ರಾಜ್ಯ : ಮೇಕೆದಾಟು ಪಾದಯಾತ್ರೆಯನ್ನ ಯಶಸ್ವಿಗೊಳಿಸೋಕೆ ಕಾಂಗ್ರೆಸ್ ನಾಯಕರು ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದಾರೆ. ನೆಲ,ಜಲ,ಭಾಷೆಯ ವಿಚಾರವನ್ನ ಮುಂದಿಟ್ಕೊಂಡು ಜನರನ್ನ ಭಾವನಾತ್ಮಕವಾಗಿ ಸೆಳೆಯೋಕೆ ಹೊರಟಿದ್ದಾರೆ. ಮತ್ತೊಂದು ಕಡೆ ಜನರನ್ನ ಸೆಳೆಯೋಕೆ ಸ್ಟಾರ್ ಗಳ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪಾದಯಾತ್ರೆ ಬಗ್ಗೆ ವಾಗ್ದಾಳಿ ಮಾಡುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಆಖಾಡಕ್ಕಿಳಿದಿದೆ. ಮೇಕೆದಾಟು ಯೋಜನೆಯನ್ನ ಮುಂದಿಟ್ಟುಕೊಂಡು ಭಾವನಾತ್ಮಕವಾಗಿ ಜನರನ್ನ ಸೆಳೆಯೋಕೆ ಮುಂದಾಗಿದೆ. ಇದೇ ಜನವರಿ 9 ರಿಂದ 19 ರವರೆಗೆ ಮೇಕೆದಾಟಿನಿಂದ ಬೆಂಗಳೂರು ನ್ಯಾಷನಲ್ ಕಾಲೇಜುವರೆಗೆ 169 ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಂಡಿದೆ. ಪಾದಯಾತ್ರೆ ಯಶಸ್ವಿಗೊಳಿಸೋಕೆ ಗಣ್ಯರು, ಸಂಘ ಸಂಸ್ಥೆಗಳು, ಸ್ವಾಮೀಜಿಗಳು, ಚಲನ ಚಿತ್ರ ನಟ-ನಟಿಯರನ್ನ ಆಹ್ವಾನಿಸಿದೆ. ಸಿನಿ ಸ್ಟಾರ್ಸ್‌ಗಳನ್ನು ಪಾದಯಾತ್ರೆಯಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿ ಮಾಡೋಕೆ ನಾನಾ ರೂಪುರೇಷೆಗಳನ್ನ ಸಿದ್ದಪಡಿಸಿಕೊಂಡಿದೆ.
ಸಿನಿಮಾ ನಟ, ನಟಿಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ರೆ ಜನಸಾಮಾನ್ಯರು ಬೆಂಬಲ ಕೊಡ್ತಾರೆಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರಲ್ಲಿದೆ. ಹೀಗಾಗಿ ಮೊನ್ನೆಯಷ್ಟೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ನೀಡಿದ್ದರು. ಮುಖ್ಯಸ್ಥರನ್ನ ಮಾತನಾಡಿಸಿ ಬೆಂಬಲ ಕೋರಿದ್ದರು. ಅಲ್ಲದೆ ಪಾದಯಾತ್ರೆಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವಂತೆ ಪಕ್ಷದಲ್ಲೇ ಇರುವ ಸಂಗೀತ ನಿರ್ದೇಶಕ ಸಾಧುಕೋಕಿಲ, ಉಮಾಶ್ರೀ, ಜಯಮಾಲಾ, ಮಾಲಾಶ್ರೀ, ಅಭಿನಯ ಹಾಗೂ ಭಾವನಾಗೆ ಸೂಚಿಸಲಾಗಿದೆ. ಅಲ್ಲದೆ ಚಿತ್ರರಂಗದ ತಾರೆಯರನ್ನ ಪಾದಯಾತ್ರೆಗೆ ಕರೆತರುವಂತೆ ಸಾಧುಕೋಕಿಲಗೆ ಹೊಣೆ ನೀಡಲಾಗಿದೆ. ಈಗಾಗಲೇ ಸಂಗೀತ ನಿರ್ದೇಶಕ ಹಂಸಲೇಖ ಪಾದಯಾತ್ರೆಗಾಗಿ ಅದ್ದೂರಿ ಎರಡು ಹಾಡುಗಳನ್ನೂ ಬರೆದುಕೊಟ್ಟಿದ್ದಾರೆ.
