ಬಾಗಲಕೋಟೆ : ರಾಜ್ಯಾದ್ಯಂತ ಸರ್ಕಾರ ಇಂದಿನಿಂದ 15 ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಿರೋ ಬೆನ್ನಲ್ಲೆ ಬಾಗಲಕೋಟೆಯಲ್ಲಿಯೂ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಗರದ ಗರ್ಲ್ಸ್ ಹೈಸ್ಕೂಲ್ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲೆಯಾದ್ಯಂತ 9 ತಾಲೂಕುಗಳಲ್ಲಿ ಒಟ್ಟು 250 ಟೀಮ್ಗಳ ಮೂಲಕ ಸಂಚರಿಸುತ್ತಿರೋ ಆರೋಗ್ಯ ಇಲಾಖೆ ತಂಡವು ಶಾಲಾ ಕಾಲೇಜಿಗೆ ತೆರಳಿ ಲಸಿಕೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು, ಜಿಲ್ಲೆಯಾದ್ಯಂತ 2 ಲಕ್ಷ 211 ಮಕ್ಕಳಿಗೆ ಲಸಿಕೆ ನೀಡುವ ಅವಶ್ಯಕತೆ ಇದ್ದು, ಸಧ್ಯ ಜಿಲ್ಲೆಯಲ್ಲಿ 42 ಸಾವಿರ ಡೋಸ್ ಲಭ್ಯವಿದ್ದು, ಇಂದು ಒಂದೇ ದಿನ 20 ಸಾವಿರ ಡೋಸ್ ನೀಡುವ ಗುರಿ ಹೊಂದಲಾಗಿದೆ. ಇತ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಸರ್ಕಾರದ ಲಸಿಕೆ ವಿತರಣೆ ಕಾರ್ಯದ ನಡೆಯನ್ನ ಸ್ವಾಗತಿಸಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ವ್ಯಾಕ್ಸಿನ್ ಪಡೆದು ಜಾಗೃತಿಯೊಂದಿಗೆ ಮುನ್ನಡೆಯಬೇಕು ಇಲ್ಲವಾದರೆ ತೊಂದರೆಯನ್ನ ಪಡುವಂತಾಗುತ್ತದೆ ಎಂದು ಮಕ್ಕಳಿಗೆ ಧೈರ್ಯ ಹೇಳಿದರು.
ಇನ್ನು, ಇದೇ ವೇಳೆ ವ್ಯಾಕ್ಸಿನ್ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಸಂತೋಷ ಹಂಚಿಕೊಂಡರು. ಈ ಮೊದಲು ನಾವು ಜನರ ಗುಂಪಿನಲ್ಲಿ ನಿಂತುಕೊಂಡರೆ ತುಂಬಾ ಭಯವಾಗುತ್ತಿತ್ತು, ಹೊರಗಡೆ ಎಲ್ಲೂ ಹೋಗೊಕೆ ಆಗುತ್ತಿರಲಿಲ್ಲ.ಆದರೆ, ಈಗ ನಮಗೂ ಲಸಿಕೆ ನೀಡುತ್ತಿರುವುದರಿಂದ ಯಾವುದೇ ಭಯವಿಲ್ಲವೆಂದು ಖುಷಿಯನ್ನು ವ್ಯಕ್ತಪಡಿಸಿದರು. ಹಾಗೂ ಡಿಎಚ್ಓ ಡಾ.ಅನಂತ ದೇಸಾಯಿ ಮಾತನಾಡಿ, ಲಸಿಕೆ ಕಾರ್ಯವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದೇವೆ, ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ಮುನ್ನಡೆಸಲಾಗುವುದು ಎಂದು ಪ್ರತಿಕ್ರಿಯಿಸಿದರು.