Monday, December 23, 2024

‘ಪಂಜಾಬ್‌ ಸರ್ಕಾರ ವಜಾಗೊಳಿಸಬೇಕು’-ಸಿಎಂ ಬೊಮ್ಮಾಯಿ

ಬೆಂಗಳೂರು: ಪಂಜಾಬ್‌ನ ಫಿರೋಜ್​ಪುರ ಫ್ಲೈಓವರ್​ನ ಟ್ರಾಫಿಕ್​ನಲ್ಲಿ ಸಿಲುಕಿ ಪ್ರಧಾನಿ ನರೇಂದ್ರ ಮೋದಿ ಅವರು ವಾಪಸ್ಸಾಗಿರುವುದು ಪಂಜಾಬ್​​ ಸರ್ಕಾರದ ಕೈವಾಡ ಎಂದು ಆರೋಪಿಸಲಾಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಪಂಜಾಬ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪವಾಗಿದೆ. ಪ್ರಧಾನಿಗೆ ಮುಕ್ತವಾಗಿ ಓಡಾಡಲು ಅವಕಾಶ ನೀಡದಿರುವುದು ಖಂಡನೀಯ ಎಂದರು. ಪ್ರಧಾನಿಗೆ ಗೌರವ ಕೊಡುವುದು ಎಲ್ಲ ಸರ್ಕಾರಗಳ ಕರ್ತವ್ಯ. ಭದ್ರತೆ ಒದಗಿಸುವಲ್ಲಿ ಪಂಜಾಬ್ ಸರ್ಕಾರ ವಿಫಲವಾಗಿದೆ. ಪಂಜಾಬ್‌ ಸರ್ಕಾರವನ್ನ ವಜಾಗೊಳಿಸಬೇಕು. ಉನ್ನತ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಟ್ವೀಟ್​ ಮೂಲಕ ಸಿಎಂ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಆದರೆ ಪಂಜಾಬ್ ಮುಖ್ಯಮಂತ್ರಿ ಮಾತ್ರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ. ಪ್ರಧಾನಿಯವರ ಪೂರ್ವನಿರ್ಧಾರಿತ ಕಾರ್ಯಕ್ರಮದಲ್ಲಿ ರಸ್ತೆ ಪ್ರಯಾಣ ಇರಲಿಲ್ಲ. ಆದ್ದರಿಂದ ಪ್ರಧಾನಿ ಅನಿರೀಕ್ಷಿತವಾಗಿ ಪ್ರಯಾಣಿಸಿದುದಕ್ಕೆ ರೈತರ ತಡೆಯಿಂದ ಅವರು ಕಾಯುವಂತಾಯಿತು. ನಾವು ಅವರಿಗೆ ಸ್ವಲ್ಪ ಕಾಯುವಂತೆ ಅಥವ ಬದಲಿ ರಸ್ತೆಯನ್ನು ಉಪಯೋಗಿಸುವಂತೆ ಕೇಳಿಕೊಂಡೆವು. ಆದರೆ ಮೋದಿ ಹಿಂತಿರುಗಲು ನಿರ್ಧರಿಸಿದರು. ಇದರಲ್ಲಿ ನಮ್ಮ ಯಾವ ತಪ್ಪೂ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಒಬ್ಬ ಮುಖ್ಯಮಂತ್ರಿ ಪರಿಸ್ಥಿತಿಯನ್ನು ಇಷ್ಟು ವಿಶದವಾಗಿ ವಿವರಿಸಿದ ಮೇಲೂ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿಯವರು ಜನರಿಂದ ಚುನಾಯಿತವಾದ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಹೇಳಿಕೆ ನೀಡಿರುವುದು ಅವರಿಗೆ ಪ್ರಜಾಪ್ರಭುತ್ವದ ಮೇಲೆ ಎಷ್ಟರ ಮಟ್ಟಿಗೆ ಗೌರವವಿದೆ ಎಂಬುದನ್ನು ತೋರಿಸುತ್ತದೆ.

 

RELATED ARTICLES

Related Articles

TRENDING ARTICLES