ಬೆಂಗಳೂರು : ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಪವರ್ ಸ್ಟಾರ್..ಅವರ ನಿಧನ ನಿಜಕ್ಕೂ ಕನ್ನಡಿಗರ ಪಾಲಿಗೆ ಒಂದು ಕರಾಳ ದಿನ.ಬಹುಮುಖ ಪ್ರತಿಭೆ ಮೂಲಕ ಬಾಲ ನಟನಾಗಿ,ನಿರ್ಮಾಪಕನಾಗಿ ತೊಡಗಿಸಿಕೊಂಡಿದ್ದ ಕನ್ನಡದ ದೊಡ್ಮನೆಯ ಕೊಂಡಿಯೊಂದು ಇನ್ನಿಲ್ಲ ಎಂದು ಹೇಳಲು ಯಾರ ಮನಸ್ಸೂ ಒಪ್ಪುತ್ತಿಲ್ಲ. ಅನಿರೀಕ್ಷಿತ ಹೃದಯಾಘಾತದಿಂದ ಅವರು ಇಹಲೋಕ ತೊರೆದು ಎರಡು ತಿಂಗಳೇ ಕಳೆದರೂ ಅಭಿಮಾನಿಗಳ ಅಭಿಮಾನ ಪ್ರೀತಿ ಇನ್ನೂ ಆರಿಲ್ಲ. ಅಪ್ಪು ಸಮಾಧಿ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು.
ಬದುಕಿ ಬೆಳಗಬೇಕಿದ್ದ ವಯಸ್ಸಿನಲ್ಲಿ ಹಠಾತ್ ನಿರ್ಗಮನ ಘೋಷಿಸಿ ಕನ್ನಡ ಕುಲಕೋಟಿಯನ್ನು ದುಃಖದ ಕಡಲಿನಲ್ಲಿ ಮುಳುಗಿಸಿರುವ ಕನ್ನಡದ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಹಠಾತ್ ನಿಧನರಾಗಿ ಎರಡು ತಿಂಗಳು ನಾಲ್ಕು ದಿನ ಆಗಿದೆ.ಆದ್ರೆ, ಕುರುನಾಡಿನಲ್ಲಿ ಅಪ್ಪು ಮೇಲಿನ ಪ್ರೀತಿ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಕಂಠೀರವ ಸ್ಟುಡಿಯೋ ಸಮಾಧಿ ಬಳಿ ಎತ್ತ ನೋಡಿದರೂ ಅಪ್ಪೂ,ಅಪ್ಪೂ ಎಂಬ ಆಕ್ರಂದನ. ಒಮ್ಮೆ ಎದ್ದು ಬಾ ಅಪ್ಪು ಅಣ್ಣ.ದೇವರೇ ನೀನೆಷ್ಟು ಕ್ರೂರಿ,ನಿನಗೆ ಕರುಣೆ,ದಯೆ ಅನ್ನೋದೇ ಇಲ್ವಾ. ಭಗವಂತ ನಮ್ಮ ಜೀವ ತೆಗೆದುಕೋ ನಮ್ಮ ಪುನೀತಣ್ಣನನ್ನ ರಕ್ಷಿಸಿಕೊಡು ಎಂದು ಕಣ್ಣೀರು ಸುರಿಸುತ್ತಲೇ ಕಂಠೀರವ ಸ್ಟುಡಿಯೋ ಬಳಿ ಅಭಿಮಾನ ಸಾಗರ ಹರಿದುಬಂದಿತ್ತು.
