Monday, December 23, 2024

ಕೋವಿಡ್​ ಎಫೆಕ್ಟ್​ : ಆತಂಕದಲ್ಲಿ ಚಂದನವನ

ಬೆಂಗಳೂರು : ಕಳೆದ ವರ್ಷ 250 ಚಿತ್ರಗಳು ಪ್ರೊಡಕ್ಷನ್ ಆಗೋ ನಮ್ಮ ಸ್ಯಾಂಡಲ್​ವುಡ್​ನಲ್ಲಿ ಕೊರೋನಾದಿಂದಾಗಿ ಕೇವಲ 95 ತಯಾರಾದವು. ಈ ವರ್ಷದ ಆರಂಭದಲ್ಲೇ ಇಂಡಸ್ಟ್ರಿಗೆ ಬಿಗ್ ಶಾಕ್ ನೀಡಿದೆ ಒಮೈಕ್ರಾನ್. ಹೌದು.. ಸರ್ಕಾರದ ನಿರ್ಬಂಧ ಅನ್ನೋದಕ್ಕಿಂತ ಕೊರೋನಾನೇ ನಿರ್ಬಂಧ ಹೇರೋ ಮೂಲಕ ಜನವರಿ ತಿಂಗಳ ಮೂವೀಸ್​ಗೆ ಬಿಗ್ ಬ್ರೇಕ್ ಬಿದ್ದಿದೆ.

ಕಮ್ ಲೆಟ್ಸ್ ಸೆಲೆಬ್ರೇಟ್ ಸಿನಿಮಾ ಟುಗೆದರ್ ಅನ್ನೋ ಸಣ್ಣ ಸೃಶ್ಯ ತುಣುಕೊಂದನ್ನ ನೋಡಿದ್ರೆ ಕೊರೋನಾದಿಂದ ನಮ್ಮ ಇಂಡಸ್ಟ್ರಿ ಹಾಗೂ ಥಿಯೇಟರ್​ಗಳು ಯಾವ ಹಂತ ತಲುಪಿದ್ದವು ಅನ್ನೋದ್ರ ಚಿತ್ರಣ ಸಿಗಲಿದೆ. ಕೆಆರ್​ಜಿ ಸ್ಟುಡಿಯೋಸ್ ತಯಾರಿಸಿದ್ದ ಈ ವಿಡಿಯೋ, ಬಹಳ ಅರ್ಥಪೂರ್ಣವಾಗಿ ಹಾಗೂ ಎಮೋಷನಲಿ ಎಲ್ರಿಗೂ ಕನೆಕ್ಟ್ ಆಗುವಂತಿತ್ತು.

ಇದೀಗ ಮತ್ತೊಮ್ಮೆ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗ್ತಿದೆ. ಹೌದು.. ಕಳೆದ ವರ್ಷಕ್ಕೇನೇ ಕೊರೋನಾ ಫುಲ್​ಸ್ಟಾಪ್ ಇಡುತ್ತೆ ಅಂತ ನೋಡಿದ್ರೆ, ಈ ವರ್ಷವೂ ಅದ್ರ ಅಟ್ಟಹಾಸ ಮುಂದುವರೆದಿದೆ. ಕಳೆದ ವರ್ಷ ನಮ್ಮ ಸ್ಯಾಂಡಲ್​ವುಡ್ ಅಂಗಳದಲ್ಲೇ ಹೆಚ್ಚೂ ಕಡಿಮೆ 250 ಸಿನಿಮಾ ತೆರೆ ಕಾಣಬೇಕಿತ್ತು. ಆದ್ರೆ ಆಗಿದ್ದು ಮಾತ್ರ ಜಸ್ಟ್ 95.

