Monday, December 23, 2024

ರೈತರ ಹತ್ಯೆ; ಆರೋಪಿ ಸಚಿವ ಪುತ್ರನ ಮೇಲೆ 5000 ಪುಟಗಳ ಆರೋಪಪಟ್ಟಿ

ಲಕ್ನೊ: ರೈತರ ಮೇಲೆ ವಾಹನ ನುಗ್ಗಿಸಿ ಹಲವರನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಕೇಂದ್ರ ಮಂತ್ರಿ ಮಗ ಈಗ ಅಪರಾಧಿ ಸ್ಥಾನದಲ್ಲಿದ್ದಾನೆ. ಪೊಲೀಸರು ಅವನ ಮೇಲಿನ ಆರೋಪದ ಚಾರ್ಜ್​ಶೀಟ್​ನಲ್ಲಿ 5000 ಪುಟಗಳ ಆರೋಪವನ್ನು ಬರೆದಿದ್ದಾರೆ! ಲಖೀಂಪುರ್ ಖೇರಿ ಪ್ರಕರಣವೆಂದೇ ಹೆಸರಾಗಿರುವ ಈ ಕೇಸಿನ ಸಾವಿರಾರು ಪುಟಗಳ ಚಾರ್ಜ್​ಶೀಟನ್ನು ದೊಡ್ಡ ದೊಡ್ಡ ಟ್ರಂಕುಗಳಲ್ಲಿ ಭಾರಿ ಭದ್ರತೆಯೊಂದಿಗೆ ಲಖೀಂಪುರ್ ನಗರಕ್ಕೆ ಪೊಲೀಸರು ತಂದಿದ್ದಾರೆ.

ಕೃಷಿ ವಿರೋಧಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುವ ವೇಳೆಯಲ್ಲಿ ಕೇಂದ್ರ ಮಂತ್ರಿಯ ಮಗ ಹಾಗೂ ಅವನ ಸಹಚರರು ರೈತರ ಮೇಲೆ ಎಸ್ ಯು ವಿ ವಾಹನವನ್ನು ನುಗ್ಗಿಸಿ 8 ಜನರ ಹತ್ಯೆಯನ್ನು ಮಾಡಿರುವ ಪ್ರಕರಣದ ಆರೋಪ ಪಟ್ಟಿಯಿಗ ನ್ಯಾಯಾಲಯಕ್ಕೆ ಸಾಗಿಸಲಾಗುತ್ತಿದೆ. ಘಟನೆಯ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡವು 5000 ಪುಟಗಳ ಆರೋಪಪಟ್ಟಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಹೌದು ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪ್ರಾಸಿಕ್ಯೂಶನ್ ಹಿರಿಯ ಅಧಿಕಾರಿ ಎಸ್ ಪಿ ಯಾದವ್ ಲಿಖಿಂಪುರ್​ದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಲಿಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತರನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರ ಮಗ ಆಶಿಶ್ ಮಿಶ್ರ ಪ್ರಮುಖ ಆರೋಪಿಯಾಗಿದ್ದಾರೆ.

ಘಟನೆಯ ನಂತರ ಅಜಯ್ ಮಿಶ್ರ ಮಗ ಆರೋಪಿಯಾಗಿರುವ ಬಗ್ಗೆ ಸಾಕ್ಷ್ಯ ಸಿಕ್ಕರೂ ಸಹ ಪೊಲೀಸರು ಅಜಯ್ ಮಿಶ್ರನನ್ನು ಅರೆಸ್ಟ್ ಮಾಡಲು ಮೀನಮೇಷ ಎಣಿಸಿದ್ದು, ನಂತರ ಕೋರ್ಟ್​ ಪೊಲೀಸರ ಈ ನಡೆಯನ್ನು ತರಾಟೆಗೆ ತೆಗೆದುಕೊಂಡ ನಂತರ ಅನಿವಾರ್ಯವಾಗಿ ಅರೆಸ್ಟ್ ಮಾಡಿದ್ದು ಈ ಪ್ರಕರಣದ ಪ್ರಮುಖ ಸಂಗತಿ. ಆದರೆ ಕೇಂದ್ರ ಸರ್ಕಾರ ಇದುವರೆಗೂ ಒಬ್ಬ ಆರೋಪಿಯ ತಂದೆಯಾಗಿರುವ ಅಜಯ್ ಮಿಶ್ರನನ್ನು ಮಂತ್ರಿಮಂಡಲದಿಂದ ತೆಗೆಯದಿರುವುದು, ಹಾಗೂ ಅಜಯ್ ಮಿಶ್ರ ಇನ್ನುವರೆಗೂ ಕೇಂದ್ರ ಮಂತ್ರಿಯಾಗಿಯೇ ಮುಂದುವರೆದಿರುವುದು ಪ್ರಕರಣದಲ್ಲಿ ಪ್ರಭಾವಿಗಳು ಏನು ಬೇಕಾದರೂ ಮಾಡಬಲ್ಲರು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಹಾಗೂ ಈ ರೈತ ಹಾಗೂ ಪತ್ರಕರ್ತರ ಹತ್ಯಾಕಾಂಡದಲ್ಲಿ ಕೇಂದ್ರ ಸರ್ಕಾರದ ದೊಡ್ಡ ದೊಡ್ಡ ಕೈಗಳೂ ಸಹ ಶಾಮೀಲಾಗಿರಬಹುದಾದ ಸಾಧ್ಯತೆಯನ್ನು ಇದು ಎತ್ತಿ ತೋರಿಸುತ್ತದೆ.

ಓಂಪ್ರಕಾಶ್ ನಾಯಕ್, ಪವರ್ ಟಿವಿ

 

RELATED ARTICLES

Related Articles

TRENDING ARTICLES