ಅಕ್ಟೋಬರ್29 ಕರುನಾಡಿನ ಪಾಲಿಗೆ ಕರಾಳ ದಿನವಾಗಿತ್ತು. ಅಂದಿನಿಂದಲೂ ರಾಜ್ಯದ ಜನತೆ ಪುನೀತ್ ಅವರ ದುಃಖದಲ್ಲೇ ಮುಳುಗಿದೆ. ಪುನೀತ್ ಮೇಲಿನ ಪ್ರೀತಿ ಅಭಿಮಾನ ಎಳ್ಳಷ್ಟೂ ಕುಂದಿಲ್ಲ. ಎರಡು ತಿಂಗಳಿಂದ ಪುನೀತ್ ಮೇಲೆ ಅಪಾರ ಪ್ರೀತಿ ಗೌರವ ಇಟ್ಟುಕೊಂಡಿದ್ದ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಸದಾ ನೆನೆಯುತ್ತಲೇ ಇದ್ದಾರೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗಳು ಸಹ ಪುನೀತ್ ಭಾವಚಿತ್ರದ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಪುನೀತ್ ಮಹತ್ವ ಎಂಥಾದ್ದು ಎಂಬುದನ್ನು ಪ್ರತಿನಿತ್ಯ ಸಾಬೀತು ಮಾಡುತ್ತಲೇ ಇದ್ದಾರೆ. ಇತ್ತ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳಕ್ಕೆ ಸೆಲೆಬ್ರಿಟಿಗಳು,ಅಭಿಮಾನಿಗಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಗೌರವ ಸಲ್ಲಿಸುತ್ತಿದ್ದಾರೆ. ಭಾನುವಾರ ಕೂಡ ಅಬಾಲವೃದ್ಧರೆಲ್ಲರೂ ಅಪ್ಪುವಿನ ಸಮಾಧಿ ಬಳಿಗೆ ಭೇಟಿ ನೀಡಿ ನೆಚ್ಚಿನ ನಟನನ್ನ ನೆನೆದು ಕಣ್ಣೀರು ಹಾಕಿದರು.
ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಎರಡು ತಿಂಗಳೇ ಕಳೆದರೂ ಅಭಿಮಾನಿಗಳ ನೋವು ಮಾತ್ರ ಕಡಿಮೆಯಾಗಿಲ್ಲ. ಹಲವರು ಕಣ್ಣೀರು ಹಾಕುತ್ತಲೇ ಸರದಿಯಲ್ಲಿ ಸಾಗುತ್ತಿದ್ದದ್ದು ಕಂಡುಬಂತು. ಅಪ್ಪು ಸಮಾಧಿ ದರ್ಶನಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದು, ಭಾನುವಾರ ಸಮಾದಿ ಬಳಿ ಜನಜಂಗುಳಿಯೇ ನೆರೆದಿತ್ತು.ಪುನೀತ್ ಸಮಾಧಿ ದರ್ಶನಕ್ಕೆ ಬೆಳಗ್ಗೆಯಿಂದ ತಂಡೋಪತಂಡವಾಗಿ ಆಗಮಿಸಿದರು..ಯಾವುದೇ ತಳ್ಳಾಟ ನೂಕಾಟವಿಲ್ಲದೆ ಶಿಸ್ತುಬದ್ಧವಾಗಿ ಸಾಲಾಗಿ ಸಮಾಧಿ ಹತ್ತಿರ ಬರುತ್ತಿದ್ದಂತೆ ಕೆಲವರು ಭಾವುಕರಾಗಿ ಕಣ್ಣೀರು ಸುರಿಸಿದರೆ,ಇನ್ನೂ ಕೆಲವರು ಜೈಕಾರ ಹಾಕಿ,ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು. ಕೆಲವರು ಸಮಾಧಿ ಮುಂದೆ ನಿಂತು ಸೆಲ್ಫಿ ಪಡೆಯುತ್ತಿದ್ದರು..ಎಲ್ಲರ ಬಾಯಲ್ಲೂ ಅಪ್ಪುವಿನ ಗುಣಗಾನ ರಾರಾಜಿಸುತ್ತಿತ್ತು.
ಒಟ್ಟಿನಲ್ಲಿ ಕಂಠೀರವ ಸ್ಟುಡಿಯೋ ಬಳಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು.ಕೆಲ ಅಭಿಮಾನಿಗಳು ಅಪ್ಪು ಅಭಿಮಾನಕ್ಕಾಗಿ ಊಟೋಪಚಾರ ವ್ಯವಸ್ಥೆ ಮಾಡಿದರು..ಸಮಾಧಿ ಬಳಿ ಪುನೀತ್ ಅವರಿಗೆ ಎಲ್ಲಾ ವರ್ಗದ ಅಭಿಮಾನಿಗಳಿದ್ದಾರೆ ಎಂಬುದನ್ನ ಸಾರಿ ಸಾರಿ ಹೇಳುವಂತೆ ಭಾಸವಾಗುತ್ತಿತ್ತು.