Wednesday, January 22, 2025

ಅಭಿವೃದ್ಧಿ ವಿಚಾರದಲ್ಲಿ ‘ಗಂಡಸ್ತನ ಪ್ರತಿಧ್ವನಿ’..!

ರಾಜ್ಯ : ಬಸವರಾಜ ಬೊಮ್ಮಾಯಿ ಸಿಎಂ ಆದ ನಂತರ ಮೊದಲ ಬಾರಿಗೆ ರಾಮನಗರ ಜಿಲ್ಲೆಗೆ ಭೇಟಿ ನೀಡಿದ್ರು. ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ರು. ಆದರೆ, ಸಿಎಂ‌ ಸಮ್ಮುಖದಲ್ಲೇ ನಡೆಯಬಾರದ ಘಟನೆ ನಡೆದೇ ಹೋಯಿತು.

ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ವೇದಿಕೆ ಮೇಲೆಯೇ ಜಟಾಪಟಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಸಿಎಂ ಬೊಮ್ಮಾಯಿ ಸಮ್ಮುಖದಲ್ಲೇ ಈ ಘಟನೆ ನಡೆಯಿತು. ಇಬ್ಬರನ್ನೂ ಸಮಾಧಾನಪಡಿಸಲು ಸಿಎಂ ಬೊಮ್ಮಾಯಿ ಹರಸಾಹಸ ಪಡಬೇಕಾಯ್ತು.

ಸಿಎಂ ವಿರುದ್ಧವೇ ಕಪ್ಪು ಪಟ್ಟಿ ಪ್ರದರ್ಶನ :

ಸಿಎಂ ಬಸವರಾಜ ಬೊಮ್ಮಾಯಿ ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ರು. DC ಕಚೇರಿ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡ ಅವರ ಪುತ್ಥಳಿ ಅನಾವರಣ ಮಾಡಲಾಯಿತು. ಪುತ್ಥಳಿಗಳಿಗೆ ಸಿಎಂ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ್, ಶಾಸಕಿ ಅನಿತಾ ಕುಮಾರಸ್ವಾಮಿ ಎರಡು ಪುತ್ಥಳಿಗಳಿಗೆ ಪುಸ್ಪಾರ್ಚನೆ ಮಾಡಿದ್ರು. ಇದು ಕಾರ್ಯಕ್ರಮದಲ್ಲಿದ್ದ ದಲಿತ ಮುಖಂಡರನ್ನು ಕೆರಳಿಸಿತು. ಕಾರಣ ಸಂಸದ ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರು ನಾಯಕರು ಎರಡು ಪುತ್ಥಳಿಗಳ ನಿರ್ಮಾಣದ ಕೆಲಸದಲ್ಲಿ ಪರಿಶ್ರಮವಿದೆ. ಅಲ್ಲದೆ, ಈ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ ಸಹ ಭಾಗಿಯಾಗಿದ್ರು. ಪುಷ್ಪಾರ್ಚನೆಗೆ ಸಂಸದರನ್ನ ಕರೆದಿಲ್ಲ ಅಂತಾ ಘೋಷಣೆ ಕೂಗಿದ್ರು. ಸಿಎಂ ವೇದಿಕೆಗೆ ಬರುತ್ತಿದ್ಧಂತೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿದ್ರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನ ಮಾಡಲು ಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸರು ಕೊನೆಗೂ ಪ್ರತಿಭಟನಾಕಾರರನ್ನ ಬಂಧಿಸಿದರು.

ಕೈ ನಾಯಕರನ್ನು ಕೆರಳಿಸಿದ ಸಚಿವರ ಮಾತು :

ಅಂದ ಹಾಗೆ ಈ ಗದ್ದಲ ಗೊಂದಲ ಮುಗಿದು ವೇದಿಕೆ ಕಾರ್ಯಕ್ರಮ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ್ ವೇದಿಕೆಯಲ್ಲಿ ಮಾತನಾಡುತ್ತಿದ್ರು. ಈ ವೇಳೆ ಅಶ್ವತ್ಥನಾರಾಯಣ್ ಅವರ ಮಾತಿನ ಭರಾಟೆ ಬೇರೆ ಕಡೆ ತಿರುಗಿತ್ತು. ಜಿಲ್ಲೆಯ ಅಭಿವೃದ್ಧಿ ಮಾಡುತ್ತಿರುವವರು ನಾವು. ನಾಲ್ಕು ಜನ ಬಂದು ಇಲ್ಲಿ ಗಲಾಟೆ ಮಾಡೋದಲ್ಲ. ಅಭಿವೃದ್ಧಿ ಮಾಡಿ ತೋರಿಸ್ರೊ ಗಂಡಸು ಯಾರಾದ್ರೂ ಇದ್ರೆ ಎಂದು ಡಿ.ಕೆ.ಸುರೇಶ್ ಕಡೆ ತಿರುಗಿ ಮಾತನಾಡಿದ್ರು. ಇದಕ್ಕೆ ವೇದಿಕೆಯಲ್ಲಿ ಕುಳಿತಿದ್ದ ಡಿ.ಕೆ.ಸುರೇಶ್, ಅಶ್ವತ್ಥ ನಾರಾಯಣ್ ಬಳಿಗೆ ಬಂದು ಅಭಿವೃದ್ಧಿ ವಿಚಾರ ಬಿಟ್ಟು ಬೇರೆ ಮಾತು ಬೇಡ ಅಂತಾ ಹೇಳಿದ್ರು. ಇದಕ್ಕೆ ಅಶ್ವತ್ಥ ನಾರಾಯಣ್ ಕೂಡ ನಾವು ಅಭಿವೃದ್ಧಿ ಮಾಡಿದ್ದೇವೆ. ಮಾತನಾಡುತ್ತೇನೆ ಎಂದ್ರು. ಈ ವೇಳೆ ಕೆಲಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ – ಕೈ ಮಿಲಾಯಸುವ ಹಂತಕ್ಕೂ ಹೋಗಿತ್ತು. ಈ ವೇಳೆ MLC S.ರವಿ ಮೈಕ್ ಕಿತ್ತೆಸೆದರು. ಇದರ ಪರಿಯನ್ನ ಅರಿತ ಸಿಎಂ ಮೈಕ್ ಹಿಡಿದು ಇಬ್ಬರು ನಾಯಕರನ್ನ ಸಮಾಧಾನ ಪಡಿಸುವ ಕೆಲಸ ಮಾಡಿದ್ರು.

