ರಾಜರತ್ನ ಅಪ್ಪು ದೇವರಂತೆ ಅಭಿಮಾನಿಗಳು ಹಾಗೂ ಕಲಾಭಿಮಾನಿಗಳಿಂದ ಪೂಜೆ ನಮಸ್ಕಾರ ಮಾಡಿಸಿಕೊಳ್ತಿದ್ದಾರೆ. ಕಾಕತಾಳೀಯವಾಗಿ ಸಿನಿಮಾವೊಂದಕ್ಕಾಗಿ ದೇವರ ರೂಪ ತಾಳಿದ್ರು ದೊಡ್ಮನೆ ಹುಡ್ಗ. ಆ ಸಿನಿಮಾ ಈಗ ಶೂಟಿಂಗ್ ಮುಗಿಸಿ, ಕುಂಬಳಕಾಯಿ ಹೊಡೆಯೋ ಮೂಲಕ ಬೆಳ್ಳಿಪರದೆ ಬೆಳಗೋ ಮನ್ಸೂಚನೆ ಕೊಟ್ಟಿದೆ.
ಕರುನಾಡಿನಲ್ಲಿ ಪವರ್ ಹೋಗಿ ಎರಡು ಮಾಸಗಳಾಯ್ತು. ಇಂದಿಗೂ ಆ ಅಂಧಕಾರದಿಂದ ಹೊರಬರಲಾಗ್ತಿಲ್ಲ ಕನ್ನಡಿಗರು. ಕನ್ನಡದ ಅಪರೂಪದ ಮುತ್ತು, ರತ್ನ, ದೊಡ್ಮನೆಯ ನಂದಾದೀಪ ಪುನೀತ್ ಅಗಲಿಕೆ ಇನ್ನಿಲ್ಲದೆ ಭಾದಿಸುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿರೋ ಅವ್ರ ಪುಣ್ಯಭೂಮಿ ತಿರುಪತಿ ತಿಮ್ಮಪ್ಪನ ದರ್ಶನದಷ್ಟೇ ಪ್ರಖ್ಯಾತಿ ಪಡೆಯುತ್ತಿದೆ.
ರಾಜ್ಯದ ಮೂಲೆ ಮೂಲೆಯಿಂದ ಅಪಾರ ಪ್ರಮಾಣದ ಅಭಿಮಾನಿ ಬಳಗ ನಿತ್ಯವೂ ಸಮಾಧಿ ದರ್ಶನ ಮಾಡಿ, ಪೂಜೆ ಪುನಸ್ಕಾರ ಸಲ್ಲಿಸುತ್ತಲೇ ಇದೆ. ಅಂದಹಾಗೆ ಪುನೀತ್ರನ್ನ ದೊಡ್ಡ ಪರದೆ ಮೇಲೆ ನೋಡೋಕೆ ಜೇಮ್ಸ್ ರಿಲೀಸ್ ಆಗೋವರೆಗೂ ಕಾಯಲೇಬೇಕಾ ಅನ್ನೋರಿಗೆ ಕಂಡಿತಾ ಇಲ್ಲ ಅನ್ನೋ ಉತ್ತರ ಸಿಗಲಿದೆ. ಕಾರಣ ಲಕ್ಕಿ ಮ್ಯಾನ್.
ಹೌದು.. ರಾಜರತ್ನ ಲಕ್ಕಿಮ್ಯಾನ್ ಅನ್ನೋ ಮತ್ತೊಂದು ಚಿತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಡಾರ್ಲಿಂಗ್ ಕೃಷ್ಣ ಲೀಡ್ನಲ್ಲಿದ್ರೂ, ಸುಮಾರು 40 ನಿಮಿಷದ ಸ್ಪೆಷಲ್ ಪಾತ್ರವನ್ನ ನಿರ್ವಹಿಸೋ ಮೂಲಕ ನೋಡುಗರ ಕಣ್ಮನ ತಣಿಸಲಿದ್ದಾರೆ ಪರಮಾತ್ಮ ಅಪ್ಪು. ಈ ಹಿಂದೆ ಪ್ರಭುದೇವ ಜೊತೆ ಅಪ್ಪು ಸ್ಟೆಪ್ ಹಾಕೋ ವಿಡಿಯೋ ವೈರಲ್ ಆಗಿತ್ತು.
