ವಿಜಯಪುರ: ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆ ಮೇಲೆ ಅಪಘಾತವೊಂದು ನಡೆದಿರುವ ಘಟನೆ ನಡೆದಿದೆ. ಟಂಟಂ ಹಾಗೂ ಟಾಟಾ ಎಸರ್ ಮುಖಾಮುಖಿ ಡಿಕ್ಕಿಯಾಗಿ ಟಂಟಂ ನಲ್ಲಿದ್ದ ಕೃಷಿ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಅಸುನೀಗಿ, ಇನ್ನಿತರ ಏಳು ಜನರಿಗೆ ಗಂಭೀರ ಗಾಯಗಳಾಗಿವೆ.
ವಿಜಯಪುರ ಜಿಲ್ಲೆ ಕೊಲ್ಹಾರ ಬಳಿಯ ಕೃಷ್ಣಾನದಿಗೆ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಿರ್ಮಾಣ ಮಾಡಿರುವ ಸೇತುವೆ ಮೇಲೆ ಕೋಲಾರದಿಂದ ಬಾಗಲಕೋಟೆಯ ಬೀಳಗಿ ಕಡೆಗೆ ಪ್ರಯಾಣ ಟಂಟಂ ಹೊರಟಿತ್ತು. ಆಗಲೇ ಎದುರಿಗೆ ಬಂದ ಟಾಟಾ ಏಸರ್ ವಾಹನ ಟಂಟಂಗೆ ಮುಖಾಮುಖಿ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭಂವಿಸಿದೆ. ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತ ಮಹಿಳೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದ ದುಂಡವ್ವ ಸಾಲಗುಂದಿ ಎಂದು ಗುರುತಿಸಲಾಗಿದೆ. ಅಪಘಾತದ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ 57ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಸೇತುವೆ ಮೇಲೆ ಟ್ರಾಫಿಕ್ ಜಾಮ್ ಆಗಿತ್ತು. ನಂತರ ಅಪಘಾತಕ್ಕೀಡಾದ ವಾಹನಗಳನ್ನು ಬದಿಗೆ ಸರಿಸಿ ಸಂಚಾರಕ್ಕೆ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.