ಕೊಯಿಮತ್ತೂರು: ಕೊಯಿಮತ್ತೂರಿನಿಂದ ಬೆಂಗಳೂರಿಗೆ ಹೊರಡುವ ಸಮಯದಲ್ಲಿ ಕೇರಳದ ಕಾಂಗ್ರೆಸ್ ನಾಯಕನನ್ನು ರಿವಾಲ್ವರ್ ಹೊಂದಿದ ಕಾರಣಕ್ಕಾಗಿ ಬಂಧಿಸಲಾಗಿದೆ. ಕೇರಳದ ಕಾಂಗ್ರೆಸ್ ನಾಯಕನಾಗಿರುವ ಕೆ.ಎಸ್.ಬಿ. ಥಂಗಳ್ ಅವರನ್ನು ಮಂಗಳವಾರ ಬೆಳಿಗ್ಗೆ ಅವರ ಲಗೇಜಿನಲ್ಲಿ ಒಂದು ರಿವಾಲ್ವರ್ ಮತ್ತು 7 ಜೀವಂತ ಗುಂಡುಗಳು ಸಿಕ್ಕ ಕಾರಣಕ್ಕಾಗಿ ತಕ್ಷಣ ಬಂಧಿಸಲಾಯಿತು. ರಿವಾಲ್ವರ್ ಹಾಗೂ ಗುಂಡುಗಳನ್ನು ವಶಪಡಿಸಿಕೊಂಡು ಮುಂದಿನ ತನಿಖೆಗಾಗಿ ಅವರನ್ನು ಪಿಲಮೇದು ಪೊಲೀಸರಿಗೆ ಒಪ್ಪಿಸಲಾಗಿದೆ.
ಈ ಕಾಂಗ್ರೆಸ್ ನಾಯಕ ಬೆಂಗಳೂರು ಮೂಲಕವಾಗಿ ಪಂಜಾಬಿನ ಅಮೃತಸರಕ್ಕೆ ಇಂಡಿಗೊ ವಿಮಾನದಲ್ಲಿ ಹೊರಟಿದ್ದರು. ತನ್ನ ಬ್ಯಾಗಿನಲ್ಲಿ ರಿವಾಲ್ವರ್ ಇರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಅವರು CISF ಅಧಿಕಾರಿಗಳಿಗೆ ಹೇಳಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುವ ವೇಳೆ ರಿವಾಲ್ವರ್ ಕೊಂಡೊಯ್ಯಲು ಅವರ ಬಳಿ ಯಾವುದೇ ದಾಖಲಾತಿಗಳಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥಂಗಳ್ ಕಳೆದ 15 ವರ್ಷಗಳಿಂದಲೂ ಮಕ್ಕಳ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿಯಾಗಿದ್ದು, ಮಕ್ಕಳಿಗೆ ಸಮವಸ್ತ್ರವನ್ನು ಖರೀದಿಸಲು ಅಮೃತಸರಕ್ಕೆ ತೆರಳುತ್ತಿದ್ದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.