ಇನ್ನು ಈ ಬಗ್ಗೆ ಮಾತನಾಡಿದ ಸಂಸದ ಡಿ.ಕೆ‌.ಸುರೇಶ್, ಪುತ್ಥಳಿ ನಿರ್ಮಾಣ ವಿಚಾರದಲ್ಲಿ ನಾನು ಸಾಕಷ್ಟು ಶ್ರಮ ವಹಿಸಿದ್ದೆ. ಸರಿಯಾಗಿ ನನಗೆ ಗೌರವ ನೀಡಿಲ್ಲ ಎಂದು ದಲಿತ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದ್ರು. ಆದ್ರೆ, ಅಶ್ವತ್ಥನಾರಾಯಣ್ ಅವರು ಮಾತಿನ ಮೇಲೆ ನಿಗಾ ಇಡಬೇಕು. ಯಾರೋ ಗಂಡಸು ಅಭಿವೃದ್ಧಿ ಮಾಡೋರು ಮುಂದೆ ಬನ್ನಿ ಅಂದ್ರು. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾರಿಂದಲೂ ನಾವು ಕಲಿಯೋ ಅವಶ್ಯಕತೆ ಇಲ್ಲ. ಗೌರವಯುತವಾಗಿ ಮಾತಾಡೋದು ಕಲಿಯಬೇಕು ಎಂದರು. ಇನ್ನು ಇದೇ ವೇಳೆ ಅಶ್ವತ್ಥನಾರಾಯಣ ವಿರುದ್ದ MLC ರವಿ ಹರಿಹಾಯ್ದರು.

ಇನ್ನು ಈ ಎಲ್ಲಾ ಘಟನೆಯ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಡೆಯಬಾರದಂತಹ ಘಟನೆ ನಡೆಯಿತು. ನನಗೂ ಕೂಡ ಬೇಸರ ಆಯಿತು. ಚುನಾವಣೆ ಇನ್ನೂ ಒಂದು ವರ್ಷ ಇದೆ. ಕೊನೆಯ ಒಂದು ತಿಂಗಳು ಮಾತ್ರ ನಾವು ರಾಜಕೀಯ ಮಾಡೋಣ. ಘಟನೆ ಏನೇ ನಡೆದ್ರೂ ಕೂಡ ಈ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಾಕಷ್ಟು ಆಲೋಚನೆಗಳು ಇವೆ. ಸಂಕಲ್ಪಗಳನ್ನು ಮಾಡ್ತೇನೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಸಹಕಾರ ನೀಡಬೇಕು ಎಂದರು.

ಇನ್ನು, ಇಷ್ಟೆಲ್ಲಾ ರಾದ್ದಾಂತವಾದ ಬಳಿಕ ಎಚ್ಚೆತ್ತ ಸಂಸದ ಡಿ.ಕೆ.ಸುರೇಶ್, ಸಿಎಂ ಬೊಮ್ಮಾಯಿ ಬಳಿ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ KPCC ಅಧ್ಯಕ್ಷ D.K.ಶಿವಕುಮಾರ್, ಗಂಡಸ್ತನವನ್ನು ಪ್ರಶ್ನಿಸಿದ್ರೆ ಯಾರಾದ್ರೂ ಸುಮ್ಮನಿರಲು ಆಗುತ್ತಾ ಅಂತಾ ಪರೋಕ್ಷವಾಗಿ ಸಹೋದರನನ್ನು ಸಮರ್ಥಿಸಿಕೊಂಡಿದ್ದಾರೆ.

ಕೈ, ಕಮಲ ನಾಯಕರಿಗೆ ದಳಪತಿ ಟಾಂಗ್ :

ಈ ಗಲಾಟೆ ಬಳಿಕ ಪ್ರತಿಕ್ರಿಯಿಸಿದ ಮಾಜಿ ಸಿಎಂ HDK, ರಾಮನಗರ ಅಭಿವೃದ್ಧಿ ಮಾಡಿದ್ದು ನಾನು. ಇವರು ಮಾಡಿದಂತೆ ಹೇಳ್ತಿದ್ದಾರೆಂದು ಕೈ, ಕಮಲ ನಾಯಕರಿಗೆ ಟಾಂಗ್ ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಲು ರಾತ್ರಿಯೇ ಪ್ಲ್ಯಾನ್ ಮಾಡಿದ್ದರು ಅಂತಾ ಆರೋಪಿಸಿದ್ದಾರೆ.

ಒಟ್ಟಾರೆ ಸಿಎಂ ಕಾರ್ಯಕ್ರಮದ ವೇದಿಕೆ ಗಲಾಟೆ ಗದ್ದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ನಾಯಕರ ಮಾತಿನ ಸಮರ ನೋಡಿ ಸಿಎಂ ಕೂಡ ಒಂದು ಕ್ಷಣ ದಂಗಾಗಿ ಹೋದರು. ಈ ಇಬ್ಬರು ನಾಯಕರ ಜಟಾಪಟಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಾಜಕೀಯ ರಣರಂಗ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES