Sunday, November 3, 2024

ಒಂದೇ ದಿನ ಎರಡು ಕಡೆ ಸಿಲಿಂಡರ್ ಸ್ಫೋಟ

ಇತ್ತೀಚಿನ ದಿನಗಳಲ್ಲಿ ಬಳಕೆದಾರರ ನಿರ್ಲಕ್ಷ್ಯವೋ, ಅಥವಾ ಸಿಲಿಂಡರ್‌ಗಳ ಕಳಪೆ ನಿರ್ವಹಣೆಯೋ.. ಒಟ್ಟಿನಲ್ಲಿ ಸ್ಫೋಟಗಳು ಸಂಭವಿಸುತ್ತಲೇ ಇವೆ. ಬೆಂಗಳೂರಿನಲ್ಲಿ ಸೋಮವಾರ ಒಂದೇ ದಿನ ಒಂದೇ ಏರಿಯಾದ ಎರಡು ಕಡೆ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಒಟ್ಟು 8 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.ರಾತ್ರಿ 8:45ರ ಸುಮಾರಿಗೆ ಅತ್ತಿಗುಪ್ಪೆಯ 2ನೇ ಕ್ರಾಸ್‌ನ ಮನೆಯೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಮನೆಯಲ್ಲಿ ವಾಸವಿದ್ದ ಸುಕುಮಾರ್, ಅವರ ಪತ್ನಿ ಹರ್ಷಾ, ಮಕ್ಕಳಾದ ಗಾನಶ್ರೀ, ಹೇಮೇಶ್ವರ್, ಮನೆ ಮಾಲೀಕರಾದ ರಾಮಕ್ಕ, ಆಕೆಯ ಪುತ್ರಿ ಅನಿತಾ ಮೊಮ್ಮಗಳು ರಚನಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಕುಮಾರ್ ಪತ್ನಿ ಹರ್ಷಾ ಅಡುಗೆ ಮನೆಗೆ ಹೋದಾಗ ಸಿಲಿಂಡರ್ ಸೋರಿಕೆಯಾಗಿರುವುದು ಕಂಡು ಬಂದಿದ್ದು ತಕ್ಷಣ ಇಡೀ ಫ್ಯಾಮಿಲಿ ಮನೆಯಿಂದ ಹೊರಗಡೆ ಬಂದಿದೆ. ಇದೇ ವೇಳೆ ಮೇಲ್ಮಹಡಿಯಲ್ಲಿದ್ದ ಮಾಲಕಿ ರಾಮಕ್ಕ ಫ್ಯಾಮಿಲಿ ಸಹ ಹೊರಗಡೆ ಬಂದಿದೆ. ಗೇಟ್ ಬಳಿ ನಿಂತು ಏನಾಗ್ತಿದೆ ಎಂದು ನೋಡುತ್ತಿರುವಾಗಲೇ ದೇವರ ಕೋಣೆಯಲ್ಲಿದ್ದ ದೀಪಕ್ಕೆ ತಗುಲಿದ ಬೆಂಕಿಯ ಕೆನ್ನಾಲಿಗೆ ಮನೆ ಮುಂದಿನ ರಸ್ತೆಯವರೆಗೂ ಆವರಿಸಿದೆ. ಸ್ಫೋಟದ ಪರಿಣಾಮ ಗೇಟ್ ಬಳಿ ನಿಂತಿದ್ದ ಏಳು ಜನರಿಗೆ ಸುಟ್ಟ ಗಾಯಗಳಾಗಿದ್ದು ಗಾಯಾಳುಗಳು ESI ಮತ್ತು Victoria ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಸೋಮವಾರ ಒಂದೇ ದಿನ ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಇದು ಎರಡನೇ ಸಿಲಿಂಡರ್ ಸ್ಫೋಟವಾಗಿದೆ. ಬೆಳ್ಳಂಬೆಳಗ್ಗೆ ಚಂದ್ರಾಲೇಔಟ್‌ನ ಸಂತೃಪ್ತಿ ಉತ್ತರ ಕರ್ನಾಟಕ ಜವಾರಿ ಊಟದ ಮನೆ ಹೆಸರಿನ ಹೊಟೇಲ್ ಕಮ್ ಪಿ.ಜಿಯ ಕಿಚನ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿತ್ತು. ಪರಿಣಾಮ ಹೋಟೆಲ್ ಮಾಲೀಕ ಮಹೇಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಎರಡೂ ಘಟನೆಗಳಲ್ಲಿ ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲವಾದರೂ ವರ್ಷಾರಂಭದಲ್ಲೇ ನಡೆದಿರುವ ಎರಡೂ ಘಟನೆಗಳು ನಿತ್ಯ ಸಿಲಿಂಡರ್ ಬಳಸುವವರಿಗೆ ಎಚ್ಚರಿಕೆಯ ಕರೆಗಂಟೆಗಳಾಗಿವೆ.

ಚಂದ್ರಶೇಖರ್ ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES