Sunday, November 17, 2024

ಮತಾಂತರ ನಿಷೇಧ ಕಾನೂನು; ಕೇಸರಿ ಪ್ರತಿಷ್ಠೆ-‘ಕರ’ದ ಹಠ.. 

ಮತಾಂತರ ಎನ್ನುವುದು ಒಂದು ರೀತಿಯ ಪಿಡುಗು ಎನ್ನುವ ಕಾರಣಕ್ಕಾಗಿ ಅದನ್ನು ನಿಷೇಧ ಮಾಡಬೇಕಾಗಿರುವುದು ಅನಿವಾರ್ಯ ಎಂದು ಕಾಯ್ದೆಯನ್ನೇ ರೂಪಿಸಲಾಗುತ್ತಿದೆ. ಇದಕ್ಕಾಗಿ ಬೊಮ್ಮಾಯಿ ಸರಕಾರ ಇದೊಂದು ಸರಕಾರದ ಮಹಾನ್ ಸಾಧನೆ ಎನ್ನುವಂತೆ ಜಿದ್ದಿಗೆ ಇಳಿದಿದೆ. ಇನ್ನೂ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಕಾಯ್ದೆಯನ್ನು ವಿರೋಧಿಸಿದೆ. ಬಿಜೆಪಿ ತಮ್ಮ ಕಾಲದಲ್ಲಿ ಈ ಕಾಯ್ದೆ ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿಕೊಂಡಿದೆ. ಅದಕ್ಕೆ  ಜಿದ್ದಿಗೆ ಬಿದ್ದ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಮುಂದೆ ನಮ್ಮ ಸರಕಾರ ಬಂದಾಗ ಬಿಜೆಪಿ ಜಾರಿಗೆ ತಂದ ಕಾಯ್ದೆಯನ್ನು ರದ್ದು ಮಾಡುತ್ತೇವೆ ಎಂದು ಹೇಳಿಕೊಂಡಿದೆ.

ಇಷ್ಟಕ್ಕೂ ಮಂತಾತರ ಕಾಯ್ದೆ ಅಂದರೆ ಏನು..? ಈ ಕಾಯ್ದೆ ಜಾರಿಗೆ ತರುವುದರ ಹಿಂದೆ ಇರುವ ಕಾರಣ ಏನು..? ಇದು ನಮ್ಮ ರಾಜ್ಯಕ್ಕೆ ಅವಶ್ಯಕತೆ ಇತ್ತಾ…? ಕಾಯ್ದೆಯ ಕರಡು ಪ್ರತಿಯಲ್ಲಿ ಏನೆಲ್ಲಾ ಅಂಶಗಳು ಇವೆ ಎನ್ನುವ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಕೆಲವರಿಗಂತೂ ಈ ಕಾನೂನಿನಲ್ಲಿ ಏನಿದೆ.. ? ಯಾಕಾಗಿ ಈ ಕಾನೂನು ತರಲಾಗುತ್ತಿದೆ..? ಇದರ ಅವಶ್ಯಕತೆ ಇದೆಯೇ..? ಎಂಬ ಸತ್ಯವನ್ನು ಅರಿಯುವ ಅವಶ್ಯಕತೆ ಇದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಕುರಿತು ಮಂಡನೆಯಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಯ್ದೆ ಮಂಡನೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದ್ದರು.

ಮತಾಂತರ ನಿಷೇಧ ವಿಧೇಯಕ ತಂದಿರುವುದು ಯಾವುದೇ ಧರ್ಮದ ವಿರುದ್ಧವಲ್ಲ ಅಥವಾ ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸಲು ಅಲ್ಲ. ಈಗಾಗಲೇ ಎಂಟು ರಾಜ್ಯಗಳು ಈ ವಿಧೇಯಕ ತಂದಿವೆ. ಕರ್ನಾಟಕ ಒಂಭತ್ತನೇ ರಾಜ್ಯವಾಗಲಿದೆ. ಇತ್ತೀಚೆಗೆ ಮತಾಂತರ ದೊಡ್ಡ ಪಿಡುಗಾಗಿದೆ. ಈ ಪಿಡುಗಿನಿಂದಾಗಿ ಸ್ವತಃ ಶಾಸಕರ ತಾಯಿಯೊಬ್ಬರು ಸಹ ಮತಾಂತರ ಆಗಿದ್ದನ್ನು ಕಂಡಿದ್ದೇವೆ. ಈ ಮತಾಂತರದಿಂದ ಉಡುಪಿಯಲ್ಲಿ ಒಂದು ಆತ್ಮಹತ್ಯೆ ಆಯ್ತು. ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡರು ಎಂದೆಲ್ಲಾ ಉದಾಹರಣೆ ಸಹಿತ ಗೃಹಸಚಿವ ಆರಗ ಜ್ಞಾನೇಂದ್ರ ಸದನಕ್ಕೆ ವಿವರಿಸಿದರು.

