ಹೆಸರು ಕಾಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತೆ. ಅದರಲ್ಲೂ ಮೊಳಕೆ ಒಡೆದ ಹೆಸರು ಕಾಳು ಆರೋಗ್ಯಕ್ಕೆ ತುಂಬಾ ಉಪಯುಕ್ತಕಾರಿಯಾಗಿದೆ. ಮೊಳಕೆಯೊಡೆದ ಹೆಸರು ಕಾಳನ್ನ ಪೋಷಕಾಂಶಗಳ ನಿಧಿ ಎಂದು ಹೇಳಲಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಹಿಡಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು. ಪ್ರೋಟೀನ್, ಫೈಬರ್, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸತು, ಕಬ್ಬಿಣ, ಖನಿಜ, ಆಂಟಿ-ಆಕ್ಸಿಡೆಂಟ್, ತಾಮ್ರ, ವಿಟಮಿನ್ ಎ, ಬಿ, ವಿಟಮಿನ್ ಸಿ, ವಿಟಮಿನ್ ಇ ಮುಂತಾದ ಅಂಶಗಳು ಮೊಳಕೆಯೊಡೆದ ಹೆಸರು ಕಾಳಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ಮೊಳಕೆಯೊಡೆದ ಹೆಸರುಕಾಳಿನಲ್ಲಿ ಬಹಳ ಕಡಿಮೆ ಕೊಬ್ಬು ಇರುತ್ತದೆ. ನೀವು ಸಲಾಡ್, ಚಾಟ್ ರೂಪದಲ್ಲಿ ಹೆಸರು ಕಾಳನ್ನ ದಿನನಿತ್ಯವು ತಿನ್ನಬಹುದು.
ಮೊಳಕೆಯೊಡೆದ ಹೆಸರು ಕಾಳುಗಳನ್ನ ತಿನ್ನೋದ್ರಿಂದ ಆಗುವ ಪ್ರಯೋಜನೆಗಳೇನು..?
ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ
ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ಸೋಂಕು ಆಗದಂತೆ ತಡೆಯುತ್ತದೆ. ವಿಟಮಿನ್ ಎ ಅಂಶ ಕೂಡ ಹೆಚ್ಚಾಗಿ ಇರುವುದರಿಂದ ದೇಹಕ್ಕೆ ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ಸ್ ಸಿಗುವ ರೀತಿ ನಿಗಾವಹಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಜೊತೆಗೆ ಕ್ಯಾನ್ಸರ್ ಬಾರದೆ ಇರೋ ಹಾಗೆ ನೋಡಿಕೊಳ್ಳುತ್ತದೆ. ಅಲ್ಲದೆ ಬೇಗ ಸುಸ್ತಾಗೋದು, ಕಣ್ಣು ಮಂಜಾಗುವುದು, ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಳ್ಳುವ ತೊಂದರೆ ಇರೋರು ಮೊಳಕೆ ಬಂದ ಹೆಸರು ಕಾಳನ್ನು ಸೇವಿಸಿದರೆ ಉತ್ತಮ.
ಜೀರ್ಣ ಕ್ರಿಯಗೆ ಉತ್ತಮ
ಮೊಳಕೆಯೊಡೆದ ಹೆಸರು ಕಾಳನ್ನ ಸೇವಿಸೋದ್ರಿಂದ ಜೀರ್ಣಕ್ರಿಯೆ ಉತ್ತಮವಾಗಿವಾಗುತ್ತೆ. ಫೈಬರ್ ಅಂಶವು ಹೆಚ್ಚಾಗಿ ಇರೋದ್ರಿಂದ ಆಹಾರದ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಂಡು ಮಲಬದ್ಧತೆ ತೊಂದರೆಯನ್ನ ನಿವಾರಿಸಿ ಹೊಟ್ಟೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.
ಹೃದಯ ಸಂಬಂಧ ಕಾಯಿಲೆ
ಹೃದಯವನ್ನು ಆರೋಗ್ಯವಾಗಿಡಲು ನೀವು ಮೊಳಕೆಯೊಡೆದ ಹೆಸರು ಕಾಳುಗಳನ್ನ ಸೇವಿಸಬಹುದು. ಮೊಳಕೆಯೊಡೆದ ಮೂಂಗ್‌ನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೃದಯವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಲು ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.ಅಲ್ಲದೆ ರಕ್ತಸಂಚಾರ ಹೆಚ್ಚಿಸಿ ದೇಹಕ್ಕೆ ಹೆಚ್ಚು ಆಕ್ಸಿಜನ್ ಸಿಗುವ ಹಾಗೆ ಮಾಡಿ ಸ್ಟ್ರೋಕ್, ಹೃದಯಾಘಾತ ಆಗದಂತೆ ನೋಡಿಕೊಳ್ಳುತ್ತದೆ.
ತೂಕ ನಷ್ಟ
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಳಕೆ ಹೊಡೆದ ಕಾಳುಗಳನ್ನ ಸೇವನೆ ಮಾಡೋದ್ರಿಂದ ಸುಲಭವಾಗಿ ತೂಕವನ್ನ ಇಳಿಸಿಕೊಳ್ಳಬಹುದು. ಮೊಳಕೆ ಕಾಳುಗಳಲ್ಲಿ ಕೊಬ್ಬಿನ ಪ್ರಮಾಣವು ತುಂಬಾ ಕಡಿಮೆ ಇರೋದ್ರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಮ್ಯ, ಪವರ್ ಟಿವಿ