ರಾಜ್ಯ : ಕೊರೋನಾ ಸೋಂಕು ಪ್ರಕರಣಗಳು ತೀವ್ರ ಗತಿಯಲ್ಲಿ ಏರುತ್ತಿವೆ. ಶಾಲೆಗಳು ಬಂದ್ ಆಗುತ್ತವೆಯೇ? ಆಥವಾ ಶಾಲೆಗಳು ಮುಂದುವರೆಯಲಿವೆಯಾ? ಎಂಬುದರ ಬಗ್ಗೆ ರಾಜ್ಯದಲ್ಲಿ ಗೊಂದಲ ಏರ್ಪಟ್ಟಿದೆ. ಈ ಎಲ್ಲಾ ಗೊಂದಲಗಳಿಗೆ ಶಿಕ್ಷಣ ಸಚಿವ ಬಿ. ಸಿ.ನಾಗೇಶ್ ತೆರೆ ಎಳೆದಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಪಾಸಿಟಿವಿಟಿ ರೇಟ್ ಜಾಸ್ತಿ ಆಗಿದೆ. ಆದರೆ, ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಒಳಗಾಗಿಲ್ಲ. ಇಲ್ಲಿಯವರೆಗೂ ಶಾಲೆಗಳಲ್ಲಿ ಕೊರೊನಾ ಸೋಂಕು ಹರಡಿಲ್ಲ. ಇನ್ನು ಕಳೆದ ಹದಿನೈದು ದಿನದಲ್ಲಿ 193 ಕೊರೊನಾ ಪಾಸಿಟೀವ್ ಕೇಸು ಕಾಣಿಸಿಕೊಂಡಿದ್ದರೂ ಯಾವೊಂದು ಮಗುವಿಗೂ ತೊಂದರೆ ಆಗಿಲ್ಲ. ಬೇರೊಬ್ಬರಿಗೂ ಹರಡಿಲ್ಲ.
ಇದು ರಾಜ್ಯದಲ್ಲಿ ಕೊರೊನಾ ಸೋಂಕು ಹರಡಿರುವ ಬಗ್ಗೆ ಇರುವ ವಸ್ತುಸ್ಥಿತಿ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ತಾಲೂಕುವಾರು ಶಾಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ನೋಡಿಕೊಂಡು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.