Wednesday, January 22, 2025

2022 ರಲ್ಲಿ ಭೂಮಿಗೆ ಅಪ್ಪಳಿಸಬಹುದಾದ ಕ್ಷುದ್ರಗ್ರಹಗಳು..!

ಈ ಜಗತ್ತಿನಲ್ಲಿ ಎಲ್ಲಾ ದೇಶದ ವಿಜ್ಞಾನಿಗಳಿಗೆ ಇರುವ ಒಂದೇ ಒಂದು ಕುತೂಹಲ ಅಂದರೆ, ಅದು ಬಾಹ್ಯಾಕಾಶ ಮಾತ್ರ. ಹಲವು ಶತಮಾನಗಳಿಂದ ನಾನಾ ದೇಶದ ವಿಜ್ಞಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಬಾಹ್ಯಾಕಾಶದ ವಿಷಯದಲ್ಲಿ ಸಂಶೋಧನೆಯನ್ನ ನಡೆಸಿಕೊಂಡು ಬಂದಿದ್ದಾರೆ. ಇವುಗಳಲ್ಲಿ ಬಹುತೇಕ ವಿಜ್ಞಾನಿಗಳು ಹಲವು ಹೊಸಹೊಸ ಗ್ರಹಗಳನ್ನ, ನಕ್ಷತ್ರ ಪುಂಜವನ್ನು, ಬ್ಲ್ಯಾಕ್​ಹೋಲ್​​ಗಳನ್ನು ಕೂಡ ಕಂಡು ಹಿಡಿದಿದ್ದಾರೆ. ಜೊತೆಗೆ ಈ ಭೂಮಿಯ ನಿರ್ಮಾಣದ ಹಿಂದೆ ಇದ್ದ ಕಾರಣಗಳನ್ನ ಕೂಡ ಪತ್ತೆ ಹಚ್ಚೋದಕ್ಕೆ ಈ ಬಾಹ್ಯಾಕಾಶ ವಿಜ್ಞಾನಿಗಳಿಗೆ ನೆರವು ನೀಡಿದೆ. ಆದರೆ, ಇದುವರೆಗೂ ಮಾನವನಿಗೆ ಬಾಹ್ಯಾಕಾಶದಿಂದ ಯಾವುದೇ ರೀತಿಯಾದ ಆಪಾಯಗಳು ಬಂದಿಲ್ಲ. ಹಾಗಾಗಿ ವಿಜ್ಞಾನಿಗಳು ಕೆಲ ಶತಮಾನಗಳ ಹಿಂದೆ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದರು. ಇದಾದ ಬಳಿಕ ಬಾಹ್ಯಾಕಾಶದ ಬಗ್ಗೆ ಅಧ್ಯಯನ ಹೆಚ್ಚಾಗುತ್ತಿದ್ದಂತೆ, ವಿಜ್ಞಾನಿಗಳು ಇಡೀ ಮಾನವ ಸಂಕುಲಕ್ಕೆ ಆಪತ್ತು ಬಂದರೆ, ಅದು ಬಾಹ್ಯಾಕಾಶದಲ್ಲಿ ಕಾಣಿಸಿಕೊಳ್ಳುವ ಉಪಗ್ರಹದಿಂದಲೇ ಸಾಧ್ಯವಿದೆ ಅನ್ನೋ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪೂರಕ ಅನ್ನೋ ಹಾಗೆ ಹಲವು ದಶಕಗಳ ಹಿಂದೆ ಭೂಮಿಯ ಮೇಲೆ ಹಲವು ಸಣ್ಣ ಸಣ್ಣ ಕ್ಷುದ್ರಗ್ರಹಗಳು ಅಪ್ಪಳಿಸಿದ ಬಗ್ಗೆ ಕೂಡ ಮಾಹಿತಿಗಳು ಲಭ್ಯವಾಗಿವೆ. ಆದರೆ, ಇವುಗಳು ಅಂತಹ ಯಾವುದೇ ದೊಡ್ಡಮಟ್ಟದ ಅಪಾಯವನ್ನ ತಂದೊಡ್ಡಿರಲಿಲ್ಲ. ಬಾಹ್ಯಾಕಾಶದಲ್ಲಿ ಬೃಹತ್​ ಗಾತ್ರದ ಕ್ಷುದ್ರ ಗ್ರಹಗಳಿದ್ದು, ಅವುಗಳು ಭೂಮಿಗೆ ಅಪ್ಪಳಿಸಿದರೆ ಹಲವು ಸಾವು ನೋವುಗಳಾಗೋದನ್ನ ಕೂಡ ತಪ್ಪಿಸೋದಕ್ಕೆ ಸಾಧ್ಯವಿಲ್ಲ. ಹಾಗಾಗಿ ವಿಜ್ಞಾನಿಗಳ ತಂಡ ಇದೇ ಕಾರಣಕ್ಕೆ ಬಾಹ್ಯಾಕಾಶದಲ್ಲಿನ ಕ್ಷುದ್ರ ಗ್ರಹಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ಒಂದು ವೇಳೆ ಯಾವುದಾದರೂ ಕ್ಷುದ್ರಗ್ರಹ ಭೂಮಿಯ ಮೇಲೆ ಅಪ್ಪಳಿಸೋದಕ್ಕೆ ಬಂದರೆ ಅವುಗಳ ಬಗ್ಗೆ ಮಾಹಿತಿಯನ್ನ ಕಲೆಹಾಕಿ ಅವುಗಳ ಪಥ ಬದಲಿಸೋದಕ್ಕೆ ಪ್ರಯತ್ನಪಡುತ್ತಾರೆ. ಸದ್ಯಕ್ಕೆ ಈಗ ಕ್ಷುದ್ರಗ್ರಹಗಳನ್ನ ಮಾನವ ಹೊಡೆದು ಉರುಳಿಸುವಷ್ಟರ ಮಟ್ಟಿಗೆ ಮಾನವ ಮುಂದುವರೆಯದೇ ಇದ್ದರೂ ಮುಂದಿನ ದಿನಗಳಲ್ಲಿ ಮಾನವ ಕ್ಷುದ್ರಗ್ರಹಗಳನ್ನ ಹೊಡೆದುರುಳಿಸುವಷ್ಟರ ಮಟ್ಟಿಗೆ ಬೆಳೆಯುತ್ತಾನೆ ಅಂತ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಇದೀಗ ಇದೇ ವಿಚಾರದ ಬಗ್ಗೆ ಚರ್ಚೆಗಳು ಚಾಲ್ತಿಯಲ್ಲಿರುವಾಗಲೇ ಗಗನಚುಂಬಿ ಕಟ್ಟಡದ ಗಾತ್ರ ಹೊಂದಿರುವ ಕ್ಷುದ್ರಗ್ರಹವು ಭೂಮಿಯ ವಾತಾವರಣವನ್ನು ಪ್ರವೇಶಿಸಲಿದೆ. ಈ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ. ಇದನ್ನು ಬಾಹ್ಯಾಕಾಶ ಸಂಸ್ಥೆಯು ಕ್ಷುದ್ರಗ್ರಹ 2013 YD48 ಅನ್ನೋ ಹೆಸರಿನಿಂದ ಕರೆಯುತ್ತಿದೆ. ನಾಸಾ ಈ ಕ್ಷುದ್ರ ಗ್ರಹವನ್ನ ಭೂಮಿಗೆ ಇದು ಹೊಸ ರೀತಿಯಾದ ಅಪಾಯಕಾರಿ ವಸ್ತು ಅಂತ ಘೋಷಿಸಿಕೊಂಡಿದೆ. ಕೆಲ ಮಾಧ್ಯಮ ವರದಿಯ ಪ್ರಕಾರ, ಈ ಕ್ಷುದ್ರಗ್ರಹ ಜನವರಿ 11ರಂದು ಭೂಮಿಯಿಂದ 3.48 ಮಿಲಿಯನ್ ಮೈಲುಗಳ ಒಳಗೆ ಬರಲಿದೆ. ಈ ಕ್ಷುದ್ರಗ್ರಹವು ಸುಮಾರು 104 ಮೀಟರ್ ಅಗಲವಿದೆ. ಇದು ಬಿಗ್ ಬೆನ್ ಗಾತ್ರ ಆಗಿದೆ ಎಂದು ನಾಸಾ ಹೇಳುತ್ತಿದೆ. ಕೇವಲ ಇಷ್ಟು ಮಾತ್ರವಲ್ಲದೇ ಇದು ಭೂಮಿಯಿಂದ 3.48 ಮಿಲಿಯನ್ ಮೈಲುಗಳಷ್ಟು ದೂರದವರೆಗೆ ಸಾಗಲಿದೆ ಅಂತ ವರದಿಯಾಗಿದೆ.