ತಮಿಳಿನ ಓ ಮೈ ಕಡವುಲೇ ಚಿತ್ರದ ರಿಮೇಕ್ ಸಿನಿಮಾ ಇದಾಗಿದ್ದು, ಅಲ್ಲಿ ವಿಜಯ್ ಸೇತುಪತಿ ದೇವರ ಪಾತ್ರ ನಿರ್ವಹಿಸಿದರು. ಅದೇ ರೋಲ್ನ ಪುನೀತ್ ಪ್ಲೇ ಮಾಡೋ ಮೂಲಕ ಚಿತ್ರದಲ್ಲೂ ದೇವರಾಗಿ ದರ್ಶನ ನೀಡಲಿದ್ದಾರೆ. ಪ್ರಭುದೇವ ಸಹೋದರ ನಾಗೇಂದ್ರ ನಿರ್ದೇಶನದ ಈ ಸಿನಿಮಾ ಇತ್ತೀಚೆಗಷ್ಟೇ ಶೂಟಿಂಗ್ ಕಂಪ್ಲೀಟ್ ಮಾಡಿ, ಕುಂಬಳಕಾಯಿ ಹೊಡೆದಿದೆ.
ನ್ಯೂ ಇಯರ್ ದಿನ ಡಾರ್ಲಿಂಗ್ ಕೃಷ್ಣ ಜೋಡಿಯ ಫಸ್ಟ್ಲುಕ್ ಜೊತೆ ಪುನೀತ್ ರಾಜ್ಕುಮಾರ್ ಇರೋ ಪೋಸ್ಟರ್ನ ರಿವೀಲ್ ಮಾಡಿತ್ತು ಚಿತ್ರತಂಡ. ಇದೀಗ ಶೂಟಿಂಗ್ ಪ್ಯಾಕಪ್ ಮಾಡಿ, ಅಪ್ಪು ಅಭಿಮಾನಿಗಳಿಗೆ ಆದಷ್ಟು ಬೇಗ ಬಿಗ್ ಸ್ಕ್ರೀನ್ಗೆ ಬರೋ ಮನ್ಸೂಚನೆ ಕೊಟ್ಟಿದೆ.
ಅಂದಹಾಗೆ ನಮ್ಮ ಕನ್ನಡದ ಮುತ್ತಿನಂತ ಮನಸ್ಸಿನ ಸಮಾಜ ಸೇವೆ ಇಡೀ ವಿಶ್ವಕ್ಕೆ ಗೊತ್ತಾಗುವಂತಾಗಿದೆ. ಅಲ್ಲದೆ, ಅವರ ಸಿನಿಮಾಗಳಿಗೂ ವಿದೇಶಗಳಲ್ಲಿ ಸಿಕ್ಕಾಪಟ್ಟೆ ಬೇಡಿಕೆ. ಇತ್ತೀಚೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ರಾಜಕುಮಾರ ಸಿನಿಮಾನ ಪ್ರದರ್ಶಿಸಲಾಗಿತ್ತು. ಅದಕ್ಕೆ ಹೊಂಬಾಳೆ ಫಿಲಂಸ್ ಧನ್ಯವಾದ ಕೂಡ ತಿಳಿಸಿದೆ.
ಒಟ್ಟಾರೆ ಬಹದ್ದೂರ್ ಚೇತನ್ರ ಜೇಮ್ಸ್ ಸಿನಿಮಾದ ಜೊತೆ ಡಾರ್ಲಿಂಗ್ ಕೃಷ್ಣ ಜೊತೆಗಿನ ಲಕ್ಕಿ ಮ್ಯಾನ್ ಕೂಡ ಕನ್ನಡ ಕಲಾಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡಲಿದೆ. ಇವು ದೊಡ್ಮನೆ ಹುಡ್ಗನ ಕೊನೆಯ ಸಿನಿಮಾಗಳು ಅನ್ನೋ ಕಾರಣಕ್ಕೆ ಚಿತ್ರರಸಿಕರು ಸಹ ಬಹಳ ಕಾತರದಿಂದ ಕಾಯ್ತಿರೋದು ಸುಳ್ಳಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