ರಾಜ್ಯ : ಪಶ್ಚಿಮ ಬಂಗಾಳ, ಹರಿಯಾಣ, ತಮಿಳುನಾಡಿನಲ್ಲಿ ಕೊರೋನಾ ಪರಿಸ್ಥಿತಿ ಮಿತಿ ಮೀರಿದ್ದು, ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ.. ಆದ್ರೆ, ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ದಟ್ಟವಾಗಿದೆ.
ದೇಶದಲ್ಲಿ ಹೊಸ ವರ್ಷದ ಆರಂಭದಲ್ಲೇ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ದೇಶದಲ್ಲಿ ಕೊರೊನಾ ಸೋಂಕು ಹರಡುವುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಲಹೆಯನ್ನು ನೀಡಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದಲ್ಲಿ ಕೊರೊನಾವೈರಸ್ ಪ್ರಕರಣಗಳ ಹೆಚ್ಚಳವನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ, ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಗಳನ್ನು ರಚಿಸುವಂತೆ ಆರೋಗ್ಯ ಕಾರ್ಯದರ್ಶಿ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.
ಜನವರಿ ಅಂತ್ಯಕ್ಕೆ ಕೊರೋನಾ 3ನೇ ಅಲೆ ಫಿಕ್ಸ್ ಅಂತ ಹೇಳಲಾಗುತ್ತಿದೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕೊರೋನಾ ಮಹಾಸ್ಫೋಟದಿಂದಾಗಿ ತಮಿಳುನಾಡಿನಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. 1ರಿಂದ 8ನೇ ತರಗತಿಯವರಿಗೆ ಶಾಲೆಗಳು ಬಂದ್ ಮಾಡಲಾಗಿದೆ. ಹರಿಯಾಣದಲ್ಲೂ ಶಾಲಾ-ಕಾಲೇಜುಗಳು ಬಂದ್ ಆಗಿವೆ.. ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕು ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ನಾಳೆಯಿಂದ ಶಾಲೆ, ಕಾಲೇಜು, ಸಿನಿಮಾ ಮಂದಿರ, ಮನರಂಜನಾ ತಾಣ, ಸಲೂನ್, ಸ್ಪಾಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳು ಶೇ 50 ರಷ್ಟು ಪ್ರಮಾಣದಲ್ಲಿ ನೌಕರರೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅಲ್ಲಿನ ಸರ್ಕಾರ ಆದೇಶಿಸಿದೆ. ಈ ಮೂಲಕ ಕೊರೊನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ಭಾಗಶಃ ಲಾಕ್‌ಡೌನ್‌ನ್ನು ಪಶ್ಚಿಮ ಬಂಗಾಳದಲ್ಲಿ ಘೋಷಿಸಿದಂತಾಗಿದೆ.
ರಾಜ್ಯದ ಪೋಷಕರಿಗೆ ಹೆಚ್ಚಾಯ್ತು ಆತಂಕ :
ಕೊರೋನಾ ಹೆಚ್ಚಳದಿಂದಾಗಿ ಮಕ್ಕಳ ಬಗ್ಗೆ ಪೋಷಕರಲ್ಲೂ ಆತಂಕ ಶುರುವಾಗಿದೆ. ಪಾಸಿಟಿವಿಟಿ ರೇಟ್ ಶೇ.3ಕ್ಕೆ ಏರಿಕೆ ಆದ್ರೆ, LKG, UKG ಬಂದ್ ಪಕ್ಕಾ ಎನ್ನಲಾಗುತ್ತಿದೆ. ಜೊತೆಗೆ, ಶಾಲೆಗಳ ಪರಿಸ್ಥಿತಿ ಅರಿಯಲು ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ. ಹೀಗಾಗಿ, ರಾಜ್ಯದಲ್ಲೂ ಶಾಲಾ- ಕಾಲೇಜುಗಳು ಮತ್ತೆ ಬಂದ್ ಆಗುವ ಸಾಧ್ಯತೆಯಿದೆ.
ಕೊರೋನಾ ಮೂರನೇ ಅಲೆ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತೆ ಅಂತಾನೇ ಹೇಳಲಾಗುತ್ತಿದೆ. ಹೀಗಾಗಿ, ಸೋಂಕು ಮಕ್ಕಳನ್ನು ಕಾಡದಿರಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ನಾಳೆಯಿಂದಲೇ 15ರಿಂದ 18 ವರ್ಷದ ಎಲ್ಲಾ ಮಕ್ಕಳಿಗೆ ವ್ಯಾಕ್ಸಿನ್ ನೋಂದಣಿ ನಡೆಯಲಿದೆ. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಮಕ್ಕಳಿಗೆ 2ನೇ ಡೋಸ್ ನೀಡಲಾಗುತ್ತದೆ.
ದೇಶಾದ್ಯಂತ ಮೂರನೇ ಅಲೆ ಭೀತಿ ಹೆಚ್ಚಾಗಿದೆ. ಮತ್ತಷ್ಟು ಫಜೀತಿ ಆಗಬಾರದು ಅನ್ನೋ ಕಾರಣಕ್ಕೆ ಎಲ್ಲಾ ರಾಜ್ಯಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊರೋನಾದಿಂದ ಮಕ್ಕಳನ್ನು ಸೇಫ್ ಮಾಡಲು ಉತ್ತರದ ಕೆಲ ರಾಜ್ಯಗಳು ಹಾಗು ತಮಿಳುನಾಡು ಶಾಲಾ-ಕಾಲೇಜುಗಳನ್ನು ಬಂದ್ ಮಾಡಿವೆ. ಹೀಗಾಗಿ, ಕರ್ನಾಟಕದಲ್ಲೂ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.