ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅತಿ ಗಂಭೀರವಾದ ಆಪಾದನೆಯೊಂದನ್ನು ಮಹತ್ವದ ವ್ಯಕ್ತಿಯೊಬ್ಬರು ಮಾಡಿದ್ದಾರೆ. ಆರೋಪ ಮಾಡಿದವರು ಅಂತಿಂಥ ವ್ಯಕ್ತಿಯಲ್ಲ. ಅವರು ಬಿಜೆಪಿಯವರೇ ಆದ ಮೇಘಾಲಯದ ರಾಜ್ಯಪಾಲರು. ಹೌದು, ಮೇಘಾಲಯದ ರಾಜ್ಯಪಾಲರಾದ ಸತ್ಯಪಾಲ್ ಮಲೀಕ್ ಮೋದಿಯವರ ವಿರುದ್ಧ ಅತಿ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಅದೆಂದರೆ ಮೋದಿ ಹಾಗೂ ಸತ್ಯಪಾಲ್ ಮಲೀಕ್ ಭೇಟಿಯಾಗಿದ್ದ ಸಂದರ್ಭದಲ್ಲಿ ವರ್ಷಗಳ ಕಾಲ ಮಳೆ, ಛಳಿ, ಗಾಳಿಯೆನ್ನದೆ ಸತ್ಯಾಗ್ರಹದಲ್ಲಿ ತೊಡಗಿ ಜೀವತೆತ್ತಿದ್ದ 700 ರೈತರ ಕುರಿತಾಗಿ ಮೋದಿ ಹೇಳಿದ್ದರಂತೆ “ಆ ರೈತರೇನು ನನಗಾಗಿ ಸತ್ತರೆ?”
ಮೋದಿಯವರ ಬಳಿ ರತರ ಸಮಸ್ಯೆಯ ಕುರಿತಾಗಿ ಚರ್ಚಿಸಲು ಹೋಗಿದ್ದಾಗ ನಾನು ನಮ್ಮವರೇ 500 ಜನ ರೈತರು ಸತ್ತಿದ್ದಾರೆ ಎಂದು ಹೇಳಿದೆ. ಅದಕ್ಕೆ ಮೋದಿಯವರು ರೈತರೇನು ನನಗಾಗಿ ಸತ್ತರೆ ಎಂದು ಕೇಳಿದರು. ಅದಕ್ಕೆ ನಾನು ಹೌದು, ನೀವು ದೊರೆಯಾಗಿರುವುದರಿಂದ ರೈತರು ನಿಮಗಾಗಿಯೇ ಸತ್ತಿದ್ದಾರೆ ಎಂದು ಹೇಳಿ ಸುಮ್ಮನಾದೆ ಎಂದು ಮೋದಿಯವರು ರೈತರ ಬಗ್ಗೆ ಯಾವ ರೀತಿಯ ದ್ವೇಷದ, ಕ್ರೌರ್ಯದ ಹಾಗೂ ಸಂವೇದನಾರಹಿತ ಧೋರಣೆಯನ್ನು ಹೊಂದಿದ್ದಾರೆ, ಮೋದಿ ಒಬ್ಬ ದುರಹಂಕಾರಿ ಎಂದು ಹರಿಯಾಣದ ದಾದ್ರಿಯಲ್ಲಿ ನಡೆದ ಇತ್ತೀಚಿನ ಸಭೆಯೊಂದರಲ್ಲಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ದೆಹಲಿಯ ಗಡಿಯಲ್ಲಿ ರೈತರು ಮಾಡುತ್ತಿರುವ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಈ ಹಿಂದೆಯೂ ರಾಜ್ಯಪಾಲ ಮಲೀಕ್ ಹೇಳಿದ್ದರು. ಒಂದು ವೇಳೆ ನನ್ನ ಈ ಅಭಿಪ್ರಾಯದ ಬಗ್ಗೆ ಆಕ್ಷೇಪ ವ್ಯಕ್ತವಾದರೆ ನಾನು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಹೊರಗಡೆಯಿಂದ ರೈತರಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದರು. ನಾನು ರೈತರ ಕುಟುಂಬದಿಂದ ಬಂದಿರುವುದರಿಂದ ರೈತರ ಕಷ್ಟ ಏನೆಂದು ನನಗೆ ಗೊತ್ತು, ನನ್ನ ಅಭಿಪ್ರಾಯದ ಬಗ್ಗೆ ಪಕ್ಷದ ಮುಖಂಡರು ಏನೆಂದುಕೊಂಡರು ನನಗೆ ಚಿಂತೆಯಿಲ್ಲ ಎಂದು ಮಲೀಕ್ ಹೇಳಿದ್ದಾರೆ. ರೈತರ ಪ್ರತಿಭಟನೆಯಲ್ಲಿ ರೈತರು ಸತ್ತಿದ್ದರ ಕುರಿತು ಯಾವ ಮುಖಂಡರೂ ಧ್ವನಿಯೆತ್ತದಿರುವುದಕ್ಕಾಗಿ ಮಲೀಕ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮಲೀಕ್ ಅವರು ಈ ಕುರಿತಾಗಿ ಮಾತನಾಡಿರುವ ವಿಡೀಯೊವನ್ನು ಕಾಂಗ್ರೆಸ್ ಜಾಲತಾಣಗಳಲ್ಲಿ ಹಂಚಿಕೊಂಡಿದೆ.