ಗಾಂಧಿ ಭವನ: ಗಾಂಧಿಭವನದಲ್ಲಿ ಮಾಜಿ ಮುಖ್ಯಮಂತ್ರಿ ಸಮಾರಂಭವೊಂದರಲ್ಲಿ ನಾನು ಸ್ವಾಭಿಮಾನಿ ಕ್ಷೌರಿಕ ಎಂದ ಪುಸ್ತಕ ಬಿಡುಗಡೆ ಮಾಡುತ್ತ ಸಮಾಜದಲ್ಲಿರುವ ಅಸಮಾನತೆಯ ಬಗ್ಗೆ ಮಾತಾಡಿದರು. ಹಳ್ಳಿಗಳಲ್ಲಿ ಹಿಂದುಳಿದವರು, ದಲಿತರು ಇಂದಿಗೂ ಅವರವರೆ ಕಟಿಂಗ್ ಮಾಡಿಕೊಳ್ಳುತ್ತಾರೆ. ಇದು ನಮ್ಮ ಸಮಾಜದ ಸ್ಥಿತಿ. ಜಾತಿಯಲ್ಲಿ ನಾನು ದೊಡ್ಡವನು, ನೀನು ದೊಡ್ಡವನು ಎಂಬ ವಾತಾವರಣ ನಿರ್ಮಾಣವಾಗಿದೆ. ವೃತ್ತಿಯನ್ನು ಜಾತಿ ಮಾಡಿ ಸಮಾಜವನ್ನು ಒಡೆಯಲಾಗುತ್ತಿದೆ. ಈ ಜಾತಿ ಪದ್ಧತಿ ಇದ್ದರೆ ಮನುಷ್ಯ ಉದ್ದಾರ ಆಗುವುದಿಲ್ಲ. ಎಲ್ಲ ಕಡೆ ಜಾತಿ ನೋಡುವ ಮನುಷ್ಯ ಆಸ್ಪತ್ರೆಯಲ್ಲಿ ಸಾಯುತ್ತ ಮಲಗಿರುವಾಗ, ರಕ್ತ ಬೇಕಾದಾಗ ಜಾತಿ ಕೇಳುವುದಿಲ್ಲ. ಇದೇ ಮನುಷ್ಯನಲ್ಲಿರುವ ಸ್ವಾರ್ಥ ಗುಣ.
ತಮ್ಮ ಬಳಿ ಮುತ್ತುರಾಜ್ ಬಂದು ನಾನು ನಿಮ್ಮ ಕ್ಷೌರ ಮಾಡಬೇಕು ಎಂದು ಕೇಳಿಕೊಂಡ ಘಟನೆಯ ಬಗ್ಗೆ ವಿವರಿಸಿದರು. ಮುತ್ತುರಾಜ್ ನನ್ನ ಬಳಿ ಬಂದು ನಾನು ಎಲ್ಲರಿಗೂ ಕ್ಷೌರ ಮಾಡ್ತೀನಿ, ನಿಮಗೂ ಕ್ಷೌರ ಮಾಡಬೇಕು ಎಂದರು. ನಾನು ಇವತ್ತು ಬೇಡ, ನಾಳೆ ಬಾ ಅಂದೆ. ಮತ್ತೆ ಮರುದಿನ ಬಂದು ಮುತ್ತುರಾಜ್ ಕ್ಷೌರ ಮಾಡಿದರು. ನಾನು ದುಡ್ಡು ಕೊಡುವುದಕ್ಕೆ ಹೋದಾಗ ಅವರು ಸ್ವೀಕರಿಸಲಿಲ್ಲ. ಇದೊಂದು ಒಳ್ಳೆಯ ಕೆಲಸ ಮುಂದುವರೆಸಿ ಎಂದು ನಾನು ಅವರಿಗೆ ಹೇಳಿದೆ. ಎಲ್ಲಾ ವೃತ್ತಿಗಳು ಸಮಾಜಕ್ಕಾಗಿ ಎಂದು ಬಸವಣ್ಣ ಹೇಳಿದ್ದಾರೆ. ಕ್ಷೌರಿಕ ವೃತ್ತಿ ಎನ್ನುವುದು ಇಲ್ಲದಿದ್ದರೆ ಸಮಾಜದಲ್ಲಿ ಎಷ್ಟೊಂದು ಕಷ್ಟ ಆಗುತ್ತಿತ್ತು. ನಮ್ಮ ಕ್ಷೌರ ನಾವೆ ಮಾಡಿಕೊಳ್ಳಬೇಕಿತ್ತು. ಆಗ ಎಷ್ಟು ಕಷ್ಟ ಆಗುತ್ತಿತ್ತು. ಆದ್ದರಿಂದ ಪ್ರತಿಯೊಂದು ವೃತ್ತಿಗೂ ಮಾನ್ಯತೆ ನೀಡಬೇಕು. ನಾನು ಚಿಕ್ಕವನಿದ್ದಾಗ ನಮ್ಮ ಮನೆ ಪಕ್ಕದಲ್ಲಿ ಒಬ್ಬ ಕ್ಷೌರಿಕದವರ ಮನೆಯಿತ್ತು. ನಾನು ಆ ಕ್ಷೌರಿಕ ಒಳ್ಳೆಯ ಗೆಳೆಯರಾಗಿದ್ವಿ. ಆದರೆ ನಮ್ಮಜ್ಜಿ ನನಗೆ ಬೆಳಿಗ್ಗೆ ಎದ್ದು ಆ ಕ್ಷೌರಿಕನ ಮುಖ ನೋಡಬೇಡ ಎನ್ನುತ್ತಿದ್ದರು. ನಾನು ದಿನವೂ ಅವನ ಮುಖವನ್ನೇ ನೋಡಿದೆ. ಆದ್ದರಿಂದಲೇ ನಾನು ನಂತರ ಮುಖ್ಯಮಂತ್ರಿಯೂ ಆದೆ ಎಂದು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಹೇಳಿದರು.
ಓಂಪ್ರಕಾಶ್ ನಾಯಕ್, ಪವರ್ ಟಿವಿ