ್ಯ ಸಂಬಂಧ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ಲಾಯರ್ಸ್ ವಾಯ್ಸ್ ಅಸೋಸಿಯೇಷನ್ ಸಲ್ಲಿಸಿದ ಅರ್ಜಿಯನ್ನು ಹಿರಿಯ ವಕೀಲ ಮಣಿಂದರ್ ಸಿಂಗ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಪೀಠದ ಮುಂದೆ ಪ್ರಸ್ತಾಪಿಸಿದ್ದು, ಪೀಠ ಈ ಬಗ್ಗೆ ನಾಳೆ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ. ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಭದ್ರತಾ ಲೋಪದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ :

ಪ್ರಧಾನಿ ಮೋದಿಯವರ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸಲು ಪಂಜಾಬ್ ಸರ್ಕಾರ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ. ಫಿರೋಜ್‌ಪುರಕ್ಕೆ ಭೇಟಿ ನೀಡಬೇಕಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭದ್ರತಾ ಲೋಪ ಕಾರಣದಿಂದ ದೆಹಲಿಗೆ ವಾಪಸ್ ಆಗಿದ್ದರು. ಪ್ರಧಾನಿ ಮೋದಿ ಭದ್ರತೆ ಲೋಪವಾಗುತ್ತಿದ್ದಂತೆ ದೇಶದೆಲ್ಲೆಡೆಯಿಂದ ಪಂಜಾಬ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಪಂಜಾಬ್ ಮುಖ್ಯಮಂತ್ರಿ ಚನ್ನಿಯವರು, ಇದರಲ್ಲಿ ನಮ್ಮದೇನೂ ತಪ್ಪಿಲ್ಲ. ಪ್ರಧಾನಿ ಮೋದಿ ಕೊನೇ ಕ್ಷಣದಲ್ಲಿ ಮಾರ್ಗಬದಲಾವಣೆ ಮಾಡುವ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಈ ಮಧ್ಯೆ ಕೇಂದ್ರ ಗೃಹ ಇಲಾಖೆ ಪಂಜಾಬ್ ಸರ್ಕಾರದಿಂದ ವರದಿ ಕೇಳಿದೆ. ಹೀಗಾಗಿ ಕೂಲಂಕಷವಾಗಿ ತನಿಖೆ ನಡೆಸಲು ಪಂಜಾಬ್ ಸರ್ಕಾರ, ನಿವೃತ್ತ ನ್ಯಾಯಾಧೀಶ ಮೆಹ್ತಾಬ್ ಸಿಂಗ್ ಗಿಲ್ ಮತ್ತು ಗೃಹ ಇಲಾಖೆ ಪ್ರಧಾನಕಾರ್ಯದರ್ಶಿ ಮತ್ತು ನ್ಯಾಯಮೂರ್ತಿ ಅನುರಾಗ್ ವರ್ಮಾರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಈ ಸಮಿತಿ ಮೂರು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಪ್ರಧಾನಿ ರಸ್ತೆ ಮಾರ್ಗವಾಗಿ ಬರುತ್ತಿದ್ದಾರೆಂದು ಪೊಲೀಸರು ನಮಗೆ ಹೇಳಿದರು. ಅವರು ಸುಳ್ಳು ಹೇಳುತ್ತಿದ್ದಾರೆಂದು ನಾವು ಭಾವಿಸಿದ್ದೆವು ಎಂದು ಪ್ರಧಾನಿ ಮೋದಿ ಬೆಂಗಾವಲು ಪಡೆಯನ್ನು ಪ್ರತಿಭಟನಾಕಾರರು ಏಕೆ ತಡೆದರು ಎಂಬುದಕ್ಕೆ ರೈತ ಮುಖಂಡ ಸ್ಪಷ್ಟನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯನ್ನು ತನ್ನ ಕಾರ್ಯಕರ್ತರು ತಡೆದಿರುವುದನ್ನು ಭಾರತೀಯ ಕಿಸಾನ್ ಯೂನಿಯನ್ ಒಪ್ಪಿಕೊಂಡಿದೆ. ಆದ್ರೆ, ರೈತ ಹೋರಾಟಗಾರ ರಾಕೇಶ್‌ ಟಿಕಾಯತ್‌ ಮಾತ್ರ ಇದೆಲ್ಲಾ ಪ್ರಚಾರಕ್ಕೆ ಮಾಡ್ತಿದ್ದಾರೆ ಎಂದು ಆರೋಪಿಸ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನಲ್ಲಿ ಉಂಟಾದಂತಹ ಭದ್ರತಾ ಲೋಪಗಳ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ವಿವರಣೆ ನೀಡಿದ್ದಾರೆ ಪ್ರಧಾನಿ ಹೋಗುತ್ತಿದ್ದ ವಾಹನಕ್ಕೆ ಭದ್ರತಾ ಲೋಪ ಉಂಟಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರಪತಿಗಳು ಈಗಾಗಲೇ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿಯಲ್ಲಿ ಆಗಿರುವ ಭದ್ರತಾ ಲೋಪ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಪ್ರತಿಭಟನಾಕಾರರಿಂದ ಮೋದಿ ಸುಮಾರು 20 ನಿಮಿಷಗಳ ಕಾಲ ಸಿಲುಕಿದ್ದರು. ಇದೇ ವೇಳೆ ಮೋದಿ ವಾಹನ ಹಾಗೂ ಬೆಂಗಾವಲು ವಾಹನ ಸನಿಹದಲ್ಲಿ ಸಾರ್ವಜನಿಕರ ವಾಹನಗಳು ಹಾದು ಹೋಗುವ ದೃಶ್ಯಗಳು ಭದ್ರತಾ ಲೋಪದ ಗಂಭೀರತೆಯನ್ನು ಸಾರಿ ಹೇಳಿದೆ. ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕೆಸರೆರಾಟವೂ ಆರಂಭಗೊಂಡಿದೆ.

ಇದು ಪಂಜಾಬ್ ಪೊಲೀಸರು ಹಾಗೂ ಪಂಜಾಬ್ ಕಾಂಗ್ರೆಸ್ ಸರ್ಕಾರದ ಪಿತೂರಿ ಎಂದು ಬಿಜೆಪಿ ಆರೋಪಿಸಿದ್ದರೆ, ಮೋದಿಗೆ ಯಾವುದೇ ಭದ್ರತಾ ಬೆದರಿಕೆ ಇರಲಿಲ್ಲ ಎಂದು ಪಂಜಾಬ್ ವಾದಿಸಿದೆ.

ಹಾಗಾದರೆ ಪ್ರಧಾನಿ ಮೋದಿ ಭದ್ರತೆ ಯಾರ ಹೊಣೆ? ಮೋದಿ ಭದ್ರತೆಗೆ ಇರುವ ಪ್ರೊಟೋಕಾಲ್ ಏನು? ಹೌದು, ಭಾರತದ ಪ್ರಧಾನಿಯ ಸಂಪೂರ್ಣ ರಕ್ಷಣೆ ಹಾಗೂ ಭದ್ರತಾ ಹೊಣೆ ಸ್ಪೆಷಲ್ ಪೊಟೆಕ್ಷನ್ ಗ್ರೂಪ್​ಗೆ ಸೇರಿದೆ. ಪ್ರಧಾನಿಗೆ ಎಲ್ಲಾ ಸಂದರ್ಭದಲ್ಲೂ SPG ರಕ್ಷಣೆ ನೀಡಲಿದೆ. ಭಾರತದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ, ಪ್ರಧಾನಿ ಕಚೇರಿ, ಮನೆ, ರಾಜ್ಯ ಪ್ರವಾಸ, ವಿದೇಶ ಪ್ರವಾಸ ಸೇರಿದಂತೆ ಎಲ್ಲೆ ಹೋದರೂ SPG ಭದ್ರತೆ ನೀಡಲಿದೆ. ಪ್ರಧಾನಿ ಜೊತೆಗೆ ಪ್ರಧಾನಿ ಕುಟುಂಬಕ್ಕೂ ರಕ್ಷಣೆ ನೀಡಲಿದೆ. ಆದ್ರೆ, ಇದೆಲ್ಲಾ ತೊಂದರೆಗಳಾಗಿದ್ದು ಏಕೆ ಅನ್ನೋದು ತನಿಖೆಯಿಂದ ತಿಳಿಯಬೇಕಿದೆ.

RELATED ARTICLES

Related Articles

TRENDING ARTICLES