ಹುಬ್ಬಳ್ಳಿ: ಕಾನೂನು ವಿಶ್ವ ವಿದ್ಯಾಲಯದಲ್ಲಿಯೇ ಕಾನೂನು ಪಾಲನೆಯಾಗ್ತಿಲ್ಲವೇ ಎನ್ನುವ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. ಪರೀಕ್ಷೆ ಕುರಿತು ಕಾನೂನು ವಿವಿಯ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಹಾದಿ ಹಿಡಿದಿದ್ದರು. ಆದರೆ ಈಗ ವಿದ್ಯಾರ್ಥಿಗಳು ಮತ್ತೊಂದು ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ. ಹಾಗಾದರೆ ಆ ಮತ್ತೊಂದು ಬೇಡಿಕೆಯೇನು?
ಹುಬ್ಬಳ್ಳಿಯ ನವನಗರದಲ್ಲಿರುವ ರಾಜ್ಯ ಕಾನೂನು ವಿವಿಯ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ಒಂದು ತಿಂಗಳ ಹಿಂದೆಯೇ ಪ್ರತಿಭಟನೆ ನಡೆಸಿದ್ದರು. ಆದರೆ ಈ ಒಂದು ಹೋರಾಟಕ್ಕೆ ಕಾನೂನು ವಿಶ್ವವಿದ್ಯಾಲಯ ಕ್ಯಾರೆ ಎಂದಿರಲಿಲ್ಲ. ಇದರಿಂದ ರೋಸಿ ಹೋದ ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ನಾಳೆ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಮತ್ತೊಂದು ಸಮರವನ್ನು ಮಾಡಲಿದ್ದಾರೆ. ಅಲ್ಲದೇ ಪರೀಕ್ಷೆಯ ಬೇಡಿಕೆಯ ಜೊತೆಗೆ ವಿದ್ಯಾರ್ಥಿಗಳು ಕೂಡಲೇ ಕುಲಪತಿ ಈಶ್ವರಭಟ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕುಲಪತಿ ಈಶ್ವರಭಟ್ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ವಿದ್ಯಾರ್ಥಿಗಳು ಇಷ್ಟು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಅಲ್ಲದೇ ಸಚಿವರು ಕೂಡ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರದೇ ಇರುವುದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿದೆ. ಇಷ್ಟು ದಿನ ಪ್ರತಿಭಟನೆಯಲ್ಲಿ ಸಾಕಷ್ಟು ಅಹಿತಕರ ಘಟನೆಗಳು ಸಂಭವಿಸಿದ್ದರೂ ಕೂಡ ಕುಲಪತಿ ಹಾಗೂ ಸಚಿವರು ಎಚ್ಚೆತ್ತುಕೊಳ್ಳದೆ ಇರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಮುಖಂಡರು ಹಾಗೂ ಶಾಸಕರು ಸೇರಿದಂತೆ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನಾಳೆ ಹೋರಾಟ ಮುಂದುವರಿಯಲಿದೆ.
ಒಟ್ಟಿನಲ್ಲಿ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದೆ. ಪದವಿ ಮುಗಿಸಿ ಜೀವನ ಕಟ್ಟಿಕೊಳ್ಳಬೇಕಿದ್ದ ವಿದ್ಯಾರ್ಥಿಗಳು ಪರೀಕ್ಷೆ ಸಲುವಾಗಿ ಹೋರಾಟ ಮಾಡುವುದರಲ್ಲಿಯೇ ಕಾಲಹರಣ ಮಾಡುವಂತಾಗಿರುವುದು ವಿಪರ್ಯಾಸಕರ ಸಂಗತಿಯಾಗಿದೆ. ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕಿದೆ.
ಸುರೇಶ ನಾಯ್ಕ, ಪವರ್ ಟಿವಿ ಹುಬ್ಬಳ್ಳಿ