ಆದರೆ, ವಿಜ್ಞಾನಿಗಳು ಇಷ್ಟು ಮಾತ್ರ ಹೇಳಿದರೆ ಇಲ್ಲಿ ಯಾವುದೇ ಆತಂಕ ಉಂಟಾಗುತ್ತಿರಲಿಲ್ಲ. ಬದಲಿಗೆ ಈ ಕ್ಷುದ್ರಗ್ರಹಗಳು ಪ್ರಯಾಣಿಸುವ ದೂರದ ಕಾರಣ ಹಾಗು ಅದರ ಹಾದಿಯಲ್ಲಿನ ಸಣ್ಣ ಬದಲಾವಣೆಗಳು ಕೂಡ ಭೂಮಿಗೆ ಬಹುದೊಡ್ಡ ಆಪತ್ತನ್ನ ತರಬಹುದು ಎಂದು ವಿಜ್ಞಾನಿಗಳು ಹೇಳ್ತಾ ಇದ್ದಾರೆ. ಇದೀಗ ಇದೇ ವಿಚಾರ ಹಲವು ಚರ್ಚೆಗೆ ಕೂಡ ಗ್ರಾಸವಾಗಿದೆ. ಇದರ ಜೊತೆಗೆ ಮುಂಬರುವ ವಾರಗಳಲ್ಲಿ ಭೂಮಿಯ ಹತ್ತಿರ ಮೂರು ಕ್ಷುದ್ರಗ್ರಹಗಳು ಹಾದುಹೋಗಲಿವೆ. 12 ಮೀಟರ್ ಅಗಲವಿರುವ 2021 YK, ಭೂಮಿಯ 118,000 ಕಿಲೋಮೀಟರ್​ಗಳ ಒಳಗೆ ಹಾದು ಹೋಗಲಿದ್ದು, ಜನವರಿ 6ರಂದು ಕೇವಲ 7 ಮೀಟರ್ ಅಗಲವಿರುವ 2014 YE15 ಭೂಮಿಯ 4.6 ಮಿಲಿಯನ್ ಮೈಲುಗಳ ಒಳಗೆ ಬರಲಿದೆ. ಕೊನೆಯದಾಗಿ 2020 AP1 ಕ್ಷುದ್ರಗ್ರಹ 4 ಮೀಟರ್ ಅಗಲವಾಗಿದೆ. ಇದು ಜನವರಿ 7ರಂದು 1.08 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಭೂಮಿಯನ್ನ ಹಾದುಹೋಗಲಿದೆ. ಸದ್ಯಕ್ಕೆ ಈ ಎಲ್ಲಾ ಕ್ಷುದ್ರಗ್ರಹಗಳು ಭೂಮಿಯ ಬಳಿ ಹಾದು ಹೋಗ್ತಾ ಇರೋದರಿಂದ ವೈಜ್ಞಾನಿಕ ಲೋಕದಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ.

ಒಟ್ಟಾರೆಯಾಗಿ ಹೊಸ ವರ್ಷದ ಪ್ರಾರಂಭದಲ್ಲೇ ಮೂರು ಕ್ಷುದ್ರಗ್ರಹಗಳು ಭೂಮಿಯ ಬಳಿ ಹಾದು ಹೋಗ್ತಾ ಇದ್ದು, ಇದು ವೈಜ್ಞಾನಿಕ ಲೋಕದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಇವುಗಳ ಸಣ್ಣ ಪಥ ಬದಲಾವಣೆ ಕೂಡ ಅಪಾಯಕಾರಿಯಾಗಬಹುದು ಅಂತ ವಿಜ್ಞಾನಿಗಳು ಹೇಳಿದ್ದು, ಆ ರೀತಿಯಾದ ಯಾವುದೇ ದುರ್ಘಟನೆಗಳು ಸಂಭವಿಸದೇ ಇರಲಿ ಅನ್ನೋದೆ ಎಲ್ಲರ ಆಶಯವಾಗಿದೆ.

ಲಿಖಿತ್​ ರೈ, ಪವರ್ ​ಟಿವಿ

RELATED ARTICLES

Related Articles

TRENDING ARTICLES