Thursday, January 23, 2025

NIA ತಂಡದ ವಶಕ್ಕೆ ಸಾಹಿತಿ ದಿ.ಇದಿನಬ್ಬ ಮಗನ ಸೊಸೆ

ಮಾಜಿ ಶಾಸಕ ಹಾಗೂ ಸಾಹಿತಿ ದಿ.ಇದಿನಬ್ಬ ಅವರ ಪುತ್ರನ ಮನೆ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಸಿಸ್ ಉಗ್ರ ಸಂಘಟನೆಗೆ ಸಂಬಂಧಿಸಿದ ಚಟುವಟಿಕೆ ಹಿನ್ನಲೆಯಲ್ಲಿ ನಡೆಸಿದ ಈ ದಾಳಿಯಲ್ಲಿ ಶಾಸಕ ಇದಿನಬ್ಬರ ಪುತ್ರ ಬಿ.ಎಂ ಪಾಷ ಅವರ ಸೊಸೆಯನ್ನ ಇಂದು ವಶಕ್ಕೆ ಪಡೆಯಲಾಗಿದೆ.

ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿ ಕಟ್ಟೆಯಲ್ಲಿರುವ ಮಾಜಿ ಶಾಸಕ ಹಾಗೂ ಸಾಹಿತಿ ದಿವಂಗತ ಇದಿನಬ್ಬ ಅವರ ಪುತ್ರನ ಮನೆಗೆ ಎನ್‌ಐಎ ಅಧಿಕಾರಿಗಳು ದಿಢೀರ್ ಎಂಟ್ರಿ ಕೊಟ್ಟಿದ್ದರು. ದೆಹಲಿಯಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ಇದಿನಬ್ಬರ ಪುತ್ರ ಬಿ.ಎಂ.ಪಾಷಾ ಅವರ ಸೊಸೆ ದೀಪ್ತಿ ಅಲಿಯಾಸ್ ಮರಿಯಂಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಂದಿದ್ದ NIA ತಂಡ ಅವರನ್ನು ವಶಕ್ಕೆ ಪಡೆದು, ಬಳಿಕ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್‌ಗೆ ಒಳಪಡಿಸಲಾಯ್ತು. ಇನ್ನೂ ಹೆಚ್ಚಿನ ವಿಚಾರಣೆಯ ಅಗತ್ಯವಿರುವ ಹಿನ್ನೆಲೆ ಆರೋಪಿಯನ್ನ 7 ನೇ ಜೆಎಫ್‌ಸಿ ಕೋರ್ಟ್‌ಗೆ ಹಾಜರು ಪಡಿಸಿ ನಂತರ ದೆಹಲಿಗೆ ಕರೆದೊಯ್ಯಲಾಯ್ತು.

2021 ಆಗಸ್ಟ್ ತಿಂಗಳಲ್ಲಿ ಇದೇ ಮನೆಗೆ ದಾಳಿ ನಡೆಸಿದ್ದ ಎನ್‌ಐಎ, ಬಾಷಾ ಅವರ ಕಿರಿಯ ಪುತ್ರ ಅನಾಸ್ ಅಬ್ದುಲ್ ರಹಮಾನ್ ಎಂಬಾತನನ್ನು ಐಸಿಸ್ ಜೊತೆ ಸಂಪರ್ಕ ಹೊಂದಿರುವ ಗಂಭೀರ ಆರೋಪದಡಿ ಬಂಧಿಸಿದ್ದರು. ಆ ವೇಳೆ ಮರಿಯಂ ಇಲ್ಲಿದ್ದುಕೊಂಡೇ ಐಸಿಸ್ ನೆಟ್ವರ್ಕ್‌ಗೆ ಯುವಕರನ್ನು ಸೇರಿಸುವ ಜಾಲದಲ್ಲಿ ನಿರತಳಾಗಿದ್ದಳು ಎಂಬ ಶಂಕೆ ಪೊಲೀಸರಿಗಿತ್ತು. ಆ ಕಾರಣಕ್ಕಾಗಿ ಆಕೆಯನ್ನು ಅಂದು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರೇ ಹೊರತು ಬಂಧಿಸಿರಲಿಲ್ಲ.

ಮೂಲತಃ ಕೊಡಗು ಜಿಲ್ಲೆಯವಳಾದ ದೀಪ್ತಿ ಮರಿಯಂ, ಅನಾಸ್ ಅಬ್ದುಲ್‌ ರಹಿಮಾನ್‌ ಅವರನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮದುವೆಯಾಗಿದ್ದರು. ಇದೀಗ, ಉಳ್ಳಾಲ ಮಾಜಿ ಶಾಸಕ ಇದಿನಬ್ಬ ಕುಟುಂಬದ ಉಗ್ರ ವೃತ್ತಾಂತಕ್ಕೆ ಪ್ರಬಲ ಸಾಕ್ಷಿಯೆಂಬ ಮಾತು ಕೇಳಿಬರುತ್ತಿದೆ. ಆದರೆ ಮದುವೆಗೂ, ಮತಾಂತರಕ್ಕೂ, ಉಗ್ರ ಸಂಪರ್ಕಕ್ಕೂ ಈ ರೀತಿಯ ಸಂಪರ್ಕ ಕಲ್ಪಿಸಲು ಯಾವುದೇ ಸಾಕ್ಷಾಧಾರಗಳಿಲ್ಲದಿದ್ದರೂ, ಅಧಿಕಾರಿಗಳು ಪೂರ್ವಾಗ್ರಹಪೀಡಿತರಾಗಿ ಈ ರೀತಿಯ ಧೋರಣೆ ಅನುಸರಿಸುತ್ತಿರಬಹುದೆ ಎಂಬುದು ಇದೀಗ ಎದ್ದಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಏನೇ ಆದರೂ ಯಾವುದೇ ಖಚಿತ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಶಂಕೆಯ ಆಧಾರ ಮೇಲೆ ಬಂಧಿಸಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು.

 

RELATED ARTICLES

Related Articles

TRENDING ARTICLES