ಮತಾಂತರ ನಿಷೇಧ ವಿಧೇಯಕ ಅನೇಕ ರೀತಿಯಲ್ಲಿ ಪ್ರಚಾರ ಪಡೆದುಕೊಂಡಿದೆ. ಪರ-ವಿರೋಧ ಚರ್ಚೆ ನಡೆಯುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಈಗಾಗಲೇ ಕಾಯ್ದೆ ಜಾರಿಯಾಗಿದೆ. ತಮಿಳುನಾಡಿನಲ್ಲೂ ಕಾಯ್ದೆ ತರಬೇಕಾಗಿತ್ತು. ಆದರೆ ಆಗಲಿಲ್ಲ. ಈ ಕಾಯ್ದೆಯನ್ನು ಜಾರಿಗೆ ತರುವುದಕ್ಕೆ ಸಿದ್ದು ಸರಕಾರ ಯೋಜನೆ ರೂಪಿಸಿತ್ತು. ಪ್ರಸ್ತುತ ಸರಕಾರ ಹೇಳುವಂತೆ ಈ ಕಾನೂನು ತಂದಿರುವುದು ಬಲವಂತದ ಮತಾಂತರ  ನಿಲ್ಲಿಸುವುದು. ಅನೇಕ ಮಠಾಧೀಶರು, ಸಾಮಾಜಿಕ ಹೋರಾಟಗಾರರು ಇದೊಂದು ಸಾಮಾಜಿಕ ಪಿಡುಗು ಎಂದು ಹೇಳುತ್ತಿದ್ದಾರೆ. ಆಮಿಷಕ್ಕೆ ಹಾಗೂ ಬಲವಂತದ ಮತಾಂತರ ತಡೆಗಟ್ಟಿ ಶಿಕ್ಷೆ ನೀಡುವುದೇ ಈ ಕಾನೂನಿನ  ಉದ್ದೇಶ. ಹೀಗಾಗಿಯೇ ಈ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವುದಕ್ಕೆ  ಹಲವರು ಒತ್ತಾಯ ಮಾಡಿದ್ದಾರೆ.ಜೊತೆಗೆ ಬಲವಂತದ ಮತಾಂತರಕ್ಕೆ ಮಾತ್ರ ಶಿಕ್ಷೆಯ ಜೊತೆ ದಂಡ ವಿಧಿಸಬೇಕು ಎನ್ನುವ ಒತ್ತಾಯವಿದೆ ಎಂದು ಸರಕಾರ ಸ್ಪಷ್ಟನೆ ನೀಡಿದೆ.

ಏನಿದೆ ಈ ಮತಾಂತರ ಕಾಯ್ದೆಯಲ್ಲಿ ..?

ಕೆಲವರು ಈ ಮತಾಂತರವನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಅಂಥವರಿಗೆ ಈ ಕಾನೂನು ದಂಡ ಪ್ರಯೋಗ ಮಾಡುವುದರಲ್ಲಿ ಎರಡು ಮಾತಿಲ್ಲ ಹೊರತು ಇತರರಿಗೆ ಈ ಕಾನೂನಿನಿಂದ ಯಾವುದೇ ಸಮಸ್ಯೆ ಇಲ್ಲ. ವಿದೇಶದಲ್ಲಿ ಹುಟ್ಟಿರುವ ಕೆಲ ಧರ್ಮಗಳು ಇಲ್ಲಿ ಶಾಂತಿಯಿಂದಲೇ ಇವೆ. ಇನ್ನೂ ಕೆಲವರು ಆ ಧರ್ಮಗಳ ಹೆಸರು ಹೇಳಿ ಕ್ಷೋಭೆ ಹಾಗೂ ವಿಘಟನೆಗೆ ಮುಂದಾಗುತ್ತಿದ್ದಾರೆ. ಅದು ಆಗಬಾರದು ಎಂಬುದು ಈ ಬಿಲ್‌ನ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಕಾನೂನು ಜಾರಿಗೊಳಿಸುತ್ತಿದ್ದೇವೆ ಎನ್ನುವುದು ಸರಕಾರದ ಕ್ಲಿಯರ್ ಸ್ಪಷ್ಟನೆ.