ಹೊಸ ವರ್ಷ ಹೊಸ ಆಶಯಗಳೊಂದಿಗೆ ಶುರುವಾದ ಈ ವರುಷ ಕೂಡ ಹರುಷ ತರೋ ಯಾವುದೇ ಲಕ್ಷಣ ತೋರಿಲ್ಲ. ಕಾರಣ ಕೊರೋನಾ ಮೂರನೇ ಅಲೆಯ ಮನ್ಸೂಚನೆ. ಒಮೈಕ್ರಾನ್ ಉಲ್ಬಣಗೊಂಡು, ಕೇಸ್​ಗಳ ಸಂಖ್ಯೆ ಹೆಚ್ಚಾಗ್ತಿರೋದು. ಇದನ್ನ ಕಂಡು ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ತಿರೋದು. ಯೆಸ್.. ಈಗಾಗ್ಲೇ ಥಿಯೇಟರ್​ಗಳಿಗೆ 50-50 ರೂಲ್ಸ್ ಜಾರಿ ಮಾಡಿ, ಬಾಕ್ಸ್ ಆಫೀಸ್​ಗೆ ಹೊಡೆತ ಬೀಳೋ ಕೆಲಸ ಮಾಡಿದೆ.

ಜನವರಿ ಮೊದಲ ವಾರದಲ್ಲಿ ವರ್ಷದ ಮೊದಲ ಸಿನಿಮಾ ಆಗಿ ಡಿಎನ್​ಎ ರಿಲೀಸ್ ಆಗಬೇಕಿತ್ತು. ಈ ಚಿತ್ರದ ಟ್ರೈಲರ್ ಹಾಗೂ ಕಾನ್ಸೆಪ್ಟ್​ಗೆ ಇಡೀ ಚಿತ್ರರಂಗ ಫಿದಾ ಆಗಿತ್ತು. ಚಿತ್ರತಂಡ ಸಿನಿಮಾನ ರಿಲೀಸ್ ಮಾಡೋ ಹುಮ್ಮಸ್ಸಿನಲ್ಲಿ ಪ್ರಮೋಷನ್ಸ್ ಕೂಡ ಶುರುವಿಟ್ಟಿತ್ತು. ನಿರ್ದೇಶಕ ಪ್ರಕಾಶ್ ರಾಜ್ ವೀಕೆಂಡ್ ಕರ್ಫ್ಯೂನಿಂದಾಗಿ ಚಿತ್ರದ ರಿಲೀಸ್​ನ ಮುಂದೂಡಿರೋದನ್ನ ಸ್ಪಷ್ಟ ಪಡಿಸಿದ್ದಾರೆ.

ಇನ್ನೂ ಇದೇ ಜನವರಿ 21ಕ್ಕೆ ತೆರೆಗೆ ಬರೋಕೆ ಸಕಲ ತಯಾರಿ ನಡೆಸಿಕೊಂಡಿದ್ದ ಜೋಗಿ ಪ್ರೇಮ್​ರ ಏಕ್ ಲವ್ ಯಾ ಚಿತ್ರ ಕೂಡ ರಿಲೀಸ್​ನ ಮುಂದೂಡಿದೆ. ಹೌದು, ರಾಣಾ ಹಾಗೂ ರಚಿತಾ ರಾಮ್ ಜೋಡಿಯ ಈ ಸಿನಿಮಾನ ರಕ್ಷಿತಾ ಪ್ರೇಮ್ ಪ್ರೊಡ್ಯೂಸ್ ಮಾಡಿದ್ರು. ಭರ್ಜರಿ ಪ್ರಮೋಷನ್ಸ್ ಕೂಡ ನಡೆಸಿದ್ರು. ಆದ್ರೆ 50-50 ರೂಲ್ಸ್​ನಿಂದ ಹಾಕಿರೋ ಬಂಡವಾಳ ಗಳಿಸೋದು ಕಷ್ಟಸಾಧ್ಯ ಅಂತ ಪ್ರೇಮ್ ಈ ಚಿತ್ರದ ರಿಲೀಸ್​ನ ಪೋಸ್ಟ್​ಪೋನ್ ಮಾಡಿದ್ದಾರೆ.

ಶರಣ್​ರ ಅವತಾರ ಪುರುಷ ಹಾಗೂ ರಕ್ಷಿತ್ ಶೆಟ್ಟಿಯ 777 ಚಾರ್ಲಿ ಚಿತ್ರಗಳು ಈಗಾಗ್ಲೇ ರಿಲೀಸ್​ನ ಮುಂದಕ್ಕೆ ಹಾಕಿ ಸೇಫ್ ಝೋನ್​ಗೆ ತೆರಳಿದ್ವು. ಆ ಸಾಲಿಗೆ ಮತ್ತಷ್ಟು ಕನ್ನಡ ಚಿತ್ರಗಳು ಸೇರಿಕೊಳ್ತಿರೋದು ಇಂಟರೆಸ್ಟಿಂಗ್.