ಇನ್ನೂ ಕಾಂಗ್ರೆಸ್ ಪಾದಯಾತ್ರೆಗೆ ಬೆದರಿರುವ ಬಿಜೆಪಿ ನಾಯಕರು ನಿರಂತರ ವಾಕ್ಸಮರ ನಡೆಸ್ತಿದ್ದಾರೆ. ಕಾಂಗ್ರೆಸ್ ತಮ್ಮ ಅವಧಿಯಲ್ಲಿ ಯೋಜನೆ ಜಾರಿ ಮಾಡದೆ ಸುಮ್ಮನೆ ಕೂತಿದ್ರು. ಈಗ ನಾಯಕತ್ವದ ಪೈಪೋಟಿಗೆ ಬಿದ್ದು ಪಾದಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ನಷ್ಟವಾಗುವುದಿಲ್ಲ. ಇದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಪಕ್ಷದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆದಿದೆ. ಕುಮಾರಸ್ವಾಮಿ ನಾವು ಡಿಪಿಆರ್ ಮಾಡಿದ್ದು ಅಂತಾರೆ. ಸಿದ್ದರಾಮಯ್ಯ ನಮ್ಮ ಸರ್ಕಾರ ಮಾಡಿದ್ದು ಹೇಳಿಕೆ ನಿಡ್ತಾ ಇದ್ದಾರೆ. ಹಾಗಾದ್ರೆ, ಯಾವ ಸರ್ಕಾರದಲ್ಲಿ ಯೋಜನೆ ಜಾರಿಯಾಗಿದೆ ಅಂತ ಸ್ಪಷ್ಟನೆ ಇಲ್ಲ. ನಮ್ಮ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆಸಿದೆ. ಪಾದಯಾತ್ರೆ ಕಾಂಗ್ರೆಸ್ ನ ವ್ಯರ್ಥ ಹೋರಾಟ ಅಂತ ಲೇವಡಿ ಮಾಡಿದರು.
ಒಟ್ಟಿನಲ್ಲಿ ಮೇಕೆದಾಟು ಯೋಜನೆ ಜಾರಿಗಾಗಿ ನಡೆಸ್ತಿರುವ ಕಾಂಗ್ರೆಸ್ ಪಾದಯಾತ್ರೆ ಸಾಕಷ್ಟು ಸಂಚಲನ ಮೂಡಿಸಿದೆ. ಪಾದಯಾತ್ರೆಯನ್ನ ಯಶಸ್ಸುಗೊಳಿಸೋಕೆ ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದಾರೆ. ಸ್ಟಾರ್ ನಟ,ನಟಿಯರನ್ನ ಕರೆಸಿ ಜನರನ್ನಸೆಳೆಯುವ ಪ್ರಯತ್ನ ಮಂದುವರಿಸಿದ್ದಾರೆ. ಈ ಕಾರಣಕ್ಕೆ ಜೆಡಿಎಸ್,ಬಿಜೆಪಿ ನಾಯಕರಿಗೆ ತಳಮಳ ಶುರುವಾಗಿದೆ. ಹೀಗಾಗಿ ಮೇಕೆದಾಟು ಯೋಜನೆ ವಿಚಾರ ರಾಜಕೀಯ ಕೆಸರೆಚಾಟಕ್ಕೆ ವೇದಿಕೆ ಮಾಡಿ ಕೊಟ್ಟಿದೆ.