ವಾಸ್ತವದಲ್ಲಿ ಮತಾಂತರ ಆಗಲು ಇಚ್ಛೆ ಇರುವ ವ್ಯಕ್ತಿಗೆ ನಮ್ಮ ನಾಡಿನಲ್ಲಿ ಅವರಿಗೆ ಪೂರ್ಣ ಸ್ವಾತಂತ್ರ್ಯ ಇದೆ. ಅಂತಹವರು ಮೂವತ್ತು ದಿನಗಳ ಮುಂಚೆ ಆಯಾ ಜಿಲ್ಲಾಧಿಕಾರಿಗಳಿಗೆ ತಮ್ಮ ನಿಲುವನ್ನು ತಿಳಿಸಬೇಕು. ನಿಲುವು ತಿಳಿಸಿದ  21 ದಿನಗಳ ಒಳಗೆ ಜಿಲ್ಲಾಧಿಕಾರಿಯ ಮುಂದೆ ಖುದ್ದು ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಬೇಕು. ಅದನ್ನು ಜಿಲ್ಲಾಡಳಿತ ನೋಟಿಸ್ ಬೋರ್ಡ್‌ನಲ್ಲಿ‌ ಹಾಕಬೇಕು. ಈ ಮತಾಂತರ ಬಲವಂತದ್ದಾಗಿದೆ ಎಂದು ಯಾರಾದರೂ ತಕರಾರು ತೆಗೆದರೆ ಮತ್ತೆ ವಿಚಾರಣೆ ನಡಸಬೇಕಾಗುತ್ತದೆ. ಬಲವಂತದ ಕುರಿತು ಖಾತ್ರಿಯಾದರೆ ಕಾನೂನಿನಲ್ಲಿ ಶಿಕ್ಷೆ ಇರುತ್ತದೆ.

ಶಿಕ್ಷೆ ಪ್ರಮಾಣ

ಬಲವಂತದ ಮತಾಂತರ ಮಾಡಿದರೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ.

ಅಪ್ರಾಪ್ತರು-ಅನೂಸೂಚಿತ ಜಾತಿ ಪಂಗಡಕ್ಕೆ ಸೇರಿದ ಪ್ರಕರಣವಾದರೆ 3 ರಿಂದ 10 ವರ್ಷ ಶಿಕ್ಷೆ  ಹಾಗೂ  50 ಸಾವಿರ ರೂ. ದಂಡ.

ಸಾಮೂಹಿಕ ಮತಾಂತರ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದರೆ  3 ರಿಂದ 10 ವರ್ಷ ಜೈಲು ಹಾಗೂ 1 ಲಕ್ಷ‌ ರೂ. ದಂಡ.

ಬಲವಂತದಿಂದ ಮದುವೆಯಾಗುವ ಮೂಲಕ  ಮತಾಂತರದ ಉದ್ದೇಶ ಹೊಂದಿದ್ದರೆ ಅಂತಹ ಮದುವೆ ಅಸಿಂಧುವಾಗುತ್ತದೆ. ಜೊತೆಗೆ  ಜಾಮೀನು ರಹಿತ ಪ್ರಕರಣವಾಗಿರುತ್ತದೆ. ಈ ಅಪರಾಧ ಮಾಡಿದ ವ್ಯಕ್ತಿಗೆ ಸರಕಾರದಿಂದ ಸಿಗುವ ಮೂಲ ಮತದ ಎಲ್ಲ ಸೌಲಭ್ಯಗಳನ್ನು ಆ ವ್ಯಕ್ತಿ ಕಳೆದುಕೊಳ್ಳುತ್ತಾನೆ.

ಪ್ರಸ್ತಾಪಿಸಿದ ಮತಾಂತರ ನಿಷೇಧ ಮಸೂದೆಯಲ್ಲಿನ ಪ್ರಮುಖ ಅಂಶಗಳು

ನಗದು ರೂಪದಲ್ಲಾಗಲಿ ಅಥವಾ ವಸ್ತುವಿನ ರೂಪದಲ್ಲಾಗಲಿ ನೀಡುವ ಯಾವುದೇ ಉಡುಗೊರೆ, ಪ್ರತಿಫಲ, ಸುಲಭ ಹಣ ಅಥವಾ ಭೌತಿಕ ಪ್ರಯೋಜನ ಪಡೆಯುವುದು ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ವಿರುದ್ಧವಾಗಿದೆ.

* ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉದ್ಯೋಗ, ಉಚಿತ ಶಿಕ್ಷಣ, ಮದುವೆಯಾಗುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿ, ದೈವಿಕ ಅಸಂತೋಷ ಅಥವಾ ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ವಿರುದ್ಧವಾಗಿ ವೈಭವೀಕರಿಸುವುದು ಮತಾಂತರದ ಭಾಗವಾಗಿರುತ್ತದೆ.

* ತಪ್ಪು ನಿರೂಪಣೆ, ಬಲವಂತ, ವಂಚನೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷ ಒಡ್ಡುವ ಮೂಲಕ ಅಥವಾ ಮದುವೆಯ ವಾಗ್ದಾನದ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮಾಡುವ ಮತಾಂತರದ ನಿಷೇಧ.

* ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಾಸದ ಏಕ ಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆಯನ್ನು ಅಸಿಂಧುವೆಂದು ಘೋಷಿಸುವುದು.

* ಮತಾಂತರ ಆಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು.

* ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು.

* ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡಬೇಕು.

* ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡಬೇಕು.

* ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೋತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು.

* ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನು ದಾಖಲಿಸಬೇಕು.

* ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡಬೇಕು. * ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸೇರಿದಂತೆ ಇತರ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು.

* ಮ್ಯಾಜಿಸ್ಟ್ರೇಟ್‌ರಿಂದ ಮಾಹಿತಿ ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮ ವಹಿಸುವುದು.

* ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.

ಯಾರೆಲ್ಲಾ ದೂರು ನೀಡಬಹುದು:

ಈ ಮತಾತಂತರದಿಂದ  ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೋಷಕರು, ರಕ್ತ ಸಂಬಂಧಿ ಅಥವಾ ದತ್ತು ಪಡೆದವರು ಹಾಗೂ ಮತಾಂತರದವರು ದೂರು ನೀಡಲು ಅವಕಾಶ ಇರುತ್ತದೆ.  ಇದಿಷ್ಟು ಮತಾತಂತರ ಕಾಯ್ದೆಯ ಕರಡಿನಲ್ಲಿ ಇರುವುದು. ಈ ಕಾನೂನು ಜಾರಿಯಾದರೆ ಯಾರಿಗೆ ತೊಂದರೆ ಎನ್ನುವ ಬಗ್ಗೆ ಕೂಲಂಕುಷ ಚರ್ಚೆಯಾಗಬೇಕೆ ಹೊರತು ಉಡಾಫೆಯ ಹೇಳಿಕೆಗಳ ಅವಶ್ಯಕತೆ ಇದೆಯೇ..? ಅಷ್ಟಕ್ಕೂ ವಿಪಕ್ಷಗಳು ಕಾನೂನಿನ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದು ಸತ್ಯ. ಆದರೆ ಸದನದಲ್ಲಿ ಚರ್ಚೆಯ ಸಂದರ್ಭದಲ್ಲಿ  ಯಾವುದೇ ಚರ್ಚೆಯಲ್ಲಿ ಸರಿಯಾಗಿ ಭಾಗವಹಿಸದೇ ಇರುವುದು ಹತ್ತಾರು ಅನುಮಾನಕ್ಕೆ ಕಾರಣವಾಗುತ್ತಿದೆ.

ವಾಸ್ತವದಲ್ಲಿ ಈ ಕಾನೂನು ನಮ್ಮ ದೇಶದ ಕೆಲವು ರಾಜ್ಯಗಳಲ್ಲಿ ಅನುಷ್ಠಾನದಲ್ಲಿ ಇದೆ. ಇನ್ನೂ ನಮ್ಮಲ್ಲಿ ಜಾರಿಗೆ ತಂದೇ ತರುತ್ತೇವೆ ಎನ್ನುವ ಹಠಕ್ಕೆ ಬಿಜೆಪಿ ಸರಕಾರ ಮುಂದಾಗಿದೆ. ಇನ್ನೂ ಇದನ್ನು ಕಟುವಾಗಿ ವಿರೋಧಿಸುವ ಕಾಂಗ್ರೆಸ್ ಯಾವ ಕಾರಣಕ್ಕೆ ವಿರೋಧಿಸುತ್ತಿದೆ ಎನ್ನುವ ಸ್ಪಷ್ಟ ಮಾಹಿತಿ ಇನ್ನೂ ನೀಡಿಲ್ಲ. ಅವರ ನಿಖರ ನಿಲುವು ಏನಾಗಬಹುದು..? ಈ ಕಾನೂನಿನ ನಿಜ ಅರಿವು ಜನರಿಗೆ ತಿಳಿಸುವಲ್ಲಿ ಸರಕಾರ ಹಿಂದೆ ಬಿದ್ದಿದ್ದೆ ಈ ಗೊಂದಕ್ಕೆ ಕಾರಣ ಎನ್ನುವುದು ಒಂದು ವರ್ಗದ ಜನರ ಅಭಿಪ್ರಾಯ. ಇನ್ನೂ ಕೆಲವರು ಇದು ಕೇಸರಿ ಅಜೆಂಡಾ ಎಂದು ವ್ಯಾಖ್ಯಾನಿಸುತ್ತಿದ್ದಾರೆ.

ಶ್ರೀನಾಥ್ ಜೋಶಿ , ಪವರ್ ಟಿವಿ

RELATED ARTICLES

Related Articles

TRENDING ARTICLES