ಹೀಗೆ ಸಾಲು ಸಾಲು ಚಿತ್ರಗಳ ರಿಲೀಸ್ ಮುಂದಕ್ಕೆ ಹೋಗ್ತಿದ್ರೆ, ನಿರ್ದೇಶಕ ದಯಾಳ್ ಪದ್ಮನಾಭನ್ ಮಾತ್ರ ಜನವರಿ 28ಕ್ಕೆ ಅನೌನ್ಸ್ ಮಾಡಿದ್ದ ತಮ್ಮ ಸಿನಿಮಾನ ಸಂಕ್ರಾಂತಿಗೆ ರಿಲೀಸ್ ಮಾಡ್ತಿದ್ದಾರೆ. ಅದನ್ನ ಸ್ವತಃ ಅವ್ರೇ ಪ್ರೀಪೋನ್ ಮಾಡಿರೋದಾಗಿ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಲೂಸ್​ ಮಾದ ಯೋಗಿ, ಸಾಯಿ ಕುಮಾರ್ ನಟನೆಯ ಒಂಬತ್ತನೇ ದಿಕ್ಕು ಚಿತ್ರ ಈಗಾಗ್ಲೇ ಸ್ಯಾಂಪಲ್ಸ್​ನಿಂದ ಭರವಸೆ ಮೂಡಿಸಿತ್ತು. ಒಟ್ಟಾರೆ ದಯಾಳ್​ರ ಲೆಕ್ಕಾಚಾರ ಎಲ್ಲರಿಗಿಂತ ವಿಭಿನ್ನವಾಗಿರೋದು ಇಂಪ್ರೆಸ್ಸೀವ್.

ಆಂಧ್ರ- ತೆಲಂಗಾಣದಲ್ಲಿ ಇನ್ನೂ ಕರ್ಫ್ಯೂ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದ್ರೆ ಅಲ್ಲಿನ ಬಿಗ್ ಸ್ಟಾರ್ಸ್​ ಬಿಗ್​ ಮೂವೀಸ್ ಮಾತ್ರ ರಿಲೀಸ್​ನ ಪೋಸ್ಟ್​ಪೋನ್ ಮಾಡಿ ಅಚ್ಚರಿ ಮೂಡಿಸಿವೆ. ಆ ಪೈಕಿ ರಾಜಮೌಳಿಯ 400 ಕೋಟಿ ಪ್ರಾಜೆಕ್ಟ್ ತ್ರಿಬಲ್ ಆರ್ ಮೊದಲ ಸ್ಥಾನ ಅಲಂಕರಿಸಿದೆ.

ಜನವರಿ 7ಕ್ಕೆ ತೆರೆಗಪ್ಪಳಿಸಬೇಕಿದ್ದ ರಾಮ್ ಚರಣ್- ಜೂನಿಯರ್ ಎನ್​ಟಿಆರ್​ರ ತ್ರಿಬಲ್ ಆರ್ ಡೇಟ್ ಮುಂದೆ ಹೋಗ್ತಿದ್ದಂತೆ, ಡಾರ್ಲಿಂಗ್ ಪ್ರಭಾಸ್​ರ ರಾಧೆ ಶ್ಯಾಮ್ ಟೀಂ ಕೂಡ ಸಂಕ್ರಾಂತಿ ರಿಲೀಸ್​ನ ಮತ್ತಷ್ಟು ಮುಂದಕ್ಕೆ ಹಾಕಿದೆ. ಒಟ್ಟಾರೆ ಇವ್ರ ಹಾದಿಯಲ್ಲಿ ನಮ್ಮ ಸ್ಯಾಂಡಲ್​ವುಡ್ ಮಂದಿ ಕೂಡ ಸಾಗ್ತಿದ್ದು, ವಿಕ್ರಾಂತ್ ರೋಣ, ಕೆಜಿಎಫ್ ಚಾಪ್ಟರ್ 2 ಕಥೆ ಏನಾಗಲಿದೆ ಅನ್ನೋದು ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES